ಗುಂಪಿನಲ್ಲಿ ‘ಸಾಧ್ವಿ’!

Update: 2021-12-05 03:14 GMT
ಚಿತ್ರ: ಪರಿಪ್ಲಾಬ್ ಚಕ್ರವರ್ತಿ 

‘‘ಮಹಾರಾಷ್ಟ್ರದಲ್ಲಿ ಅಲಿಖಿತ ಜಾತಿ ವ್ಯವಸ್ಥೆ ಅವ್ಯಾಹತವಾಗಿದೆ’’ ಎಂದು ಮಾಜಿ ಕೈದಿ ಲಲಿತಾ ಹೇಳುತ್ತಾರೆ. ಅವರು ಬೈಕುಲಾ ಜೈಲಿನಲ್ಲಿ ಇರುವ ಹೊತ್ತಿಗೆ 2008ರ ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಪ್ರಜ್ಞಾ ಸಿಂಗ್ ಠಾಕೂರ್ ಅದೇ ಜೈಲಿನಲ್ಲಿದ್ದರು.

ಅವರ ಬಂಧನದ ಅವಧಿಯಲ್ಲಿ ಅವರೊಬ್ಬ ಸ್ವಯಂಘೋಷಿತ ಸಾಧ್ವಿಯಷ್ಟೇ ಅಗಿದ್ದರು. ಆದರೆ, ಜೈಲಿನಲ್ಲಿ ತನ್ನ ಪ್ರಭಾವವನ್ನು ಬೆಳೆಸಲು ಅವರಿಗೆ ಅದರಿಂದ ಸಮಸ್ಯೆಯೇನೂ ಆಗಲಿಲ್ಲ. ಮೂರು ಪ್ರತ್ಯೇಕ ಸೆಲ್‌ಗಳ ಪೈಕಿ ಒಂದರಲ್ಲಿ ಠಾಕೂರ್‌ರನ್ನು ಇರಿಸಲಾಗಿತ್ತು. ಅದನ್ನು ಏಕಾಂತ ಬಯಸುವ ಶ್ರೀಮಂತ ಹಾಗೂ ಪ್ರಭಾವಿ ಕೈದಿಗಳಿಗೆ ವಿಐಪಿ ಸೆಲ್ ಆಗಿಯೂ ಬಳಸಲಾಗುತ್ತಿತ್ತು ಹಾಗೂ ತಪ್ಪುಮಾಡಿದ ಕೈದಿಗಳನ್ನು ದಂಡಿಸಲು ಏಕಾಂತ ಸೆಲ್ ಆಗಿಯೂ ಬಳಸಲಾಗುತ್ತಿತ್ತು.

ಅವರ ಪ್ರತ್ಯೇಕ ಸೆಲ್‌ನ ಹೊರಗೆ ಮೂವರು ವಿಚಾರಣಾಧೀನ ಕೈದಿಗಳನ್ನು ಆಕೆಯ ‘ಸೇವಕಿ’ಯರನ್ನಾಗಿ ನೇಮಿಸಲಾಗಿತ್ತು. ಓರ್ವ ವಿಚಾರಣಾಧೀನ ಕೈದಿ ಅದೇ ಠಾಕೂರ್ ಜಾತಿಗೆ ಸೇರಿದವರಾಗಿದ್ದು ಆಕೆಗೆ ಪ್ರಜ್ಞಾ ಸಿಂಗ್‌ರ ಆಹಾರದ ಹೊಣೆಯನ್ನು ವಹಿಸಲಾಗಿತ್ತು. ತನ್ನ ಆಹಾರದಲ್ಲಿ ಜೈಲು ಅಧಿಕಾರಿಗಳು ಹುಳಗಳು ಮತ್ತು ಮೊಟ್ಟೆಯ ತುಣುಕುಗಳನ್ನು ಬೆರೆಸುತ್ತಾರೆ ಎಂಬುದಾಗಿ ಪ್ರಜ್ಞಾ ಆರೋಪಿಸಿದ ಬಳಿಕ, ವಿಚಾರಣಾ ನ್ಯಾಯಾಲಯವು ಮನೆಯಲ್ಲಿ ಮಾಡಿದ ಆಹಾರವನ್ನು ಪ್ರಜ್ಞಾಗೆ ಪೂರೈಸಲು ಅನುಮೋದನೆ ನೀಡಿತು. ಅವರ ಭಾವ ಭಗವಾನ್ ಝಾ ಗುಜರಾತ್‌ನ ಸೂರತ್‌ನಿಂದ ಬೈಕುಲಾ ಜೈಲಿಗೆ ಪ್ರತಿದಿನ 280 ಕಿ.ಮೀ. ಪ್ರಯಾಣಿಸಿ ಬಹು ಪದರದ ಬುತ್ತಿಯಲ್ಲಿ ಆಹಾರ ತಂದುಕೊಡುತ್ತಿದ್ದರು.

ಮನೆಯಲ್ಲೇ ತಯಾರಿಸಿದ ತಾಜಾ ಆಹಾರವು ಸೂರ್ಯೋದಯಕ್ಕೆ ಮುಂಚೆಯೇ ಜೈಲನ್ನು ತಲುಪುತ್ತಿತ್ತು. ಠಾಕೂರ್‌ರ ಸೇವಕಿ ಧಾವಿಸಿ ಹೋಗಿ ಜೈಲಿನ ಕೋಣೆಯಿಂದ ಆಹಾರದ ಬುತ್ತಿಯನ್ನು ತರುತ್ತಿದ್ದರು. ಆ ಸೇವಕಿಯ ಏಕೈಕ ಕೆಲಸವೆಂದರೆ ಪ್ರಜ್ಞಾಗೆ ದಿನದ ಮೂರು ಹೊತ್ತು ಊಟವನ್ನು ಕೊಡುವುದು. ಅದೇ ರೀತಿ ಮಾದಕ ದ್ರವ್ಯದ ವ್ಯವಹಾರ ನಡೆಸುತ್ತಿದ್ದ ಆರೋಪವನ್ನು ಎದುರಿಸುತ್ತಿದ್ದ ಜಾಟ್ ಜಾತಿಯ ಮಹಿಳೆಯೊಬ್ಬರನ್ನು ಪ್ರಜ್ಞಾರ ಅಂಗರಕ್ಷಕಿಯಾಗಿ ನೇಮಿಸಲಾಗಿತ್ತು. ಸ್ಥಳೀಯ ದಲಿತ ಮಹಿಳೆಯೊಬ್ಬರು ಆಕೆಯ ಶೌಚಾಲಯವನ್ನು ತೊಳೆಯುತ್ತಿದ್ದರು.

‘‘ಪ್ರಜ್ಞಾರ ಧರ್ಮ, ಅವರ ಜಾತಿ ಮತ್ತು ರಾಜಕೀಯ ಪ್ರಭಾವ ಜೈಲಿನಲ್ಲಿ ಅವರ ಹಾಗೂ ಅವರ ಸೇವಕಿಯರ ಸ್ಥಾನಗಳನ್ನು ನಿರ್ಧರಿಸಿತು. ಈ ಸೇವೆಗಳನ್ನು ಪಡೆಯುವುದು ತನ್ನ ಕಾನೂನುಬದ್ಧ ಹಕ್ಕು ಎಂಬಂತೆ ಆ ಸೇವೆಗಳಿಗಾಗಿ ಪ್ರಜ್ಞಾ ಬೇಡಿಕೆ ಸಲ್ಲಿಸಿದರು ಹಾಗೂ ಸರಕಾರ ಅದಕ್ಕೆ ಒಪ್ಪಿತು. ಜೈಲಿನ ನಿಯಮಗಳ ಪುಸ್ತಕದಲ್ಲಿ ಇಂತಹ ಸೇವೆಗಳಿಗೆ ಅವಕಾಶ ಇದೆಯೇ ಇಲ್ಲವೇ ಎನ್ನುವುದು ಬೇರೆ ವಿಷಯ. ಆದರೆ ಅದು ಜೈಲು ಸಿಬ್ಬಂದಿಗೆ ತಿಳಿದಿತ್ತು ಎನ್ನುವುದು ಗಮನಿಸಬೇಕಾದ ವಿಷಯ’’ ಎಂದು ಲಲಿತಾ ಹೇಳುತ್ತಾರೆ.

ಅದೇ ಸಮಯದಲ್ಲಿ ಅದೇ ಜೈಲಿನಲ್ಲಿದ್ದ ಇತರ ಹಲವಾರು ಮಹಿಳಾ ಕೈದಿಗಳು ಈ ವಿಷಯವನ್ನು ದೃಢೀಕರಿಸಿದ್ದಾರೆ.

ಕೃಪೆ:thewire.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ