ಜಾಗತೀಕರಣದ ಕರಾಳ ಆಟ ‘ಸ್ಕ್ವಿಡ್‌ಗೇಮ್’

Update: 2021-12-05 03:26 GMT

ನೀವು ನೆಟ್‌ಫ್ಲಿಕ್ಸ್‌ನ ‘ಸ್ಕ್ವಿಡ್ ಗೇಮ್’ವೆಬ್ ಸರಣಿಯನ್ನು ವೀಕ್ಷಿಸಿರಬಹುದು. ‘ಮನಿ ಹೈಸ್ಟ್’ ಬಳಿಕ ಅತಿ ಹೆಚ್ಚು ಸುದ್ದಿಯಲ್ಲಿರುವ ಸರಣಿ ಇದು. ಕ್ಷಣ ಕ್ಷಣಕ್ಕೂ ಕುತೂಹಲಕಾರಿಯಾಗಿರುವ ಹಣ-ಮನುಷ್ಯತ್ವದ ನಡುವಿನ ಈ ಸ್ಪರ್ಧೆ ಮನುಷ್ಯನ ಒಳ ಸಂಘರ್ಷಗಳಿಗೂ ಕನ್ನಡಿ ಹಿಡಿಯುತ್ತದೆ. ಹಣದ ಬೆಂಬತ್ತಿ ಪ್ರಾಣ ಒತ್ತೆಯಿಟ್ಟು ಬಾಲ್ಯದ ಆಟಗಳನ್ನು ಆಡಲು ಹೊರಟು, ಅಂತಿಮವಾಗಿ ಹಣವೇ ಎಲ್ಲ ಎನ್ನುವ ಸಂದೇಶದೊಂದಿಗೆ ಮುಕ್ತಾಯಗೊಳ್ಳುವ ಸರಣಿ ಇದು. ದಕ್ಷಿಣ ಕೊರಿಯದ ವೆಬ್ ಸರಣಿಗಳು ಹಸಿಹಸಿ ಹಿಂಸೆಯ ದೃಶ್ಯಗಳಿಗೆ ಹೆಸರಾಗಿರುವುದರಿಂದ ಈ ಸರಣಿಯನ್ನು ಬರೇ ಹಿಂಸೆಗಷ್ಟೇ ಸೀಮಿತಗೊಳಿಸಲಾಗುವುದಿಲ್ಲ. ಅದು ಯಾಕೆ ಜಾಗತಿಕಮಟ್ಟದಲ್ಲಿ ಇಷ್ಟೊಂದು ಸದ್ದು ಮಾಡುತ್ತಿದೆ ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ. ಸಾಲದ ಬಾಧೆಯಿಂದ ಬೆಂದಿರುವ ನೂರಾರು ದಕ್ಷಿಣ ಕೊರಿಯನ್ನರು ಬೃಹತ್ ಜಾಕ್‌ಪಾಟ್ ಗೆಲ್ಲಲು ಜೀವನ್ಮರಣದ ಹೋರಾಟ ನಡೆಸುವ ಈ ಸರಣಿಯು ಜಾಗತಿಕ ಮಟ್ಟದಲ್ಲಿ ಪ್ರಚಂಡ ಯಶಸ್ಸು ಕಾಣುತ್ತಿದೆ. ಈ ಸ್ಪರ್ಧೆಗಳು ಹಗ್ಗ ಜಗ್ಗಾಟ (ಟಗ್ ಆಫ್ ವಾರ್) ಹಾಗೂ ಗೋಲಿಯಾಟದ ರೀತಿಯಲ್ಲಿರುತ್ತದೆ. ಆದರೆ ಈ ಅಟದಲ್ಲಿ ಸೋತವರಿಗೆ ಮರಣದಂಡನೆಯೇ ಶಿಕ್ಷೆಯಾಗುತ್ತದೆ.

ಈ ಕಾಲ್ಪನಿಕ ಕಥಾಚಿತ್ರವು ಇಂದಿನ ದಿನಗಳಲ್ಲಿ ದಕ್ಷಿಣ ಕೊರಿಯ ಸಮುದಾಯದ ಬದುಕಿನ ವಾಸ್ತವಿಕತೆಯನ್ನು ನಿಖರವಾಗಿ ಪ್ರತಿಬಿಂಬಿಸುತ್ತದೆ ಎಂದು ಹೇಳಬಹುದಾಗಿದೆ.

ಪ್ರಸಕ್ತ ದಿನಗಳಲ್ಲಿ ಹಲವಾರು ಕೊರಿಯನ್ನರು ಆರ್ಥಿಕ ದುಸ್ಥಿತಿಯಲ್ಲಿ ಜೀವನವನ್ನು ಸಾಗಿಸುತ್ತಿರುವುದಕ್ಕೆ ಸ್ಕ್ವಿಡ್‌ಗೇಮ್ ಸರಣಿಯು ಕನ್ನಡಿ ಹಿಡಿದಿದೆ. ದಕ್ಷಿಣ ಕೊರಿಯದಲ್ಲಿ ಕೌಟುಂಬಿಕ ಸಾಲದ ಪ್ರಮಾಣವು ಆ ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ)ದ ಶೇ.100ಕ್ಕಿಂತಲೂ ಅಧಿಕವಾಗಿದೆ. ಒಂದೆಡೆ ಸುಭದ್ರವಾದ ಉದ್ಯೋಗಗಳ ಲಭ್ಯತೆ ಕಡಿಮೆಯಾಗುತ್ತಲೇ ಹೋಗುತ್ತಿದ್ದರೆ, ಇನ್ನೊಂದೆಡೆ ಮನೆ,ವಸತಿಗಳು ತೀರಾ ದುಬಾರಿಯಾಗುತ್ತಿವೆ. ಕೆಲವು ವಷಗರ್ಳ ಹಿಂದೆ, ದಕ್ಷಿಣ ಕೊರಿಯದ ಯುವಜನರು ತಮ್ಮ ದೇಶವನ್ನು ‘ಹೆಲ್‌ಚೊಸೂನ್’ ಅಂದರೆ ಪ್ರಗತಿಯನ್ನು ಕಾಣಲು ಅಸಾಧ್ಯವಾದ ಸ್ಥಳವೆಂದು ಹತಾಶೆಯಿಂದ ಬಣ್ಣಿಸುತ್ತಿದ್ದರು. ಆ ದೇಶದಲ್ಲಿ ಉನ್ನತ ವಿಶ್ವವಿದ್ಯಾನಿಲಯಗಳಲ್ಲಿ ಸೀಟುಗಿಟ್ಟಿಸಲು ಹಾಗೂ ಪ್ರಮುಖ ಉದ್ಯಮ ಸಂಸ್ಥೆಗಳಲ್ಲಿ ಹುದ್ದೆಗಳಿಗಾಗಿ ಇನ್ನಿಲ್ಲದಂತೆ ನಿರ್ದಯವಾದಂತಹ ಸ್ಪರ್ಧೆಗಳು ನಡೆಯುತ್ತಿವೆ. ಇವೆಲ್ಲದರ ಪರಿಣಾಮವಾಗಿ ದಕ್ಷಿಣ ಕೊರಿಯದ ಸಂಸ್ಕೃತಿಯಲ್ಲಿ ಅಸಮಾನತೆಯು ದೈತ್ಯಾಕಾರವಾಗಿ ಬೆಳೆಯುತ್ತಾ ಹೋಗುತ್ತಿದೆ. ಜಾಗತಿಕ ಮಟ್ಟದಲ್ಲಿ ಪ್ರೇಕ್ಷಕರ ಗಮನಸೆಳೆದ 2019ರಲ್ಲಿ ತೆರೆಕಂಡ ಜನಪ್ರಿಯ ಚಿತ್ರ ‘ಪ್ಯಾರಾಸೈಟ್’ ಇದನ್ನು ಬೆಳ್ಳಿಪರದೆಯಲ್ಲಿ ಪರಿಣಾಮಕಾರಿಯಾಗಿ ಮೂಡಿಸಿತ್ತು.

ಇದೀಗ ಸದ್ದು ಮಾಡುತ್ತಿರುವ ಸ್ಕ್ವಿಡ್‌ಗೇಮ್ ವೆಬ್ ಸರಣಿಯು ಜಗತ್ತಿನಲ್ಲಿ ದಕ್ಷಿಣ ಕೊರಿಯದ ಸ್ಥಾನಮಾನದ ಕುರಿತಾಗಿ ಆ ದೇಶದ ಜನತೆಗೆ ಇರುವ ಆಳವಾದ ಆತಂಕವನ್ನು ಪ್ರತಿಫಲಿಸುತ್ತದೆ. ಒಂದು ಸಮಯದಲ್ಲಿ ತೃತೀಯ ಜಗತ್ತಿನ ಬಡರಾಷ್ಟ್ರವಾಗಿದ್ದ ದಕ್ಷಿಣ ಕೊರಿಯವು, ಜಗತ್ತಿನ ಉನ್ನತ ಆರ್ಥಿಕತೆಯ ರಾಷ್ಟ್ರಗಳಲ್ಲೊಂದಾಗಿ ಬೆಳೆದುಬಿಟ್ಟಿದೆ. ಸ್ಕ್ವಿಡ್‌ಗೇಮ್ ಸ ರಣಿಯು ಕೂಡಾ ವಿಚಿತ್ರವಾದ ರೀತಿಯಲ್ಲಿ ಜಾಗತೀಕರಣದ ಕುರಿತಾಗಿ ಉಲ್ಲೇಖಿಸುತ್ತದೆ. ಆದರೆ ಜಾಗತಿಕ ಪ್ರೇಕ್ಷಕರನ್ನು ತಲುಪುವ ಉದ್ದೇಶದಿಂದ ಅದು ಈ ಜಟಿಲವಾದ ಸಂದೇಶವನ್ನು ಜಾಣತನದಿಂದ ಮುಚ್ಚಿಟ್ಟಿದೆ.

Writer - ಆರ್.ಎನ್.

contributor

Editor - ಆರ್.ಎನ್.

contributor

Similar News

ಜಗದಗಲ
ಜಗ ದಗಲ