​ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ವಿರುದ್ಧ ಭುಗಿಲೆದ್ದ ಆಕ್ರೋಶ

Update: 2021-12-06 02:36 GMT
(ಫೋಟೊ - PTI)

ಗುವಾಹತಿ: ನಾಗಾಲ್ಯಾಂಡ್‌ನ ಮಾನ್ ಜಿಲ್ಲೆಯಲ್ಲಿ ಸೇನೆ ತಪ್ಪು ತಿಳಿವಳಿಕೆಯಿಂದ ನಡೆಸಿದ ಕಾರ್ಯಾಚರಣೆಯಲ್ಲಿ 14 ನಾಗರಿಕರ ಹತ್ಯೆ ಮಾಡಿದ ಬೆನ್ನಲ್ಲೇ, ಸಶಸ್ತ್ರ ಪಡೆಗಳ (ವಿಶೇಷಾಧಿಕಾರ) ಕಾಯ್ದೆ ಅಥವಾ ಎಎಫ್‌ಎಸ್‌ಪಿಎ ಕಾಯ್ದೆಯನ್ನು ಪ್ರಕ್ಷುಬ್ಧ ಪ್ರದೇಶಗಳಿಂದ ರದ್ದುಪಡಿಸುವಂತೆ ಒತ್ತಡ ಹೆಚ್ಚಿದೆ. ಏತನ್ಮಧ್ಯೆ ಸೇನೆ ಹಾಗೂ ನಾಗರಿಕರ ನಡುವೆ ಈಶಾನ್ಯ ರಾಜ್ಯದಲ್ಲಿ ಸಂಘರ್ಷ ತಾರಕಕ್ಕೇರಿದೆ.

1958ರ ವಿವಾದಿತ ಎಎಫ್‌ಎಸ್‌ಪಿಎ ಕಾಯ್ದೆ, ಭದ್ರತಾ ಪಡೆಗಳಿಗೆ ಉಗ್ರಗಾಮಿ ವಿರೋಧಿ ಕಾರ್ಯಾಚರಣೆ ವೇಳೆ ಹತ್ಯೆಗಾಗಿ ಗುಂಡು ಹಾರಿಸುವುದು ಸೇರಿದಂತೆ ಹಲವು ವಿಶೇಷ ಅಧಿಕಾರಗಳನ್ನು ನೀಡುತ್ತದೆ. ಇದು ಜಮ್ಮು ಕಾಶ್ಮೀರ, ನಾಗಾಲ್ಯಾಂಡ್‌ಗಳಲ್ಲಿ ಜಾರಿಯಲ್ಲಿದ್ದು, ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮಣಿಪುರದಲ್ಲಿ ಭಾಗಶಃ ಜಾರಿಯಲ್ಲಿದೆ. ಮಾನವಹಕ್ಕು ಸಂಘಟನೆಗಳು ಮತ್ತು ರಾಜಕಾರಣಿಗಳ ಪ್ರಕಾರ, ಈ ಕಾಯ್ದೆಯು ಸೈನಿಕರು ಹತ್ಯೆ, ಕಿರುಕುಳ ಹಾಗೂ ಅತ್ಯಾಚಾರದಂಥ ಕೃತ್ಯಗಳನ್ನು ರಾಜಾರೋಷವಾಗಿ ನಡೆಸಲು ಅವಕಾಶ ಮಾಡಿಕೊಟ್ಟಿದೆ.

ಇದೀಗ ನಾಗಾ ಹತ್ಯೆ ಬಳಿಕ ಎಎಫ್‌ಎಸ್‌ಪಿಎ ವಿರುದ್ಧದ ಧ್ವನಿ ಗಟ್ಟಿಯಾಗಿದ್ದು, ಹಲವು ಸಂಘಟನೆಗಳು ಈ ಕರಾಳ ಕಾಯ್ದೆ ರದ್ದತಿಗೆ ಆಗ್ರಹಿಸಿವೆ. ಕೋಹಿಮಾದಲ್ಲಿ ನಡೆಯುತ್ತಿರುವ ನಾಗಾಲ್ಯಾಂಡ್‌ನ ಪ್ರಮುಖ ಸಮಾರಂಭ ಎನಿಸಿದ ಹಾರ್ನ್‌ಬಿಲ್ ಫೆಸ್ಟಿವಲ್‌ನಲ್ಲಿ ಈ ಕಾಯ್ದೆಯ ರದ್ದತಿಯನ್ನು ಆಗ್ರಹಿಸುವ ಬಿತ್ತಿಪತ್ರಗಳು ರಾರಾಜಿಸುತ್ತಿವೆ.

ಈ ಕರಾಳ ಕಾನೂನು ಭದ್ರತಾ ಪಡೆಗಳಿಗೆ ಹತ್ಯೆ ಮಾಡಲು ಲೈಸನ್ಸ್ ನೀಡಿದ್ದು, ನಾಗರಿಕರ ಹತ್ಯೆ ಮಾಡುವ ಸೈನಿಕರ ವಿರುದ್ಧ ಆರೋಪ ಮಾಡಲು ಅಥವಾ ಅವರನ್ನು ಜೈಲಿಗೆ ಕಳುಹಿಸಲು ಅವಕಾಶವಿಲ್ಲ ಎಂದು ಮಣಿಪುರ ವಿಮನ್ ಗುಣ ಸರ್ವೈವರ್ ನೆಟ್‌ವರ್ಕ್ ಮತ್ತು ಗ್ಲೋಬಲ್ ಅಲಯನ್ಸ್ ಆಫ್ ಇಂಡೀಜೀನಿಯಸ್ ಪೀಪಲ್ಸ್‌ನ ಸಂಸ್ಥಾಪಕಿ ಬೀನಾಲಕ್ಷ್ಮಿ ನೇಪ್ರಮ್ ಹೇಳಿದ್ದಾರೆ.

ಶನಿವಾರದ ಹತ್ಯಾಕಾಂಡವು ಮಣಿಪುರದ ರಾಜಧಾನಿ ಇಂಫಾಲದ ಮಾಲೋಮ್ ಮಖಾಲೇಖಿಯಲ್ಲಿ 2000ನೇ ಇಸ್ವಿಯಲ್ಲಿ ನಡೆದ 10 ನಾಗರಿಕ ಹತ್ಯೆ ಘಟನೆಯನ್ನು ನೆನಪಿಸಿದ್ದು. ಈ ಮಾಲೋಮ್ ಹತ್ಯಾಕಾಂಡದ ಬಳಿಕ ಐರೋಮ್ ಶರ್ಮಿಳಾ, ಎಎಫ್‌ಎಸ್‌ಪಿಎ ವಿರುದ್ಧ 16 ವರ್ಷಗಳ ಉಪವಾಸ ಸತ್ಯಾಗ್ರಹ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News