ಜಾಗತಿಕ ಧುರೀಣ ಅಂಬೇಡ್ಕರ್

Update: 2021-12-06 05:35 GMT

ಇಂದು ನಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ಮತ್ತು ಸವಾಲುಗಳಿಗೆ ಸಂವಿಧಾನದೇ ಸರಿಯಾದ ದಾರಿ. ನಾವು ಸುರಕ್ಷಿತವಾಗಿ ಬದುಕಲು, ನಮಗೋಸ್ಕರ ನಮ್ಮ ಮುಂದಿನ ಪೀಳಿಗೆಗಾಗಿ ನಮ್ಮ ಸಂವಿಧಾನವನ್ನು, ಅದರ ಆಶಯಗಳನ್ನು ರಕ್ಷಿಸಿಕೊಳ್ಳಬೇಕು. ನಾವೆಲ್ಲರೂ ನಮ್ಮ ಸಂವಿಧಾನವನ್ನು ಓದಬೇಕು, ಅರ್ಥೈಯಿಸಬೇಕು, ಮೂಲತತ್ವಗಳನ್ನು ಮೈಗೂಡಿಸಿಕೊಳ್ಳಬೇಕು ಮತ್ತು ಅದರಂತೆ ನಡೆದುಕೊಳ್ಳಬೇಕು. ಮುಖಾಂತರ ಅಂಬೇಡ್ಕರ್ ಅವರಿಗೆ ನಮ್ಮ ಕೃತಜ್ಞತೆಗಳನ್ನು ಸಲ್ಲಿಸೋಣ.

ಡಾ.ಬಿ.ಆರ್. ಅಂಬೇಡ್ಕರ್ ಅವರು 1891 ಎಪ್ರಿಲ್ 14ರಂದು ಜನಿಸಿ 1956 ಡಿಸೆಂಬರ್ 6ರಂದು ನಿಧನರಾದರು.

ಇಂದು ಅಂಬೇಡ್ಕರ್ ಅವರ 65ನೇ ಪರಿನಿರ್ವಾಣವನ್ನು ಆಚರಿಸುತ್ತಿದ್ದೇವೆ. ಅಂಬೇಡ್ಕರ್ ಹೇಳಿದಂತೆ ‘‘ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು’’. ಅದ್ದರಿಂದ ನಾವು ಅಂಬೇಡ್ಕರ್‌ರ ಕೊಡುಗೆಯನ್ನು ಸ್ಮರಿಸುವುದರ ಮುಖಾಂತರ ಹೊಸ ಇತಿಹಾಸವನ್ನು ಸೃಷ್ಟಿಸಬೇಕಾಗಿದೆ.

ಭಾರತ ದೇಶದ ಹಳ್ಳಿ ಹಳ್ಳಿಯಲ್ಲಿ ಹಂಚಿ ಹೋದ ಅವಿದ್ಯಾವಂತ, ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕವಾಗಿ ಅತ್ಯಂತ ದುರ್ಬಲ ಸ್ಥಿತಿಯಲ್ಲಿದ್ದ ದಲಿತರನ್ನು ಸಂಘಟಿಸಿ ರಾಷ್ಟ್ರಮಟ್ಟದಲ್ಲಿ ಒಂದು ವೇದಿಕೆಯನ್ನು ರೂಪಿಸಿ ಅವರ ಆಶೋತ್ತರಗಳಿಗೆ ಒಂದು ರೂಪ ನೀಡಿದವರು ಅಂಬೇಡ್ಕರ್. ಕುಂಭಕರ್ಣನಂತೆ ನಿದ್ದೆ ಹೋಗುತ್ತಿದ್ದ ದಲಿತರನ್ನು ಬಡಿದೆಬ್ಬಿಸಿ ಅವರಲ್ಲಿ ಧೈರ್ಯ ಮತ್ತು ಸ್ಥೈಯವನ್ನು ತುಂಬಿದರು. ಬಾಯಿಗೆ ಹಾಕಿದ್ದ ಬೀಗವನ್ನು ಮುರಿದು ಧ್ವನಿ ಇಲ್ಲದ ದಲಿತರಿಗೆ ಧ್ವನಿಯನ್ನು ನೀಡಿದರು. ನ್ಯಾಯಕ್ಕಾಗಿ, ಸಮಾನತೆಗಾಗಿ ಮತ್ತು ಸ್ವಾಭಿಮಾನಕ್ಕಾಗಿ ಧ್ವನಿ ಎತ್ತುವಂತೆ ಮಾಡಿದರು. ಹಾಗಾಗಿ ಅಂಬೇಡ್ಕರ್ ನಿರ್ವಿವಾದವಾಗಿ ದೇಶದ ಶೇ. 25ರಷ್ಟು ದಲಿತರ ಅಶಾಕಿರಣವಾಗಿದ್ದರು ಎಂಬುದರಲ್ಲಿ ಎರಡು ಮಾತಿಲ್ಲ.

ಅಂಬೇಡ್ಕರ್ 1942ರಿಂದ 1946ರವರೆಗೆ ಬ್ರಿಟಿಷ್ ವೈಸರಾಯ್ ಸಚಿವ ಸಂಪುಟದಲ್ಲಿ ಕಾರ್ಮಿಕ ಸಚಿವರಾಗಿ/ ಸದಸ್ಯರಾಗಿ ಕಾರ್ಯನಿರ್ವಹಿಸಿದರು. ತಮಗಿದ್ದ ಇತಿ-ಮಿತಿಯೊಳಗೆ ಕಾರ್ಮಿಕರ ಪರವಾದ ಕೆಲಸ ಮಾಡಿದರು. ಪ್ರಮುಖವೆಂದರೆ ಉದ್ಯೊಗ ವಿನಿಮಯ ಕೇಂದ್ರಗಳ ಸ್ಥಾಪನೆ, ದಿನಕ್ಕೆ 14 ಗಂಟೆ ಕೆಲಸದ ಅವಧಿಯನ್ನು 8 ಗಂಟೆಗೆ ಇಳಿಸಿದ್ದು, ಮಹಿಳಾ ಕಾರ್ಮಿಕರಿಗೆ ಹೆರಿಗೆ ರಜಾ ಸೌಲಭ್ಯ, ಮಹಿಳಾ ಕಾರ್ಮಿಕರ ಕಲ್ಯಾಣ ನಿಧಿ, ಮಹಿಳಾ ಕಾರ್ಮಿಕರಿಗೆ ಪ್ರತ್ಯೇಕ ಶೌಚಾಲಯಗಳು, ವೇತನ ಸಹಿತ ರಜಾ ದಿನಗಳು, ಕಾರ್ಮಿಕರಿಗೆ ಕಡ್ಡಾಯ ವಿಮೆ ಯೋಜನೆ, ಕನಿಷ್ಠ ಕೂಲಿ, ಕಾಲ ಕಾಲಕ್ಕೆ ವೇತನ ಪರಿಷ್ಕರಣೆ, ಫ್ಯಾಕ್ಟರೀಸ್ ಕಾಯ್ದೆ, ಕನ್ಸಿಲೇಶನ್, ಭವಿಷ್ಯನಿಧಿ ಕಾಯ್ದೆ ಇತ್ಯಾದಿಗಳನ್ನು ಜಾರಿಗೆ ತಂದರು. ದೇಶದ ಶೇ.60ರಷ್ಟು ದುಡಿಯುವ ವರ್ಗ ಇಂದು ಅನುಭವಿಸುತ್ತಿರುವ ಹಲವು ಕಷ್ಟಗಳು, ಸವಲತ್ತುಗಳು, ಯೋಜನೆಗಳು ಮತ್ತು ಕಾರ್ಯಕ್ರಮಗಳ ಹಿಂದೆ ಅಂಬೇಡ್ಕರ್ ಅವರ ಕೊಡುಗೆ ಇದೆುಂಬ ಸತ್ಯವನ್ನು ಮರೆಯಬಾರದು.

ದೇಶದ ಜನಸಂಖೆಯಲ್ಲಿ ಸರಿಸುಮಾರು ಅರ್ಧದಷ್ಟಿರುವ ಮಹಿಳೆಯರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಕಾಣಲಾಯಿತು. ಮಹಿಳೆಯರಿಗೆ ಆಗುತ್ತಿರುವ ಅನ್ಯಾಯವನ್ನು ತಡೆದು ಸಮಾನತೆಯನ್ನು ಸಾಧಿಸಿ ಎಲ್ಲಾ ರಂಗಗಳಲ್ಲಿ ಸಮಾನ ಅವಕಾಶಗಳು ದಕ್ಕುವಂತಾಗಬೇಕೆಂದು ಆಶಿಸಿದರು.

ಹಿಂದೂ ಮಹಿಳೆಯರಿಗೆ ತಮ್ಮ ಕುಟುಂಬದ ಆಸ್ತಿಯಲ್ಲಿ ಹಕ್ಕು, ಮದುವೆ ವಿಚ್ಛೇದನ, ಜೀವನಾಂಶ, ದತ್ತು ಪಡೆಯುವ ವಿಚಾರಗಳಿಗೆ ಸಂಬಂಧಿಸಿ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲೆಂದು ಸ್ವತಂತ್ರ ಭಾರತದ ಸಂಸತ್‌ನಲ್ಲಿ ಹಿಂದೂ ಕೋಡ್ ಬಿಲ್ಲನ್ನು ಮಂಡಿಸಿದರು. ಅಗತ್ಯವಿದ್ದ ಬಹುಮತ ಸಿಗದೆ ಈ ಬಿಲ್ ಬಿದ್ದು ಹೋಯಿತು. ಇದರಿಂದ ತೀವ್ರವಾಗಿ ನೊಂದ ಅಂಬೇಡ್ಕರ್ ಅವರು ಅಂದೇ ತನ್ನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಕಳೆದ 73 ವರ್ಷಗಳ ಗಣರಾಜ್ಯ ಭಾರತದಲ್ಲಿ ಅಂಬೇಡ್ಕರ್‌ರನ್ನು ಹೊರತುಪಡಿಸಿ ಮಹಿಳಾ ಸಮಾನತೆಗಾಗಿ ರಾಜೀನಾಮೆ ನೀಡಿದ ಮತ್ತೊಬ್ಬ ರಾಜಕಾರಣಿ ಇಲ್ಲ. ಇಂದು ಹಿಂದೂ ಮಹಿಳೆಯರು ಅನುಭವಿಸುತ್ತಿರುವ ಅನೇಕ ಹಕ್ಕುಗಳ ಹಿಂದೆ ಅಂಬೇಡ್ಕರ್ ಅವರ ಕೊಡುಗೆ ಇದೆ.

ಭಾರತದ ಸಂವಿಧಾನ ರಚನಾ ಸಭೆಯಲ್ಲಿ 272 ಚುನಾಯಿತ ಸದಸ್ಯರಿದ್ದರೂ ಕೆಲವು ಸದಸ್ಯರು ಹೆಚ್ಚು ಕೊಡುಗೆಯನ್ನು ನೀಡಿದ್ದಾರೆ. ಆದರೆ ಅಂಬೇಡ್ಕರ್ ದಿನಕ್ಕೆ 18 ಗಂಟೆಗಳಿಗೂ ಹೆಚ್ಚು ಕೆಲಸ ನಿರ್ವಹಿಸಬೇಕಾಯಿತು. ಭಾರತದ ಸಂವಿಧಾನ ರಚನೆಗೆ ಅಂಬೇಡ್ಕರ್ ಅವರ ಕೊಡುಗೆ ಬಗ್ಗೆ ಭಾರತ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರ ಪ್ರಶಂಸೆಯ ಮಾತುಗಳು ಹೀಗೆ ಇವೆ:

 ‘‘ಸಂವಿಧಾನ ಸಭೆಯ ಅಧ್ಯಕ್ಷನಾಗಿ ಪ್ರತಿದಿನದ ಚಟುವಟಿಕೆಗಳನ್ನು ಬಹಳ ಕೂಲಂಕಷವಾಗಿ ಗಮನಿಸಿದ್ದೇನೆ. ಸಂವಿಧಾನ ಕರಡು ರಚನೆ ಸಮಿತಿ ಮತ್ತು ವಿಶೇಷವಾಗಿ ಅದರ ಅಧ್ಯಕ್ಷರಾದ ಡಾ.ಬಿ.ಆರ್. ಅಂಬೇಡ್ಕರ್ ಇಷ್ಟು ಶ್ರದ್ಧ್ದೆ ಮತ್ತು ಉತ್ಸಾಹದಿಂದ ಈ ಕಾರ್ಯವನ್ನು ನಡೆಸಿದ್ದಕ್ಕೆ ಎಲ್ಲರಿಗಿಂತ ಹೆಚ್ಚು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಡಾ.ಬಿ.ಆರ್.ಅಂಬೇಡ್ಕರ್‌ರನ್ನು ಕರಡು ರಚನೆ ಸಮಿತಿಗೆ ಸೇರಿಸಿದ್ದು ಮತ್ತು ಅದರ ಅಧ್ಯಕ್ಷರನ್ನಾಗಿ ಮಾಡಿದ್ದು ನಾವು ಮಾಡಿದ ಅತ್ಯುತ್ತಮ ಕೆಲಸ’’.

ಅಂಬೇಡ್ಕರ್‌ರ ಪರಿಶ್ರಮವನ್ನು ಪರಿಗಣಿಸಿ ಅವರನ್ನು ಸಂವಿಧಾನ ಶಿಲ್ಪಿಯೆಂದು ಕರೆಯಲಾಯಿತು. 73 ವರ್ಷಗಳ ನಂತರವು ನಮ್ಮ ಸಂವಿಧಾನ ಕೇವಲ ಜಗತ್ತಿನ ಅತಿದೊಡ್ಡ ಲಿಖಿತ ಸಂವಿಧಾನ ಮಾತ್ರವಲ್ಲದೆ, ಪ್ರಸ್ತುತ ಉತ್ತಮವಾಗಿ ಉಳಿದಿದೆ.

ಅಮೆರಿಕದ ಅಂದಿನ ಅಧ್ಯಕ್ಷರಾದ ಬರಾಕ್ ಒಬಾಮಾ ಅವರು 2014ರಲ್ಲಿ ಕೊಲಂಬಿಯ ವಿಶ್ವವಿದ್ಯಾನಿಲಯದಲ್ಲಿ ಅಂಬೇಡ್ಕರ್‌ಅವರ ಪ್ರತಿಮೆಯನ್ನು ಅನಾವರಣ ಮಾಡಿ ಗೌರವಿಸಿದರು. ವಿಶ್ವ ಸಂಸ್ಥೆ 2015ರಲ್ಲಿ ಅಂಬೇಡ್ಕರ್ ಜನ್ಮ ದಿನವಾದ ಎಪ್ರಿಲ್ 14ನ್ನು ‘ವಿಶ್ವದ ಜ್ಞಾನದ ದಿನ’ ವನ್ನಾಗಿ ಆಚರಿಸಲು ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿದೆ. ಹೀಗೆ ಅಂಬೇಡ್ಕರ್ ಒಂದು ದಂತಕತೆಯಾಗಿ ಬೆಳೆಯುತ್ತಲೇ ಇದ್ದಾರೆ. ಅವರೊಬ್ಬ ಜಾಗತಿಕ ಧುರೀಣ.

ಸಂವಿಧಾನದ ಸಾಧನೆ

ನಮ್ಮ ಸಂವಿಧಾನ ಜಾರಿಗೆ ಬಂದ ನಂತರ ನಾವೊಂದಷ್ಟು ಸಾಧನೆ ಮಾಡಿದ್ದೇವೆ. ಕಾಶ್ಮೀರದಿಂದ ಕನ್ಯಾಕುಮಾರಿಯವರಗೆ ಇಡೀ ಭೂ ಪ್ರದೇಶ ಹಿಂದೆಂದೂ ಒಂದು ರಾಜಕೀಯ ಆಡಳಿತಕ್ಕೆಒಳಪಟ್ಟಿರಲಿಲ್ಲ. ಸ್ವಾತಂತ್ರ ಬಂದ ನಂತರ ಅರಸೊತ್ತಿಗೆಗಳನ್ನು ಮತ್ತು ಪಾಳೆಗಾರಿ ಪದ್ಧತಿಯನ್ನು ರದ್ದುಗೊಳಿಸಿ ಒಂದು ಗಡಿಯನ್ನು ನಿಗದಿ ಪಡಿಸಿ, ಒಂದು ಸಂವಿಧಾನ, ಒಂದು ರಾಷ್ಟ್ರಗೀತೆ, ರಾಷ್ಟ್ರ ಧ್ವಜ, ಒಂದು ರಾಷ್ಟ್ರಲಾಂಛನವನ್ನು ನೀಡಿ, ಮೊದಲನೇ ಬಾರಿಗೆ ಇಡೀ ಈ ಭೂ ಪ್ರದೇಶವನ್ನು ಒಂದು ರಾಜಕೀಯ ಆಡಳಿತಕ್ಕೆ ಒಳಪಡಿಸಿ ನಿಜವಾದ ಭಾರತ ನಿರ್ಮಾಣ ಮಾಡಲಾಯಿತು. ಲೋಕಸಭೆ-ರಾಜ್ಯಸಭೆ, ವಿಧಾನಸಭೆ- ವಿಧಾನಪರಿಷತ್ ಎಂಬ ಶಾಸಕಾಂಗ ಸಂಸ್ಥೆಗಳನ್ನು ಕೇಂದ್ರ ಸರಕಾರ, ರಾಜ್ಯ ಸರಕಾರ, ಜಿಲ್ಲಾಡಳಿತ, ತಾಲೂಕು ಮತ್ತು ಗ್ರಾಮ ಪಂಚಾಯತ್‌ಗಳೆಂಬ ಕಾರ್ಯಾಂಗದ ಸಂಸ್ಥೆಗಳನ್ನು ಮತ್ತು ಸರ್ವೋಚ್ಚ ನ್ಯಾಯಾಲಯ, ಉಚ್ಛ್ಛ ನ್ಯಾಯಾಲಯಗಳು, ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳೆಂಬ ನ್ಯಾಯಾಂಗ ಸಂಸ್ಥೆಗಳನ್ನು ಸ್ಥಾಪಿಸಿದ್ದೇವೆ.

ದೇಶದ ಪ್ರತಿಯೋರ್ವ ಪ್ರಜೆಯ ವ್ಯಕ್ತಿತ್ವ ಪರಿಪೂರ್ಣವಾಗಿ ಬೆಳೆದು ವಿಕಾಸವಾಗಲೆಂದು ಸಮಾನತೆಯ ಹಕ್ಕು, ಸ್ವಾತಂತ್ರದ ಹಕ್ಕು, ಶೋಷಣೆಯ ವಿರುದ್ಧ ಹಕ್ಕು, ಧಾರ್ಮಿಕ ಹಕ್ಕು, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಹಕ್ಕು ಮತ್ತು ಸಂವಿಧಾನಾತ್ಮಕ ಪರಿಹಾರವೆಂಬ ಮೂಲಭೂತ ಹಕ್ಕುಗಳನ್ನು ನೀಡಿದ್ದೇವೆ. ಭೂ ಸಂಬಂಧಗಳ, ಕೃಷಿ, ಕೈಗಾರಿಕೆ, ಶಿಕ್ಷಣ, ಆರೋಗ್ಯ ಇತ್ಯಾದಿ ಅನೇಕ ಕ್ಷೇತ್ರಗಳಲ್ಲಿ ಸುಧಾರಣೆಗಳನ್ನು ತಂದು ಜನಜೀವನ ಉತ್ತಮಗೊಳಿಸಲಾಗಿದೆ.

ಸಾಕ್ಷರತೆ, ಉನ್ನತ ಶಿಕ್ಷಣ, ಕೃಷಿ ಉತ್ಪಾದನೆ, ಸೇವಾ ಕ್ಷೇತ್ರ ಇತ್ಯಾದಿ ಅನೇಕ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಯನ್ನು ಸಾಧಿಸಿದ್ದೇವೆ. ಉದ್ಯೋಗ, ವಸತಿ, ಆರೋಗ್ಯ, ಕುಡಿಯುವ ನೀರು, ರಸ್ತೆ, ದೀಪ, ಸಾರಿಗೆ ಇತ್ಯಾದಿಯಾಗಿ ಮೂಲಭೂತ ಸವಲತ್ತುಗಳನ್ನು ಒದಗಿಸಲಾಗಿದೆ. ಬಡತನ, ಹಸಿವು, ಬರಗಾಲ, ಪ್ರವಾಹಗಳು ಮತ್ತು ಸಾಂಕ್ರಾಮಿಕ ರೋಗಗಳನ್ನು ಸಾಕಷ್ಟು ಮಟ್ಟಿಗೆ ನಿಯಂತ್ರಿಸಲಾಗಿದೆ. ಖಗೋಳ ವಿಜ್ಞಾನ, ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ, ಅಣುಶಕ್ತಿ, ರಕ್ಷಣಾ ವ್ಯವಸ್ಥೆ ಹೀಗೆ ಹಲವು ಕ್ಷೇತ್ರಗಳಲ್ಲಿ ಭಾರತ ವಿಶ್ವದ ಮೊದಲ ಹತ್ತು ದೇಶಗಳಲ್ಲಿ ಒಂದಾಗಿದೆ.

ಮಹಿಳೆಯರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಸ್ಥಿತಿಗತಿಗಳಲ್ಲಿ ಸುಧಾರಣೆಯನ್ನು ಹಾಗೂ ಅಭಿವೃದ್ಧಿಯನ್ನು ಕಾಣುತ್ತೇವೆ. ಈ ವರ್ಗಗಳ ಜನರು ಶಾಸಕಾಂಗ, ಕಾರ್ಯಂಗ ಮತ್ತು ನ್ಯಾಯಾಂಗಕ್ಕೆ ಪ್ರವೇಶಿಸಿ ತಮ್ಮದೇ ಕೊಡುಗೆಯನ್ನು ನೀಡಿದ್ದಾರೆ. ಶಿಕ್ಷಣ, ವಿಜ್ಞಾನ, ವೈದ್ಯಕೀಯ, ನ್ಯಾಯಾಂಗ, ಪತ್ರಿಕೋದ್ಯಮ, ಕ್ರೀಡಾ ಕ್ಷೇತ್ರ ಇತ್ಯಾದಿಗಲ್ಲಿ ಪ್ರವೇಶಿಸಿ ಹೆಸರು ಮಾಡಿದ್ದಾರೆ.

  ಇಷ್ಟೆಲ್ಲ ಸಾಧನೆಗಳಿದ್ದರೂ ಜನಸಾಮಾನ್ಯರ ಕನಿಷ್ಠ ಸಮಸ್ಯೆಗಳನ್ನು ಸಂಪೂರ್ಣವಾಗಿ ಪರಿಹರಿಸಲು ಸಾಧ್ಯವಾಗಿಲ್ಲ. ನಮ್ಮ ಸುತ್ತಮುತ್ತ ಒಂದಷ್ಟು ಜನ ಅನಕ್ಷರಸ್ಥರು, ನಿರುದ್ಯೋಗಿಗಳು, ವಸತಿ ಹೀನರು, ಭಿಕ್ಷುಕರು ಇದ್ದಾರೆ. ಎಲ್ಲರಿಗೂ ಶುದ್ಧವಾದ ಕುಡಿಯುವ ನೀರು, ಆರೋಗ್ಯದ ಸೌಲಭ್ಯ ಹಲವು ಹಳ್ಳಿಗಳಿಗೆ ರಸ್ತೆ, ಸಾರಿಗೆ, ದೀಪ ಇತ್ಯಾದಿಗಳನ್ನು ಒದಗಿಸಿಲ್ಲ. ಕೃಷಿ ಬಿಕಟ್ಟು ಮತ್ತು ಕೈಗಾರಿಕಾ ಬಿಕ್ಕಟ್ಟು ದೇಶವನ್ನು ಕಾಡುತ್ತಿವೆ. ಉತ್ಪಾದನಾ ವಲಯ, ಸೇವಾ ಕ್ಷೇತ್ರ, ಬ್ಯಾಂಕ್‌ಗಳು ಕುಸಿಯುತ್ತಿವೆ. ಸಮಸ್ಯೆಗಳ ಜೊತೆಗೆ ಸವಾಲುಗಳು ನಮ್ಮನ್ನು ಕಾಡುತ್ತಿವೆ. ಭಯೋತ್ಪಾದನೆ, ಕೋಮುವಾದ, ಮೂಲಭೂತವಾದ, ಭ್ರಷ್ಟಾಚಾರ, ಅಪರಾಧ. ಸಾಂಸ್ಕೃತಿಕ ದಿವಾಳಿತನವೆಂಬ ಸವಾಲುಗಳು ನಮ್ಮ ಮುಂದಿವೆ. ಮತ್ತೊಂದು ಕಡೆ ಪ್ರಜಾಪ್ರಭುತ್ವ ಸಂಸ್ಥೆಗಳ ಸ್ವಾಯತ್ತತೆಗೆ ಧಕ್ಕೆ, ಅಪ್ರಜಾಪ್ರಭುತ್ವ ಸುಧಾರಣೆಗಳು, ಪ್ರಜಾಪ್ರಭುತ್ವ ಹಕ್ಕುಗಳ ದಮನ, ಆಪತ್ತಿನಲ್ಲಿರುವ ಜಾತ್ಯತೀತತೆ, ಮಾಯವಾಗುತ್ತಿರುವ ಕಲ್ಯಾಣ ರಾಜ್ಯದ ಮೂಲತತ್ವ, ಅಪ್ರಸ್ತುತವಾಗುತ್ತಿರುವ ಸಾಮಾಜಿಕ ನ್ಯಾಯ, ಮಾನವ ಹಕ್ಕುಗಳ ಉಲ್ಲಂಘನೆ, ಗಂಡಾಂತರದಲ್ಲಿರುವ ಕಾನೂನಿನ ನ್ಯಾಯ (rule of law) ಇತ್ಯಾದಿಗಳು ನಮ್ಮನ್ನು ಕಾಡುತ್ತಿವೆ. ನಾವು ಗಳಿಸಿದ್ದನ್ನು ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಇಂದು ನಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ಮತ್ತು ಸವಾಲುಗಳಿಗೆ ಸಂವಿಧಾನದೇ ಸರಿಯಾದ ದಾರಿ. ನಾವು ಸುರಕ್ಷಿತವಾಗಿ ಬದುಕಲು, ನಮಗೋಸ್ಕರ ನಮ್ಮ ಮುಂದಿನ ಪೀಳಿಗೆಗಾಗಿ ನಮ್ಮ ಸಂವಿಧಾನವನ್ನು, ಅದರ ಆಶಯಗಳನ್ನು ರಕ್ಷಿಸಿಕೊಳ್ಳಬೇಕು. ನಾವೆಲ್ಲರೂ ನಮ್ಮ ಸಂವಿಧಾನವನ್ನು ಓದಬೇಕು, ಅರ್ಥೈಯಿಸಬೇಕು, ಮೂಲತತ್ವಗಳನ್ನು ಮೈಗೂಡಿಸಿಕೊಳ್ಳಬೇಕು ಮತ್ತು ಅದರಂತೆ ನಡೆದುಕೊಳ್ಳಬೇಕು. ಈ ಮುಖಾಂತರ ಅಂಬೇಡ್ಕರ್ ಅವರಿಗೆ ನಮ್ಮ ಕೃತಜ್ಞತೆಗಳನ್ನು ಸಲ್ಲಿಸೋಣ.

Writer - ನ್ಯಾ. ನಾಗಮೋಹನ ದಾಸ್

contributor

Editor - ನ್ಯಾ. ನಾಗಮೋಹನ ದಾಸ್

contributor

Similar News

ಜಗದಗಲ
ಜಗ ದಗಲ