ಹಿಂದಿ ಪ್ರಸಾರ ಮಾಧ್ಯಮದ ‘ಮುಂಗೋಳಿ’ ವಿನೋದ್ ದುವಾ

Update: 2021-12-06 06:21 GMT
ವಿನೋದ್ ದುವಾ (Photo: twitter)

ನಮ್ಮ ಗೌರವಾನ್ವಿತ, ನಿರ್ಭೀತ ಮತ್ತು ಅಸಾಧಾರಣ ತಂದೆ, ವಿನೋದ್ ದುವಾ ಕಾಲವಾಗಿದ್ದಾರೆ. ಅವರು ದಿಲ್ಲಿಯ ನಿರಾಶ್ರಿತರ ಕಾಲನಿಯಿಂದ ಮೇಲೆದ್ದು, ಅನುಕರಣೀಯ ಜೀವನವನ್ನು ಬದುಕಿ, ಕಳೆದ 42 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಪತ್ರಿಕಾವೃತ್ತಿಯ ಉತ್ಕೃಷ್ಟತೆಯ ಶಿಖರವನ್ನು ತಲುಪಿ, ಸದಾ ಅಧಿಕಾರದ ಎದುರು ಸತ್ಯವನ್ನೇ ಮಾತನಾಡುತ್ತಿದ್ದರು. ಅವರೀಗ ನಮ್ಮ ತಾಯಿ, ಅವರ ಪ್ರಿಯ ಪತ್ನಿ ಚಿನ್ನ ಜೊತೆ ಸ್ವರ್ಗದಲ್ಲಿದ್ದಾರೆ. ಅಲ್ಲವರು ಜೊತೆಯಾಗಿ ಹಾಡುತ್ತಾ, ಅಡುಗೆ ಮಾಡುತ್ತಾ, ತಿರುಗಾಟ ಮುಂದುವರಿಸುತ್ತಾ, ಒಬ್ಬರನ್ನೊಬ್ಬರು ಹಿಮ್ಮೆಟ್ಟಿಸುತ್ತಾರೆ’’.

ಡಿಸೆಂಬರ್ 4, 2021ರಂದು ನಿಧನರಾದ ದೇಶ ಕಂಡ ಅತ್ಯುತ್ತಮ ಮತ್ತು ನೇರ ನಡೆನುಡಿಯ ಧೈರ್ಯಶಾಲಿ ಪತ್ರಕರ್ತರಲ್ಲಿ ಒಬ್ಬರಾದ ವಿನೋದ್ ದುವಾ ಕಾಲವಾದುದನ್ನು ಅವರ ಮಗಳು ಮಲ್ಲಿಕಾ ದುವಾ, ಅವರು ಇಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಸಾರಿದಾಗ ಹೇಳಿದ ಮಾತಿದು. ಇದು ಅವರ ಜೀವನದ ಸಾರದಂತಿದೆ. ಇದನ್ನು ಹೇಳುವಾಗ ಮಲ್ಲಿಕಾ ಎದೆಗುಂದಿದಂತೆ ಕಾಣುವುದಿಲ್ಲ. ತನ್ನ ತಂದೆಯ ಆರೋಗ್ಯವು ದಿನದಿಂದ ದಿನಕ್ಕೆ ಹದಗೆಡುತ್ತಿದೆ ಎಂದು ಜಗತ್ತಿಗೆ ತಿಳಿಸುವಾಗಲೂ ಅವರು ತನ್ನ ತಂದೆಯ ಅದ್ಭುತ ಬದುಕು ಮತ್ತು ಅವರು ಎದುರಿಸಲಿರುವ ಗೌರವಾರ್ಹ ಅಂತ್ಯದ ಬಗ್ಗೆಯೇ ಮಾತನಾಡಿದ್ದರು. ತನ್ನೊಳಗೆ ಇಂತಹ ಒಂದು ಧೈರ್ಯ ಪ್ರವೃತ್ತಿಯನ್ನು ತುಂಬಿಸಿದವರೇ ಅವರು ಎಂದು ಕೂಡಾ ನಟಿ ಮತ್ತು ಹಾಸ್ಯಗಾರ್ತಿಯಾಗಿರುವ ಮಲ್ಲಿಕಾ ಹೇಳಿದ್ದರು.

ವಿನೋದ್ ದುವಾ ಅವರನ್ನು ಅನುಸರಿಸುತ್ತಾ ಬಂದಿರುವವರಿಗೆ ಇದರಲ್ಲೇನೂ ಉತ್ಪ್ರೇಕ್ಷೆ ಕಾಣದು. ಅವರ ಅನೇಕ ಪತ್ರಕರ್ತ ಗೆಳೆಯರು ಹೇಳಿರುವಂತೆ, ಯಾವ ಹೊತ್ತಿಗೆ ಭಾರತಕ್ಕೆ ನಿರ್ಭೀತ ಪತ್ರಕರ್ತರ ಅಗತ್ಯವಿದೆಯೋ ಅಂತಹ ಹೊತ್ತಿನಲ್ಲಿ ಭಯವೇನೆಂದೇ ಗೊತ್ತಿಲ್ಲದ, ಗೊತ್ತಿದ್ದರೂ, ಯಾವತ್ತೂ ಹೆದರಿ ತನ್ನ ಕರ್ತವ್ಯದಿಂದ ಹಿಂದೆ ಸರಿಯದ ಪತ್ರಕರ್ತರೊಬ್ಬರನ್ನು ನಾವು ಕಳೆದುಕೊಂಡಿದ್ದೇವೆ. ಪ್ರಜಾಪ್ರಭುತ್ವವೇ ಇರಲಿ, ರಾಜಪ್ರಭುತ್ವ ಅಥವಾ ಸರ್ವಾಧಿಕಾರವೇ ಇರಲಿ ವ್ಯವಸ್ಥೆಯ ಲೋಪದೋಷಗಳನ್ನು ಜನತೆಗೆ ತಿಳಿಸಬೇಕಾದ ಪವಿತ್ರ ಕರ್ತವ್ಯ ಹೊತ್ತಿರುವ ಪತ್ರಕರ್ತರಲ್ಲಿ ಬಹುತೇಕರು ಕೊಳೆತು ನಾರುತ್ತಿರುವ, ದಮನಕಾರಿ ಮತ್ತು ವಿಷಕಾರಿ ಪ್ರಭುತ್ವದೊಂದಿಗೆ ರಾಜಿ ಮಾಡಿಕೊಳ್ಳುವುದು ಮಾತ್ರವಲ್ಲ; ಅದಕ್ಕೆ ಮಾರಿಹೋಗಿ ಅದರ ಮುಖವಾಣಿಗಳಾಗಿ, ತುತ್ತೂರಿ ಊದುತ್ತಾ, ಪ್ರಭುತ್ವವನ್ನು ವಿರೋಧಿಸುವ ಸಹೋದ್ಯೋಗಿಗಳ ಮೇಲೆಯೇ ಮುಗಿಬೀಳುತ್ತಿರುವ ಈಗಿನ ಸಂದರ್ಭದಲ್ಲಿ ವಿನೋದ್ ದುವಾ ಅವರ ಅಗಲಿಕೆ ಪ್ರಜಾಪ್ರಭುತ್ವ ಪರವಾದ ದೊಡ್ಡ ಧ್ವನಿಯೊಂದರ ಅಡಗುವಿಕೆಯೇ ಹೌದು.

ಇದೇ ವರ್ಷದ ಎಪ್ರಿಲ್-ಮೇ ತಿಂಗಳುಗಳಲ್ಲಿ ವಿನೋದ್ ದುವಾ ಮತ್ತು ಅವರ ಪತ್ನಿ ಪದ್ಮಾವತಿ ಚಿನ್ನ ದುವಾ ಕೋವಿಡ್-19 ಸೋಂಕಿಗೆ ಒಳಗಾಗಿದ್ದರು. ಆಗಿನ ಅರಾಜಕ ಪರಿಸ್ಥಿತಿಯ ಕಾರಣದಿಂದ ಬಲಿಯಾದ ಲಕ್ಷಾಂತರ ಜನರಲ್ಲಿ ಅವರ ಪತ್ನಿ ಚಿನ್ನ ಕೂಡಾ ಒಬ್ಬರಾಗಿದ್ದರು. ಅವರು ಜೂನ್ ತಿಂಗಳಲ್ಲಿ ಮರಣಹೊಂದಿದರು. ಆ ಬಳಿಕ ವಿನೋದ್ ದುವಾ ಅವರು ಸಂಪೂರ್ಣ ಚೇತರಿಸಿಕೊಳ್ಳಲೇ ಇಲ್ಲ. ಕಳೆದ ಸೋಮವಾರ ಅವರನ್ನು ಅಪೋಲೊ ಆಸ್ಪತ್ರೆಯ ಐಸಿಯು ವಾರ್ಡಿಗೆ ಸೇರಿಸಲಾಗಿತ್ತು. ಶನಿವಾರ ಅವರು ಕೊನೆಯುಸಿರೆಳೆದರು. ಅವರು ಇಬ್ಬರು ಹೆಣ್ಣು ಮಕ್ಕಳಾದ ಮಲ್ಲಿಕಾ ಮತ್ತು ಮನೋರೋಗ ತಜ್ಞರಾದ ಬಕುಲ್ ದುವಾ ಅವರನ್ನು ಅಗಲಿದ್ದಾರೆ.

ಅವರ ನಿಧನದ ಸುದ್ದಿಯನ್ನು ದೇಶ ವಿದೇಶಗಳ ಪ್ರಖ್ಯಾತ ಮಾಧ್ಯಮಗಳು ಪ್ರಕಟಿಸಿ ಶ್ರದ್ಧಾಂಜಲಿ ಸಲ್ಲಿಸಿವೆ. ಗಣ್ಯಾತಿಗಣ್ಯರು ಅವರ ನಿಧನಕ್ಕೆ ಶೋಕ ಸಂದೇಶಗಳನ್ನು ಕಳುಹಿಸಿದ್ದಾರೆ. ಅವುಗಳನ್ನು ಇಲ್ಲಿ ಉಲ್ಲೇಖಿಸುವುದರಲ್ಲಿ ಅರ್ಥವೂ ಇಲ್ಲ; ಅದು ಸಾಧ್ಯವೂ ಇಲ್ಲ. ಆದರೆ, ಅವರ ಬಹುಕಾಲದ ಸಹೋದ್ಯೋಗಿ ಮತ್ತು ಪ್ರಖ್ಯಾತ ಎನ್‌ಡಿಟಿವಿಯ ಸಹಸ್ಥಾಪಕ ಪ್ರಣಯ್ ರಾಯ್ ಅವರ ಮಾತುಗಳನ್ನು ಇಲ್ಲಿ ಉಲ್ಲೇಖಿಸಬೇಕು.

ಅವರು ಹೇಳಿದ್ದು: ವಿನೋದ್ ದುವಾ ತಮ್ಮ ಕಾಲದ ಮಹಾನ್ ಪತ್ರಕರ್ತರಲ್ಲಿ ಒಬ್ಬರಲ್ಲ; ಅವರೇ ತಮ್ಮ ಕಾಲದ ಮಹಾನ್ ಪತ್ರಕರ್ತರು. ನಾನು ಮೆಚ್ಚಿದ, ಗೌರವಿಸಿದ, ನಾವು ಜೊತೆಯಲ್ಲಿ ನಿಕಟವಾಗಿ ಕೆಲಸ ಮಾಡುತ್ತಿದ್ದ ಹಲವಾರು ವರ್ಷಗಳಲ್ಲಿ ಅವರಿಂದ ತುಂಬಾ ಕಲಿತಂತಹ ಅಚ್ಚರಿ ಹುಟ್ಟಿಸುವ ಪ್ರತಿಭೆ.

ಪಾಕಿಸ್ತಾನದಿಂದ 1947ರಲ್ಲಿ ವಲಸೆ ಬಂದ ಕುಟುಂಬದಲ್ಲಿ ಮಾರ್ಚ್ 11, 1954ರಲ್ಲಿ ದಿಲ್ಲಿಯಲ್ಲಿ ಹುಟ್ಟಿದ ವಿನೋದ್ ದುವಾ, ದಿಲ್ಲಿ ವಿವಿ ಪದವೀಧರರು. 1980ರ ತನಕ ನಾಟಕರಂಗದಲ್ಲಿದ್ದು, ಥಿಯೇಟರ್ ಯೂನಿಯನ್ ಎಂಬ ಬೀದಿನಾಟಕ ತಂಡದ ಸದಸ್ಯರಾಗಿದ್ದರು. 1974ರಲ್ಲಿ ಆಗ ದಿಲ್ಲಿ ಟೆಲಿವಿಷನ್ ಎಂದು ಕರೆಯಲಾಗುತ್ತಿದ್ದ ದೂರದರ್ಶನದ ಯುವ ಕಾರ್ಯಕ್ರಮದಲ್ಲಿ ಮೊದಲಬಾರಿಗೆ ಭಾಗವಹಿಸಿದ ಬಳಿಕ ಟಿವಿಯೇ ಅವರ ಗುರಿಯಾಯಿತು. 1981ರಿಂದ ಆಪ್ ಕೇ ಲಿಯೆ ಎಂಬ ಕೌಟುಂಬಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು.

ಮೊದಲಿನಿಂದಲೂ ವಿನೋದ್ ದುವಾ ಅವರ ಮುಖ್ಯಗುಣವೆಂದರೆ ಧೈರ್ಯ. ಆಗ ಸಂಪೂರ್ಣ ಸರಕಾರಿ ಸಾಮ್ಯದಲ್ಲಿದ್ದ ದೂರದರ್ಶನದಲ್ಲಿ 1980ರ ದಶಕದಲ್ಲಿ ಕೆಲಸ ಮಾಡುತ್ತಿದ್ದ ಅವರಿಗೆ ಈಗಿನಂತೆ ಅಧಿಕಾರಸ್ಥರನ್ನು ಎಗ್ಗಿಲ್ಲದೇ ಪ್ರಶ್ನೆ ಮಾಡುವುದು ಸುಲಭವಾಗಿರಲಿಲ್ಲ ಮಾತ್ರವಲ್ಲ; ಹೆಚ್ಚುಕಡಿಮೆ ಅಸಾಧ್ಯವೇ ಆಗಿತ್ತು. ಅದಕ್ಕೆ ಧೈರ್ಯ ಬೇಕಿತ್ತು. ಆದರೆ ಅವರು ತನ್ನ ಕಾರ್ಯಕ್ರಮ ‘ಜನ್ವಾಣಿ’ಯಲ್ಲಿ ಆಗಲೇ ಹಾಗೆ ಮಾಡುತ್ತಿದ್ದರು ಮತ್ತು ಇದರಿಂದಾಗಿ ಹಲವಾರು ರಾಜಕಾರಣಿಗಳು ತಾವು ಮಾಡಿದ ಕರ್ಮಗಳಿಗೆ ಬೆಲೆ ತೆರಬೇಕಾಯಿತು.

ಇದಕ್ಕೊಂದು ಉದಾಹರಣೆ ಎಂದರೆ, ಈಗ ರಾಜಸ್ಥಾನದ ಮುಖ್ಯಮಂತ್ರಿಯಾಗಿರುವ ಅಶೋಕ್ ಗೆಹ್ಲೋಟ್ ಅವರು ಯುವ ಮಂತ್ರಿಯಾಗಿದ್ದರು. ಒಂದು ಕಾರ್ಯಕ್ರಮ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರ ಗಮನಕ್ಕೆ ಬಂದು, ಅವರು ಗೆಹ್ಲೋಟ್ ಅವರನ್ನು ಸಂಪೂರ್ಣ ಬದಿಗೆ ಸರಿಸಿದರು. ಮತ್ತೆ ಚೇತರಿಸಲು ಅವರಿಗೆ ವರ್ಷಗಳೇ ತಗಲಿದವು.

ದುವಾ ಅವರು ತನ್ನನ್ನು ಕೇವಲ ಪತ್ರಕರ್ತ ಎಂದು ಅಂದುಕೊಳ್ಳುತ್ತಿರಲಿಲ್ಲ. ತಾನೊಬ್ಬ ಪ್ರಸಾರ ಮಾಧ್ಯಮಿ ಎಂದು ತಮ್ಮನ್ನವರು ಹಲವಾರು ಬಾರಿ ಕರೆದುಕೊಂಡದ್ದಿದೆ. ಮೂಲತಃ ರಾಜಕೀಯ ಪತ್ರಿಕಾವೃತ್ತಿಯಲ್ಲಿ ತೊಡಗಿದ್ದರೂ, ಮಲ್ಲಿಕಾ ಅವರು ಹೇಳಿರುವಂತೆ, ಅಡುಗೆ, ತಿರುಗಾಟ, ಕಲೆ, ಸಂಸ್ಕೃತಿ, ಸಾಹಿತ್ಯ, ನಾಟಕ, ಸಿನೆಮಾ ಇತ್ಯಾದಿ ಬಹುಮುಖಿ ಕ್ಷೇತ್ರಗಳಲ್ಲಿ ಅವರಿಗೆ ಆಸಕ್ತಿಯಿತ್ತು. ಇದು ಪ್ರತಿಫಲಿತವಾಗುತ್ತಿದ್ದುದು ಅವರು ಹಲವು ವರ್ಷಗಳ ಬಳಿಕ ನಡೆಸಿದ ಪರಖ್ (ವಿಶ್ಲೇಷಣೆ, ಅಂದಾಜು) ಎಂಬ ಸಾಪ್ತಾಹಿಕ ಕಾರ್ಯಕ್ರಮದಲ್ಲಿ. ಅದರಲ್ಲವರು ಇಡೀ ದೇಶದ ಸಾಂಸ್ಕೃತಿಕ ವೈವಿಧ್ಯವನ್ನು ಬಿಂಬಿಸುತ್ತಿದ್ದರು.

ಅವರನ್ನು ದೇಶದಾದ್ಯಂತ ಪರಿಚಯಿಸಿ, ಆ ಕಾಲದಲ್ಲಿ ಮನೆಮಾತಾಗಿಸಿದ್ದು ಮಾತ್ರ ದೂರದರ್ಶನದಲ್ಲಿ ಬರುತ್ತಿದ್ದ ಚುನಾವಣಾ ಚರ್ಚೆ, ವಿಶ್ಲೇಷಣೆಗಳಿಂದ. 1984ರಲ್ಲಿ ಆರಂಭವಾದ ಈ ಕಾರ್ಯಕ್ರಮಗಳಲ್ಲಿ ಪ್ರಣಯ್ ರಾಯ್ ಇಂಗ್ಲಿಷ್‌ನಲ್ಲಿ ಮತ್ತು ವಿನೋದ್ ದುವಾ ಹಿಂದಿಯಲ್ಲಿ ಜುಗಲ್ಬಂದಿ ನಡೆಸುತ್ತಿದ್ದರು. ಸಪ್ಪೆ ದೂರದರ್ಶನ ಸುದ್ದಿಗಳ ನಡುವೆ ಇವರಿಬ್ಬರ ನಿಖರ, ಮಾಹಿತಿಪೂರ್ಣ ನಿರರ್ಗಳ ಮಾತುಗಾರಿಕೆ ಜನರನ್ನು ತೀವ್ರವಾಗಿ ಆಕರ್ಷಿಸಿತ್ತು. ಆಗ ದುವಾ ಅವರು ಹುಟ್ಟುಹಾಕಿದ ಅನೇಕ ರಾಜಕೀಯ ಶಬ್ದಾಭಿವ್ಯಕ್ತಿಗಳು ಇಂದೂ ಹಿಂದಿ ಮಾಧ್ಯಮಗಳಲ್ಲಿ ಚಾಲ್ತಿಯಲ್ಲಿವೆ. ದೇಶದ ಪ್ರತಿಯೊಂದು ರಾಜ್ಯ, ಪ್ರತಿಯೊಂದು ಲೋಕಸಭಾ ಕ್ಷೇತ್ರದ ಒಳ ರಾಜಕೀಯ ಹರಿವುಗಳ ಬಗ್ಗೆ ಅವರಿಗೆ ಬೆರಗು ಹುಟ್ಟಿಸುವಷ್ಟು ಮಾಹಿತಿಯಿತ್ತು. 1997-98ರಲ್ಲಿ ಅವರು ಬೌದ್ಧಿಕ ಕಾರ್ಯಕ್ರಮಗಳಿಗೆ ಹೆಸರಾಗಿದ್ದ ಡಿಡಿ3ಯಲ್ಲಿ ತಸ್ವೀರ್ ಎ ಹಿಂದ್ ಕಾರ್ಯಕ್ರಮ ನಡೆಸುತ್ತಿದ್ದರು. ನಂತರ ಇವರಿಬ್ಬರೂ ಸೇರಿ ನ್ಯೂಡೆಲ್ಲಿ ಟೆಲಿವಿಷನ್ ಎಂಬ ಸ್ವತಂತ್ರ ಚಾನೆಲ್ ಆರಂಭಿಸಿದ್ದು, ನಂತರ ಅದು ಎನ್‌ಡಿಟಿವಿಯಾಗಿ ದಿಲ್ಲಿಯಿಂದ ಇಡೀ ದೇಶಕ್ಕೆ ವಿಸ್ತರಿಸಿದ್ದು, ಹಲವಾರು ಹಗರಣಗಳನ್ನು ಬಯಲು ಮಾಡಿದ್ದು, ಐತಿಹಾಸಿಕ ಘಟನೆಗಳನ್ನು ವರದಿ ಮಾಡಿದ್ದು, ಸಂದರ್ಶನಗಳನ್ನು ನಡೆಸಿ ಹಲವರ ಬಂಡವಾಳ ಬಯಲು ಮಾಡಿದ್ದು ಬಹುತೇಕರಿಗೆ ಗೊತ್ತಿರುವಂತಹದ್ದೆ.

ಎನ್‌ಡಿಟಿವಿಯಲ್ಲಿ ಅವರ ಖಬರ್ದಾರ್ ಇಂಡಿಯಾ ಮತ್ತು ವಿನೋದ್ ದುವಾ ಲೈವ್ ಅತ್ಯಂತ ಜನಪ್ರಿಯವಾಗಿದ್ದವು. ‘ಝೈಕಾ ಇಂಡಿಯಾ ಕ’ ಎಂಬ ಕಾರ್ಯಕ್ರಮದಲ್ಲಿ ಅವರು ದೇಶದಾದ್ಯಂತದ ಅಡುಗೆಯ ಪರಿಚಯ ಮಾಡಿಸಿದ್ದರು. ಅವರು ಸಂಗೀತ ಪ್ರೇಮಿಯೂ ಆಗಿದ್ದು, ಉತ್ತಮವಾಗಿ ಹಾಡುತ್ತಿದ್ದರು ಎಂದವರ ಗೆಳೆಯರು ನೆನಪಿಸಿಕೊಳ್ಳುತ್ತಾರೆ. ಅವರ ನಾಟಕಪ್ರೇಮವು ಅವರನ್ನು ಆ ಹಿನ್ನೆಲೆಯ ಎಲ್ಲಾ ಸಿನೆಮಾ ನಟರ ಗೆಳೆತನವನ್ನು ದೊರಕಿಸಿಕೊಟ್ಟಿತ್ತು. ಬಳಿಕ ಅವರು 1998ರಲ್ಲಿ ಸೋನಿ ಎಂಟರ್ಟೈನ್ಮೆಂಟ್ ಟೆಲಿವಿಷನ್‌ನಲ್ಲಿ ಚುನಾವ್ ಕಿ ಚುನೌತಿ, 2000-2003ರಲ್ಲಿ ಸಹಾರ ಟಿವಿಯ ಪ್ರತಿದಿನ್ ಕಾರ್ಯಕ್ರಮಗಳಲ್ಲಿ ನಿರೂಪಕರಾಗಿದ್ದರು.

ಅವರ ಇನ್ನೊಂದು ಶಕ್ತಿಯೆಂದರೆ ನಿರರ್ಗಳ ಮಾತುಗಾರಿಕೆ ಮತ್ತು ಪದ ಸಂಪತ್ತು. ಹಿಂದಿ ಪ್ರಸಾರ ಮಾಧ್ಯಮವು ಸೂಕ್ತವಾದ ರಾಜಕೀಯಶಾಸ್ತ್ರದ ಆಧುನಿಕ ಪರಿಕಲ್ಪನೆಗೆ ಪದಗಳನ್ನು ಹುಡುಕಲು ತಡಕಾಡುತ್ತಿದ್ದಾಗ, ಅವರು ತಮ್ಮದೇ ಪದಗಳನ್ನು ಹುಟ್ಟುಹಾಕಿ ಹೊಸ ಭಾಷೆಯ ದಾರಿಯನ್ನು ಹಾಸಿಕೊಟ್ಟರು.

ನಂತರದ ವರ್ಷಗಳಲ್ಲಿ ಅವರು ಇಲೆಕ್ಟ್ರಾನಿಕ್ ಸಾಮಾಜಿಕ ಮಾಧ್ಯಮಗಳಲ್ಲಿ ತೊಡಗಿಕೊಂಡರು. ಇದರಲ್ಲಿ ದಿ ವೈರ್ ಮುಖ್ಯವಾದುದು. ಅಲ್ಲಿ ಅವರು ಜನ್ ಗಣ್ ಮನ್ ಕೀ ಬಾತ್ ಕಾರ್ಯಕ್ರಮದ ನಿರೂಪಕರಾಗಿದ್ದರು. ಇದು ಅಧಿಕಾರಸ್ಥರ ಕಣ್ಣುಕುಕ್ಕಿತ್ತು.

1996ರಲ್ಲಿ ಅವರಿಗೆ ಪ್ರತಿಷ್ಠಿತ ರಾಮನಾಥ ಗೋಯೆಂಕಾ ಎಕ್ಸೆಲೆನ್ಸ್ ಇನ್ ಜರ್ನಲಿಸಂ ಅವಾರ್ಡ್ ದೊರಕಿತು. ಇದನ್ನು ಪಡೆದ ಮೊದಲ ಇಲೆಕ್ಟ್ರಾನಿಕ್ ಮಾಧ್ಯಮ ಪತ್ರಕರ್ತರು ಅವರು. 2017ರಲ್ಲಿ ಅತ್ಯುತ್ತಮ ಪತ್ರಕರ್ತನೆಂದು ರೆಡ್ ಇಂಕ್ ಪ್ರಶಸ್ತಿಯೂ ಅವರಿಗೆ ಸಿಕ್ಕಿದೆ. 2008ರಲ್ಲಿ ಅವರಿಗೆ ಪದ್ಮಶ್ರೀ ದೊರೆಯಿತು. ಆದರೆ, ಪ್ರಸ್ತುತ ಸರಕಾರ ಆ ಪ್ರಶಸ್ತಿಯ ಮರ್ಯಾದೆಯನ್ನು ಉಳಿಸಿಕೊಳ್ಳಲಿಲ್ಲ. 2020ರಲ್ಲಿ ಅವರ ಮೇಲೆ ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿದ್ದಕ್ಕಾಗಿ ದೇಶದ್ರೋಹದ ಪ್ರಕರಣ ದಾಖಲಿಸಲಾಯಿತು.

ಗೆಳೆಯರು ಹೇಳುವಂತೆ ಅವರು ಸ್ವಲ್ಪ ಅತಿಯಾದ ದೇಶಪ್ರೇಮಿ ಮತ್ತು ರಾಷ್ಟ್ರೀಯವಾದಿ ಆಗಿದ್ದರು. ಆದರೆ, ಕೋಮುವಾದದ ಪ್ರಖರ ವಿರೋಧಿಯಾಗಿದ್ದರು. ಅವರ ರಾಷ್ಟ್ರೀಯವಾದವು ಕೋಮುವಾದ ಮತ್ತು ರಾಷ್ಟ್ರೀಯವಾದ ಒಂದೇ ಎಂದು ಬಿಂಬಿಸುವವರಿಗೆ ಅರಗದಿದ್ದುದರಲ್ಲಿ ಆಶ್ಚರ್ಯವಿಲ್ಲ. 2020ರ ಮೇ ತಿಂಗಳಲ್ಲಿ ಹಿಮಾಚಲ ಪ್ರದೇಶದ ಬಿಜೆಪಿ ನಾಯಕನೊಬ್ಬನ ದೂರಿನ ಆಧಾರದಲ್ಲಿ ಈ ಪ್ರಕರಣ ದಾಖಲಿಸಲಾಯಿತು.

ವಿನೋದ್ ದುವಾ ಜಗ್ಗದೆ ಇದರ ವಿರುದ್ದ ಕಾದಾಡುತ್ತಾ ಸುಪ್ರೀಂಕೋರ್ಟ್ ತನಕ ಹೋದರು. ಸುಪ್ರೀಂಕೋರ್ಟ್ ಇವರ ಮೇಲಿನ ಪ್ರಕರಣವನ್ನು ರದ್ದುಗೊಳಿಸಿ ಐತಿಹಾಸಿಕ ತೀರ್ಪೊಂದನ್ನು ನೀಡಿತು. ಅಭಿಪ್ರಾಯದ ಅಭಿವ್ಯಕ್ತಿಯು ದೇಶದ್ರೋಹವಾಗುವುದಿಲ್ಲ ಎಂದ ಸುಪ್ರೀಂಕೋರ್ಟ್, ಪ್ರತೀ ಪತ್ರಕರ್ತರು ರಕ್ಷಣೆಯ ಹಕ್ಕು ಹೊಂದಿದ್ದಾರೆ ಎಂದೂ ಹೇಳಿತು. ಈ ಪ್ರಕರಣದಲ್ಲಿ ಮೋದಿ ಸರಕಾರಕ್ಕೆ ಮುಖಭಂಗ ಉಂಟಾಗಿತ್ತು.

ಅವರ ನಿರ್ಭೀತ ಹೋರಾಟದ ಪರಿಣಾಮವಾಗಿ ಇನ್ನು ಮುಂದೆ ಯಾವುದೇ ಪತ್ರಕರ್ತತರ ಮೇಲೆ ಬೇಕಾಬಿಟ್ಟಿಯಾಗಿ ಕೇಸು ಜಡಿಯುವಂತಿಲ್ಲ ಎಂದು ಮಲ್ಲಿಕಾ ಹೇಳಿದ್ದರು. ಆದರೂ, ಸರಕಾರಗಳು ತಮ್ಮನ್ನು ವಿರೋಧಿಸುವ ಪತ್ರಕರ್ತರ ದಮನವನ್ನು ಮುಂದುವರಿಸುತ್ತಿವೆ. ಅಸ್ಸಾಮಿನಲ್ಲಿ ಇತ್ತೀಚೆಗೆ ನಡೆದ ಘಟನೆಗಳು ಒಂದು ಉದಾಹರಣೆ. ಆದರೂ, ನ್ಯಾಯಾಲಯವು ಇಬ್ಬರು ಯುವ ಮಹಿಳಾ ಪತ್ರಕರ್ತರಿಗೆ ತಕ್ಷಣ ಜಾಮೀನು ನೀಡಿದುದಕ್ಕೆ ವಿನೋದ್ ದುವಾ ಪ್ರಕರಣದ ಹಿನ್ನೆಲೆಯೂ ಇದೆ. ಇಂದಿನ ಸಂದರ್ಭದಲ್ಲಿ ವಿನೋದ್ ದುವಾ ಅವರಂತಹ ಕೋಮುವಾದ ವಿರೋಧಿ, ನಿರ್ಭೀತ ಪತ್ರಕರ್ತನ ಜಾಗವನ್ನು ತುಂಬಲು ಅವರಂತಹ ನೂರಾರು ಪತ್ರಕರ್ತರ ಅಗತ್ಯವಿದೆ ಎಂದು ಹೇಳಿದರೆ, ಅದುವೇ ದುವಾ ಅವರ ನೆನಪಿಗೆ ಸಲ್ಲಿಸುವ ಶ್ರದ್ಧಾಂಜಲಿಯಾಗುತ್ತದೆ.

Writer - ನಿಖಿಲ್ ಕೋಲ್ಪೆ

contributor

Editor - ನಿಖಿಲ್ ಕೋಲ್ಪೆ

contributor

Similar News

ಜಗದಗಲ
ಜಗ ದಗಲ