ರಾಜ್ಯಸಭಾ ಸದಸ್ಯರ ಅಮಾನತು ವಾಪಸ್ ಪಡೆಯುವ ತನಕ ಸಂಸದ್ ಟಿವಿ ಕಾರ್ಯಕ್ರಮ ನಿರೂಪಿಸುವುದಿಲ್ಲ ಎಂದ ಶಶಿ ತರೂರ್

Update: 2021-12-06 07:15 GMT

ಹೊಸದಿಲ್ಲಿ: ರಾಜ್ಯಸಭೆಯಿಂದ ಅಮಾನತುಗೊಂಡ ಒಂದು ಡಜನ್ ಸದಸ್ಯರ ಅಮಾನತು ಆದೇಶವನ್ನು ವಾಪಸ್ ಪಡೆಯುವ ತನಕ  ಸಂಸದ್ ಟಿವಿಯ "ಟು ದಿ ಪಾಯಿಂಟ್" ಟಾಕ್ ಶೋ ಅನ್ನು ನಿರೂಪಣೆ ಮಾಡುವುದಿಲ್ಲ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.

"ಒಬ್ಬ ಸಂಸದನಾಗಿ ಪ್ರತಿ ದಿನ ಬೆಳಿಗ್ಗೆ ಪ್ರತಿಭಟನಾನಿರತ ಸಂಸದರನ್ನು ಭೇಟಿಯಾಗಿ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದೇನೆ. ಹೀಗಿರುವಾಗ ಸಂಸದ್ ಟಿವಿಯಲ್ಲಿ ಈ ಕಾರ್ಯಕ್ರಮವನ್ನು ನಿರೂಪಿಸುವುದನ್ನು ಮುಂದುವರಿಸಿದಲ್ಲಿ ಸಂಸದೀಯ ಸಂಸ್ಥೆಗಳನ್ನು ನಡೆಸಲಾಗುತ್ತಿರುವ ಅಪ್ರಜಾಸತ್ತಾತ್ಮಕ ರೀತಿಗೆ ನಾನು ಕೂಡ ಬೆಂಬಲಿಸಿದಂತಾಗುತ್ತದೆ" ಎಂದು ಹೇಳಿದ ತರೂರ್, "ವಿಪಕ್ಷಗಳ ಸಾಲಿನತ್ತ ಕ್ಯಾಮರಾಗಳನ್ನು ಫೋಕಸ್ ಮಾಡುವ ಬದಲು ಹೆಚ್ಚಿನ ಸಮಯ ಟ್ರೆಷರಿ ಬೆಂಚುಗಳತ್ತವೇ ಫೋಕಸ್ ಮಾಡುತ್ತಿದೆ ಎಂಬ ಕುರಿತಂತೆ ಸಂಸದ್ ಟಿವಿ ಈಗಾಗಲೇ ಟೀಕೆಗಳನ್ನು ಎದುರಿಸುತ್ತಿದೆ" ಎಂದು ಹೇಳಿದರು.

ಅಮಾನತುಗೊಂಡ ಸಂಸದರಲ್ಲಿ ಒಬ್ಬರಾಗಿರುವ ಶಿವಸೇನೆಯ ಪ್ರಿಯಾಂಕ ಚತುರ್ವೇದಿ ಅವರು ಸಂಸದ್ ಟಿವಿಯ `ಮೇರಿ ಕಹಾನಿ'' ಕಾರ್ಯಕ್ರಮದ ನಿರೂಪಕಿ ಹುದ್ದೆಯಿಂದ ಕೆಳಗಿಳಿದ ಬೆನ್ನಲ್ಲೇ ತರೂರ್ ಅವರ ನಿರ್ಧಾರ ಹೊರಬಿದ್ದಿದೆ.

ಸಾಮಾನ್ಯ ವಿಮೆ ವ್ಯವಹಾರ(ರಾಷ್ಟ್ರೀಕರಣ) ತಿದ್ದುಪಡಿ ಮಸೂದೆ 2021 ಅನುಮೋದನೆ ವೇಳೆ ವಿಪಕ್ಷ ಸದಸ್ಯರು ಸದನದ ಅಂಗಣಕ್ಕೆ ನುಗ್ಗಿದಾಗ  ಮಾರ್ಷಲ್‍ಗಳನ್ನು ಕರೆಸಲಾಗಿತ್ತಲ್ಲದೆ ಸದಸ್ಯರು ಅನುಚಿತವಾಗಿ ವರ್ತಿಸಿದ್ದಾರೆಂಬ ಆರೋಪದ ಮೇಲೆ ಅವರನ್ನು ಮಳೆಗಾಲದ ಅಧಿವೇಶನದ ಅಂತ್ಯದ ಸಂದರ್ಭ ವಜಾಗೊಳಿಸಲಾಗಿತ್ತು. ಅಮಾನತುಗೊಂಡವರಲ್ಲಿ ಆರು ಮಂದಿ ಕಾಂಗ್ರೆಸ್ ಸದಸ್ಯರಾಗಿದ್ದರೆ, ತಲಾ ಇಬ್ಬರು ತೃಣಮೂಲ, ಶಿವಸೇನೆ ಸದಸ್ಯರು ಹಾಗೂ ಸಿಪಿಐ ಮತ್ತು ಸಿಪಿಎಂ ನ ತಲಾ ಒಬ್ಬರು ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News