ಭಾರತದಲ್ಲಿಯ 17,726 ನೋಂದಾಯಿತ ಪೈಲಟ್‌ಗಳ ಪೈಕಿ 2,764 ಮಹಿಳೆಯರು: ವಿಶ್ವದಲ್ಲಿಯೇ ಹೆಚ್ಚು ಶೇಕಡಾವಾರು

Update: 2021-12-06 15:15 GMT

ಹೊಸದಿಲ್ಲಿ,ಡಿ.6: ಭಾರತದಲ್ಲಿ ಒಟ್ಟು 17,726 ನೋಂದಾಯಿತ ಪೈಲಟ್‌ಗಳಿದ್ದು,ಈ ಪೈಕಿ 2,764 ಪೈಲಟ್‌ಗಳು ಮಹಿಳೆಯರಾಗಿದ್ದಾರೆ ಎಂದು ಸಹಾಯಕ ವಾಯುಯಾನ ಸಚಿವ ವಿ.ಕೆ,ಸಿಂಗ್ ಅವರು ಸೋಮವಾರ ರಾಜ್ಯಸಭೆಯಲ್ಲಿ ಲಿಖಿತ ಉತ್ತರವೊಂದರಲ್ಲಿ ತಿಳಿಸಿದರು.

ಇಂಟರ್‌ನ್ಯಾಷನಲ್ ಸೊಸೈಟಿ ಆಫ್ ವಿಮೆನ್ ಏರ್‌ಲೈನ್ ಪೈಲಟ್ಸ್ ನ ಪ್ರಕಾರ ವಿಶ್ವದಲ್ಲಿ ಸುಮಾರು ಶೇ.5ರಷ್ಟು ಪೈಲಟ್ ಗಳು ಮಹಿಳೆಯರಾಗಿದ್ದಾರೆ. ಭಾರತದಲ್ಲಿ ಮಹಿಳಾ ಪೈಲಟ್‌ಗಳ ಪ್ರಮಾಣ ಗಮನಾರ್ಹವಾಗಿ ಹೆಚ್ಚಿದ್ದು, ಅದು ಶೇ.15ಕ್ಕೂ ಅಧಿಕವಿದೆ ಎಂದು ಹೇಳಿದರು. ಭಾರತದಲ್ಲಿ ಮಹಿಳಾ ಪೈಲಟ್‌ಗಳ ಶೇಕಡಾವಾರು ಪ್ರಮಾಣವು ಅಮೆರಿಕ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಹೆಚ್ಚಿನ ಪಾಶ್ಚಾತ್ಯ ದೇಶಗಳಿಗಿಂತ ಎರಡು ಪಟ್ಟಿನಷ್ಟಿದೆ ಎಂದು ವರದಿಯೊಂದು ತಿಳಿಸಿದೆ.

ಆದಾಗ್ಯೂ ಸರಕಾರಿ ಸ್ವಾಮ್ಯದ ಏರ್ ಇಂಡಿಯಾ ಮಹಿಳಾ ಪೈಲಟ್ ಗಳ ವಿರುದ್ಧ ತಾರತಮ್ಯವನ್ನು ತೋರಿಸುತ್ತಿದೆ ಎಂದು ಭಾರತೀಯ ವಾಣಿಜ್ಯಿಕ ಪೈಲಟ್‌ಗಳ ಸಂಘವು ಇತ್ತೀಚಿಗೆ ಆರೋಪಿಸಿತ್ತು. ಉನ್ನತೀಕರಣ ಪಟ್ಟಿಯಲ್ಲಿ ಹೆರಿಗೆ ರಜೆಯನ್ನು ಪಡೆದಿದ್ದ ಕೆಲವು ಮಹಿಳಾ ಪೈಲಟ್‌ಗಳ ಹೆಸರುಗಳನ್ನು ಕೈಬಿಡಲಾಗಿತ್ತು ಅಥವಾ ತಪ್ಪಾಗಿ ಬರೆಯಲಾಗಿತ್ತು, ತನ್ಮೂಲಕ ಅವರಿಗೆ ಎಲ್‌ಟಿಸಿಯಂತಹ ಅರ್ಹ ಸೇವಾ ಸೌಲಭ್ಯಗಳನ್ನು ನಿರಾಕರಿಸಿದಂತಾಗಿದೆ ಮತ್ತು ಅವರ ಜ್ಯೇಷ್ಠತೆಯ ಮೇಲೆ ಪ್ರತಿಕೂಲ ಪರಿಣಾಮವುಂಟಾಗಿದೆ ಎಂದು ಸಂಘವು ಹೇಳಿದ್ದನ್ನು ವರದಿಯು ಉಲ್ಲೇಖಿಸಿತ್ತು.

ಈ ನಡುವೆ ಸಚಿವರು,ವಿಮೆನ್ ಇನ್ ಏವಿಯೇಷನ್ ಇಂಟರ್‌ನ್ಯಾಷನಲ್-ಇಂಡಿಯಾ ಚಾಪ್ಟರ್ ಎಳೆಯ ಶಾಲಾಬಾಲಕಿಯರನ್ನು, ವಿಶೇಷವಾಗಿ ಕಡಿಮೆ ಆದಾಯಗಳ ಕುಟುಂಬಗಳಿಗೆ ಸೇರಿದವರ ಮೇಲೆ ವಿಶೇಷ ಗಮನದೊಂದಿಗೆ ನಾಗರಿಕ ವಾಯುಯಾನ ಸಚಿವಾಲಯ, ಉದ್ಯಮ ಮತ್ತು ಪ್ರಮುಖ ಮಹಿಳಾ ವೈಮಾನಿಕ ವೃತ್ತಿಪರರ ಸಹಭಾಗಿತ್ವದಲ್ಲಿ ಹಲವಾರು ಅರಿವು ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದು ಹೇಳಿದ್ದಾರೆ.

ನಾಗರಿಕ ವಾಯುಯಾನ ಸಚಿವಾಲಯವು ತನ್ನ ಸಹವರ್ತಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ದೇಶದಲ್ಲಿ ಪೈಲಟ್ ತರಬೇತಿಯನ್ನು ಉತ್ತೇಜಿಸಲು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಸಚಿವಾಲಯದ ಪ್ರಕಟಣೆಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News