ಮತ್ತೊಂದು ಸೋಂಕು ಮನುಕುಲಕ್ಕೆ ಅತ್ಯಂತ ಮಾರಕವಾಗಬಹುದು: ಆಕ್ಸ್ ಫರ್ಡ್ ವಿಜ್ಞಾನಿ ಎಚ್ಚರಿಕೆ

Update: 2021-12-06 15:24 GMT
ಫೈಲ್ ಫೋಟೊ (PTI)

ಲಂಡನ್, ಡಿ.6: ಮನುಕುಲಕ್ಕೆ ಎರಗಬಹುದಾದ ಮುಂದಿನ ಸೋಂಕು ಅತ್ಯಂತ ಮಾರಕ ಹಾಗೂ ಸಾಂಕ್ರಾಮಿಕವಾಗಿರಬಹುದು ಎಂದು ಆಕ್ಸ್‌ಫರ್ಡ್/ಅಸ್ಟ್ರಾಝೆನೆಕ ಲಸಿಕೆ ಅಭಿವೃದ್ಧಿಪಡಿಸಿದ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಕೊರೋನ ಸೋಂಕು ನಿಯಂತ್ರಣದಲ್ಲಿ ಸಾಧಿಸಿರುವ ಪ್ರಗತಿಯನ್ನು ಉಳಿಸಿಕೊಳ್ಳಬೇಕಿದ್ದರೆ ಸೋಂಕಿನ ವಿರುದ್ಧದ ಮುನ್ನೆಚ್ಚರಿಕೆ ಕ್ರಮಗಳಿಗೆ ಇನ್ನಷ್ಟು ಆರ್ಥಿಕ ನೆರವಿನ ಅಗತ್ಯವಿದೆ ಎಂದು ಆಕ್ಸ್‌ಫರ್ಡ್ ವಿವಿಯ ಜೆನ್ನರ್ ಸಂಸ್ಥೆಯ ಪ್ರೊಫೆಸರ್ ಸಾರಾ ಗಿಲ್ಬರ್ಟ್ ಹೇಳಿದ್ದಾರೆ. 

ಪ್ರೊ. ಸಾರಾ ಗಿಲ್ಬರ್ಟ್ ಕೊರೋನ ಸೋಂಕಿನಿಂದ ರಕ್ಷಣೆ ನೀಡುವ ಅಸ್ಟ್ರಾಝೆನೆಕ ಲಸಿಕೆ(ಭಾರತದಲ್ಲಿ ಕೋವಿಶೀಲ್ಡ್ ಎಂಬ ಹೆಸರಿನಲ್ಲಿ ಉತ್ಪಾದಿಸಲಾಗುತ್ತಿದೆ) ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಿಬಿಸಿಯ 44ನೇ ರಿಚರ್ಡ್ ಡಿಂಬ್ಲೆಬಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಉಪನ್ಯಾಸ ನೀಡುತ್ತಿದ್ದರು. ಬ್ರಿಟನ್ ನ ಹಿರಿಯ ಪತ್ರಕರ್ತ ರಿಚರ್ಡ್ ಡಿಂಬ್ಲೆಬಿ ಗೌರವಾರ್ಥ ನಡೆಯುವ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರತೀ ವರ್ಷ ಖ್ಯಾತ ವ್ಯಕ್ತಿಗಳು ಉಪನ್ಯಾಸ ನೀಡುತ್ತಾರೆ. 

ನೂತನವಾಗಿ ಪತ್ತೆಯಾಗಿರುವ ಒಮೈಕ್ರಾನ್ ಪ್ರಬೇಧದ ವಿರುದ್ಧ ಲಸಿಕೆಗಳು ಕಡಿಮೆ ಪರಿಣಾಮಕಾರಿ ಆಗಿರಬಹುದು. ಆದರೆ ಸೋಂಕು ಹಾಗೂ ಸೌಮ್ಯಪ್ರಮಾಣದ ಕಾಯಿಲೆ ವಿರುದ್ಧ ಕಡಿಮೆ ರಕ್ಷಣೆ ಎಂದರೆ ತೀವ್ರ ಅನಾರೋಗ್ಯ ಮತ್ತು ಸಾವಿನ ವಿರುದ್ಧ ಕಡಿಮೆ ರಕ್ಷಣೆ ಎಂದರ್ಥವಲ್ಲ. ಜನರ ಬದುಕಿಗೆ , ಜೀವನೋಪಾಯದ ಮೇಲೆ ಸೋಂಕಿನ ಭೀತಿಯ ಪ್ರಕರಣ ಇದು ಅಂತಿಮವಲ್ಲ. ಮುಂದಿನ ಸೋಂಕು ಇನ್ನಷ್ಟು ಮಾರಕವಾಗಲಿದೆ ಅಥವಾ ಸಾಂಕ್ರಾಮಿಕವಾಗಲಿದೆ. ಅಥವಾ ಇವೆರಡೂ ಸೇರಿದ ಸೋಂಕು ಮನುಕುಲಕ್ಕೆ ಎರಗಬಹುದು ಎಂದವರು ಹೇಳಿದ್ದಾರೆ. 

ಆರ್ಥಿಕ ಚಟುವಟಿಕೆ ಮಂದಗತಿಯಲ್ಲಿದೆ ಎಂಬ ಕಾರಣಕ್ಕೆ ಸೋಂಕು ನಿಯಂತ್ರಣ ಕ್ರಮಗಳಿಗೆ ಅನುದಾನದ ಕೊರತೆಯಾಗಬಾರದು. ಇದುವರೆಗೆ ಸಾಧಿಸಿರುವ ಪ್ರಗತಿಯನ್ನು , ನಾವು ಗಳಿಸಿದ ಜ್ಞಾನವನ್ನು ಯಾವುದೇ ಕಾರಣಕ್ಕೂ ವ್ಯರ್ಥವಾಗದಂತೆ ನೋಡಿಕೊಳ್ಳಬೇಕು. ಒಮೈಕ್ರಾನ್ ಸೋಂಕಿನ ಕುರಿತು ಇನ್ನಷ್ಟು ಮಾಹಿತಿ ಕಂಡುಕೊಳ್ಳುವವರೆಗೆ ನಾವು ಎಚ್ಚರಿಕೆಯಿಂದ ಇರಬೇಕು ಮತ್ತು ಒಮೈಕ್ರಾನ್ ಪ್ರಸಾರದ ವೇಗವನ್ನು ಕಡಿಮೆಗೊಳಿಸಬೇಕು ಎಂದವರು ಸಲಹೆ ನೀಡಿದ್ದಾರೆ. ಬ್ರಿಟನ್‌ನಲ್ಲಿ ರವಿವಾರ ಒಮೈಕ್ರಾನ್ ಸೋಂಕಿನ 86 ಪ್ರಕರಣ ಪತ್ತೆಯಾಗುವುದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 246ಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News