ಎಕೆ-203 ಒಪ್ಪಂದಕ್ಕೆ ಭಾರತ-ರಷ್ಯಾ ಸಹಿ: ಮಿಲಿಟರಿ ಸಹಕಾರಕ್ಕೆ 10 ವರ್ಷಗಳ ಒಪ್ಪಂದ ನವೀಕರಣ

Update: 2021-12-06 17:58 GMT

ಹೊಸದಿಲ್ಲಿ,ಡಿ.6: ಸಣ್ಣ ಶಸ್ತ್ರಾಸ್ತ್ರಗಳು ಮತ್ತು ಮಿಲಿಟರಿ ಸಹಕಾರ ಸೇರಿದಂತೆ ಹಲವಾರು ಒಪ್ಪಂದಗಳು,ಗುತ್ತಿಗೆ ಕರಾರುಗಳು ಮತ್ತು ಶಿಷ್ಟಾಚಾರಗಳಿಗೆ ಭಾರತ ಮತ್ತು ರಷ್ಯಾ ಸಹಿ ಹಾಕಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ ಇಲ್ಲಿ ರಷ್ಯಾದ ರಕ್ಷಣಾ ಸಚಿವ ಸೆರ್ಗಿ ಶೋಯುಗು ಅವರೊಂದಿಗೆ ಮಾತುಕತೆಗಳ ಬಳಿಕ ತಿಳಿಸಿದರು.

‘ಭಾರತಕ್ಕೆ ರಷ್ಯಾದ ಬಲವಾದ ಬೆಂಬಲವನ್ನು ದೇಶವು ಶ್ಲಾಘಿಸುತ್ತದೆ. ನಮ್ಮ ಸಹಕಾರವು ಇಡೀ ಪ್ರದೇಶಕ್ಕೆ ಶಾಂತಿ,ಸಮೃದ್ಧಿ ಮತ್ತು ಸ್ಥಿರತೆಯನ್ನು ತರುತ್ತದೆ ಎಂದು ನಾವು ಆಶಿಸಿದ್ದೇವೆ’ ಎಂದು ಸಿಂಗ್ ಟ್ವೀಟಿಸಿದ್ದಾರೆ.

ಶೋಯಿಗು ಅವರೊಂದಿಗಿನ ಮಾತುಕತೆಗಳನ್ನು ‘ಉತ್ಪಾದಕ,ಫಲಪ್ರದ ಮತ್ತು ಗಣನೀಯ ’ಎಂದು ಬಣ್ಣಿಸಿದ ಸಿಂಗ್,ಭಾರತವು ರಷ್ಯಾದೊಂದಿಗೆ ತನ್ನ ವಿಶೇಷ ಮತ್ತು ವಿಶಿಷ್ಟ ವ್ಯೆಹಾತ್ಮಕ ಪಾಲುದಾರಿಕೆಯನ್ನು ಗೌರವಿಸುತ್ತದೆ ಎಂದು ಹೇಳಿದರು.

2021-31ರ ಅವಧಿಗಾಗಿ ಮಿಲಿಟರಿ-ತಾಂತ್ರಿಕ ಸಹಕಾರ ವ್ಯವಸ್ಥೆಯಡಿ ಇಂಡೋ-ರಷ್ಯಾ ಪ್ರೈ.ಲಿ.ಮೂಲಕ 5,000 ಕೋ.ರೂ.ವೆಚ್ಚದಲ್ಲಿ 6,01,427 ಎಕೆ-203 ಅಸಾಲ್ಟ್ ರೈಫಲ್ಗಳ ಖರೀದಿ ಒಪ್ಪಂದಗಳಿಗೆ ಭಾರತ ಮತ್ತು ರಷ್ಯಾ ಸೋಮವಾರ ಸಹಿ ಹಾಕಿವೆ.
ಕಲಾಶ್ನಿಕೋವ್ ಸರಣಿಯಲ್ಲಿ ಸಣ್ಣ ಶಸ್ತ್ರಾಸ್ತ್ರಗಳ ತಯಾರಿಕೆ ಕ್ಷೇತ್ರದಲ್ಲಿ 2019,ಫೆ.18ರ ಒಪ್ಪಂದಕ್ಕೆ ತಿದ್ದುಪಡಿಯನ್ನು ತರುವ ಕುರಿತು ಶಿಷ್ಟಾಚಾರಕ್ಕೂ ಉಭಯ ದೇಶಗಳು ಸಹಿ ಹಾಕಿವೆ.

ಸುಷ್ಮಾ ಸ್ವರಾಜ್ ಭವನದಲ್ಲಿ ನಡೆದ ಮಾತುಕತೆಗಳಲ್ಲಿ ಸಿಂಗ್ ಅವರೊಂದಿಗೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಹಾಗೂ ಶೋಯಿಗು ಮತ್ತು ರಷ್ಯಾದ ವಿದೇಶಾಂಗ ಸಚಿವ ಸೆರ್ಗಿ ಲಾವ್ರೋವ್ ಪಾಲ್ಗೊಂಡಿದ್ದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರವಿಂದ ಬಾಗ್ಚಿ ಟ್ವೀಟಿಸಿದ್ದಾರೆ.

ಭಾರತವು ಎದುರಿಸುತ್ತಿರುವ ಸವಾಲುಗಳು ಮತ್ತು ಭಾರತಕ್ಕೆ ಹೆಚ್ಚು ಅಗತ್ಯವಾಗಿರುವ ರಷ್ಯಾದೊಂದಿಗೆ ನಿಕಟ ಮಿಲಿಟರಿ ಮತ್ತು ಮಿಲಿಟರಿ ತಾಂತ್ರಿಕ ಸಹಭಾಗಿತ್ವದ ಬಗ್ಗೆ ಚರ್ಚಿಸುವ ಅವಕಾಶ ನನಗೆ ಲಭಿಸಿತ್ತು. ಸಾಂಕ್ರಾಮಿಕ,ನಮ್ಮ ನೆರೆಯಲ್ಲಿ ಅಸಾಧಾರಣ ಮಿಲಿಟರೀಕರಣ ಮತ್ತು ಯುದ್ಧ ಸನ್ನದ್ಧತೆ ಹಾಗೂ 2020ರ ಬೇಸಿಗೆಯ ಆರಂಭದಿಂದ ನಮ್ಮ ಉತ್ತರದ ಗಡಿಯಲ್ಲಿ ಅಪ್ರಚೋದಿತ ಆಕ್ರಮಣ ಹಲವಾರು ಸವಾಲುಗಳನ್ನು ಒಡ್ಡಿವೆ.

-ರಾಜನಾಥ್ ಸಿಂಗ್,ರಕ್ಷಣಾ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News