ಶಾಂತಿ, ಸಹಿಷ್ಣುತೆಯ ಮಹಾನ್ ಸಂದೇಶ ಸಾರಿದ ಅಶೋಕ ಚಕ್ರವರ್ತಿ

Update: 2021-12-07 06:38 GMT

ಜವಾಬ್ದಾರಿಯುತವಾದ ರಾಜ್ಯಾಡಳಿತ ವ್ಯವಸ್ಥೆ, ಸಹಿಷ್ಣುತೆ ಹಾಗೂ ಉದಾರತೆಯಲ್ಲಿ ಅಶೋಕನ ಧೀಮಂತ ಪರಂಪರೆಯು ಭಾರತದ ಶಿಲೆಗಳಲ್ಲಿ ಇಂದಿಗೂ ಉಳಿದುಕೊಂಡಿದೆ. ಸ್ವತಂತ್ರ ಭಾರತವು ಅಶೋಕ ಚಕ್ರವನ್ನು ತನ್ನ ನೂತನ ಧ್ವಜದಲ್ಲಿ ಅಳವಡಿಸಿಕೊಂಡಿರುವುದು ಸೂಕ್ತವಾದುದಾಗಿದೆ. ಮಾನವತೆಯಿಂದ ಕೂಡಿದ ಸಮಾಜದ ಬಗ್ಗೆ ಈ ಪುರಾತನ ಭಾರತದ ದೊರೆಯ ದೃಷ್ಟಿಕೋನವನ್ನು ಆಧುನಿಕ ಭಾರತವು ಸದಾ ಸ್ಮರಿಸಲಿದೆ.

ದಕ್ಷಿಣ ಏಶ್ಯದ ಅತ್ಯಂತ ಬೃಹತ್, ಬಹುಸಂಸ್ಕೃತಿಯ ಹಾಗೂ ಅತ್ಯಂತ ಬಲಿಷ್ಠ ಸಾಮ್ರಾಜ್ಯವನ್ನು ಆಳಿದ್ದ ಅಶೋಕ ಚಕ್ರವರ್ತಿಯ ಶಿಲಾಶಾಸನಗಳು ಪತ್ತೆಯಾಗದೆ ಇದ್ದಲ್ಲಿ ಆತನ ದೂರದೃಷ್ಟಿಯ ವೌಲ್ಯಗಳು ಹಾಗೂ ಆಡಳಿತಾತ್ಮಕ ಮೇಧಾವಿತನವು ಆಧುನಿಕ ಜಗತ್ತಿಗೆ ಅಜ್ಞಾತವಾಗಿಯೇ ಉಳಿಯಬಹುದಾಗಿತ್ತು.

 ಇತಿಹಾಸದ ಅಂಕಣಗಳನ್ನು ಆವರಿಸಿರುವ ಸಾವಿರಾರು ಚಕ್ರವರ್ತಿ ಗಳ ನಡುವೆ ಅಶೋಕ ಚಕ್ರವರ್ತಿಯ ಹೆಸರು ಜ್ವಾಜಲ್ಯಮಾನವಾಗಿ ಬೆಳಗುತ್ತಿದೆ ಹಾಗೂ ಹೆಚ್ಚುಕಮ್ಮಿ ಒಂಟಿ ನಕ್ಷತ್ರದಂತೆ ಹೊಳೆಯುತ್ತಿದೆ’’ ಎಂದು ಇಂಗ್ಲಿಷ್ ಕಾದಂಬರಿಕಾರ, ಪತ್ರಕರ್ತ, ಸಮಾಜಶಾಸ್ತ್ರಜ್ಞ ಹಾಗೂ ಇತಿಹಾಸಕಾರ ಎಚ್.ಜಿ.ವೆಲ್ಸ್ ಹೇಳುತ್ತಾರೆ.

 ಪಾಕಿಸ್ತಾನದಲ್ಲಿ ದಟ್ಟವಾದ ಬಿರುಗಾಳಿ ಬೀಸುವ ಖೈಬರ್ ಕಣಿವೆಯಲ್ಲಿರುವ ಬೃಹತ್ ಗಾತ್ರದ ಬೂದುಬಣ್ಣದ ಶಿಲೆಯೊಂದರಲ್ಲಿ, ಮುಂದಿನ ಪೀಳಿಗೆಗಾಗಿ ಹೀಗೆ ಕೆತ್ತಲಾಗಿದೆ. ‘‘ಒಳಿತನ್ನು ಮಾಡುವುದು ತುಂಬಾ ಕಷ್ಟ. ಒಳ್ಳೆಯದನ್ನು ಮಾಡಲು ಆರಂಭಿಸುವುದು ಕೂಡಾ ಕಷ್ಟಕರವಾದುದಾಗಿದೆ’’ ಎಂದು ಅದರಲ್ಲಿ ಬರೆಯಲಾಗಿದೆ.

 ಈ ಶಕ್ತಿಶಾಲಿ ಪದಗಳು ದಕ್ಷಿಣ ಏಶ್ಯದ ಬೃಹತ್, ಅತ್ಯಂತ ಬಹುಸಂಸ್ಕೃತಿಯ ಹಾಗೂ ಅತ್ಯಂತ ಶಕ್ತಿಶಾಲಿ ದೊರೆಗಳಲ್ಲೊಬ್ಬನಾದ ವೌರ್ಯ ವಂಶದ ಮೂರನೇ ಚಕ್ರವರ್ತಿ ಅಶೋಕನ ಆಳ್ವಿಕೆಯಲ್ಲಿ ಬರೆದಿರುವುದಾಗಿವೆ. ತನ್ನ ವಿಶಾಲ ಚಕ್ರಾಧಿಪತ್ಯದಲ್ಲಿ ತಾನು ಹರಡಿದ ಶಾಂತಿ, ಸಹಿಷ್ಣುತೆಯ ಸಂದೇಶಕ್ಕಾಗಿ ಅಶೋಕ ದೊರೆಯು ಜಗತ್ತಿನ ಇತಿಹಾಸದಲ್ಲೇ ಅತ್ಯಂತ ಅಸಾಧಾರಣ ಆಡಳಿತಗಾರರಲ್ಲಿ ಒಬ್ಬರೆಂಬುದಾಗಿ ಶತಮಾನಗಳಿಂದ ಸ್ಮರಿಸಲ್ಪಡುತ್ತಿದ್ದಾರೆ.

ಅಶೋಕ ಚಕ್ರವರ್ತಿಯ ದಾರ್ಶನಿಕ ಗುಣಗಳು, ಮಾನವೀಯ ನೈತಿಕತೆ ಹಾಗೂ ಆಡಳಿತ ಮೇಧಾವಿತನವು ಆತ ಕೆತ್ತಿಸಿದ ಶಿಲಾಶಾಸನಗಳು 19ನೇ ಶತಮಾನದಲ್ಲಿ ಪತ್ತೆಯಾಗದೆ ಹೋದಲ್ಲಿ ಅರಿವಿಗೆ ಬಾರದೆ ಹೋಗುತ್ತಿದ್ದವು.

1837ರವರೆಗೆ ಏಶ್ಯದ ಇತಿಹಾಸ ವಿದ್ವಾಂಸ ಜೇಮ್ಸ್ ಪ್ರಿನ್ಸೆಪ್ ಅವರು ಈ ಶಿಲಾಶಾಸನಗಳ ಅರ್ಥವನ್ನು ಗ್ರಹಿಸುವವರೆಗೆ, ಅಶೋಕ ಕೇವಲ ಪುರಾತನ ಭಾರತದ ಇನ್ನೋರ್ವ ಚಕ್ರವರ್ತಿ ಎಂದಷ್ಟೇ ಪರಿಗಣಿಸಲ್ಪಟ್ಟಿದ್ದ. ಆದರೆ ಅವರ ಶಿಲಾಶಾಸನಗಳನ್ನು ಅರಿತುಕೊಂಡ ಬಳಿಕ ಎಲ್ಲವೂ ಬದಲಾಯಿತು.

 ಕುತೂಹಲಕಾರಿಯೆಂದರೆ ಈ ಶಿಲಾಶಾಸನಗಳ ಅರ್ಥವನ್ನು ಗ್ರಹಿಸುವವರೆಗೆ ಅದನ್ನು ಬರೆದವರು ಯಾರೆಂಬುದು ಯಾರಿಗೂ ತಿಳಿದಿರಲಿಲ್ಲ. ಯಾಕೆಂದರೆ ಮೊದಲ ಶಿಲಾಶಾಸನದಲ್ಲಿ ಅಶೋಕ ಹೆಸರನ್ನು ಉಲ್ಲೇಖಿಸಲಾಗಿರಲಿಲ್ಲ. ಅದರಲ್ಲಿ ‘ಪಿಯಾದಾಸಿ’ (ದೇವರಿಗೆ ಪ್ರಿಯನಾದವನು) ಎಂದಷ್ಟೇ ಬರೆಯಲಾಗಿತ್ತು.

 ಅಶೋಕ ಚಕ್ರವರ್ತಿಯೇ ಪಿಯಾದಾಸಿ ಎಂದು ತಿಳಿದುಕೊಳ್ಳಲು ಜಗತ್ತಿಗೆ ಏಳುದಶಕಗಳೇ ಬೇಕಾಯಿತು. ಅಶೋಕ ಚಕ್ರವರ್ತಿಯು ‘ಅಶೋಕ ಪಿಯಾದಾಸಿ’ ಎಂದು ತನ್ನನ್ನು ತಾನೇ ಸಂಬೋಧಿಸಿದ್ದ ಇನ್ನೊಂದು ಶಿಲಾಶಾಸನವೊಂದು 1915ರಲ್ಲಿ ಪತ್ತೆಯಾದ ಬಳಿಕ ಅದು ಸಾಬೀತಾಯಿತು.

ಅಶೋಕನ ಕಾಲದ ಇಂತಹ ಹಲವು ಶಿಲಾ ಬರಹಗಳು ಸವೆದುಹೋಗಿರಬಹುದು, ಆದರೆ ಈ ಮಹಾನ್ ದೊರೆಯ ಸಂದೇಶಗಳನ್ನು ಆತನ ಸಾಮ್ರಾಜ್ಯದ ಗಡಿಮುಂಚೂಣಿಗಳುದ್ದಕ್ಕೂ, ಖೈಬರ್ ಕಣಿವೆಯಿಂದ ಹಿಡಿದು ದಕ್ಷಿಣ ಭಾರತದುದ್ದಕ್ಕೂ ಕಾಣಬಹುದಾಗಿದೆ.

 ಅಶೋಕನ ಸಂದೇಶಗಳನ್ನು ಗ್ರಹಿಸಬೇಕಾದರೆ, ಅವುಗಳ ಹಿಂದಿರುವ ಮಹಾನ್ ಪರಿವರ್ತನೆಯೊಂದರ ಅಸಾಧಾರಣ ಕಥೆಯೊಂದನ್ನು ನಾವು ತಿಳಿದುಕೊಳ್ಳುವ ಅಗತ್ಯವಿದೆ. ಈ ಕಥೆಯು ಕ್ರಿ.ಪೂ.270ರಲ್ಲಿ, ಅಶೋಕ ಅಧಿಕಾರಕ್ಕೇರಿದ ಎಂಟು ವರ್ಷಗಳ ಬಳಿಕ ಆರಂಭವಾಗುತ್ತದೆ. ಸಿಂಹಾಸನ ಏರಿದ ಬಳಿಕ ಅಶೋಕನು ತನ್ನ ಮೊದಲ ಯುದ್ಧದಲ್ಲಿ, ಪೂರ್ವ ಕರಾವಳಿಯಲ್ಲಿರುವ ಸ್ವತಂತ್ರ ಸಾಮಂತ ರಾಜ್ಯವಾದ ಕಳಿಂಗ (ಈಗಿನ ಒಡಿಶಾ ಹಾಗೂ ಉತ್ತರದ ಆಂಧ್ರಪ್ರದೇಶವನ್ನು ಒಳಗೊಂಡ ಪ್ರದೇಶ)ದ ಮೇಲೆ ಆಕ್ರಮಣ ನಡೆಸುತ್ತಾನೆ.

ಈ ಯುದ್ಧದಲ್ಲಿ ಅಶೋಕ ಸಾಧಿಸಿದ ಗೆಲುವಿನಿಂದಾಗಿ, ಆತನ ಸಾಮ್ರಾಜ್ಯವು ಹಿಂದಿನ ತನ್ನ ಯಾವುದೇ ಪೂರ್ವಾಧಿಕಾರಿಗಳ ಕಾಲದಲ್ಲಿ ಇಲ್ಲದಷ್ಟು ವಿಸ್ತಾರಗೊಂಡಿತು. ಆದರೆ ಈ ಗೆಲುವಿಗಾಗಿ ತೆತ್ತ ಬೆಲೆ ಬಲು ದೊಡ್ಡದಾಗಿತ್ತು. ಐತಿಹಾಸಿಕ ದಾಖಲೆಗಳ ಪ್ರಕಾರ ಭಾರತೀಯ ಇತಿಹಾಸದಲ್ಲೇ ಅತ್ಯಂತ ಭೀಕರವೆನಿಸಿರುವ ಕಳಿಂಗ ಯುದ್ಧದಲ್ಲಿ ಮೂರು ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು ಹಾಗೂ ಸೆರೆಸಿಕ್ಕ ಲಕ್ಷಾಂತರ ಮಂದಿ ಗಡಿಪಾರುಗೊಂಡಿದ್ದರು.

 ಈ ಭೀಕರ ರಕ್ತಪಾತ ಹಾಗೂ ಆನಂತರ ಜನರು ಅನುಭವಿಸಿದ ಭೀಕರವಾದ ಯಾತನೆಯನ್ನು ಕಂಡ ಅಶೋಕ ಚಕ್ರವರ್ತಿಯಲ್ಲಿ ಭಾವನಾತ್ಮಕ ಪರಿವರ್ತನೆಯುಂಟಾಯಿತು. ದುಃಖತಪ್ತ ಅಶೋಕ ತನ್ನ ಸೇನಾದಂಡಯಾತ್ರೆ ಹಾಗೂ ಹಿಂಸಾಚಾರವನ್ನು ಸಂಪೂರ್ಣವಾಗಿ ತ್ಯಜಿಸಿದ. 13ನೇ ಶಿಲಾಶಾಸನವೊಂದರಲ್ಲಿ ಆತ ‘‘ಅಜೇಯವಾದ ಸಾಮ್ರಾಜ್ಯವೊಂದರ ಮೇಲೆ ವಿಜಯಸಾಧಿಸಿದಾಗ ಸಂಭವಿಸಿದ ಹತ್ಯೆಗಳು, ಕಗ್ಗೊಲೆಗಳು ಮತ್ತು ಬಂದಿಗಳ ಗಡಿಪಾರಿನಿಂದಾಗಿ ತಾನು ತೀವ್ರವಾಗಿ ನೊಂದಿದ್ದೇನೆ’’ ಎಂದು ಬರೆದಿದ್ದನು.

  ತನ್ನ ಆಕ್ರಣಕಾರಿ ವಿದೇಶಿ ನೀತಿಯನ್ನು ಕೈಬಿಟ್ಟ ಅಶೋಕ ಅದರ ಜಾಗದಲ್ಲಿ ಶಾಂತಿಯುತ ಸಹಬಾಳ್ವೆಯ ನೀತಿಯನ್ನು ಅನುಷ್ಠಾನಕ್ಕೆ ತಂದನು. 4ನೇ ಶಿಲಾಶಾಸನದಲ್ಲಿ ಆತ ‘‘ಆಡಳಿತದಲ್ಲಿ ರಣಕಹಳೆಗಳ ಧ್ವನಿಯನ್ನು ನೈತಿಕತೆಯ ಧ್ವನಿಯು ತೆರವುಗೊಳಿಸಿದೆ’’ ಎಂದು ಬರೆದಿದ್ದನು.

ಕಳಿಂಗ ಯುದ್ಧದ ಬಳಿಕ ಮನಃಪರಿವರ್ತನೆಗೊಂಡ ಅಶೋಕ ಚಕ್ರವರ್ತಿ ತನ್ನ ಸಾಮ್ರಾಜ್ಯದಲ್ಲಿ ಹಾಗೂ ಜನದಟ್ಟಣೆಯ ವ್ಯಾಪಾರಿ ಮಾರ್ಗಗಳಲ್ಲಿ ‘ಸ್ವತಂತ್ರವಾಗಿ’ ತಲೆಯೆತ್ತಿ ನಿಂತಿರುವ ಬಂಡೆಗಲ್ಲುಗಳು ಹಾಗೂ ಬೃಹತ್ ಶಿಲಾ ಸ್ತಂಭಗಳಲ್ಲಿ ಸಂದೇಶಗಳನ್ನು ಕೆತ್ತುವ ಮೂಲಕ ಜೀವನದ ಕುರಿತ ತನ್ನ ನೂತನ ದೃಷ್ಟಿಕೋನವನ್ನು ಇತರರೊಂದಿಗೆ ಹಂಚಿಕೊಳ್ಳಲು ನಿರ್ಧರಿಸಿದನು. 5ನೇ ಶಿಲಾಶಾಸನದ ಕೊನೆಯಲ್ಲಿ ಅಶೋಕ ‘‘ನೀತಿಶಾಸ್ತ್ರದ ಕುರಿತ ಶಾಸನವನ್ನು ಶಿಲೆಯಲ್ಲಿ ಯಾಕೆ ಕೆತ್ತಲಾಗಿದೆಯೆಂದರೆ, ಅದು ಬಹಳ ಕಾಲ ಬಾಳಿಕೆ ಬರುತ್ತದೆ ಹಾಗೂ ನನ್ನ ಪೀಳಿಗೆಯವರೂ ಕೂಡಾ ಅದಕ್ಕೆ ಅನುಗುಣವಾಗಿ ಕಾರ್ಯಾಚರಿಸಬಹುದಾಗಿದೆ’’ ಎಂದು ಉಲ್ಲೇಖಿಸಿದ್ದನು.

 ಈ ಶಿಲಾಶಾಸನಗಳಿಂದ ವಿವಿಧ ಪ್ರದೇಶಗಳ ಹಾಗೂ ಸಮುದಾಯಗಳ ಜನರು ಸ್ಫೂರ್ತಿ ಪಡೆಯಬೇಕೆಂದು ಅಶೋಕ ಬಯಸಿದ್ದನು. ಆದುದರಿಂದಾಗಿಯೇ ಆತನ ಶಿಲಾಶಾಸನಗಳು ಯಾವುದೇ ನಿರ್ದಿಷ್ಟ ಭಾಷೆಗಾಗಲಿ ಅಥವಾ ನಿರ್ದಿಷ್ಟ ಸ್ಥಳಕ್ಕೆ ಸೀಮಿತವಾಗಿರಲಿಲ್ಲ. ಈ ಸಂದೇಶಗಳನ್ನು ಸಂಸ್ಕೃತ (ಆ ಕಾಲದ ಅಧಿಕೃತ ಭಾಷೆ)ದಲ್ಲಿ ಬರೆದಿರಲಿಲ್ಲ ಆದರೆ ಜನಸಾಮಾನ್ಯರು ವ್ಯಾಪಕವಾಗಿ ತಿಳಿದುಕೊಳ್ಳಬೇಕು ಎಂಬ ಉದ್ದೇಶದಿಂದ ಬ್ರಾಹ್ಮಿ ಹಾಗೂ ಖರೋಷ್ಟಿಯಂತಹ ಸ್ಥಳೀಯ ಭಾಷೆಗಳಲ್ಲಿ ಈ ಸಂದೇಶಗಳನ್ನು ಬರೆಯಲಾಗಿತ್ತು. ಉದಾಹರಣೆಗೆ, ಅಫ್ಘಾನಿಸ್ತಾನದಲ್ಲಿರುವ ಆಧುನಿಕ ಕಾಲದ ಕಂದಹಾರ್‌ನ ಸಮೀಪವಿರುವ ಅಶೋಕನ ಶಿಲಾಶಾಸನವನ್ನು ಗ್ರೀಕ್ ಹಾಗೂ ಆರಾಮಿಕ್ ಭಾಷೆಯಲ್ಲಿ ಬರೆಯಲಾಗಿತ್ತು. ಈ ಪ್ರದೇಶವು ಒಂದು ಕಾಲದಲ್ಲಿ ಅಲೆಕ್ಸಾಂಡರ್ ಚಕ್ರವರ್ತಿಯ ಅಧೀನದಲ್ಲಿತ್ತು.

ತನ್ನ ಶಾಸನಗಳ ಮೂಲಕ ಅಶೋಕ ಚಕ್ರವರ್ತಿಯು ವಿವಿಧ ಧರ್ಮಗಳ ಜನರಿಗೆ ಪರಸ್ಪರ ಗೌರವ ಹಾಗೂ ಸಹಿಷ್ಣುತೆಯ ನೀತಿಯನ್ನು ಪ್ರಚುರಪಡಿಸಿದ್ದನು. ತನ್ನ ಏಳನೇ ಶಿಲಾಶಾಸನದಲ್ಲಿ ಅಶೋಕನು ‘‘ಎಲ್ಲಾ ಸಂಪ್ರದಾಯಗಳು ಎಲ್ಲೆಡೆಯೂ ನೆಲೆಸಿರಬೇಕೆಂದು ದೊರೆಯು ಇಚ್ಛಿಸುತ್ತಾನೆ’ ಎಂದು ಬರೆಸಿದ್ದನು.

ತನ್ನ 11ನೇ ಶಿಲಾಶಾಸನದಲ್ಲಿ ಅಶೋಕನು, ‘ಒಳ್ಳೆಯತನವು ನಮಗಿಂತ ಸಾಮಾಜಿಕವಾಗಿ ಕೆಳಗಿರುವವರ ಹಾಗೂ ಸಾಮಾಜಿಕವಾಗಿ ಸಮಾನವಾಗಿರುವವರ ಬಾಧ್ಯತೆಗಳ ಈಡೇರಿಕೆಯನ್ನು ಕೂಡಾ ಒಳಗೊಂಡಿದೆ ಎಂದು ಘೋಷಿಸುತ್ತಾನೆ. ‘‘ನಾವು ಗುಲಾಮರು ಹಾಗೂ ಸೇವಕರಿಗೆ ಗೌರವವನ್ನು ಹಾಗೂ ಸ್ನೇಹಿತರು ಹಾಗೂ ಪರಿಚಯಸ್ಥರಿಗೆ ಉದಾರತೆಯನ್ನು ತೋರಬೇಕಾಗಿದೆ’’ ಎಂದು ಬರೆಸಿದ್ದನು.

 ತನ್ನ 12ನೇ ಶಿಲಾಶಾಸನದಲ್ಲಿ ಆತ, ‘‘ಇತರರು ಪ್ರತಿಪಾದಿಸಿದ ಎಲ್ಲಾ ಸಿದ್ಧಾಂತಗಳನ್ನು ಆಲಿಸಬೇಕಾಗಿದೆ ಹಾಗೂ ಗೌರವಿಸಬೇಕಾಗಿದೆ. ಇತರ ಪರಂಪರೆಗಳ ಉತ್ತಮ ಬೋಧನೆಗಳನ್ನು ಎಲ್ಲರೂ ಚೆನ್ನಾಗಿ ತಿಳಿದುಕೊಳ್ಳಬೇಕೆಂದು ದೊರೆಯು ಬಯಸುತ್ತಾನೆ’’ ಎಂದು ಬರೆದಿದ್ದನು.

ಆದಾಗ್ಯೂ ಅಶೋಕನು ಕೇವಲ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಸೇವೆಯ ತತ್ವಗಳ ಬಗ್ಗೆ ಕಾಳಜಿಯನ್ನು ಮಾತ್ರವೇ ಹೊಂದಿದ ದೊರೆಯಾಗಿರಲಿಲ್ಲ. ವೌರ್ಯ ಸಾಮ್ರಾಜ್ಯದ ರಾಜಧಾನಿಯಾದ ಪಾಟಲೀಪುತ್ರದಿಂದ ಕೇಂದ್ರೀಕೃತ ಸರಕಾರದ ಮೂಲಕ ಚಕ್ರಾಧಿಪತ್ಯದ ಆಳ್ವಿಕೆಯ ದಕ್ಷತೆಯನ್ನು ನಿರ್ವಹಿಸುವ ಮೂಲಕ ಸಾರ್ವಜನಿಕ ಮೂಲಸೌಕರ್ಯ ಹಾಗೂ ಆಡಳಿತವು ನೈತಿಕ ಕಾಳಜಿಯನ್ನು ಹೇಗೆ ಹೊಂದಿರಬಹುದೆಂಬುದನ್ನು ಆತ ತೋರಿಸಿಕೊಟ್ಟಿದ್ದ.

ಪ್ರಮುಖ ವಾಣಿಜ್ಯ ಕೇಂದ್ರಗಳನ್ನು ಸಂಪರ್ಕಿಸುವ ಉತ್ಕೃಷ್ಟವಾದ ರಸ್ತೆಗಳ ನಿರ್ಮಾಣ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ನೆರಳಿನ ಮರಗಳನ್ನು ಬೆಳೆಸುವುದು, ಮಾವಿನ ತೋಪುಗಳ ನಿರ್ಮಾಣ, ಗಿಡಮೂಲಿಕೆ ಔಷಧಾಲಯಗಳು, ವಿಶ್ರಾಂತಿಗೃಹಗಳು ಹಾಗೂ ಮಾನವರು ಮತ್ತು ಪ್ರಾಣಿಗಳಿಗೆ ಆಸ್ಪತ್ರೆಗಳನ್ನು ಸ್ಥಾಪಿಸಿದ್ದನು. ಈ ಉಪಕ್ರಮಗಳನ್ನು ಸಮರ್ಥವಾಗಿ ನಡೆಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು ಅಶೋಕ ಆಗಾಗ ಪ್ರವಾಸಗಳನ್ನು ಕೈಗೊಳ್ಳುತ್ತಿದ್ದನು. ತನ್ನಂತೆ ಇತರ ಅಧಿಕಾರಿಗಳು ಕೂಡಾ ಹಾಗೆ ಮಾಡಬೇಕೆಂದು ಆತ ನಿರೀಕ್ಷಿಸಿದ್ದನು.

ಕಳಿಂಗ ಯುದ್ಧದ ಬಳಿಕ ಅಶೋಕ ದೊರೆಯು ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆಯ ಕಟ್ಟಾ ಬೆಂಬಲಿಗನಾಗಿ ರೂಪುಗೊಂಡಿದ್ದನು. ತನ್ನ 2ನೇ ಶಿಲಾಶಾಸನ ಹಾಗೂ ಮೂರನೇ ಸ್ತಂಭಶಾಸನದಲ್ಲಿ ಆತ ಈ ಬಗ್ಗೆ ಹೀಗೆ ಬರೆದಿದ್ದನು:

‘‘ಮಾನವರಿಗೆ ಹಾಗೂ ಪ್ರಾಣಿಗಳಿಗೆ ಬೇಕಾದ ಔಷಧೀಯ ಗಿಡಮೂಲಿಕೆಗಳು ಲಭ್ಯವಿಲ್ಲದೆ ಇದ್ದಲ್ಲಿ, ನಾನು ಅವುಗಳನ್ನು ಆಮದು ಮಾಡಿಕೊಂಡು ಬೆಳೆಸಿದ್ದೇನೆ. ಮಾವಿನ ತೋಟಗಳನ್ನು ಬೆಳೆಸಿದ್ದೇನೆ. ಪ್ರತಿ ಎಂಟು ಕಿಲೋಮೀಟರ್ ಉದ್ದಕ್ಕೂ ನಾನು ಕೆರೆಗಳನ್ನು ತೋಡಿದ್ದೇನೆ ಹಾಗೂ ಆಶ್ರಯಧಾಮಗಳನ್ನು ಸ್ಥಾಪಿಸಿದ್ದೇನೆ. ಮನುಷ್ಯರು ಹಾಗೂ ಮೃಗಗಳಿಗೆ ನೆರಳನ್ನು ನೀಡಲು ರಸ್ತೆಗಳ ಬದಿಯಲ್ಲಿ ಅಲದ ಮರಗಳನ್ನು ನೆಡಿಸಿದ್ದೇನೆ. ಮನುಷ್ಯರು ಹಾಗೂ ಮೃಗಗಳ ಪ್ರಯೋಜನಕ್ಕಾಗಿ ಎಲ್ಲೆಡೆಯೂ ಬಾವಿಗಳನ್ನು ತೋಡಿದ್ದೇನೆ’’ ಎಂದು ಬರೆದಿದ್ದಾನೆ.

   ಪುರಾತನ ಭಾರತದಲ್ಲಿ ಕಾಡು ಪ್ರಾಣಿಗಳು ಚಕ್ರವರ್ತಿಯ ಸೊತ್ತೆಂದು ಪರಿಗಣಿಲ್ಪಟ್ಟಿದ್ದವು. ಅಶೋಕ ದೊರೆಯು ಆಗಿನ ಕಾಲದಲ್ಲಿ ರೂಢಿಯಲ್ಲಿದ್ದ ರಾಜಮನೆತದವರು ನಡೆಸುವ ವಿಹಾರಬೇಟೆಯನ್ನು ಹಾಗೂ ಪ್ರಾಣಿಬಲಿಯನ್ನು ನಿಷೇಧಿಸಿದ್ದನು. ಕಾಡುಗಳು ಹಾಗೂ ವನ್ಯಜೀವಿ ಅಭಯಾರಣ್ಯಗಳನ್ನು ಸ್ಥಾಪಿಸಲಾಯಿತು ಹಾಗೂ ಸಾಕು ಪ್ರಾಣಿಗಳ ಮೇಲೆ ಕ್ರೌರ್ಯವೆಸಗುವುದನ್ನು ನಿಷೇಧಿಸಲಾಗಿತ್ತು.

  ಆನಂತರ ಆತ ಈ ಪ್ರಕ್ರಿಯೆಯನ್ನು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಕೊಂಡೊಯ್ದಿದ್ದನು. ಈಗಿನ ಪ್ರಗತಿಪರ ಅಧುನಿಕ ದೇಶಗಳಿಗೆ ಕೂಡಾ ಸರಿಸಾಟಿಯಾಗಲು ಸಾಧ್ಯವಿಲ್ಲದಂತಹ ಕ್ರಮವೊಂದರಲ್ಲಿ, ಅಶೋಕ ದೊರೆಯು ತನ್ನ ಸಾಮ್ರಾಜ್ಯದಾದ್ಯಂತ ಉಚಿತ ಜಾನುವಾರು ಆಸ್ಪತ್ರೆಗಳು ಹಾಗೂ ಔಷಧಾಲಯಗಳನ್ನು ಸ್ಥಾಪಿಸಿದ್ದನು. ಎರಡನೇ ಚಂದ್ರಗುಪ್ತ ವೌರ್ಯನ ಕಾಲದಲ್ಲಿ ಭಾರತಕ್ಕೆ ಬಂದಿದ್ದ ಚೀನಿ ಪ್ರವಾಸಿಗ ಫಾಹಿಯಾನ್, ಪ್ರಾಯಶಃ ಜಗತ್ತಿನಲ್ಲೇ ಪ್ರಪ್ರಥಮವೆನ್ನಲಾದ ಪಾಟಲಿಪುತ್ರದಲ್ಲಿರುವ ಪಶುವೈದ್ಯಕೀಯ ಆಸ್ಪತ್ರೆಗಳ ಬಗ್ಗೆ ಬರೆದಿದ್ದನು.

ಜವಾಬ್ದಾರಿಯುತವಾದ ರಾಜ್ಯಾಡಳಿತ ವ್ಯವಸ್ಥೆ, ಸಹಿಷ್ಣುತೆ ಹಾಗೂ ಉದಾರತೆಯಲ್ಲಿ ಅಶೋಕನ ಧೀಮಂತ ಪರಂಪರೆಯು ಭಾರತದ ಶಿಲೆಗಳಲ್ಲಿ ಇಂದಿಗೂ ಉಳಿದುಕೊಂಡಿದೆ. ಸ್ವತಂತ್ರ ಭಾರತವು ಅಶೋಕ ಚಕ್ರವನ್ನು ತನ್ನ ನೂತನ ಧ್ವಜದಲ್ಲಿ ಅಳವಡಿಸಿಕೊಂಡಿರುವುದು ಸೂಕ್ತವಾದುದಾಗಿದೆ. ಮಾನವತೆಯಿಂದ ಕೂಡಿದ ಸಮಾಜದ ಬಗ್ಗೆ ಈ ಪುರಾತನ ಭಾರತದ ದೊರೆಯ ದೃಷ್ಟಿಕೋನವನ್ನು ಆಧುನಿಕ ಭಾರತವು ಸದಾ ಸ್ಮರಿಸಲಿದೆ.

ಕೃಪೆ: www.betterindia.com

Writer - ಸಂಚಾರಿ ಪಾಲ್

contributor

Editor - ಸಂಚಾರಿ ಪಾಲ್

contributor

Similar News

ಜಗದಗಲ
ಜಗ ದಗಲ