ಸಮಯ ‘ಸಾಧಕ’ ಪಕ್ಷ!

Update: 2021-12-08 17:45 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಅಗತ್ಯವಿದ್ದಾಗ ತನ್ನನ್ನು ತಾನು ರಾಜ್ಯದ ‘ಏಕೈಕ ಪ್ರಾದೇಶಿಕ ಪಕ್ಷ’ ಎಂದು ಕರೆದುಕೊಳ್ಳುವ ಜೆಡಿಎಸ್‌ನ ಅತಿ ದೊಡ್ಡ ಹೆಗ್ಗಳಿಕೆಯೆಂದರೆ, ದಕ್ಷಿಣ ಭಾರತದಲ್ಲಿ ಪ್ರಪ್ರಥಮವಾಗಿ ಬಿಜೆಪಿಯನ್ನು ಅಧಿಕಾರಕ್ಕೆ ತಂದುದು. ಉಳಿದಂತೆ ಜೆಡಿಎಸ್ ತನ್ನ ಪ್ರಾದೇಶಿಕ ಹೊಣೆಗಾರಿಕೆಯನ್ನು ಎಂದೂ ನಿರ್ವಹಿಸಲಿಲ್ಲ. ಬದಲಿಗೆ ಅದು ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷವೊಂದು ಹುಟ್ಟುವ ಸಾಧ್ಯತೆಗೆ ಅತಿ ದೊಡ್ಡ ತಡೆಯಾಗಿಬಿಟ್ಟಿದೆ. ತನ್ನನ್ನು ಬೇಕೆಂದಾಗ ಪ್ರಾದೇಶಿಕ ಪಕ್ಷವೆಂದು ಬಿಂಬಿಸಿಕೊಳ್ಳುತ್ತಾ, ಲಾಭವಿದ್ದಾಗ ರಾಷ್ಟ್ರೀಯ ಪಕ್ಷಗಳ ಬಿ. ಟೀಮ್ ಆಗಿ ಅಸ್ತಿತ್ವವನ್ನು ಉಳಿಸಿಕೊಂಡಿರುವ ಜೆಡಿಎಸ್ ತನ್ನ ಸಮಯ ಸಾಧಕ ರಾಜಕಾರಣವನ್ನು ಇದೀಗ ವಿಧಾನ ಪರಿಷತ್ ಚುನಾವಣೆಯಲ್ಲೂ ಮುಂದುವರಿಸಿದೆ. ಅದರ ಭಾಗವಾಗಿಯೇ, ದೇವೇಗೌಡರು ಏಕಾಏಕಿ ಮೋದಿಯವರನ್ನು ಭೇಟಿ ಮಾಡಿ, ‘ಅವರೀಗ ಮೊದಲಿನಂತಿಲ್ಲ’ ಎಂಬ ಹೇಳಿಕೆ ನೀಡಿದ್ದಾರೆ. ಮೋದಿಯೇನೋ ಬದಲಾಗಿದ್ದಾರೆ ಸರಿ. ಆದರೆ ಜೆಡಿಎಸ್ ಮಾತ್ರ ಮೊದಲಿಗಿಂತಲೂ ಹೀನಾಯ ಸ್ಥಿತಿಗೆ ತಲುಪಿರುವುದು ದೇವೇಗೌಡರ ಮಾತಿನಿಂದಲೇ ಸಾಬೀತಾಗುತ್ತಿದೆ.

ರಾಜ್ಯ ರಾಜಕಾರಣಕ್ಕೆ ಈ ಹಿಂದಿನ ದೇವೇಗೌಡರ ಕೊಡುಗೆಯನ್ನು ಯಾವ ರೀತಿಯಲ್ಲೂ ಕಡೆಗಣಿಸುವಂತಿಲ್ಲ. ಹಾಗೆಯೇ ದೇಶದ ಮಾಜಿ ಪ್ರಧಾನಿಯಾಗಿಯೂ ಅವರು ತನ್ನ ಹೊಣೆಗಾರಿಕೆಯನ್ನು ಸಾಧ್ಯವಾದಷ್ಟು ಪ್ರಬುದ್ಧವಾಗಿ ನಿಭಾಯಿಸಿದರು. ಜನತಾದಳ ಅಂದು ಹುಟ್ಟಿದ್ದು ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯವಾಗುವ ಕನಸಿನಿಂದ. ವಿ.ಪಿ. ಸಿಂಗ್ ಅವರು ಜಾತ್ಯತೀತ ಸಿದ್ಧಾಂತದ ಜೊತೆಗೆ ರಾಜಿ ಮಾಡಿರುತ್ತಿದ್ದರೆ ಅವರು ರಾಜೀನಾಮೆ ನೀಡುವ ಅಗತ್ಯವೇ ಇದ್ದಿರಲಿಲ್ಲ. ಅವರು ರಾಜೀನಾಮೆ ನೀಡದೇ ಇದ್ದಿದ್ದರೆ, ಬಳಿಕ ದೇವೇಗೌಡರು ಪ್ರಧಾನಿಯಾಗುತ್ತಲೂ ಇರಲಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್‌ನ್ನು ಹೊರಗಿಟ್ಟು ಜಾತ್ಯತೀತ ಸರಕಾರ ರಚನೆ ಮಾಡುವ ಒಂದೇ ಒಂದು ಕಾರಣದಿಂದ ದೇವೇಗೌಡರು ಆಕಸ್ಮಿಕವಾಗಿ ಪ್ರಧಾನಿಯಾದರು. ಒಂದು ವೇಳೆ ಹೇಗಾದರೂ ಸರಿ ಪ್ರಧಾನಿಯಾದರೆ ಸಾಕು ಎನ್ನುವ ಮನಸ್ಥಿತಿ ಇದ್ದರೆ ಅಂದು ದೇವೇಗೌಡರ ಜಾಗದಲ್ಲಿ ಜ್ಯೋತಿ ಬಸು ಕುಳಿತುಕೊಳ್ಳುತ್ತಿದ್ದರು. ಜಾತ್ಯತೀತತೆಯನ್ನು ಬಳಸಿಕೊಂಡು, ಈ ದೇಶದ ಪ್ರಧಾನಿಯಾದ ದೇವೇಗೌಡರು, ಬಳಿಕ, ಎಲ್ಲ ಮೌಲ್ಯಗಳನ್ನು ಗಾಳಿಗೆ ತೂರಿ, ಬಿಜೆಪಿಗೆ ರಾಜ್ಯವನ್ನು ಒಪ್ಪಿಸಿರುವುದನ್ನು ಕರ್ನಾಟಕದ ಜಾತ್ಯತೀತ ಮನಸ್ಸುಗಳು ಇಂದಿಗೂ ಮರೆತಿಲ್ಲ. ಕುಮಾರಸ್ವಾಮಿಯವರ ಅಧಿಕಾರ ದಾಹ ಅಂತಿಮವಾಗಿ ದಕ್ಷಿಣ ಭಾರತದಲ್ಲಿ ಸಂಘಪರಿವಾರ ಇನ್ನಷ್ಟು ವಿಜೃಂಭಿಸುವುದಕ್ಕೆ ಕಾರಣವಾಯಿತು.

ಇಷ್ಟಾದರೂ, ದೇವೇಗೌಡರು ಸದಾ ಜಾತ್ಯತೀತರಂತೆಯೇ ಫೋಸು ಕೊಡುತ್ತಾ ಸಾರ್ವಜನಿಕವಾಗಿ ಓಡಾಡುತ್ತಿದ್ದರು. ‘ಮಗ ನನ್ನ ಮಾತು ಕೇಳಲಿಲ್ಲ’ ಎಂದು ಸಾರ್ವಜನಿಕವಾಗಿ ಅತ್ತರು. ಆದರೆ ಕೊನೆಗೂ ತಂದೆ-ಮಕ್ಕಳ ರಾಜಕೀಯ ನಾಟಕಗಳು ಬಹಿರಂಗವಾಯಿತು. ಇದೀಗ ವಿಧಾನ ಪರಿಷತ್ ಚುನಾವಣೆಯ ಹೊತ್ತಿನಲ್ಲೇ ಪ್ರಧಾನಿ ಮೋದಿಯನ್ನು ದೇವೇಗೌಡರು ಭೇಟಿ ಮಾಡಿದ್ದಾರೆ. ಅಷ್ಟೇ ಅಲ್ಲ, ಸುದ್ದಿಗೋಷ್ಠಿಯ ಮುಂದೆ, ಪ್ರಧಾನಿ ಮೋದಿಯನ್ನು ವೈಯಕ್ತಿಕವಾಗಿ ಹಾಡಿ ಹೊಗಳಿದ್ದಾರೆ. ಮೋದಿ ಆಡಳಿತದ ಕಳೆದ ಆರು ವರ್ಷಗಳಲ್ಲಿ ದೇಶ ಯಾವ ಮಟ್ಟವನ್ನು ತಲುಪಿದೆ ಎನ್ನುವುದು ಮಾಜಿ ಪ್ರಧಾನಿಯಾಗಿರುವ ದೇವೇಗೌಡರಿಗೆ ಯಾರೂ ತಿಳಿಸಿಕೊಡಬೇಕಾಗಿಲ್ಲ. ಪಿಎಂ ನಿಧಿಯ ದುರುಪಯೋಗ, ಪ್ರತಿಭಟನಾನಿರತ ರೈತರ ದಮನ ಯತ್ನ, ಅಂಬಾನಿ ಅದಾನಿಯ ಪರ ಆಡಳಿತದ ಬಗ್ಗೆ ದೇವೇಗೌಡರೇ ಈ ಹಿಂದೆ ಮಾತನಾಡಿದ್ದಾರೆ. ಆದರೆ ವಿಧಾನ ಪರಿಷತ್ ಹೊಂದಾಣಿಕೆಯ ಹಿನ್ನೆಲೆಯಲ್ಲಿ ದೇವೇಗೌಡರನ್ನು ಪ್ರಧಾನಿ ಮೋದಿಯವರು ಓಲೈಸಿದ್ದೇ, ಮೋದಿ ಈಗ ಬದಲಾಗಿದ್ದಾರೆ ಎಂದು ದೇವೇಗೌಡರು ಹೇಳಿಕೆ ನೀಡಿದರು. ದೇವೇಗೌಡರ ಪಾಲಿಗೆ ಮೋದಿ ಬದಲಾಗಿರಬಹುದು. ಆದರೆ ಈ ದೇಶದ ಜನರ ಪಾಲಿಗೆ, ಸಂವಿಧಾನದ ಪಾಲಿಗೆ, ರೈತರ ಪಾಲಿಗೆ ಮೋದಿ ಎಷ್ಟು ಬದಲಾವಣೆಯಾಗಿದ್ದಾರೆ ಎನ್ನುವುದನ್ನು ದೇವೇಗೌಡರು ರಾಜ್ಯಕ್ಕೆ ತಿಳಿಸಿಕೊಡಬೇಕಾಗಿದೆ.

ಕನಿಷ್ಠ ರಾಜ್ಯದ ಪಾಲಿಗಾದರೂ ಮೋದಿ ಎಷ್ಟರಮಟ್ಟಿಗೆ ಬದಲಾಗಿದ್ದಾರೆ? ಎನ್ನುವುದನ್ನು ಮಾಜಿ ಪ್ರಧಾನಿ ತಿಳಿಸಬೇಕು. ದಕ್ಷಿಣ ಭಾರತದ ಎಲ್ಲ ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಕೇಂದ್ರವನ್ನು ನಿಯಂತ್ರಿಸಿ ತಮ್ಮ ಹಕ್ಕುಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದರೆ, ರಾಜ್ಯದಲ್ಲಿ ಜೆಡಿಎಸ್ ನಾಯಕ ದೇವೇಗೌಡರು ಮಾತ್ರ ಮೋದಿಯವರನ್ನು ಓಲೈಸಿ ತನ್ನ ಕುಟುಂಬದ ಹಿತಾಸಕ್ತಿಯನ್ನಷ್ಟೇ ನೋಡಿಕೊಳ್ಳುತ್ತಿದ್ದಾರೆ. ದೇಶ, ರಾಜ್ಯದ ಸ್ಥಿತಿ ಏನೇ ಆದರೂ, ಅದರಲ್ಲಿ ತನಗೆಷ್ಟು ಲಾಭ ಎನ್ನುವುದನ್ನಷ್ಟೇ ಅವರು ಲೆಕ್ಕಹಾಕುತ್ತಿದ್ದಾರೆ. ಇಂದು ರಾಜ್ಯ ದಯನೀಯ ಸ್ಥಿತಿ ತಲುಪಲು ಕಾಂಗ್ರೆಸ್ ಅಥವಾ ಬಿಜೆಪಿಗಿಂತ ಜೆಡಿಎಸ್ ಹೆಚ್ಚು ಕಾರಣವಾಗಿದೆ. ಬೇಕಾದಾಗ ಜಾತ್ಯತೀತರಾಗುತ್ತಾ, ಅಗತ್ಯ ಬಿದ್ದಾಗ ‘ಜಾತ್ಯತೀತತೆ ಎಂದರೇನು?’ ಎಂದು ಕೇಳುವ, ‘ವಿಧಾನ ಪರಿಷತ್ ಸ್ಥಾನವನ್ನು ಮಾರಾಟ ಮಾಡುತ್ತೇವೆ, ಏನಿವಾಗ ?’ ಎಂದು ನಾಚಿಕೆ ಬಿಟ್ಟು ಒಪ್ಪಿಕೊಳ್ಳುವ, ರೈತರ ಮಗ ಎನ್ನುತ್ತಾ ರೈತ ವಿರೋಧಿ ಪ್ರಧಾನಿಯನ್ನು ಹೊಗಳುವ ಜೆಡಿಎಸ್ ಮುಖಂಡರು, ರಾಜಕಾರಣಿಗಳಲ್ಲಿರುವ ಅಲ್ಪಸ್ವಲ್ಪ ಗೌರವವನ್ನು ಇಲ್ಲದಂತೆ ಮಾಡಿದ್ದಾರೆ. ಇಂದಿಗೂ ದೇವೇಗೌಡ ಕುಟುಂಬ ಬಿಜೆಪಿಯನ್ನು ನೇರ ಎದುರಾಳಿ ಎಂದು ಭಾವಿಸಿಲ್ಲ. ಅದರ ಏಕೈಕ ಎದುರಾಳಿ ಸಿದ್ದರಾಮಯ್ಯ. ಉಳಿದಂತೆ ಯಾವುದೇ ರೀತಿಯ ರಾಜಕೀಯ ಮೌಲ್ಯಗಳಿಲ್ಲದೆ, ರಾಷ್ಟ್ರೀಯ ಪಕ್ಷಗಳು ಉಂಡು ಬಿಟ್ಟ ತಟ್ಟೆಗಾಗಿ ಕಾಯುತ್ತಿರುವ ಒಂದು ಸಮಯ ಸಾಧಕ ಪಕ್ಷವಾಗಿಯಷ್ಟೇ ಜೆಡಿಎಸ್ ಇತಿಹಾಸದಲ್ಲಿ ದಾಖಲಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News