ಜನರಲ್ ಬಿಪಿನ್ ರಾವತ್: ಅಸಾಧಾರಣ ವೃತ್ತಿಜೀವನದ ಐದು ಪ್ರಮುಖ ಅಂಶಗಳು
ಹೊಸದಿಲ್ಲಿ,ಡಿ.8: ಬುಧವಾರ ತಮಿಳುನಾಡಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಸಶಸ್ತ್ರ ಪಡೆಗಳ ಜಂಟಿ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ (63) ಅವರ ವೃತ್ತಿಜೀವನದ ಐದು ಇಣುಕು ನೋಟಗಳು ಇಲ್ಲಿವೆ.....
ರಕ್ಷಣಾ ಸೇವೆಗಳಲ್ಲಿ ತನ್ನ ನಾಲ್ಕು ದಶಕಗಳ ಉಜ್ವಲ ವೃತ್ತಿಜೀವನದಲ್ಲಿ ಹಂತಹಂತವಾಗಿ ಮೇಲೇರಿದ್ದ ಜ.ರಾವತ್ ಸಿಡಿಎಸ್ ಹುದ್ದೆಗೆ ನೇಮಕಗೊಂಡ ಮೊದಲ ವ್ಯಕ್ತಿಯಾಗಿದ್ದರು.
ಸೇನಾಪಡೆ,ನೌಕಾಪಡೆ ಮತ್ತು ವಾಯುಪಡೆಗಳನ್ನು ಸಮನ್ವಯಗೊಳಿಸುವ ಮುಖ್ಯ ಉದ್ದೇಶದೊಂದಿಗೆ ಮಿಲಿಟರಿ ಮತ್ತು ಅದರ ಕಾರ್ಯನಿರ್ವಹಣೆಗಳಿಗೆ ಸಂಬಂಧಿಸಿದಂತೆ ಸರಕಾರಕ್ಕೆ ಸಲಹೆ ನೀಡುವುದು ಸಿಡಿಎಸ್ ಹೊಣೆಗಾರಿಕೆಯಾಗಿದೆ. ತನ್ನ ಜ್ಯೇಷ್ಠತೆಯ ಕುರಿತು ವಿವಾದದ ನಡುವೆಯೇ 2016ರಲ್ಲಿ ಭಾರತೀಯ ಸೇನೆಯ 27ನೇ ಮುಖ್ಯಸ್ಥರಾಗಿ ನೇಮಕಗೊಂಡಿದ್ದ ರಾವತ್ ತನಗಿಂತ ಹಿರಿಯರಾಗಿದ್ದ ಇಬ್ಬರು ಅಧಿಕಾರಿಗಳನ್ನು ಹಿಂದಿಕ್ಕಿದ್ದರು. 2019ರಲ್ಲಿ ಅವರು ಸಿಡಿಎಸ್ ಆಗಿ ನೇಮಕಗೊಂಡಿದ್ದರು. ಈ ಹುದ್ದೆಗೆ ಅವರ ನೇಮಕಾತಿಯನ್ನು ಸುಗಮಗೊಳಿಸಲು ಸರಕಾರವು ಸೇನೆಯ ನಿಯಮಗಳನ್ನು ತಿದ್ದುಪಡಿಗೊಳಿಸಿ ನಿವೃತ್ತಿ ವಯಸ್ಸನ್ನು 62 ವರ್ಷಗಳಿಂದ 65 ವರ್ಷಗಳಿಗೆ ವಿಸ್ತರಿಸಿತ್ತು.
ಈಶಾನ್ಯ ಭಾರತದಲ್ಲಿ ಉಗ್ರವಾದವನ್ನು ತಗ್ಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ ಹೆಗ್ಗಳಿಕೆ ಜ.ರಾವತ್ ಅವರದ್ದಾಗಿದೆ. 2015ರಲ್ಲಿ ಭಾರತೀಯ ಸೇನೆಯು ಮ್ಯಾನ್ಮಾರ್ ಗಡಿಯೊಳಗೆ ನುಗ್ಗಿ ಎನ್‌ಎಸ್‌ಸಿಎನ್-ಕೆ ಉಗ್ರರ ದಾಳಿಗೆ ಯಶಸ್ವಿಯಾಗಿ ಉತ್ತರಿಸಿದ್ದ ಗಡಿಯಾಚೆಯ ಕಾರ್ಯಾಚರಣೆ ರಾವತ್ ಮೇಲ್ವಿಚಾರಣೆಯಲ್ಲಿ ನಡೆದಿತ್ತು. 2016ರಲ್ಲಿ ಭಾರತೀಯ ಸೇನೆಯು ನಿಯಂತ್ರಣ ರೇಖೆಯನ್ನು ದಾಟಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ನಡೆಸಿದ್ದ ಸರ್ಜಿಕಲ್ ದಾಳಿ ಯೋಜನೆಯನ್ನು ರೂಪಿಸುವುದರಲ್ಲಿ ಅವರ ಕೊಡುಗೆಯು ಇತ್ತು. ಜ.ರಾವತ್ ದಿಲ್ಲಿಯ ಸೌಥ್ ಬ್ಲಾಕ್ ನ ತನ್ನ ಕಚೇರಿಯಲ್ಲಿ ಕುಳಿತುಕೊಂಡು ದಾಳಿ ಬೆಳವಣಿಗೆಗಳ ಮೇಲೆ ನಿಗಾಯಿರಿಸಿದ್ದರು.
ನಾರ್ದರ್ನ್ ಮತ್ತು ಈಸ್ಟರ್ನ್ ಕಮಾಂಡ್‌ಗಳು ಸೇರಿದಂತೆ ದುರ್ಗಮ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ಜ.ರಾವತ್ ಬಂಡಾಯ ನಿಗ್ರಹ ಮತ್ತು ಎತ್ತರದ ಪ್ರದೇಶಗಳಲ್ಲಿಯ ಯುದ್ಧಗಳಲ್ಲಿ ಪರಿಣತಿ ಹೊಂದಿದ್ದರು. ಸದರ್ನ್ ಕಮಾಂಡ್ ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿಯೂ ಅವರು ಸೇವೆ ಸಲ್ಲಿಸಿದ್ದರು. ತನ್ನ ಸುದೀರ್ಘ ವೃತ್ತಿಜೀವನದಲ್ಲಿ ಅವರು ದೇಶಾದ್ಯಂತ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು.
ಜಮ್ಮು-ಕಾಶ್ಮೀರದ ಉಡಿಯಲ್ಲಿ ಕಂಪನಿ ಕಮಾಂಡರ್ ಆಗಿದ್ದ ಅವರು ಕರ್ನಲ್ ಹುದ್ದೆಯಲ್ಲಿದ್ದಾಗ ಅರುಣಾಚಲ ಪ್ರದೇಶದ ಕಿಬಿಥುದಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ 5ನೇ ಬಟಾಲಿಯನ್ 11 ಗುರ್ಖಾ ರೈಫಲ್ಸ್ ನ ಕಮಾಂಡಿಂಗ್ ಆಫೀಸರ್ ಆಗಿದ್ದರು. ಬ್ರಿಗೇಡಿಯರ್ ಆಗಿ ಕಾಶ್ಮೀರದ ಸೋಪೋರ್ನಲ್ಲಿ ರಾಷ್ಟ್ರೀಯ ರೈಫಲ್ಸ್ ನ 5ನೇ ಸೆಕ್ಟರ್ ನ ಮುಖ್ಯಸ್ಥರಾಗಿದ್ದರು. ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಭಾಗವೂ ಆಗಿದ್ದ ಅವರು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಬಹುರಾಷ್ಟ್ರೀಯ ಬ್ರಿಗೇಡ್ ನ ಮುಖ್ಯಸ್ಥರಾಗಿದ್ದರು. ಅಲ್ಲಿ ಅವರು ಎರಡು ಬಾರಿ ಫೋರ್ಸ್ ಕಮಾಂಡರ್ಸ್ ಪ್ರಶಂಸಾ ಪ್ರಶಸ್ತಿಗೂ ಪಾತ್ರರಾಗಿದ್ದರು.
ಪರಮ ವಿಶಿಷ್ಟ ಸೇವಾ ಪದಕ,ಉತ್ತಮ ಯುಧ್ ಸೇವಾ ಪದಕ,ಅತಿ ವಿಶಿಷ್ಟ ಸೇವಾ ಪದಕ,ವಿಶಿಷ್ಟ ಸೇವಾ ಪದಕ, ಯುಧ್ ಸೇವಾ ಪದಕ ಮತ್ತು ಸೇನಾ ಪದಕ ಸೇರಿದಂತೆ ತನ್ನ ಸೇವೆಗಾಗಿ ಹಲವಾರು ಗೌರವಗಳಿಗೆ ಜ.ರಾವುತ್ ಭಾಜನರಾಗಿದ್ದರು.
ಶಿಮ್ಲಾದ ಸೈಂಟ್ ಎಡ್ವರ್ಡ್ ಸ್ಕೂಲ್ ಮತ್ತು ಖಡಕವಾಸ್ಲಾದ ನ್ಯಾಷನಲ್ ಡಿಫೆನ್ಸ್ ಅಕಾಡಮಿಯ ಹಳೆಯ ವಿದ್ಯಾರ್ಥಿಯಾಗಿದ್ದ ಅವರು 1978 ಡಿಸೆಂಬರ್ನಲ್ಲಿ ಡೆಹ್ರಾಡೂನ್ ನ ಇಂಡಿಯನ್ ಮಿಲಿಟರಿ ಅಕಾಡಮಿಯಿಂದ ಇಲೆವನ್ ಗು 'ಸ್ವೋರ್ಡ್ ಆಫ್ ಆನರ್' ಗೂ ಅವರು ಭಾಜನರಾಗಿದ್ದರು. ಜ.ರಾವತ್ ಅಮೆರಿಕದ ಕಾನ್ಸಾಸ್‌ನ ಫೋರ್ಟ್ ಲೀವನ್ವರ್ತ್ ನ ಕಮಾಂಡ್ ಆ್ಯಂಡ್ ಜನರಲ್ ಸ್ಟಾಫ್ ಕಾಲೇಜಿನಲ್ಲಿಯೂ ವ್ಯಾಸಂಗ ಮಾಡಿದ್ದರು.