ಒಮೈಕ್ರಾನ್ ಪ್ರಬೇಧ ಲಸಿಕೆ ರಕ್ಷಣೆಯಿಂದ ಸಂಪೂರ್ಣ ನುಣುಚಿಕೊಳ್ಳುವ ಸಾಧ್ಯತೆಯಿಲ್ಲ: ವಿಶ್ವ ಆರೋಗ್ಯ ಸಂಸ್ಥೆ

Update: 2021-12-08 18:33 GMT

ಜಿನೇವಾ, ಡಿ.8: ಲಸಿಕೆಯಿಂದ ಒದಗುವ ಪ್ರತಿರೋಧ ಶಕ್ತಿಯಿಂದ ಒಮೈಕ್ರಾನ್ ರೂಪಾಂತರ ಸಂಪೂರ್ಣವಾಗಿ ನುಣುಚಿಕೊಳ್ಳುವ ಸಾಧ್ಯತೆಯಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಹಿರಿಯ ಅಧಿಕಾರಿಗಳು ಹೇಳಿರುವುದಾಗಿ ಎಎಫ್‌ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

ಈ ಹಿಂದೆ ಪತ್ತೆಯಾದ ಕೊರೋನ ವೈರಸ್ ಗಿಂತ ಒಮೈಕ್ರಾನ್ ಹೆಚ್ಚು ತೀವ್ರ ಕಾಯಿಲೆಯಂತೆ ತೋರುವುದಿಲ್ಲ. ಒಮೈಕ್ರಾನ್ ಸೋಂಕು ಕಡಿಮೆ ತೀವ್ರತೆ ಹೊಂದಿರುವುದನ್ನು ಪ್ರಾಥಮಿಕ ಅಂಕಿಅಂಶಗಳು ಸೂಚಿಸಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತುಕಾರ್ಯಕ್ರಮ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಮಿಚಾಯಿಲ್ ರಿಯಾನ್ ಹೇಳಿದ್ದಾರೆ.

ಎಲ್ಲಾ ರೂಪಾಂತರ ಸೋಂಕಿನ ವಿರುದ್ಧವೂ ಪರಿಣಾಮಕಾರಿ ಎಂದು ಸಾಬೀತಾಗಿರುವ ಹೆಚ್ಚು ಪರಿಣಾಮಕಾರಿ ಲಸಿಕೆ ನಮ್ಮಲ್ಲಿವೆ. ದಕ್ಷಿಣ ಆಫ್ರಿಕಾದಿಂದ ಲಭಿಸಿರುವ ಪ್ರಾಥಮಿಕ ವರದಿಯು ಈ ಪರಿಣಾಮತ್ವ ನಷ್ಟವಾಗುವುದನ್ನು ಸೂಚಿಸುವುದಿಲ್ಲ . ಆದರೆ, ಕೊರೋನ ಸೋಂಕಿನ ಪ್ರಬಲ ತಳಿಯಾಗಿ ಡೆಲ್ಟಾದ ಸ್ಥಾನವನ್ನು ಒಮೈಕ್ರಾನ್ ಆಕ್ರಮಿಸಿಕೊಳ್ಳಬಹುದು. ಹಿಂದಿನ ರೂಪಾಂತರಿಗಳಿಗಿಂತ, ಒಮೈಕ್ರಾನ್‌ನೊಂದಿಗೆ ಮರುಸೋಂಕಿನ ಪ್ರಕರಣ ಹೆಚ್ಚು ಸಾಮಾನ್ಯವಾಗಿದೆ ಎಂದವರು ಹೇಳಿದ್ದಾರೆ.

ಒಮೈಕ್ರಾನ್ ರೂಪಾಂತರ ಡೆಲ್ಟಾ ಪ್ರಬೇಧದಷ್ಟು ತೀವ್ರವಾಗಿಲ್ಲ ಎಂಬುದು ಪ್ರಾಥಮಿಕ ಮಾಹಿತಿಗಳಿಂದ ಬಹುತೇಕ ಖಚಿತವಾಗಿದೆ. ದಕ್ಷಿಣ ಆಫ್ರಿಕಾದ ಪರಿಸ್ಥಿತಿಯನ್ನು ಗಮನಿಸಿದಾಗ, ಸೊಂಕಿನ ಪ್ರಮಾಣ ಮತ್ತು ಆಸ್ಪತ್ರೆಗಳಿಗೆ ದಾಖಲಾದವರ ಪ್ರಮಾಣದ ಅನುಪಾತ ಡೆಲ್ಟಾಕ್ಕಿಂತ ಕಡಿಮೆಯಾಗಿದೆ. ಒಮೈಕ್ರಾನ್ ಸೋಂಕು ಡೆಲ್ಟಾಗಿಂತ ಕಡಿಮೆ ತೀವ್ರತೆ ಹೊಂದಿರಬಹುದು ಎಂದೂ ಕೆಲವು ವರದಿ ಹೇಳಿವೆ. ಆದರೆ ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚು ವೇಗವಾಗಿ ಹರಡಬಹುದು ಎಂದು ಅಮೆರಿಕ ಅಧ್ಯಕ್ಷ ಬೈಡನ್‌ರ ಮುಖ್ಯ ವೈದ್ಯಕೀಯ ಸಲಹೆಗಾರ ಆ್ಯಂಟನು ಫೌಸಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News