‘ಮನಿ ಹೈಸ್ಟ್’ ಭಾವೋನ್ಮಾದಗಳ ರಸಪಾಕ

Update: 2021-12-09 07:17 GMT

ಮಹಾಭಾರತದ 18 ದಿನಗಳ ಕುರುಕ್ಷೇತ್ರ ಯುದ್ಧ ನಡೆಯುವುದು ಕೇವಲ ಆಯುಧಗಳಿಂದಲ್ಲ. ಅಲ್ಲಿ ಭಾವನೆಗಳನ್ನೂ ಆಯುಧಗಳನ್ನಾಗಿ ಬಳಸಲಾಗುತ್ತದೆ. ತಾಯಿಯ ಮಮತೆ, ತಂದೆಯ ದೌರ್ಬಲ್ಯ, ಪ್ರತಿನಾಯಕನ ಪ್ರತಿಷ್ಠೆ....ಹೀಗೆ ಭಾವನೆಗಳನ್ನು ಮುಂದಿಟ್ಟು ನಡೆದ ಸಂಘರ್ಷ ಅದು. ನೆಟ್‌ಫ್ಲಿಕ್ಸ್‌ನ ‘ಮನಿ ಹೈಸ್ಟ್’ ಕೊನೆಗೂ ಮುಗಿದಾಗ ನಾವು ಇಂತಹದೇ ಭಾವನೆಗಳ ಸುಳಿಗಳಲ್ಲಿ ಸಿಕ್ಕಿಕೊಂಡು ಬಿಡಿಸಿಕೊಳ್ಳಲಾಗದೆ ಒದ್ದಾಡುತ್ತಿರುತ್ತೇವೆ. ಒಂದೆಡೆ ದೇಶಕ್ಕಾಗಿ ಅಥವಾ ಪ್ರಭುತ್ವದ ಪರವಾಗಿ ಹೋರಾಟ ನಡೆಸುವ ಯೋಧರಾದರೆ, ಇನ್ನೊಂದೆಡೆ ಪ್ರಭುತ್ವಕ್ಕೆ ಸವಾಲು ಹಾಕುವ ದರೋಡೆಕೋರರು. ಒಂದು ದರೋಡೆ ಅಂತಿಮವಾಗಿ ಒಂದು ‘ಯುದ್ಧ’ವಾಗಿ ಪರಿವರ್ತನೆಗೊಳ್ಳುತ್ತದೆ. ತಂತ್ರ, ಪ್ರತಿತಂತ್ರಗಳ ನಡುವೆ ನಾವು ನಮಗೇ ತಿಳಿಯದಂತೆ ದರೋಡೆಕೋರರ ಪರವಾಗಿ ಸ್ಪಂದಿಸಲು ಆರಂಭಿಸುತ್ತೇವೆ. ದರೋಡೆಯ ಸೂತ್ರಧಾರ ‘ಪ್ರೊಫೆಸರ್’ನ ಹೃದಯವಂತಿಕೆ, ಆತನ ಬದ್ಧತೆ, ಆತನ ಧೈರ್ಯ, ಮಾನವ ಹಕ್ಕುಗಳ ಕುರಿತ ಆತನ ಕಾಳಜಿ, ದರೋಡೆ ತಂಡದ ಪ್ರತಿ ಪಾತ್ರಗಳ ಪೋಷಣೆ ದರೋಡೆಯೊಂದಕ್ಕೆ ಬೇರೆಯದೇ ಆದ ಮಗ್ಗುಲೊಂದನ್ನು ಕೊಡುತ್ತದೆ. ಟೋಕ್ಯೋ ಸಾವಿನೊಂದಿಗೆ ಕಳೆದ ಸರಣಿ ಮುಗಿದರೆ, ಕೊನೆಯ ಅಧ್ಯಾಯದಲ್ಲಿ ಮಾಜಿ ಇನ್‌ಸ್ಪೆಕ್ಟರ್ ಅಲಿಶಿಯ ಸಿಯರಾ ಪಾತ್ರ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಒಂದು ಕೈಯಲ್ಲಿ ಆಗಷ್ಟೇ ಹುಟ್ಟಿದ ತನ್ನ ಕೂಸು ಮತ್ತು ಇನ್ನೊಂದು ಕೈಯಲ್ಲಿ ಪಿಸ್ತೂಲ್ ಹಿಡಿದ ಸಿಯರಾ ಒಳಗೆ ನಂಬಿಕೆಯನ್ನು ಬಿತ್ತುವ ಪ್ರಯತ್ನದಲ್ಲಿ ಪ್ರೊಫೆಸರ್ ಯಶಸ್ವಿಯಾಗುವುದರೊಂದಿಗೆ ದರೋಡೆಯ ತಂಡಕ್ಕೆ ಇನ್ನೊಬ್ಬ ಪೊಲೀಸ್ ಇನ್‌ಸ್ಪೆಕ್ಟರ್‌ನ ಸಹಾಯ ಸಿಗುತ್ತದೆ. ಸೇನೆಯ ಸರ್ಪಗಾವಲಿನಿಂದ ಚಿನ್ನವನ್ನು ಸಾಗಿಸುವ ಪ್ರಯತ್ನ ವಿಫಲವಾಗುವುದು ಮತ್ತು ವೈಫಲ್ಯವನ್ನೇ ಪ್ರತಿತಂತ್ರವಾಗಿ ಬಳಸಿ ಗೆಲ್ಲುವ ಪ್ರೊಫೆಸರ್‌ನ ಪ್ರಯತ್ನ ಇಲ್ಲೂ ಮುಂದುವರಿಯುತ್ತದೆ. ಟೋಕ್ಯೋ ಈ ಸರಣಿಯಲ್ಲಿ ಇಲ್ಲದೇ ಇದ್ದರೂ ಎಲ್ಲರೊಳಗೂ ಆಕೆ ಆವರಿಸಿಕೊಂಡು ಬಿಟ್ಟಿರುತ್ತಾಳೆ. ಆಕೆಯ ನೆನಪುಗಳ ಜೊತೆಗೇ ಸಹ ಗೆಳೆಯರ ಹೋರಾಟ ಮುಂದುವರಿಯುತ್ತದೆ. ಕಳೆದ ಸರಣಿಯಲ್ಲಿ ಟೋಕ್ಯೋ ಆತ್ಮಾಹುತಿಯ ಮೂಲಕ ಗಾಂಡಿಯಾ ಮತ್ತು ಆತನ ಬಳಗವನ್ನು ಚಿಂದಿ ಉಡಾಯಿಸಿ ತಾನೂ ಸಾಯುತ್ತಾಳೆ. ಟೋಕ್ಯೋ ಇಲ್ಲದ ಸರಣಿಯ ಕುರಿತಂತೆ ‘ಮನಿ ಹೈಸ್ಟ್’ ಅಭಿಮಾನಿಗಳಿಗೆ ಆತಂಕವಿತ್ತು. ಆಕೆಯ ನಿಷ್ಠೆ, ಹಠಮಾರಿತನ, ಪ್ರಬುದ್ಧತೆ ಇಡೀ ದರೋಡೆ ತಂಡಕ್ಕೆ ಬಹುದೊಡ್ಡ ಮಾರ್ಗದರ್ಶಿಯಾಗಿತ್ತು. ಟೋಕ್ಯೋ ಸತ್ತರೂ ಇಡೀ ಕತೆಯನ್ನು ಆಕೆಯ ಧ್ವನಿಯ ಮೂಲಕವೇ ನಿರೂಪಿಸಲಾಗಿರುವುದು ಇದೇ ಕಾರಣಕ್ಕಿರಬೇಕು. ತನ್ನ ಸೇನಾಪಡೆಗಳನ್ನು ಮುನ್ನಡೆಸುವ ತಮಯೋ, ದರೋಡೆಕೋರರನ್ನು ಬಗ್ಗುಬಡಿಯುವ ಸಂದರ್ಭದಲ್ಲಿ ಯಾವ ಮಾನವ ಹಕ್ಕುಗಳ ಬಗ್ಗೆಯೂ ಚಿಂತಿಸುವುದಿಲ್ಲ. ಪ್ರಭುತ್ವದ ಹಿತ ಕಾಯುವುದು ಆತನಿಗೆ ಅನಿವಾರ್ಯವಾಗುವುದರಿಂದ, ಆತನ ಕ್ರೌರ್ಯ ಅಲ್ಲಿ ಸಹಜವೆನಿಸುತ್ತದೆ. ಆದರೆ ಹೆಚ್ಚು ಕೆರಳಿದಂತೆಯೇ ಪ್ರೊಫೆಸರ್ ಮತ್ತು ಆತನ ತಂಡ ಹೆಚ್ಚು ಹೆಚ್ಚು ಮಾನವೀಯವಾಗಿ ಕಾಣಿಸತೊಡಗುತ್ತಾರೆ. ತುಂಬು ಗರ್ಭಿಣಿಯಾಗಿದ್ದರೂ ಕ್ರೌರ್ಯವೇ ಮೈವೆತ್ತಂತಿದ್ದ, ಪ್ರಭುತ್ವದ ಪರವಾಗಿ ಎಂತಹ ಹಿಂಸೆಗೂ ಹೇಸದ ಅಲಿಶಿಯಾ ಸಿಯರಾ ಅವರ ಕರ್ತವ್ಯಪರತೆಯನ್ನು ತಮಯೋ ನಿರ್ಲಕ್ಷಿಸಿ, ಬಳಿಕ ಅದಕ್ಕಾಗಿ ಭಾರೀ ಬೆಲೆಯನ್ನು ತೆರಬೇಕಾಗುತ್ತದೆ. ಈ ಸರಣಿ ಪ್ರೊಫೆಸರ್ ಮತ್ತು ಸಿಯರಾ ಅವರನ್ನು ಕೇಂದ್ರೀಕರಿಸಲಾಗಿದೆ. ಅವರಿಬ್ಬರ ನಡುವಿನ ಸಂಘರ್ಷ ಹೇಗೆ ನಿಧಾನಕ್ಕೆ ಮೈತ್ರಿಯ ರೂಪ ಪಡೆಯುತ್ತದೆ ಎನ್ನುವುದು ಅತ್ಯಂತ ರೋಮಾಂಚಕಾರಿಯಾಗಿದೆ. ಬರ್ಲಿನ್ ಪಾತ್ರ ಕೊನೆಯ ಸರಣಿಯಲ್ಲೂ ಮುಂಚೂಣಿಯಲ್ಲೇ ಇರುತ್ತದೆ. ಡೆನ್ವರ್ ಮತ್ತು ಸ್ಟಾಕ್‌ಹೋಮ್ ನಡುವಿನ ಬಿರುಕು ಮತ್ತು ಪ್ರೇಮ ಈ ಸರಣಿಯಲ್ಲಿ ಹೃದಯ ಸ್ಪರ್ಶಿಯಾಗಿ ಮೂಡಿದೆ. ಒರಟ ಮತ್ತು ವಿಕ್ಷಿಪ್ತ ಡೆನ್ವರ್‌ನ ಒಳಗಿನ ಮಗು ಮನಸ್ಸು ಇಲ್ಲೂ ಗಾಢವಾಗಿ ತಟ್ಟುತ್ತದೆ. ಟೋಕ್ಯೋ ಸಾವಿನ ಸೇಡನ್ನು ತೀರಿಸಲಾಗದೆ ಒದ್ದಾಡುವ ಆಲ್ವಾರೋ ಮೋರ್ಟ್‌ನ ಸಂಘರ್ಷವನ್ನು ಪರಿಣಾಮಕಾರಿಯಾಗಿ ತೋರಿಸುತ್ತಾರೆ. ಬರ್ಲಿನ್‌ನ ಮಗ ಮತ್ತು ಬರ್ಲಿನ್ ಪ್ರಿಯತಮೆಯ ಪಾತ್ರ ಇಡೀ ದರೋಡೆಗೆ ಇನ್ನೊಂದು ತಿರುವನ್ನು ನೀಡುತ್ತದೆ. ಮನಿ ಹೈಸ್ಟ್ ಕೊನೆಯಾಗುವಾಗ ಇದೊಂದು ದರೋಡೆಯ ಕತೆ ಮಾತ್ರ ಅಲ್ಲ ಎನ್ನುವುದು ನಮಗೆ ಸ್ಪಷ್ಟವಾಗುತ್ತದೆ. ಹಲವು ಪಾತ್ರಗಳ ಭಾವೋನ್ಮಾದಗಳ ಸಂಗಮವಿದು. ಅದಕ್ಕಾಗಿ ಮನಿಹೈಸ್ಟ್ ಪಾತ್ರಗಳನ್ನು ಮಹಾಭಾರತದ ಹಲವು ಪಾತ್ರಗಳ ಜೊತೆಗೆ ತಳಕು ಹಾಕಬಹುದು. ಟೋಕ್ಯೋ ಸಾವನ್ನು ಎದುರಾಳಿ ಕಮಾಂಡೋ ಮುಖ್ಯಸ್ಥ ಹೀಗೆಂದು ಬಣ್ಣಿಸುತ್ತಾನೆ ‘‘ಆಕೆಯೇನಾದರೂ ನಮ್ಮ ಬಣದಲ್ಲಿದ್ದಿದ್ದರೆ ಧೈರ್ಯವೇ ಮೈವೆತ್ತ ಶ್ರೇಷ್ಠ ಯೋಧಳಾಗುತ್ತಿದ್ದಳು’’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ