ಪ್ರತಿಭಟನೆ ಅಂತ್ಯ: ದಿಲ್ಲಿ ಗಡಿಗಳಲ್ಲಿಯ ಟೆಂಟ್ ಗಳನ್ನು ತೆಗೆಯುತ್ತಿರುವ ರೈತರು

Update: 2021-12-09 17:04 GMT
photo:PTI

ಹೊಸದಿಲ್ಲಿ,ಡಿ.9: ಕನಿಷ್ಠ ಬೆಂಬಲ ಬೆಲೆಗಳಿಗೆ ಕಾನೂನಿನ ಖಾತರಿ ಸೇರಿದಂತೆ ತಮ್ಮ ಉಳಿದ ಬೇಡಿಕೆಗಳನ್ನು ಸರಕಾರವು ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ತಮ್ಮ 15 ತಿಂಗಳ ಪ್ರತಿಭಟನೆಯನ್ನು ರೈತರು ಗುರುವಾರ ಅಂತ್ಯಗೊಳಿಸಿದ್ದಾರೆ. ದಿಲ್ಲಿಯ ಗಡಿಗಳಲ್ಲಿ ಮೊಕ್ಕಾಂ ಹೂಡಿದ್ದ ರೈತರು ಶನಿವಾರ ತಮ್ಮ ಸ್ವಗ್ರಾಮಗಳಿಗೆ ಮರಳುವುದಾಗಿ ಹೇಳಿದ್ದಾರೆ.

ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ ಮೋರ್ಚಾ (ಎಸ್‌ಕೆಎಂ) ಡಿ.15ರಂದು ಪುನರ್ಪರಿಶೀಲನಾ ಸಭೆಯೊಂದನ್ನು ನಡೆಸಲಿದೆ. ಗುರುವಾರ ಸಂಜೆ ‘ಫತೇ ಅರ್ದಾಸ್(ವಿಜಯದ ಪ್ರಾರ್ಥನೆ)’ನೊಂದಿಗೆ ತಮ್ಮ ಯಶಸ್ಸನ್ನು ಆಚರಿಸಿದ ರೈತರು ಡಿ.11ರಂದು ಬೆಳಿಗ್ಗೆ ಸಿಂಘು ಮತ್ತು ತಿಕ್ರಿ ಪ್ರತಿಭಟನಾ ತಾಣಗಳಲ್ಲಿ ‘ಫತೇ ಮಾರ್ಚ್(ವಿಜಯದ ಮೆರವಣಿಗೆ)’ನ್ನು ನಡೆಸಲಿದ್ದಾರೆ. ಪಂಜಾಬಿನ ರೈತ ನಾಯಕರು ಡಿ.13ರಂದು ಅಮೃತಸರದ ಸುವರ್ಣ ಮಂದಿರದಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸಲು ಯೋಜಿಸಿದ್ದಾರೆ.

ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನವಾಗಿದ್ದ ನ.29ರಂದು ವಿಧ್ಯುಕ್ತವಾಗಿ ಹಿಂದೆಗೆದುಕೊಳ್ಳಲಾಗಿತ್ತು. ಆದರೆ ತಮ್ಮ ಇತರ ಬೇಡಿಕೆಗಳು ಈಡೇರುವವರೆಗೆ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ರೈತರು ಪಟ್ಟು ಹಿಡಿದಿದ್ದರು.

ಕಾನೂನುಬದ್ಧ ಎಂಎಸ್‌ಪಿ,ರೈತರ ವಿರುದ್ಧದ ಪ್ರಕರಣಗಳ ವಾಪಸಾತಿ,ಪ್ರತಿಭಟನೆ ಸಂದರ್ಭದಲ್ಲಿ ಮೃತಪಟ್ಟ 700ಕ್ಕೂ ಅಧಿಕ ರೈತರ ಕುಟುಂಬಗಳಿಗೆ ಪರಿಹಾರ ನೀಡಿಕೆ ಸೇರಿದಂತೆ ಉಳಿದ ಬೇಡಿಕೆಗಳನ್ನೂ ಸರಕಾರವು ಒಪ್ಪಿಕೊಂಡಿದ್ದು,ಈ ಬಗ್ಗೆ ವಿಧ್ಯುಕ್ತ ಪತ್ರವು ಗುರುವಾರ ಬೆಳಿಗ್ಗೆ ರೈತರ ಕೈಸೇರಿದೆ.

ವಿದ್ಯುತ್ ತಿದ್ದುಪಡಿ ಮಸೂದೆಯನ್ನೂ ಸರಕಾರವು ಎಸ್ಕೆಎಂ ಜೊತೆ ಚರ್ಚಿಸಿದ ಬಳಿಕ ಸಂಸತ್ತಿನಲ್ಲಿ ಮಂಡಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News