ಒಮೈಕ್ರಾನ್: ಮರುಸೋಂಕಿನ ಅಪಾಯ ಹೆಚ್ಚು, ಆದರೆ ಡೆಲ್ಟಾಗಿಂತ ಕಡಿಮೆ ತೀವ್ರತೆ; ವಿಶ್ವ ಆರೋಗ್ಯ ಸಂಸ್ಥೆ

Update: 2021-12-09 17:14 GMT
ಸಾಂದರ್ಭಿಕ ಚಿತ್ರ

ಜಿನೇವಾ, ಡಿ.9: ಕೊರೋನ ವೈರಸ್ ನ ಒಮೈಕ್ರಾನ್ ಪ್ರಬೇಧದಿಂದ ಮರು ಸೋಂಕಿನ ಅಪಾಯ ಹೆಚ್ಚಿದೆ. ಆದರೆ ಡೆಲ್ಟಾ ಪ್ರಬೇಧಕ್ಕಿಂತ ಒಮೈಕ್ರಾನ್ ಸೋಂಕಿನ ತೀವ್ರತೆಯ ಪ್ರಮಾಣ ಕಡಿಮೆಯಾಗಿರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಗೆಬ್ರೆಯೇಸಸ್ ಹೇಳಿದ್ದಾರೆ.

ಆದರೆ ಒಮೈಕ್ರಾನ್ ಕುರಿತು ನಿಖರವಾದ ತೀರ್ಮಾನ ಕೈಗೊಳ್ಳಲು ಇನ್ನಷ್ಟು ಅಂಕಿಅಂಶ, ಮಾಹಿತಿಯ ಅಗತ್ಯವಿದೆ. ಒಮೈಕ್ರಾನ್ ಬಗ್ಗೆ ನಿರಾತಂಕದ ಭಾವನೆ ಬೇಡ ಎಂದವರು ಜನತೆಗೆ ಸಲಹೆ ನೀಡಿದರು. ಸಾಯದೆ ಉಳಿದವರು ದೀರ್ಘಾವಧಿಯ ಕೋವಿಡ್ ಅಥವಾ ಕೋವಿಡ್ ನಂತರದ ಸ್ಥಿತಿಯೊಂದಿಗೆ ಹೋರಾಡುವ ಪರಿಸ್ಥಿತಿಯಿದೆ. ನಿತ್ರಾಣಗೊಳಿಸುವ, ದೀರ್ಘಾವಧಿ ಉಳಿದುಕೊಳ್ಳುವ ಕೊರೋನ ಸೋಂಕಿನ ಬಗ್ಗೆ ಈಗಷ್ಟೇ ನಾವು ಅರಿತುಕೊಳ್ಳಲು ಆರಂಭಿಸಿದ್ದೇವೆ ಎಂದು ಸುದ್ಧಿಗೋಷ್ಟಿಯಲ್ಲಿ ಹೇಳಿದರು.

ಲಸಿಕೆ ವ್ಯಾಪ್ತಿಯನ್ನು ವಿಸ್ತರಿಸಲು, ಸೋಂಕಿನ ಅಪಾಯದಲ್ಲಿರುವ ನಾಗರಿಕರಿಗೆ ಲಸಿಕೆ ನೀಡುವುದಕ್ಕೆ ಹೆಚ್ಚಿನ ಆದ್ಯತೆ ನೀಡಲು ಮತ್ತು ನಿಗಾ ಪ್ರಕ್ರಿಯೆ ಹೆಚ್ಚಿಸುವಂತೆ, ಜಿನೋಮ್ ಅನುಕ್ರಮ ಪ್ರಯತ್ನವನ್ನು ಹೆಚ್ಚಿಸುವಂತೆ ಮತ್ತು ಜಾಗತಿಕ ಸಮುದಾಯದೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳುವಂತೆ ಒತ್ತಾಯಿಸಿದರು. ಕಳೆದ ತಿಂಗಳು ಒಮೈಕ್ರಾನ್ ಪತ್ತೆಯಾದ ಬಳಿಕ ಆಫ್ರಿಕಾ ದೇಶದ ಮೇಲೆ ಹಲವಾರು ರಾಷ್ಟ್ರೀಯ ಸರಕಾರಗಳು ವಿಧಿಸಿರುವ ತಾರತಮ್ಯದ ಮತ್ತು ನಿಷ್ಪರಿಣಾಮಕಾರಿ ಪ್ರಯಾಣ ನಿಷೇಧಗಳ ಬಗ್ಗೆ ಮರು ನಿರ್ಧಾರ ಕೈಗೊಳ್ಳಬೇಕಿದೆ. ಫ್ರಾನ್ಸ್ ಮತ್ತು ಸ್ವಿಝರ್ಲ್ಯಾಂಡ್ ದೇಶಗಳು ಆಫ್ರಿಕಾ ದೇಶಗಳ ಮೇಲಿನ ಪ್ರಯಾಣ ನಿಷೇಧ ರದ್ದುಗೊಳಿಸಿರುವುದು ಸಮಾಧಾನ ತಂದಿದೆ. ಇತರ ದೇಶಗಳೂ ಈ ಮಾದರಿಯನ್ನು ಅನುಸರಿಸಬೇಕು ಎಂದವರು ಒತ್ತಾಯಿಸಿದರು.

ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದ ವಿಶ್ವ ಆರೋಗ್ಯ ಸಂಸ್ಥೆಯ ತುರ್ತುಕಾರ್ಯಕ್ರಮ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಮಿಚಾಯಿಲ್ ರಿಯಾನ್ ಮಾತನಾಡಿ, ಡೆಲ್ಟಾ ರೂಪಾಂತರಕ್ಕಿಂತ ಬಹುಷಃ ಒಮೈಕ್ರಾನ್ ರೂಪಾಂತರ ಹೆಚ್ಚು ವೇಗವಾಗಿ ಹರಡುತ್ತಿದೆ ಎಂದು ಇದುವರೆಗಿನ ಅಂಕಿಅಂಶಗಳು ಹಾಗೂ ಮಾಹಿತಿಗಳಿಂದ ತಿಳಿದುಬಂದಿದೆ. ಇದರರ್ಥ ಸೋಂಕಿಗೆ ತಡೆ ಸಾಧ್ಯವಿಲ್ಲ. ಆದ್ದರಿಂದ ಪ್ರಸರಣದ ಸರಪಳಿಯನ್ನು ತುಂಡರಿಸಲು ನಮ್ಮ ಪ್ರಯತ್ನಗಳನ್ನು ಮಾಡಬೇಕಿದೆ ಎಂದರು.


ಕೊರೋನ ಬಳಿಕದ ಆರೋಗ್ಯ ಸಮಸ್ಯೆ 4 ವಾರ ಅಥವಾ ಹೆಚ್ಚಿನ ಸಮಯ ಮುಂದುವರಿದರೆ ಅದನ್ನು ದೀರ್ಘಾವಧಿಯ ಕೋವಿಡ್ ಎಂದು ಪರಿಗಣಿಸಲಾಗುತ್ತದೆ ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News