ನಾಸಿಕ್: ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ 7 ಅರ್ಚಕರ ಬಂಧನ; ವಾಹನದಿಂದ ಆಯುಧಗಳು ವಶ

Update: 2021-12-09 18:19 GMT

ಮುಂಬೈ, ಡಿ. 9: ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ನಾಸಿಕ್‌ನಿಂದ ಇತ್ತೀಚೆಗೆ 7 ಮಂದಿ ಅರ್ಚಕರನ್ನು ಬಂಧಿಸಲಾಗಿದೆ. ಅವರು ಬುಧವಾರ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದಾರೆ. ಶಸ್ತ್ರಾಸ್ತ್ರ ಕಾಯ್ದೆ ಅಡಿ ಬಂಧಿತರಾಗಿದ್ದ ಆರೋಪಿಗಳನ್ನು ವಿರೇಂದ್ರ ತ್ರಿವೇದಿ, ಆಶಿಷ್ ತ್ರಿವೇದಿ, ಮನೀಶ್ ತ್ರಿವೇದಿ, ಸುನೀಲ್ ತಿವಾರಿ, ಆಕಾಶ್ ತ್ರಿಪಾಠಿ, ಅನಿಕೇತ್ ತಿವಾರಿ ಹಾಗೂ ಸಚಿನ್ ಪಾಂಡೆ ಎಂದು ಗುರುತಿಸಲಾಗಿದೆ. 

ಇಲ್ಲಿನ ತ್ರಯಂಬಕೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನಡೆಸುವ ಕುರಿತಂತೆ ಅರ್ಚಕರು ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದರು. ಗಸ್ತು ನಡೆಸುತ್ತಿದ್ದ ಪೊಲೀಸರು ಆಗಮಿಸಿ ಮಧ್ಯೆ ಪ್ರವೇಶಿಸಿದ ಬಳಿಕ ಅವರು ಜಗಳ ನಿಲ್ಲಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಅರ್ಚಕರ ವಾಹನಗಳಲ್ಲಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ ಸಂದರ್ಭ ದೇಶೀ ನಿರ್ಮಿತ ಪಿಸ್ತೂಲು , 11 ಸಜೀವ ಗುಂಡುಗಳು, ಕತ್ತಿ, ಚೂರಿಯಂತಹ ಹರಿತವಾದ ಆಯುಧಗಳು ಹಾಗೂ ಹಾಕಿ ಸ್ಟಿಕ್‌ಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ 7 ಮಂದಿಯನ್ನು ಬಂಧಿಸಲಾಗಿತ್ತು. 

ತ್ರಯಂಬಕೇಶ್ವರ ದೇವಾಲಯದ ವಿಶೇಷ ಪೂಜೆಗೆ ದೇಶಾದ್ಯಂತದಿಂದ ಭಕ್ತರು ಆಗಮಿಸುತ್ತಾರೆ. ನಾಸಿಕ್ ನಗರದ ಪಂಚವಟಿ ಪೊಲೀಸ್ ಠಾಣಾ ವ್ಯಾಪ್ತಿಯ ಹಿರಾವಾಡಿ ರಸ್ತೆಯಲ್ಲಿ ರವಿವಾರ ಸುಮಾರು ರಾತ್ರಿ 8 ಗಂಟೆಗೆ ಈ ಘಟನೆ ನಡೆದಿದೆ. ಈ ಬಗ್ಗೆ ಸ್ಥಳೀಯರು ಗಸ್ತು ನಡೆಸುತ್ತಿದ್ದ ಪೊಲೀಸರಿಗೆ ಮಾಹಿತಿ ನೀಡಿದ್ದರು. 

‘‘ಮಧ್ಯಪ್ರದೇಶದ ಈ ಪುರೋಹಿತರಿಗೆ ಪರಸ್ಪರ ಪರಿಚಯವಿದೆ. ಅವರು ಹಿರಾವಾಡಿಯ ತಮ್ಮ ಸ್ವಂತ ಭೂಮಿಯಲ್ಲಿ ವಾಸಿಸುತ್ತಿದ್ದಾರೆ. ವೃತ್ತಿ ಮಾತ್ಸರ್ಯದ ಹಿನ್ನೆಲೆಯಲ್ಲಿ ಈ ಹೊಡೆದಾಟ ನಡೆದಿದೆ. ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಸಿದ್ದೆವು ಹಾಗೂ ದಂಡಾಧಿಕಾರಿಯವರ ಮುಂದೆ ಹಾಜರುಪಡಿಸಿ ಅವರನ್ನು ಮೂರು ದಿನಗಳ ಕಾಲ ಕಸ್ಟಡಿಗೆ ಕೋರಿದ್ದೆವು’’ ಎಂದು ತನಿಖಾಧಿಕಾರಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸುನೀಲ್ ಕಸರಾಲೆ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News