ವಿಚಾರಣೆ ಇಲ್ಲದೆ 40 ವರ್ಷ ಜೈಲಿನಲ್ಲಿ ಕಳೆದ ನೇಪಾಳಿ ಪ್ರಜೆ: 5 ಲಕ್ಷ ರೂ. ಪರಿಹಾರ ನೀಡುವಂತೆ ಸರಕಾರಕ್ಕೆ ಹೈಕೋರ್ಟ್

Update: 2021-12-09 19:30 GMT

ಹೊಸದಿಲ್ಲಿ, ಡಿ. 9: ಯಾವುದೇ ವಿಚಾರಣೆ ಇಲ್ಲದೆ ಭಾರತದ ಕಾರಾಗೃಹದಲ್ಲಿ 41 ವರ್ಷ ಕಳೆದ ಹಾಗೂ ಈ ವರ್ಷ ಮಾರ್ಚ್ನಲ್ಲಿ ಬಿಡುಗಡೆಯಾದ ನೇಪಾಳಿ ವ್ಯಕ್ತಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕೋಲ್ಕತ್ತಾ ಉಚ್ಚ ನ್ಯಾಯಾಲಯ ಮಂಗಳವಾರ ಪಶ್ಚಿಮಬಂಗಾಳ ಸರಕಾರಕ್ಕೆ ಆದೇಶಿಸಿದೆ. 

ಹತ್ಯೆ ಆರೋಪದಲ್ಲಿ 1980 ಮೇಯಲ್ಲಿ ಪಶ್ಚಿಮಬಂಗಾಳದ ಡಾರ್ಜಿಲಿಂಗ್ನಲ್ಲಿ ಬಂಧಿತರಾಗಿರುವ ನೇಪಾಳಿ ವ್ಯಕ್ತಿ ದೀಪಕ್ ಜೈಶಿ ವಿಚಾರಣೆ ಇಲ್ಲದೆ ಕಾರಾಗೃಹದಲ್ಲಿ ಕಳೆಯುತ್ತಿರುವ ಕುರಿತ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಶ್ರೀವಾತ್ಸವ ಹಾಗೂ ನ್ಯಾಯಮೂರ್ತಿ ರಾಜಶ್ರೀ ಭಾರದ್ವಾಜ್ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಿತು. 

ಜೈಶಿಯನ್ನು ಬಂಧಿಸಿದ ಅನಂತರ ವಿಚಾರಣೆಗೆ ಅನರ್ಹ ಎಂದು ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಡಮ್ಡಮ್ ಕೇಂದ್ರ ಸುಧಾರಣಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿ ಇರಿಸಲಾಗಿತ್ತು. ಅಲ್ಲದೆ, ಅವರ ಮಾನಸಿಕ ಸ್ಥಿತಿ ಕುರಿತ ವರದಿಗಾಗಿ ಕಾಯಲಾಗುತ್ತಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ವರದಿ ಸಲ್ಲಿಸಿರಲಿಲ್ಲ. ಜೈಶಿ ಕುರಿತಾದ ಪತ್ರಿಕಾ ವರದಿಯನ್ನು ಉಚ್ಚ ನ್ಯಾಯಾಲಯದ ಆಗಿನ ಮುಖ್ಯ ನ್ಯಾಯಮೂರ್ತಿ ಗಮನಕ್ಕೆ ತರುವ ವರೆಗೆ ಅವರು ಜೈಲಿನಲ್ಲಿಯೇ ಇದ್ದರು. 

ಅನಂತರ ಅವರ ಬಿಡುಗಡೆಗೆ ಅರ್ಜಿ ಸಲ್ಲಿಸುವಂತೆ ವಕೀಲರಿಗೆ ನ್ಯಾಯಾಲಯ ಆದೇಶಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ ಬಳಿಕ ಆಗಿನ ಮುಖ್ಯನ್ಯಾಯಮೂರ್ತಿ ಟಿ.ಬಿ.ಎನ್. ರಾಧಾಕೃಷ್ಣನ್, ನ್ಯಾಯಮೂರ್ತಿಗಳಾದ ಅನಿರುದ್ಧ ರಾಯ್ ಅವರನ್ನು ಒಳಗೊಂಡ ಪೀಠ ಈ ವರ್ಷ ಮಾರ್ಚ್ 17ರಂದು ಅವರನ್ನು ಬಿಡುಗಡೆಗೊಳಿಸಲು ಕ್ರಿಮಿನಲ್ ಕಾರ್ಯ ವಿಧಾನ ಸಂಹಿತೆಯ ಸೆಕ್ಷನ್ 482 ಹಾಗೂ ಭಾರತೀಯ ಸಂವಿಧಾನದ 226 ಹಾಗೂ 227 ವಿಧಿಯ ಅನ್ವಯ ಉಚ್ಚ ನ್ಯಾಯಾಲಯಕ್ಕಿರುವ ಅಧಿಕಾರವನ್ನು ಉಲ್ಲೇಖಿಸಿತು. ಬಿಡುಗಡೆಯಾಗುವಾಗ ಜೈಶಿಗೆ 70 ವರ್ಷ ವಯಸ್ಸು. ಅವರನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. 

ಅವರ ಬಿಡುಗಡೆ ಹಿನ್ನೆಲೆಯಲ್ಲಿ ಕೋಲ್ಕತ್ತಾ ಉಚ್ಚ ನ್ಯಾಯಾಲಯ ಮಾರ್ಚ್ 22ರಂದು ಅವರಿಗೆ ಪರಿಹಾರ ನೀಡುವುದಕ್ಕೆ ಸಂಬಂಧಿಸಿ ರಾಜ್ಯ ಸರಕಾರದ ಪ್ರತಿಕ್ರಿಯೆ ಕೋರಿತ್ತು. ಮಂಗಳವಾರ ಪ್ರಕರಣದ ವಿಚಾರಣೆಯ ಸಂದರ್ಭ ಉಚ್ಚ ನ್ಯಾಯಾಲಯದ ನ್ಯಾಯವಾದಿ ಕೈದಿಗಳಿಗೆ ಪಶ್ಚಿಮಬಂಗಾಳ ಸುಧಾರಣಾ ಸೇವೆಗಳು (ಅಸ್ವಾಭಾವಿಕ ಸಾವಿಗೆ ಪರಿಹಾರ) ಯೋಜನೆ ಬಗ್ಗೆ ಗಮನ ಸೆಳೆದರು. ಈ ಯೋಜನೆ ಅಡಿಯಲ್ಲಿ ಗರಿಷ್ಠ 5 ಲಕ್ಷ ರೂಪಾಯಿ ಪರಿಹಾರ ನೀಡಲು ಸಾಧ್ಯ ಎಂದು ಅವರು ಹೇಳಿದರು. ಈ ಸಲಹೆಯನ್ನು ರಾಜ್ಯ ಸರಕಾರದ ವಕೀಲರು ಒಪ್ಪಿಕೊಂಡರು. ಅಲ್ಲದೆ, ಪರಿಹಾರ ಧನವನ್ನು ನೇಪಾಳದಲ್ಲಿರುವ ರಾಯಭಾರಿ ಕಚೇರಿ ಮೂಲಕ ಜೈಶಿ ಖಾತೆಗೆ ಜಮಾ ಮಾಡಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News