ಮಂತ್ರಿ ಮಾಲ್‍ಗೆ ಹಾಕಿದ್ದ ಬೀಗ ತೆಗೆಯಲು ಬಿಬಿಎಂಪಿಗೆ ಹೈಕೋರ್ಟ್ ಆದೇಶ

Update: 2021-12-10 16:40 GMT

ಬೆಂಗಳೂರು, ಡಿ.10: ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಮಲ್ಲೇಶ್ವರಂನ ಮಂತ್ರಿಮಾಲ್‍ಗೆ ಹಾಕಿದ್ದ ಬೀಗ ಮುದ್ರೆ ತೆರೆಯಲು ಬಿಬಿಎಂಪಿಗೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. 

ಈ ಕುರಿತು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಆದೇಶ ಹೊರಡಿಸಿದೆ.

ತಕ್ಷಣವೇ ಬಿಬಿಎಂಪಿಗೆ 4 ಕೋಟಿ ರೂ.ಮೊತ್ತದ ಚೆಕ್ ನೀಡಬೇಕು ಹಾಗೂ ಡಿ.13ರ ಮಧ್ಯಾಹ್ನದೊಳಗೆ 2 ಕೋಟಿ ರೂ.ಡಿಡಿ ಪಾವತಿಸುವಂತೆ  ಅರ್ಜಿದಾರರಾದ ಹಮಾರಾ ಷೆಲ್ಟರ್ಸ್, ಅಭಿಷೇಕ್ ಪ್ರಾಪರ್ಟೀಸ್‍ಗೆ ಸೂಚನೆ ನೀಡಿದೆ.    

ಮಂತ್ರಿಮಾಲ್, ಬಿಬಿಎಂಪಿ ಎರಡೂ ನಿಯಮಗಳನ್ನು ಉಲ್ಲಂಘಿಸಿವೆ. ನಿಗದಿತ ಅವಧಿಯಲ್ಲಿ ಮಂತ್ರಿ ಮಾಲ್ ತೆರಿಗೆ ಪಾವತಿಸಿಲ್ಲ. ಮಾಲ್‍ಗೆ ಸೀಲ್ ಮಾಡಿ ಬಿಬಿಎಂಪಿಯೂ ನಿಯಮಾವಳಿ ಉಲ್ಲಂಘಿಸಿದೆ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿದೆ. ಈ ಪ್ರಕರಣದ ಕುರಿತು ಮತ್ತೆ ಡಿ.13ರಂದು ನ್ಯಾಯಪೀಠವು ವಿಚಾರಣೆ ನಡೆಸಲಿದೆ.

ಮಂತ್ರಿ ಮಾಲ್‍ನಲ್ಲಿ ಕೋಟ್ಯಂತರ ರೂ. ಮೌಲ್ಯದ ವಸ್ತುಗಳಿವೆ. ಕೊಳೆಯುವಂತಹ ವಸ್ತುಗಳು ಕೂಡ ಇವೆ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದರು. ಈ ಹಿನ್ನೆಲೆಯಲ್ಲಿ ಮಲ್ಲೇಶ್ವರದಲ್ಲಿರುವ ಮಂತ್ರಿ ಮಾಲ್ ಬೀಗಮುದ್ರೆ ತೆರೆಯಲು ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.

ಬೆಂಗಳೂರಿನ ಪ್ರತಿಷ್ಠಿತ ಮಂತ್ರಿ ಮಾಲ್ ಬಿಬಿಎಂಪಿಗೆ ಸುಮಾರು 27 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಡಿ. 6ರಂದು ಮತ್ತೊಮ್ಮೆ ಮಂತ್ರಿ ಮಾಲ್‍ಗೆ ಬೀಗ ಹಾಕಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News