ಸಾಮಾಜಿಕ ತಾಣಗಳ ವಿರುದ್ಧ ನ್ಯಾಯಾಲಯದ ಮೊರೆ ಹೋದ ಸಮೀರ್ ವಾಂಖೆಡೆ

Update: 2021-12-10 16:45 GMT
ಸಮೀರ್ ವಾಂಖೆಡೆ(photo:PTI)

ಮುಂಬೈ,ಡಿ.10: ಮಾದಕದ್ರವ್ಯ ನಿಯಂತ್ರಣ ದಳದ (ಎನ್‌ಸಿಆರ್‌ಬಿ) ವಲಯ ನಿರ್ದೇಶಕ ಸಮೀರ್ ವಾಂಖೆಡೆ ಹಾಗೂ ಅವರ ಪತ್ನಿ ಕ್ರಾಂತಿ ರೆಡ್ಕರ್ ಅವರು ಗುರುವಾರ ಮುಂಬೈ ನ್ಯಾಯಾಲಯದ ಮೆಟ್ಟಲೇರಿದ್ದು, ಗೂಗಲ್, ಫೇಸ್‌ಬುಕ್ ಹಾಗೂ ಟ್ವಿಟ್ಟರ್‌ನಂತಹ ವಿವಿಧ ಡಿಜಿಟಲ್ ಪ್ಲಾಟ್ ಫಾರಂ ಗಳು ತಮ್ಮ ವಿರುದ್ಧ ಯಾವದೇ ರೀತಿಯ ದುರುದ್ದೇಶಪೂರಿತ, ಮಾನಹಾನಿಕಾರಕ ಹಾಗೂ ಅವಹೇಳನಕಾರಿ ವಿಷಯಗಳನ್ನು ಪ್ರಕಟಿಸುವುದು, ಪ್ರದರ್ಶಿಸುವುದು ಹಾಗೂ ಪ್ರಸಾರ ಮಾಡುವುದನ್ನು ತಡೆಯಬೇಕೆಂದು ಕೋರಿ ಮನವಿ ಸಲ್ಲಿಸಿದ್ದಾರೆ.

ಈ ಮೊಕದ್ದಮೆಯನ್ನು ಕಳೆದ ತಿಂಗಳು ಸಲ್ಲಿಸಲಾಗಿದ್ದು, ಈ ಸಂಬಂಧ ಈ ಸಾಮಾಜಿಕ ಜಾಲತಾಣ ಸಂಸ್ಥೆಗಳ ಭಾರತೀಯ ವಿಳಾಸಗಳಿಗೆ ನೋಟಿಸ್ ಜಾರಿಗೊಳಿಸಲಾಗಿತ್ತು. ಅದಕ್ಕೆ ಉತ್ತರಿಸಿರುವ ಈ ಸಂಸ್ಥೆಗಳು, ಭಾರತದ ಹೊರಗೆ ಕಾರ್ಯಾಚರಿಸುತ್ತಿರುವ ತಮ್ಮ ಮಾತೃ ಸಂಸ್ಥೆಗಳನ್ನು ಈ ದಾವೆಯ ಕಕ್ಷಿದಾರರನ್ನಾಗಿ ಮಾಡಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿವೆ. ವಾಂಖೆಡೆ ದಂಪತಿಯ ಪರವಾಗಿ ವಾದಿಸಿದ ನ್ಯಾಯವಾದಿಗಳಾದ ಯದುನಾಥ್ ಭಗವಾನ್, ರೋಹನ್ ಜನಾರ್ದನನ್, ಸೃಷ್ಟಿ ಪಂಜಾಬಿ, ಬಾಲ ಮೆನನ್ ಹಾಗೂ ಯಾಮಿನಿ ಸಾಬೂ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಅವರು ಈ ದಾವೆಯಲ್ಲಿ ಅಗತ್ಯವಿರುವ ತಿದ್ದುಪಡಿಗಳನ್ನು ಮಾಡಿದರು.

ವಾಂಖೆಡೆ ದಂಪತಿ ಸಲ್ಲಿಸಿರುವ ದಾವೆಯಲ್ಲಿ ಟ್ವಿಟ್ಟರ್ ನ 18 ಯುಆರ್‌ಎಲ್‌ಗಳನ್ನು ಪಟ್ಟಿಮಾಡಿದ್ದು, ಇದರಲ್ಲಿ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರ ಟ್ವಿಟ್ಟರ್ ಲಿಂಕ್ ಕೂಡಾ ಒಳಗೊಂಡಿದೆ. ವಾಂಖೆಡೆ ದಂಪತಿಯು ಈಗಾಗಲೇ ತಮ್ಮ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿರುವ ನವಾಬ್ ಮಲಿಕ್ ವಿರುದ್ಧ ಕಾನೂನು ಹೋರಾಟವನ್ನು ಕೂಡಾ ನಡೆಸುತ್ತಿದ್ದಾರೆ. ಈ ನಡುವೆ ಫೇಸ್‌ಬುಕ್ ಹಾಗೂ ಯೂಟ್ಯೂಬ್‌ನ 5 ಲಿಂಕ್ ಗಳು ಹಾಗೂ ಮೂರು ಸುದ್ದಿಪತ್ರಿಕೆಗಳ ಲೇಖನಗಳು ಕೂಡಾ ಇವುಗಳಲ್ಲಿ ಒಳಗೊಂಡಿವೆ.

'' ರಾಜಕೀಯ ವಿಶ್ಲೇಷಕ, ಸುದ್ದಿ ನಿರೂಪಕ ಇತ್ಯಾದಿ ವಿಶೇಷಣಗಳನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಆರೋಪಗಳನ್ನು ಮಾಡಲಾಗುತ್ತಿದೆ. ಕೆಲವು ರಾಜಕಾರಣಿಗಳು ಕೂಡಾ ಇದರಲ್ಲಿ ಶಾಮೀಲಾಗಿದ್ದಾರೆ. ಇವರೆಲ್ಲರೂ ತಮ್ಮ ನಾಗರಿಕ ಪ್ರಜ್ಞೆ, ಆತ್ಮಸಾಕ್ಷಿಯನ್ನು ಕಳೆದುಕೊಂಡಿದ್ದಾರೆ ''ಎಂದು ವಾಂಖೆಡೆ ದಂಪತಿ ಅರ್ಜಿಯಲ್ಲಿ ತಿಳಿಸಿದ್ದಾರೆ. ತಮ್ಮ ಹಾಗೂ ತಮ್ಮ ಬಂಧುಗಳ ವಿರುದ್ಧ ಈಯಾವುದೇ ಅಕ್ಷೇಪಾರ್ಹ ವಿಷಯಗಳನ್ನು ಪ್ರಸಾರ ಮಾಡದಂತೆ ಈ ಸಾಮಾಜಿಕ ಜಾಲತಾಣಗಳಿಗೆ ಆದೇಶಿಸಬೇಕೆಂದು ವಾಂಖೆಡೆ ದಂಪತಿ ಅರ್ಜಿಯಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News