ಕೃಷಿ ಕಾಯ್ದೆ ವಿರುದ್ಧದ ಪ್ರತಿಭಟನೆ ಸಂದರ್ಭ ಪೊಲೀಸರ ಕ್ರಮದಿಂದ ರೈತರು ಸಾವನ್ನಪ್ಪಿಲ್ಲ: ಕೇಂದ್ರ

Update: 2021-12-10 18:18 GMT

ಹೊಸದಿಲ್ಲಿ, ಡಿ. 10: ಕೃಷಿ ಕಾಯ್ದೆಗಳ ವಿರುದ್ಧ ವರ್ಷಗಳ ಕಾಲ ನಡೆದ ಪ್ರತಿಭಟನೆಯ ಸಂದರ್ಭ ಪೊಲೀಸರ ಕ್ರಮದಿಂದ ರೈತರು ಸಾವನ್ನಪ್ಪಿಲ್ಲ ಎಂದು ಕೇಂದ್ರ ಸರಕಾರ ಶುಕ್ರವಾರ ಹೇಳಿದೆ.

ಮೂರು ಕೃಷಿ ಕಾಯ್ದೆಗಳ ವಿರುದ್ಧ ವಿವಿಧ ರೈತ ಸಂಘಟನೆಗಳು ಒಂದು ವರ್ಷಗಳ ಕಾಲ ಪ್ರತಿಭಟನೆ ನಡೆಸಿದ್ದವು. ರೈತ ಪ್ರತಿಭಟನಕಾರರ ವಿರುದ್ಧ ದಾಖಲಿಸಲಾದ ಪ್ರಕರಣಗಳನ್ನು ಹಿಂಪಡೆಯುವ ಹಾಗೂ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಸೇರಿದಂತೆ ತಮ್ಮ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಸರಕಾರ ಒಪ್ಪಿಕೊಂಡ ಬಳಿಕ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ದಿಲ್ಲಿ ಗಡಿಯಲ್ಲಿ ನಡೆಸುತ್ತಿರುವ ಪ್ರತಿಭಟನೆಯನ್ನು ರದ್ದುಗೊಳಿಸಿತು.
  
ರಾಜ್ಯ ಸಭೆಯಲ್ಲಿ ಶುಕ್ರವಾರ ಪ್ರಶ್ನೆಯೊಂದಕ್ಕೆ ಲಿಖಿತ ಪ್ರತಿಕ್ರಿಯೆ ನೀಡಿದ ಕೇಂದ್ರ ಸರಕಾರದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಪ್ರತಿಭಟನೆಯಲ್ಲಿ ಮೃತಪಟ್ಟ ರೈತರ ಕುಟುಂಬಗಳಿಗೆ ಪರಿಹಾರ ನೀಡುವುದು ರಾಜ್ಯ ಸರಕಾರಕ್ಕೆ ಸಂಬಂಧಿಸಿದ ವಿಷಯ ಎಂದಿದ್ದಾರೆ 

ಕಾಂಗ್ರೆಸ್ ನಾಯಕ ಧೀರಜ್ ಪ್ರಸಾದ್ ಸಾಹು ಹಾಗೂ ಆಪ್ ನಾಯಕ ಸಂಜಯ್ ಸಿಂಗ್ ಅವರ ಜಂಟಿ ಪ್ರಶ್ನೆಗೆ ತೋಮರ್ ಅವರು ಈ ಪ್ರತಿಕ್ರಿಯೆ ನೀಡಿದರು.

ಕೃಷಿ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮೃತಪಟ್ಟ ರೈತರ ಕುಟುಬಿಕರಿಗೆ ಜೀವನೋಪಾಯಕ್ಕಾಗಿ ಹಣಕಾಸು ನೆರವು ನೀಡುವ ಯಾವುದಾದರು ಅವಕಾಶ ಅಥವಾ ಯೋಜನೆ ಸರಕಾರದ ಮುಂದಿದೆಯೇ ಎಂದು ಸದಸ್ಯರು ಕೇಳಿದರು.

ಒಂದು ವರ್ಷಗಳ ಕಾಲ ನಡೆದ ಪ್ರತಿಭಟನೆಯ ಸಂದರ್ಭ ರೈತರು ಸಾವನ್ನಪ್ಪಿದ ವಿಷಯವನ್ನು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಎತ್ತಿದವು.

ಎಂಎಸ್ಪಿ ಕುರಿತ ಪ್ರತ್ಯೇಕ ಪ್ರಶ್ನೆಗೆ ಪ್ರತಿಕ್ರಿಯಿಸಿದ ತೋಮರ್, ದೇಶದ ಬದಲಾಗುತ್ತಿರುವ ಅಗತ್ಯತೆಗೆ ಅನುಗುಣವಾಗಿ ಬೆಳೆ ಮಾದರಿಯನ್ನು ಬದಲಾಯಿಸುವ ಶೂನ್ಯ ಬಂಡವಾಳ ಆಧಾರಿತ ಕೃಷಿಯನ್ನು ಉತ್ತೇಜಿಸಲು ಸಮಿತಿಯೊಂದನ್ನು ಔಪಚಾರಿಕವಾಗಿ ರೂಪಿಸುವ ಹಾಗೂ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚು ಪರಿಣಾಮಕಾರಿ, ಪಾರದರ್ಶಕವಾಗಿ ರೂಪಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News