ಬಸ್ತರ್: ಪೊಲೀಸ್ ಕ್ರೌರ್ಯದ ವಿರುದ್ಧ ಸಹಾಯಕ ಕಾನ್ ಸ್ಟೆಬಲ್‌ ಗಳ ಪ್ರತಿಭಟನೆ

Update: 2021-12-11 16:16 GMT
ಸಾಂದರ್ಭಿಕ ಚಿತ್ರ:PTI

ಬಿಜಾಪುರ (ಛತ್ತೀಸ್‌ಗಡ),ಡಿ.11: ತಮ್ಮ ಕುಟುಂಬ ಸದಸ್ಯರ ಮೇಲೆ ಪೊಲೀಸ್ ಕ್ರೌರ್ಯವನ್ನು ವಿರೋಧಿಸಿ ಛತ್ತೀಸ್‌ಗಡದಲ್ಲಿ ನಕ್ಸಲ್ ಚಟುವಟಿಕೆಗಳ ಕೇಂದ್ರವಾಗಿರುವ ಬಸ್ತರ್ ಜಿಲ್ಲೆಯ ಬಿಜಾಪುರದಲ್ಲಿ ಸುಮಾರು ಅರ್ಧ ಡಝನ್ ಪೊಲೀಸ್ ಠಾಣೆಗಳಿಗೆ ಸೇರಿದ ನೂರಾರು ಸಹಾಯಕ ಪೊಲೀಸರು ತಮ್ಮ ಶಸ್ತ್ರಾಸ್ತ್ರಗಳನ್ನು ಮರಳಿಸಿ ಪ್ರತಿಭಟನೆಯಲ್ಲಿ ತೊಡಗಿದ್ದಾರೆ.

ಸಹಾಯಕ ಪೊಲೀಸರನ್ನು ಪೊಲೀಸ್ ಪಡೆಗೆ ವಿಧ್ಯುಕ್ತವಾಗಿ ಸೇರಿಸಿಕೊಳ್ಳಬೇಕು,ವೇತನ ಮತ್ತು ಇತರ ಸೌಲಭ್ಯಗಳನ್ನು ಈಡೇರಿಸಬೇಕು ಎಂಬ ತಮ್ಮ ದೀರ್ಘಕಾಲದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅವರ ಕುಟುಂಬ ಸದಸ್ಯರು ಡಿ.6ರಿಂದ ರಾಜಧಾನಿ ರಾಯಪುರದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಡಿ.8ರಂದು ಪ್ರತಿಭಟನಾಕಾರರು ಪೊಲೀಸ್ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡು ಜೈಲಿಗೆ ರವಾನಿಸಿದ್ದರು. ಪೊಲೀಸರು ತಮ್ಮೆಂದಿಗೆ ಅನುಚಿತವಾಗಿ ನಡೆದುಕೊಂಡಿದ್ದಾರೆ,ಥಳಿಸಿದ್ದಾರೆ ಮತ್ತು ತಮ್ಮ ಬಟ್ಟೆಗಳನ್ನು ಹರಿದಿದ್ದಾರೆ ಎಂದು ಕೆಲವು ಮಹಿಳೆಯರು ಆರೋಪಿಸಿದ್ದಾರೆ.

ಸಹಾಯಕ ಪೊಲೀಸರ ಸಮಸ್ಯೆಗಳನ್ನು ಪರಿಶೀಲಿಸಲು ಉನ್ನತ ಮಟ್ಟದ ಸಮಿತಿಯ ರಚನೆಗೆ ಮುಖ್ಯಮಂತ್ರಿ ಭೂಪೇಶ್‌ ಬಘೇಲ್ ಅವರು ಆದೇಶಿಸಿದ್ದಾರೆ.

ನಕ್ಸಲ್ ರ ವಿರುದ್ಧ ಕಾರ್ಯಾಚರಣೆಗಳನ್ನು ತೀವ್ರಗೊಳಿಸಲು ಹಿಂದಿನ ರಮಣಸಿಂಗ್ ನೇತೃತ್ವದ ಸರಕಾರವು ಬಸ್ತರ್ ಪ್ರದೇಶದಲ್ಲಿ ಹಲವಾರು ಯುವಕರನ್ನು ವಿಶೇಷ ಪೊಲೀಸ್ ಅಧಿಕಾರಿ (ಎಸ್‌ಪಿಒ)ಗಳನ್ನಾಗಿ ನೇಮಕ ಮಾಡಿಕೊಂಡಿತ್ತು. ಈ ಪೈಕಿ ಹೆಚ್ಚಿನವರು ಶರಣಾಗತರಾಗಿದ್ದ ಮಾವೋವಾದಿಗಳಾಗಿದ್ದರು. ಬಳಿಕ ಸರ್ವೋಚ್ಚ ನ್ಯಾಯಾಲಯದ ನಿರ್ದೇಶದಂತೆ ಎಸ್‌ಪಿಒಗಳನ್ನು ಸಹಾಯಕ ಪೊಲೀಸರನ್ನಾಗಿ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News