ಮಠ ಬಿಟ್ಟು ಮೊಟ್ಟೆಗೆ ಗಂಟು ಬಿದ್ದ ಮಠಾಧೀಶರು

Update: 2021-12-13 05:42 GMT

ಮಕ್ಕಳ ದೈಹಿಕ, ಮಾನಸಿಕ, ಬೌದ್ಧಿಕ ಬೆಳವಣಿಗೆಗೆ ಮೊಟ್ಟೆ ಸೇವನೆ ಒಳ್ಳೆಯದೆಂದು ಜಾಗತಿಕವಾಗಿ ಒಪ್ಪಿಕೊಳ್ಳಲಾಗಿದೆ. ಮೊಟ್ಟೆಯನ್ನು ಪರಿಪೂರ್ಣ ಆಹಾರ ಎಂದು ವೈದ್ಯಕೀಯ ಮತ್ತು ಆಹಾರ ಪರಿಣಿತರು ಹೇಳುತ್ತಾರೆ. ಹಾಗಾಗಿ ಸರಕಾರ ಯಾವುದೇ ಒತ್ತಡಕ್ಕೆ ಮಣಿಯದೆ ಈ ಯೋಜನೆಯನ್ನು ಮುಂದುವರಿಸಲಿ.


ಅಪೌಷ್ಟಿಕತೆಯಿಂದ ಬಳಲುತ್ತಿರುವ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆ ನೀಡುವ ಪ್ರಸ್ತಾವನೆ ಈಗ ವಿವಾದಕ್ಕೆ ಕಾರಣವಾಗಿದೆ. ವಿವಾದ ಉಂಟು ಮಾಡಿದವರು ರಾಜಕಾರಣಿಗಳಲ್ಲ, ಬದಲಾಗಿ ಇಂತಹ ಎಲ್ಲ ಜಂಜಡಗಳಿಂದ ದೂರವಾಗಿ ಮಠದಲ್ಲಿ ಕುಳಿತು ಪರಮಾರ್ಥ ಚಿಂತನೆ ಮಾಡಬೇಕಾದವರು ಬೀದಿಗೆ ಬಂದಿದ್ದಾರೆ. ಈ ಮಠಾಧೀಶರ ಜೊತೆ ಕೆಲ ಜಾತಿ ಸಂಘಟನೆಗಳು ಕೈ ಜೋಡಿಸಿವೆ. ಅಪೌಷ್ಟಿಕತೆಯಿಂದ ನರಳುತ್ತಿರುವ ಸರಕಾರಿ ಶಾಲೆಗಳ ಮಕ್ಕಳಿಗೆ ಯಾವುದೇ ಕಾರಣಕ್ಕೂ ಮೊಟ್ಟೆ ಕೊಡಬಾರದು ಎಂದು ಚಳವಳಿ ಆರಂಭಿಸಿದ್ದಾರೆ.

  ತೀವ್ರ ಅಪೌಷ್ಟಿಕತೆಯಿಂದ ನರಳುತ್ತಿರುವ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ವಿಜಯನಗರ, ಯಾದಗಿರಿ ಮತ್ತು ಬಿಜಾಪುರ ಜಿಲ್ಲೆಗಳ ಸರಕಾರಿ ಶಾಲಾ ಮಕ್ಕಳಿಗಾಗಿ ಜಾರಿಗೆ ತಂದಿರುವ ಈ ಯೋಜನೆಯ ವಿರುದ್ಧ ಆ ಭಾಗದಲ್ಲಿ ಬಸವಣ್ಣನವರ ಹೆಸರು ಹೇಳುತ್ತಾ ಆ ಹೆಸರನ್ನೇ ಬಂಡವಾಳ ಮಾಡಿಕೊಂಡು ದುಂಡಗಾದ ಮಠಾಧೀಶರು ಮತ್ತು ಕೆಲ ಸಂಘಟನೆಗಳು ಅಪಸ್ವರ ತೆಗೆದಿವೆ.ಮೊದಲು ಅಲ್ಲಿಗೆ ಸೀಮಿತವಾದ ಪ್ರತಿಭಟನೆ ಈಗ ರಾಜ್ಯವ್ಯಾಪಿ ಸ್ವರೂಪ ಪಡೆಯುತ್ತಿದೆ.

ಎಲ್ಲ ಲಿಂಗಾಯತ ಸ್ವಾಮಿಗಳು ಇದನ್ನು ವಿರೋಧಿಸುತ್ತಿಲ್ಲ. ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳಿಗೆ ಮೊಟ್ಟೆ ಅಥವಾ ಅದನ್ನು ಒಲ್ಲದವರಿಗೆ ಬಾಳೆ ಹಣ್ಣು ಕೊಡುವ ಯೋಜನೆಯನ್ನು ದುತ್ತರಗಾಂವದ ಕೊರಣೇಶ್ವರ ಸ್ವಾಮಿಗಳು ಮತ್ತು ಸಿರಿಗೆರೆ, ಸಾಣೆಹಳ್ಳಿ ಮಠದ ಪಂಡಿತಾರಾಧ್ಯ ಸ್ವಾಮಿಗಳು ಬೆಂಬಲಿಸಿದ್ದಾರೆ.

ವಾಸ್ತವವಾಗಿ ಇದು ಸದ್ಯ ಕಲ್ಯಾಣ ಕರ್ನಾಟಕ ಭಾಗಕ್ಕೆ ಸೀಮಿತವಾಗಿರುವ ಯೋಜನೆ.ಸಾರ್ವಜನಿಕ ಶಿಕ್ಷಣ ಇಲಾಖೆಯ ಕಲಬುರಗಿ ವಿಭಾಗದ ಹೆಚ್ಚುವರಿ ಆಯುಕ್ತರಾದ ನಳೀನ ಅತುಲ ಅವರು ಮಾಡಿಸಿದ ಆಂತರಿಕ ಸಮೀಕ್ಷೆಯ ಪ್ರಕಾರ ಕಲ್ಯಾಣ ಕರ್ನಾಟಕ ಭಾಗದ ಶೇ.80ರಷ್ಟು ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವುದರಿಂದ ಅವರಿಗೆ ಬಿಸಿಯೂಟದ ಜೊತೆಗೆ ಮೊಟ್ಟೆ ವಿತರಣೆ ಮಾಡಬೇಕೆಂದು ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಿದರು. ಸರಕಾರ ಈ ಶಿಫಾರಸನ್ನು ಒಪ್ಪಿಮಂಜೂರಾತಿ ನೀಡಿತು. ಆಗ ಎಲ್ಲಿದ್ದರೋ ಈ ಕಾವಿ ವೇಷದ ‘ಮಹಾತ್ಮರು’ ಒಮ್ಮ್ಮೆಲೇ ಬೀದರ್‌ನಲ್ಲಿ ಪ್ರತಿಭಟನೆ ಆರಂಭಿಸಿದರು.

ಮೊದಲು ಈ ಭಾಗಕ್ಕೆ ಸೀಮಿತವಾಗಿದ್ದ ಈ ಪ್ರತಿರೋಧ ನಂತರ ರಾಜ್ಯವ್ಯಾಪಿ ಸ್ವರೂಪ ಪಡೆಯಿತು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಬಡವರ, ದಲಿತರ ಮಕ್ಕಳಿಗೆ ಬಿಸಿಯೂಟದ ಜೊತೆಗೆ ಒಂದು ಮೊಟ್ಟೆ ನೀಡಿದರೆ ಕರಾವಳಿ ಭಾಗದ ಜೈನ ಸಂಘಟನೆಗಳು ಘೋರ ಅಪಚಾರ ನಡೆದಂತೆ ತಹಶೀಲ್ದಾರರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾರಂಭಿಸಿದವು.

ಬಿಜೆಪಿ ಸರಕಾರ ಇತಿಹಾಸ ಪಠ್ಯ ಪುಸ್ತಕದಿಂದ ಹೊಸ ಧರ್ಮಗಳ ಉದಯ ಅಧ್ಯಾಯದಲ್ಲಿ ಜೈನ ಮತ್ತು ಬೌದ್ಧ ಧರ್ಮಗಳನ್ನು ಅಳಿಸಿ ಹಾಕಿದಾಗ, ಬುದ್ಧ ಮತ್ತು ಮಹಾವೀರರ ಹೆಸರನ್ನೇ ಮಾಯ ಮಾಡಿದಾಗ ಧ್ವನಿಯೆತ್ತದ ಜೈನ ಬಾಂಧವರು ಕಲಬುರಗಿ ಮಕ್ಕಳಿಗೆ ಮೊಟ್ಟೆ ಕೊಟ್ಟರೆ ಘೋರ ಹಿಂಸೆ ಮಾಡಿದಂತಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹಿಂಸೆ ಮತ್ತು ಅಹಿಂಸೆಯನ್ನು ಮೊಟ್ಟೆಯ ಮಟ್ಟಕ್ಕೆ ತಂದು ನಿಲ್ಲಿಸಿದವರಿಗೆ ತಮ್ಮದೇ ಧರ್ಮ ವನ್ನು ಮನುವಾದಿ, ಕೋಮುವಾದಿ ಶಕ್ತಿಗಳು ಕಬಳಿಸುತ್ತಿರುವುದು ಕಾಣುವುದಿಲ್ಲ. ಕಂಡರೂ ಜಾಣ ಮೌನ ತಾಳಲು ಬಿಜೆಪಿ ಮೇಲಿನ ಒಳ ಪ್ರೇಮ ಕಾರಣವಲ್ಲದೆ ಬೇರೇನೂ ಅಲ್ಲ.

ವೈದಿಕಶಾಹಿಯ ಮೇಲು, ಕೀಳು ಗಳ ವಿರುದ್ಧ ತಿರುಗಿ ಬಿದ್ದ ಜೈನ ಧರ್ಮ ಶ್ರೇಣೀಕೃತ ಜಾತಿ ಪದ್ಧತಿಯನ್ನು ಒಪ್ಪುವುದಿಲ್ಲ. ದೇವರ ಅಸ್ತಿತ್ವವನ್ನು ನಿರಾಕರಿಸುತ್ತದೆ.ಅಹಿಂಸಾ ಪರಮೋಧರ್ಮ ಎಂದು ಸಾರುವ ಜೈನ ಧರ್ಮ ದೈಹಿಕ ಹಾಗೂ ಮಾನಸಿಕ ಹಿಂಸೆಯನ್ನು ವಿರೋಧಿಸುತ್ತದೆ. ಅಂತಲೆ ಸರ್ವಜ್ಞ ಜೈನ ಧರ್ಮದ ಹಿರಿಮೆಯನ್ನು ಕೊಂಡಾಡಿದ. ಆದರೆ ಇದೇ ಜೈನ ಧರ್ಮ ಅನೇಕಾಂತವಾದವನ್ನು ಪ್ರತಿಪಾದಿಸುತ್ತದೆ. ಸ್ವಧರ್ಮದ ಯಾವುದನ್ನೂ ಇತರರ ಮೇಲೆ ಹೇರುವುದಿಲ್ಲ. ಇತರರ ವಾದ, ಅಭಿಪ್ರಾಯ ಹಾಗೂ ಜೀವನ ಪದ್ಧ್ದತಿಗಳ ಜೊತೆ ಸಹಬಾಳ್ವೆ ಜೈನ ಧರ್ಮದ ಜೀವಾಳ.ಅನೇಕಾಂತವಾದ ಬಹುತ್ವ ಭಾರತದ ಜೀವಸತ್ವ.ಆದರೆ ಇತರರ ಆಹಾರ ಪದ್ಧತಿಯನ್ನು ಅನಗತ್ಯವಾಗಿ ವಿರೋಧಿಸುವ ಬಿಜೆಪಿ ಬೆಂಬಲಿಗ ಕೆಲವು ಜೈನ ಬಂಧುಗಳು ತಮ್ಮದೇ ಧರ್ಮದ ಆಶಯಗಳಿಗೆ ವ್ಯತಿರಿಕ್ತವಾಗಿ ಹಿಂದುತ್ವದ ಕಾರ್ಯ ಸೂಚಿಗೆ ಪೂರಕವಾಗಿ ವರ್ತಿಸುತ್ತಿರುವುದು ವಿಷಾದದ ಸಂಗತಿ.

ಇನ್ನು ವೀರಶೈವ, ಲಿಂಗಾಯತ ರಲ್ಲಿ ಕೆಲವರು ಮಕ್ಕಳಿಗೆ ಮೊಟ್ಟೆ ಕೊಡುವುದನ್ನು ಯಾಕೆ ವಿರೋಧಿಸುತ್ತಾರೋ ಅರ್ಥವಾಗುವುದಿಲ್ಲ. ಹನ್ನೆರಡನೇ ಶತಮಾನದಲ್ಲಿ ಮಾಂಸಾಹಾರ ಸೇವಿಸುತ್ತಿದ್ದ ಶೂದ್ರ ,ಶ್ರಮಿಕ ಸಮುದಾಯಗಳ ತಳ ಸಮುದಾಯದ ಜನರಿಗೆ ಇಷ್ಟಲಿಂಗ ಕೊಟ್ಟು ಬಸವಣ್ಣನವರು ಲಿಂಗಾಯತ ಧರ್ಮಕ್ಕೆ ಚಾಲನೆ ನೀಡಿದರು.ಯಾರದೇ ಆಹಾರ ಪದ್ಧತಿಯನ್ನು ಬಸವಣ್ಣನವರು ವಿರೋಧಿಸಲಿಲ್ಲ.ಆಗಿನ ವಚನಕಾರ್ತಿ ಕಾಳವ್ವೆಯ ಒಂದು ವಚನ ಮಾಂಸಾಹಾರವನ್ನು ಸಮರ್ಥಿಸುತ್ತದೆ.

ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರು ಕೂಡ 2004ರ ಮೇ 1 ಮತ್ತು 2 ರಂದು ಕೂಡಲ ಸಂಗಮದಲ್ಲಿ ನಡೆದ ಬಸವ ಧರ್ಮ ಸಮ್ಮೇಳನದಲ್ಲಿ ಮಾಂಸಾಹಾರಿಗಳು ಬಸವ ಧರ್ಮ ಸ್ವೀಕರಿಸಬಹುದು,ಬಸವ ಧರ್ಮ ಸ್ವೀಕರಿಸಿದ ನಂತರವೂ ಮಾಂಸಾಹಾರ ತ್ಯಜಿಸುವುದು ಕಡ್ಡಾಯವಲ್ಲ ಎಂದು ಹೇಳಿದ್ದರು.ಆಗ ಅವರ ಹೇಳಿಕೆ ಸಾಕಷ್ಟು ವಿವಾದವನ್ನು ಉಂಟು ಮಾಡಿತ್ತು. ಆದರೆ ಶರಣರು ಅದನ್ನು ಸಮರ್ಥಿಸಿಕೊಂಡಿದ್ದರು.
ಅಹಿಂಸೆಯನ್ನು ಪ್ರತಿಪಾದಿಸುವ ಜೈನ ಮತ್ತು ಬೌದ್ಧ ಧರ್ಮಗಳು ಮಾಂಸಾಹಾರವನ್ನು ನಿರಾಕರಿಸುವ ಮುಂಚೆ ವೈದಿಕರು ಮಾಂಸಾಹಾರ ಸೇವನೆ ಮಾಡುತ್ತಿದ್ದರೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಅದೇನೇ ಇರಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಡಿಸೆಂಬರ್ 1 ರಿಂದ ಬಿಸಿಯೂಟದ ಜೊತೆಗೆ ಮೊಟ್ಟೆ ಹಾಗೂ ಬಾಳೆ ಹಣ್ಣು ವಿತರಿಸುವುದರಿಂದ ಶಾಲಾ ಹಾಜರಾತಿಯಲ್ಲಿ ಏರಿಕೆಯಾಗಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ. ಶಾಲೆಗಳಲ್ಲಿ ಶೇ.80ರಷ್ಟು ಮಕ್ಕಳು ಮೊಟ್ಟೆಯನ್ನು ಇಷ್ಟ ಪಡುತ್ತಾರೆ ಎಂಬುದು ಅಧಿಕೃತ ಅಂಕಿ ಅಂಶಗಳಿಂದ ಗೊತ್ತಾಗಿದೆ.

ಇನ್ನು ಅಪೌಷ್ಟಿಕತೆಯಿಂದ ಬಳಲುತ್ತಿರುವ ಶಾಲಾ ಮಕ್ಕಳಿಗೆ ಯಾವ ಆಹಾರ ನೀಡಬೇಕೆಂಬುದು ಆರೋಗ್ಯಕ್ಕೆ ಸಂಬಂಧಿಸಿದ ವಿಷಯ. ಇದರ ಬಗ್ಗೆ ಸರಕಾರಕ್ಕೆ ಸಲಹೆ ನೀಡಬೇಕಾದವರು ವೈದ್ಯರು ಮತ್ತು ಪೌಷ್ಟಿಕಾಂಶ ತಜ್ಞರು ಮಾತ್ರ. ತಮಗೆ ಸಂಬಂಧ ಪಡದ ಈ ವಿಷಯದಲ್ಲಿ ಧರ್ಮ ಗುರುಗಳಾಗಲಿ ಮಠಾಧೀಶರಾಗಲಿ ಕೈ ಹಾಕುವುದಾಗಲಿ ಸರಿಯಲ್ಲ. ಮಠಾಧೀಶರಾಗಲಿ, ಜಗದ್ಗುರುಗಳಾಗಲಿ ತಮ್ಮದೇ ಮಠಕ್ಕೆ ಮಾತ್ರ ಗುರುಗಳು. ಸರಕಾರ ತಾವು ಹೇಳಿದಂತೆ ಕೇಳಬೇಕೆಂದು ದರ್ಪದಿಂದ ಒತ್ತಡ ಹೇರುವುದು ಸರಿಯಲ್ಲ. ತಮ್ಮ ಇತಿಮಿತಿಗಳನ್ನು ಅರ್ಥ ಮಾಡಿಕೊಂಡು ಗೌರವದಿಂದ ನಡೆದುಕೊಳ್ಳುವುದು ಕ್ಷೇಮ.

ಭಾರತ ಎಂಬುದು ಯಾವುದೇ ಜಾತಿ, ಮತಕ್ಕೆ ಸೇರಿದ ಭೂ ಪ್ರದೇಶವಲ್ಲ. ಇಲ್ಲಿ ವಿಭಿನ್ನ ಧರ್ಮ, ಭಾಷೆ, ಆಹಾರ ಪದ್ಧ್ದತಿ, ಅಭಿರುಚಿಯನ್ನು ಹೊಂದಿರುವ ಜನ ನೆಲೆಸಿದ್ದಾರೆ. ಯಾವುದೇ ಧರ್ಮವಾಗಲಿ, ಆಹಾರ ಪದ್ಧತಿಯಾಗಲಿ ಮೇಲಲ್ಲ,ಕೀಳಲ್ಲ.ಈ ಸಾಮಾನ್ಯ ಅರಿವು ಚುನಾಯಿತ ಸರಕಾರಕ್ಕೆ ಬೆದರಿಕೆ ಹಾಕುವ ಮಠಾಧೀಶರಿಗೆ, ಜಾತಿ ಸಂಘಟನೆಗಳಿಗೆ ಇರಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂತಹ ಪೊಳ್ಳು ಬೆದರಿಕೆಗಳಿಗೆ ಸೊಪ್ಪು ಹಾಕದೆ ಸರಕಾರಿ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಿಸುವ ಕಾರ್ಯಕ್ರಮವನ್ನು ರಾಜ್ಯಾದ್ಯಂತ ವಿಸ್ತರಿಸಲಿ.

ಶಾಲಾ ಮಕ್ಕಳಿಗೆ ಮೊಟ್ಟೆ ಬೇಡ ಎಂದು ಅಪೌಷ್ಟಿಕತೆಯಿಂದ ನರಳುತ್ತಿರುವ ಬಡವರ ಮಕ್ಕಳ ತಟ್ಟೆಗೆ ಕೈ ಹಾಕುವ ಮಠಾಧೀಶರು, ಜಗದ್ಗುರುಗಳು, ಶರಣ ಎಂದು ಕರೆದುಕೊಳ್ಳುವವರು ಅಸ್ಪಶ್ಯತೆ ಬೇಡ, ತಾರತಮ್ಯ ಬೇಡ, ಅಸಮಾನತೆ ಬೇಡ ಎಂದು ಕರೆ ನೀಡಿದ ಉದಾಹರಣೆಗಳೇ ಇಲ್ಲ. ಮೊಟ್ಟೆ ಕೊಡುವುದನ್ನು ವಿರೋಧಿಸುವ ಈ ರೋಗಗ್ರಸ್ತ ಮನಸ್ಸುಗಳು ಮೊಟ್ಟೆ ಮಾತ್ರವಲ್ಲ ತಳ ಸಮುದಾಯದ ಮಕ್ಕಳಿಗೆ ವಿದ್ಯೆಯನ್ನು ಕೊಡಬಾರದೆಂಬ ಮಸಲತ್ತು ನಡೆಸಿದ್ದಾರೆಯೇ ಎಂದು ಸಂದೇಹ ಬರುತ್ತದೆ.

ವಾಸ್ತವವಾಗಿ ಲಿಂಗಾಯತ ಮಠಗಳು ಹಿಂದೆಂದೂ ಈ ರೀತಿ ವರ್ತಿಸಿಲ್ಲ. ಆದರೆ ಈಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮನುವಾದಿಗಳು ಮೇಲುಗೈ ಸಾಧಿಸಿರುವುದರಿಂದ ಬಸವಣ್ಣನವರ ಹೆಸರು ಹೇಳಿಕೊಳ್ಳುವ ಈ ಸ್ವಾಮಿಗಳೂ ತಮ್ಮ ರಾಗ ಬದಲಿಸಿದ್ದಾರೆಂದು ಕಾಣುತ್ತದೆ.

ಕಲ್ಯಾಣ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಮಾತ್ರ ಮೊಟ್ಟೆ ನೀಡಲಾಗುತ್ತಿದೆ. ರಾಜ್ಯಾದ್ಯಂತ ಇದನ್ನು ವಿಸ್ತರಿಸಲು ಸರಕಾರ ಚಿಂತನೆ ನಡೆಸಬೇಕಾಗಿದೆ. ರಾಜ್ಯದ 55 ಲಕ್ಷ ಸರಕಾರಿ ಶಾಲಾ ಮಕ್ಕಳಿಗೆ ಮೊಟ್ಟೆ ನೀಡಲು 665 ಕೋಟಿ ರೂ. ವೆಚ್ಚ ಬರುತ್ತದೆ. ಆದರೂ ಸರಕಾರ ಹಿಂಜರಿಯಬಾರದು. ಮಠ, ಪೀಠಗಳಿಗೆ ನೀಡಿರುವ ಅನುದಾನವನ್ನು ರದ್ದುಗೊಳಿಸಿ ಆ ಹಣವನ್ನು ಸರಕಾರಿ ಶಾಲೆಗಳ ಮಕ್ಕಳಿಗೆ ಪೌಷ್ಟಿಕಾಂಶದ ಆಹಾರ ನೀಡಲು ಬಳಸಿಕೊಳ್ಳಬೇಕು.

ಅಪೌಷ್ಟಿಕತೆಯಿಂದ ಬಳಲುತ್ತಿರುವ ಸರಕಾರಿ ಶಾಲಾ ಮಕ್ಕಳಿಗೆ ಪೌಷ್ಟಿಕಾಂಶವುಳ್ಳ ಆಹಾರ ನೀಡುವುದನ್ನು ವಿರೋಧಿಸುವ ಮಠಾಧೀಶರು,ಧರ್ಮ ಗುರುಗಳು, ಇನ್ನು ಮುಂದೆ ಮಾಂಸಾಹಾರ ಸೇವಿಸುವವರಿಂದ ಯಾವುದೇ ಕಾಣಿಕೆಯನ್ನು, ಸಹಾಯವನ್ನು ಪಡೆಯಬಾರದು. ಮೊಟ್ಟೆ ನೀಡುವುದು ಅಪವಿತ್ರವಾದರೆ ತಮ್ಮ ಮಠ ಮಂದಿರಗಳಿಗೆ ಮೊಟ್ಟೆ ಮಾಂಸ ಸೇವಿಸುವವರಿಂದು ಕಾಣಿಕೆ ಸ್ವೀಕರಿಸುವುದು ಕೂಡ ಅಪವಿತ್ರವಾಗುತ್ತದಲ್ಲವೇ? ತಮ್ಮ ಮಠ, ಪೀಠಗಳಿಗೆ, ದೇವಾಲಯಗಳ ನಿರ್ಮಾಣಕ್ಕೆ ಶಾಖಾಹಾರಿ ಮತ್ತು ಮಾಂಸಾಹಾರಿ ಎಂದು ಭೇದ ಮಾಡದೇ ಎಲ್ಲರಿಂದಲೂ ಲಕ್ಷಾಂತರ ರೂ. ಕಾಣಿಕೆ ಸ್ವೀಕರಿಸುವವರು, ಬಡವರ ಮಕ್ಕಳಿಗೆ ಮೊಟ್ಟೆ ಕೊಡುವುದನ್ನು ವಿರೋಧಿಸಿ ಬೀದಿ ಪ್ರಹಸನ ಮಾಡುವುದು ಆಷಾಢ ಭೂತಿತನ ಮಾತ್ರವಲ್ಲ ಅವರ ಮನದಾಳದಲ್ಲಿರುವ ಜಾತೀಯತೆಯ ಕಾಯಿಲೆ ಕೂಡ ಹೌದು.
 ಭಾರತದ ನೂರ ಮೂವತ್ತೈದು ಕೋಟಿಗಿಂತ ಹೆಚ್ಚಿಗಿರುವ ಜನಸಂಖ್ಯೆಯಲ್ಲಿ ಸಸ್ಯಾಹಾರಿಗಳ ಸಂಖ್ಯೆ ಕಡಿಮೆ. ಹಾಗೆಂದು ಅವರು ತಮ್ಮ ಇಷ್ಟದ ಆಹಾರ ಪದ್ಧತಿಯನ್ನು ಬಿಡಬೇಕೆಂದಲ್ಲ. ಯಾರಿಗೆ ಯಾವ ಆಹಾರ ಇಷ್ಟವೋ ಅದನ್ನು ಅವರು ಸೇವಿಸಲಿ.ಅದೇ ರೀತಿ ಮೊಟ್ಟೆ, ಮೀನು, ಮಾಂಸ ಇಷ್ಟಪಡುವವರು ಅದನ್ನು ಸೇವಿಸಲಿ. ಸರ್ವಜನಾಂಗದ ಶಾಂತಿಯ ತೋಟವಾದ ಈ ಭಾರತದಲ್ಲಿ ಶಾಖಾಹಾರಿಗಳು ಮತ್ತು ಮಾಂಸಾಹಾರಿಗಳು ಒಟ್ಟಾಗಿಯೇ ಬದುಕಬೇಕಾಗಿದೆ. ಪರಸ್ಪರ ವೇದಿಕೆಯನ್ನು ಹಂಚಿಕೊಳ್ಳಬೇಕಾಗಿದೆ. ಮುಖ್ಯವಾಹಿನಿಯಲ್ಲಿ ಜೊತೆ ಸೇರಬೇಕಾಗಿದೆ.ಅದಕ್ಕಾಗಿ ಮಕ್ಕಳು ಪರಸ್ಪರ ಬೆರೆಯಲು ಈ ಮೊಟ್ಟೆ ಮತ್ತು ಹಣ್ಣು ನೀಡುವ ಸರಕಾರದ ಯೋಜನೆ ಉಪಯುಕ್ತ ಕರವಾಗಿದೆ.ಯಾವುದೇ ಕಾರಣಕ್ಕೂ ಅದನ್ನು ಕೈ ಬಿಡಬಾರದು.

ಮಕ್ಕಳ ದೈಹಿಕ, ಮಾನಸಿಕ, ಬೌದ್ಧಿಕ ಬೆಳವಣಿಗೆಗೆ ಮೊಟ್ಟೆ ಸೇವನೆ ಒಳ್ಳೆಯದೆಂದು ಜಾಗತಿಕವಾಗಿ ಒಪ್ಪಿಕೊಳ್ಳಲಾಗಿದೆ. ಮೊಟ್ಟೆಯನ್ನು ಪರಿಪೂರ್ಣ ಆಹಾರ ಎಂದು ವೈದ್ಯಕೀಯ ಮತ್ತು ಆಹಾರ ಪರಿಣಿತರು ಹೇಳುತ್ತಾರೆ. ಹಾಗಾಗಿ ಸರಕಾರ ಯಾವುದೇ ಒತ್ತಡಕ್ಕೆ ಮಣಿಯದೆ ಈ ಯೋಜನೆಯನ್ನು ಮುಂದುವರಿಸಲಿ. ಧರ್ಮಗುರುಗಳು, ಮಠಾಧೀಶರು ರಾಜಕೀಯ ಪಕ್ಷಗಳ, ಕೋಮುವಾದಿ ಸಂಘಟನೆಗಳ ಸೂತ್ರದ ಬೊಂಬೆಗಳಾಗದೆ ಘನತೆ, ಗೌರವದಿಂದ ನಡೆದುಕೊಳ್ಳುವುದು ಸೂಕ್ತ.

2023ರ ಲೋಕಸಭಾ ಚುನಾವಣೆಯವರೆಗೆ ಮೊಟ್ಟೆ ಮತ್ತು ಮತಾಂತರದಂತಹ ವಿಷಯಗಳ ಸುತ್ತ ಜನ ಮತ್ತೇರಿ ಕುಣಿಯುವಂತೆ ಮಾಡುವ ಆಳುವ ವರ್ಗದ ಮಸಲತ್ತುಗಳಿಗೆ ಧರ್ಮ ಗುರುಗಳು, ಮಠಾಧೀಶರು, ಸ್ವಾಮಿ, ಸನ್ಯಾಸಿಗಳು ಬಳಕೆಯಾಗುತ್ತಿದ್ದಾರೆ. ತಮ್ಮ ಆಹಾರ ಪದ್ಧತಿಯ ಮೇಲೆ ನಡೆಯುತ್ತಿರುವ ದಾಳಿಯ ವಿರುದ್ಧ ಶೂದ್ರ ಸಮುದಾಯಗಳು ಎಚ್ಚರವಾಗುವವರೆಗೆ ಇದೆಲ್ಲ ಮುಂದುವರಿಯುತ್ತದೆ. ನೆನಪಿರಲಿ ಈಗ ಅಧಿಕಾರದಲ್ಲಿರುವವರು ಕೇವಲ ಶೇ.2ರಷ್ಟೂ ಇಲ್ಲದ ಸಸ್ಯಾಹಾರಿಗಳ ಮತಗಳಿಂದ ಅಧಿಕಾರವನ್ನು ಸ್ವಾಧೀನಪಡಿಸಿಕೊಂಡಿಲ್ಲ. ಮಾಂಸಾಹಾರ ಸೇವಿಸುವ ಬಹುತೇಕ ಜನರ ಮತಗಳೂ ಅವರಿಗೇ ಹೋಗುತ್ತವೆ. ಮೀಸಲು ಕ್ಷೇತ್ರಗಳಲ್ಲಿ ಅವರೇ ಹೆಚ್ಚಿನ ಸ್ಥಾನಗಳನ್ನು ಗೆದ್ದಿದ್ದಾರೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News