ಬಾಂಗ್ಲಾದೇಶ: ಅಮೆರಿಕ ನಿರ್ಬಂಧ ವಿರೋಧಿಸಿ ಪ್ರತಿಭಟನೆ ಸಲ್ಲಿಕೆ

Update: 2021-12-12 18:21 GMT

ಢಾಕಾ, ಡಿ.12: ಬಾಂಗ್ಲಾದೇಶದ ಕ್ಷಿಪ್ರ ಕಾರ್ಯಪಡೆ(ಆರ್‌ಎಬಿ) ಹಾಗೂ ಭದ್ರತಾ ಪಡೆ ಮುಖ್ಯಸ್ಥರ ವಿರುದ್ಧ ಅಮೆರಿಕ ವಿಧಿಸಿರುವ ನಿರ್ಬಂಧವನ್ನು ವಿರೋಧಿಸಿ , ಅಮೆರಿಕದ ರಾಯಭಾರಿಯನ್ನು ಕರೆಸಿಕೊಂಡು ಪ್ರತಿಭಟನೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಾನವ ಹಕ್ಕು ಉಲ್ಲಂಘನೆ ಆರೋಪದಲ್ಲಿ ಆರ್‌ಎಬಿ ಹಾಗೂ ಭದ್ರತಾ ಪಡೆ ಅಧಿಕಾರಿ ವಿರುದ್ಧ ಅಮೆರಿಕ ಶನಿವಾರ ನಿರ್ಬಂಧ ಜಾರಿಗೊಳಿಸಿದೆ. 2018ರಿಂದ ಸುಮಾರು 600 ಕಾನೂನುಬಾಹಿರ ಹತ್ಯೆ ಹಾಗೂ ನೂರಾರು ಮಂದಿಯ ನಾಪತ್ತೆ ಪ್ರಕರಣದಲ್ಲಿ ಶಾಮೀಲಾಗಿರುವ ಆರೋಪದಲ್ಲಿ ಆರ್‌ಎಬಿ ವಿರುದ್ಧ ಈ ಕ್ರಮ ಕೈಗೊಂಡಿರುವುದಾಗಿ ಅಮೆರಿಕ ಹೇಳಿದೆ.

ಈ ಆರೋಪವನ್ನು ಬಾಂಗ್ಲಾದೇಶ ನಿರಾಕರಿಸಿದ್ದು ವಿದೇಶ ವ್ಯವಹಾರ ಕಾರ್ಯದರ್ಶಿ ಮಸೂದ್ ಬಿನ್ ಮೊಮೆನ್ ಅಮೆರಿಕದ ರಾಯಭಾರಿಯನ್ನು ಕರೆಸಿಕೊಂಡು ಈ ನಿರ್ಧಾರದ ಕುರಿತು ಅಸಮಾಧಾನ ವ್ಯಕ್ತಪಡಿಸಿ ಪ್ರತಿಭಟನೆ ಸಲ್ಲಿಸಿದ್ದಾರೆ ಎಂದು ಇಲಾಖೆ ಹೇಳಿದೆ. ಭಯೋತ್ಪಾದನೆ , ಮಾದಕ ವಸ್ತು ಕಳ್ಳಸಾಗಾಣಿಕೆ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಸರಕಾರದ ಘಟಕವನ್ನು ದುರ್ಬಲಗೊಳಿಸಲು ಅಮೆರಿಕ ನಿರ್ಧರಿಸಿರುವ ಬಗ್ಗೆ ವಿಷಾದವಿದೆ ಎಂದು ಇಲಾಖೆ ಹೇಳಿದೆ.

ಆರ್‌ಎಬಿ ಯಾವತ್ತೂ ಮಾನವ ಹಕ್ಕುಗಳಿಗೆ ಧಕ್ಕೆಯಾಗುವ ಕಾರ್ಯ ಮಾಡಿಲ್ಲ ಎಂದು ಆರ್‌ಎಬಿ ಉಪ ಮುಖ್ಯಸ್ಥ ಕೆಎಂ ಆಝಾದ್ ಪ್ರತಿಕ್ರಿಯಿಸಿದ್ದಾರೆ. ಇವರ ಮೇಲೆಯೂ ಅಮೆರಿಕದ ನಿರ್ಬಂಧ ಜಾರಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News