ನಟಿ ಕಂಗನಾರನ್ನು ಜ. 25ರ ವರೆಗೆ ಬಂಧಿಸುವುದಿಲ್ಲ: ಹೈಕೋರ್ಟ್ ಗೆ ಮುಂಬೈ ಪೊಲೀಸ್ ಭರವಸೆ

Update: 2021-12-13 16:43 GMT

ಮುಂಬೈ, ಡಿ. 12: ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಪ್ರತ್ಯೇಕತಾವಾದಿ ಗುಂಪುಗಳೊಂದಿಗೆ ನಂಟು ಇದೆ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ ಪೋಸ್ಟ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ನಟಿ ಕಂಗನಾ ರಣಾವತ್ ಅವರನ್ನು ಜನವರಿ 25ರ ವರೆಗೆ ಬಂಧಿಸುವುದಿಲ್ಲ ಎಂದು ಮುಂಬೈ ಪೊಲೀಸರು ಸೋಮವಾರ ಬಾಂಬೆ ಉಚ್ಚ ನ್ಯಾಯಾಲಯ ಕ್ಕೆ ತಿಳಿಸಿದ್ದಾರೆ. ಕಂಗನಾ ರಣಾವತ್ ಅವರ ಮುಕ್ತ ಅಭಿವ್ಯಕ್ತಿ ಸ್ವಾತಂತ್ರದ ಹಕ್ಕಿನ ಕುರಿತು ಅತಿ ದೊಡ್ಡ ಪ್ರಶ್ನೆಯನ್ನು ಈ ಪ್ರಕರಣ ಒಳಗೊಂಡಿದೆ ಹಾಗೂ ನ್ಯಾಯಾಲಯ ಅವರಿಗೆ ಮಧ್ಯಂತರ ಜಾಮೀನು ನೀಡಬೇಕಾಗುತ್ತದೆ ಎಂದು ಉಚ್ಚ ನ್ಯಾಯಾಲಯದ ಪೀಠ ಹೇಳಿದ ಬಳಿಕ ಪೊಲೀಸರು ಈ ಭರವಸೆ ನೀಡಿದ್ದಾರೆ. ಈ ವರ್ಷ ನವೆಂಬರ್‌ನಲ್ಲಿ ತನ್ನ ವಿರುದ್ಧ ದಾಖಲಿಸಿರುವ ಎಪ್ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಕಂಗನಾ ರಣಾವತ್ ಅವರು ಈ ತಿಂಗಳ ಆರಂಭದಲ್ಲಿ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು. ಕಂಗನಾ ಅವರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿ ದಿಲ್ಲಿ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಖಲಿಸ್ತಾನಿ ಹೋರಾಟ ಎಂಬಂತೆ ಚಿತ್ರಿಸಿದ್ದಾರೆ ಎಂದು ಆರೋಪಿಸಿ ಸಿಖ್ಖ್ ಸಂಘಟನೆ ಮುಂಬೈಯ ಖಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಸಮುದಾಯಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವ ಆರೋಪದಲ್ಲಿ ಕಂಗನಾ ರಣಾವತ್ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News