ದ.ಕೊರಿಯದಲ್ಲಿ ಕೊರೋನ ಹಾವಳಿ: 24 ತಾಸುಗಳಲ್ಲಿ 94 ಮಂದಿ ಸೋಂಕಿಗೆ ಬಲಿ
ಸಿಯೋಲ್,ಡಿ.14: ದಕ್ಷಿಣ ಕೊರಿಯದಲ್ಲಿ ಕೊರೋನ ಮಹಾಮಾರಿ ಸ್ಫೋಟಿಸಿದ್ದು, ಮಂಗಳವಾರ ಅತ್ಯಧಿಕ ಸಂಖ್ಯೆಯ ಮಂದಿ ಈ ಮಾರಕ ಸೋಂಕಿಗೆ ಬಲಿಯಾಗಿದ್ದಾರೆ. ಡೆಲ್ಟಾ ಪ್ರಭೇದ ಕೊರೋನ ವೈರಸ್ ಸೋಂಕಿತರಿಂದಾಗಿ ಆಸ್ಪತ್ರೆಗಳು ತುಂಬಿ ತುಳುಕುತ್ತಿದ್ದು, ಹಾಸಿಗೆ ದೊರೆಯದೆ ಹಲವಾರು ಮಂದಿ ಕೊನೆಯುಸಿರೆಳೆದಿರುವ ಬಗ್ಗೆ ವರದಿಗಳು ಬಂದಿವೆ.
ದ.ಕೊರಿಯದಲ್ಲಿ ಕಳೆದ 24 ತಾಸುಗಳಲ್ಲಿ 94 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, ಇನ್ನೂ 906 ಮಂದಿಯ ಸ್ಥಿತಿ ಗಂಭೀರ ಅಥವಾ ಚಿಂತಾಜನಕವಾಗಿದೆಯೆಂದು ತಿಳಿದುಬಂದಿದೆ. ಮಂಗಳವಾರ 5567 ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ಇದು ದಿನದ ಗರಿಷ್ಠ ಏರಿಕೆಯಾಗಿದೆ. ದೇಶಾದ್ಯಂತ ಕೊರೋನ ಸೋಂಕಿತರ ಚಿಕಿತ್ಸೆಗೆಂದೇ ನಿಯೋಜಿತವಾಗಿರುವ ಶೇ.86ರಷ್ಟು ತುರ್ತುನಿಗಾಘಟಕಗಳು ಈಗಾಗಲೇ ಭರ್ತಿಯಾಗಿವೆ.
1480ಕ್ಕೂ ಅಧಿಕ ರೋಗಿಗಳು ಆಸ್ಪತ್ರೆಗಳು ಅಥವಾ ಚಿಕಿತ್ಸಾ ಕೇಂದ್ರಗಳಲ್ಲಿ ದಾಖಲಾಗಲು ಕಾಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ಹಾಸಿಗೆಗಳಿಗಾಗಿ ಕಾಯುತ್ತಿದ್ದ ಕನಿಷ್ಠ 17 ರೋಗಿಗಳು ಮನೆಯಲ್ಲಿ ಅಥವಾ ಚಿಕಿತ್ಸಾ ಕೇಂದ್ರಗಳಲ್ಲಿ ಕೊನೆಯುಸಿರೆಳಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಕಳೆದ ವಾರದಿಂದ ದಕ್ಷಿಣ ಕೊರಿಯದಲ್ಲಿ ಸರಾಸರಿ ಪ್ರತಿದಿನ 6 ಸಾವಿರ ಹೊಸ ಪ್ರಕರಣಗಳು ವರದಿಯಾಗುತ್ತಿವೆ.