ಕಳೆದ ಐದು ವರ್ಷಗಳಲ್ಲಿ ವಿದೇಶಿ ಖಾತೆಗಳಲ್ಲಿಯ ಕಪ್ಪುಹಣದ ಅಧಿಕೃತ ಅಂದಾಜು ಇಲ್ಲ: ಕೇಂದ್ರ

Update: 2021-12-14 16:52 GMT

ಹೊಸದಿಲ್ಲಿ,ಡಿ.14: ಕಳೆದ ಐದು ವರ್ಷಗಳಲ್ಲಿ ವಿದೇಶಿ ಖಾತೆಗಳಲ್ಲಿ ಎಷ್ಟು ಕಪ್ಪುಹಣವಿದೆ ಎಂಬ ಬಗ್ಗೆ ಅಧಿಕೃತ ಅಂದಾಜು ಇಲ್ಲ,ಆದಾಗ್ಯೂ 2015ರಲ್ಲಿ ಒಂದು ಸಲದ ಮೂರು ತಿಂಗಳ ಪಾಲನಾ ಗವಾಕ್ಷಿಯಡಿ ತೆರಿಗೆ ಮತ್ತು ದಂಡಗಳ ರೂಪದಲ್ಲಿ 2,476 ಕೋ.ರೂ.ಗಳನ್ನು ಸಂಗ್ರಹಿಸಲಾಗಿದೆ ಎಂದು ಸಹಾಯಕ ವಿತ್ತಸಚಿವ ಪಂಕಜ ಚೌಧರಿಯವರು ಮಂಗಳವಾರ ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದರು.

ಕಪ್ಪುಹಣ (ಅಘೋಷಿತ ವಿದೇಶಿ ಆದಾಯ ಮತ್ತು ಆಸ್ತಿಗಳು) ಮತ್ತು ದಂಡ ಹೇರಿಕೆ ಕಾಯ್ದೆ,2015ರಡಿ ಒಂದು ಸಲಕ್ಕೆ ಪ್ರಕಟಿಸಲಾಗಿದ್ದ ಮೂರು ತಿಂಗಳ ಅವಧಿಯ ಪಾಲನಾ ಗವಾಕ್ಷಿ ಯೋಜನೆ 2015,ಸೆ.30ಕ್ಕೆ ಅಂತ್ಯಗೊಂಡಿತ್ತು ಮತ್ತು ಅದರಡಿ 4,164 ಕೋ.ರೂ.ಗಳ ಅಘೋಷಿತ ವಿದೇಶಿ ಆಸ್ತಿಗಳ 648 ಪ್ರಕರಣಗಳನ್ನು ಬಹಿರಂಗಗೊಳಿಸಲಾಗಿತ್ತು ಹಾಗೂ ತೆರಿಗೆ ಮತ್ತು ದಂಡಗಳ ರೂಪದಲ್ಲಿ 2,476 ಕೋ.ರೂ.ಗಳನ್ನು ಸಂಗ್ರಹಿಸಲಾಗಿತ್ತು ಎಂದ ಅವರು,ವಿದೇಶಗಳಲ್ಲಿಯ ಕಪ್ಪುಹಣದ ವಿರುದ್ಧ ಸರಕಾರವು ತೆಗೆದುಕೊಂಡಿರುವ ವಿವಿಧ ಕ್ರಮಗಳು ಧನಾತ್ಮಕ ಫಲಿತಾಂಶಗಳನ್ನು ನೀಡಿವೆ ಎಂದರು.

2014ರಿಂದ 2021 ನ.30ರವರೆಗೆ ವಿದೇಶಗಳಿಂದ ಭಾರತಕ್ಕೆ ಮರಳಿ ತರಲಾಗಿರುವ ಕಪ್ಪುಹಣದ ವಿವರಗಳ (ವರ್ಷ ಮತ್ತು ದೇಶವಾರು) ಕುರಿತು ಸಂಸದರಾದ ಸುಖರಾಮ್ ಸಿಂಗ್ ಯಾದವ್ ಮತ್ತು ವಿಶ್ವಂಭರ ಪ್ರಸಾದ್ ನಿಷಾದ್ ಅವರು ಕೇಳಿದ್ದ ಪ್ರಶ್ನೆಗೆ ಸಚಿವರು ಉತ್ತರಿಸುತ್ತಿದ್ದರು.

ಮೇ 2014ರಲ್ಲಿ ಅಧಿಕಾರಕ್ಕೇರಿದ್ದ ಹಾಲಿ ಬಿಜೆಪಿ ನೇತೃತ್ವದ ಸರಕಾರದ ಚುನಾವಣಾ ಪ್ರಣಾಳಿಕೆಯಲ್ಲಿ ವಿದೇಶಗಳಲ್ಲಿಯ ಕಪ್ಪುಹಣವನ್ನು ಮರಳಿ ತರುವುದು ಮುಖ್ಯ ಅಂಶವಾಗಿತ್ತು.

ಈವರೆಗೆ ‘ಎಚ್‌ಎಸ್‌ಬಿಸಿ ಪ್ರಕರಣಗಳಲ್ಲಿ’ ವರದಿಯಾಗದ ಬ್ಯಾಂಕ್ ಖಾತೆಗಳಲ್ಲಿಯ ಠೇವಣಿಗಳಲ್ಲಿಯ 8,466 ಕೋ.ರೂ.ಗಳಿಗೂ ಅಘೋಷಿತ ಆದಾಯವನ್ನು ತೆರಿಗೆಗೊಳಪಡಿಸಲಾಗಿದ್ದು,1,294 ಕೋ.ರೂ.ಗೂ ಅಧಿಕ ದಂಡವನ್ನು ವಿಧಿಸಲಾಗಿದೆ ಎಂದು ಚೌಧರಿ ತಿಳಿಸಿದರು.

ಅಂತರರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ(ಐಸಿಐಜೆ)ವು ಬಹಿರಂಗಗೊಳಿಸಿರುವ ಪ್ರಕರಣಗಳಲ್ಲಿ ನಡೆಸಲಾದ ತನಿಖೆಗಳಿಂದ ಈವರೆಗೆ ಅಘೋಷಿತ ವಿದೇಶಿಖಾತೆಗಳಲ್ಲಿ ಜಮಾ ಮಾಡಲಾಗಿದ್ದ 11,010 ಕೋ.ರೂ.ಗೂ ಅಧಿಕ ಹಣ ಪತ್ತೆಯಾಗಿದೆ ಎಂದರು.

ಪನಾಮಾ ದಾಖಲೆಗಳಲ್ಲಿ ಹೆಸರುಗಳನ್ನು ಪ್ರಕಟಿಸಲಾಗಿದ್ದ ವ್ಯಕ್ತಿಗಳು ಮತ್ತು ಕಂಪನಿಗಳ ವಿರುದ್ಧ ಈವರೆಗೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಪ್ರಶ್ನೆಗೆ ಸಂಬಂಧಿಸಿದಂತೆ ಸಚಿವರು,ಪನಾಮಾ ಮತ್ತು ಪ್ಯಾರಡೈಸ್ ದಾಖಲೆಗಳ ಸೋರಿಕೆಯಲ್ಲಿನ ಭಾರತದೊಂದಿಗೆ ನಂಟು ಹೊಂದಿದ್ದ 930 ಕಂಪನಿಗಳಿಗೆ ಸಂಬಂಧಿಸಿದಂತೆ 20,353 ಕೋ,ರೂ.ಗಳ ಅಘೋಷಿತ ಮೊತ್ತವನ್ನು ಪತ್ತೆ ಹಚ್ಚಲಾಗಿದ್ದು,ಈವರೆಗೆ 153.88 ಕೋ.ರೂ.ಗಳ ತೆರಿಗೆಯನ್ನು ಸಂಗ್ರಹಿಸಲಾಗಿದೆ. ಅಲ್ಲದೆ ಪನಾಮಾ ಮತ್ತು ಪ್ಯಾರಡೈಸ್ ದಾಖಲೆ ಸೋರಿಕೆಗಳ 52 ಪ್ರಕರಣಗಳಲ್ಲಿ ಕಪ್ಪುಹಣ ಕಾಯ್ದೆಯಡಿ ಕ್ರಿಮಿನಲ್ ಕಾನೂನು ಕ್ರಮಕ್ಕಾಗಿ ದೂರುಗಳನ್ನು ಸಲ್ಲಿಸಲಾಗಿದೆ. 130 ಪ್ರಕರಣಗಳಲ್ಲಿ ಕಾಯ್ದೆಯಡಿ ಕಾನೂನು ಕ್ರಮಗಳನ್ನು ಆರಂಭಿಸಲಾಗಿದೆ ಎಂದರು.

ಹಣಕಾಸು ಮಾಹಿತಿಗಳ ಹಂಚಿಕೆಗಾಗಿ ಬಹುರಾಷ್ಟ್ರೀಯ ವ್ಯವಸ್ಥೆ, ಮೇ 2014ರಲ್ಲಿ ಕಪ್ಪುಹಣ ಕುರಿತು ವಿಶೇಷ ತನಿಖಾ ತಂಡ ಸ್ಥಾಪನೆ, ಕಪ್ಪುಹಣ ಕುರಿತು 2015 ಜುಲೈನಲ್ಲಿ ಜಾರಿಗೊಳಿಸಲಾದ ನೂತನ ಕಠಿಣ ಕಾನೂನು ಇವೆಲ್ಲ ಕಪ್ಪುಹಣವನ್ನು ಹತ್ತಿಕ್ಕಲು ಸರಕಾರವು ತೆಗೆದುಕೊಂಡಿರುವ ಕ್ರಮಗಳಲ್ಲಿ ಸೇರಿವೆ ಎಂದು ಸಚಿವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News