ಹವಾಮಾನ ಬದಲಾವಣೆ ಮಾತುಕತೆ: ಭದ್ರತಾಮಂಡಳಿಗೆ ವರ್ಗಾವಣೆ ನಿರ್ಣಯದ ವಿರುದ್ಧ ಭಾರತ ಮತ

Update: 2021-12-14 17:04 GMT

ವಿಶ್ವಸಂಸ್ಥೆ,ಡಿ.14: ಹವಾಮಾನವನ್ನು ಭದ್ರತೆಯ ಜೊತೆ ನಂಟು ಕಲ್ಪಿಸುವ ಕುರಿತಾದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್‌ಎಸ್‌ಸಿ) ಕರಡು ನಿರ್ಣಯದ ವಿರುದ್ಧ ಸೋಮವಾರ ಮತ ಚಲಾಯಿಸಿದೆ. ಹವಾಮಾನ ಬದಲಾವಣೆಯ ಕುರಿತ ಮಾತುಕತೆಯನ್ನು ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಕುರಿತ ಒಡಂಬಡಿಕೆಯ ಕಾರ್ಯಚೌಕಟ್ಟಿನಿಂದ ಭದ್ರತಾ ಮಂಡಳಿಗೆ ವರ್ಗಾಯಿಸುವ ಪ್ರಯತ್ನ ಇದಾಗಿದೆಯೆಂದು ಅದು ಆರೋಪಿಸಿದೆ. ಹವಾಮಾನ ಬದಲಾವಣೆ ಕುರಿತಾಗಿ ಜಗತ್ತಿನ ರಾಷ್ಟ್ರಗಳು ಸಾಮೂಹಿಕ ಕ್ರಮವನ್ನು ಕೈಗೊಳ್ಳುವುದಕ್ಕೆ ಇದರಿಂದ ಹಿನ್ನಡೆಯಾಗಲಿದೆಯೆಂದು ಭಾರತ ಅಸಮಾಧಾನ ವ್ಯಕ್ತಪಡಿಸಿದೆ.

 ಹವಾಮಾನ ಬದಲಾವಣೆ ಕುರಿತ ಮಾತುಕತೆಗಳನ್ನು ಭದ್ರತೆಯ ಜೊತೆ ನಂಟು ಕಲ್ಪಿಸುವ ನಿರ್ಣಯವನ್ನು ಐಯರ್‌ಲ್ಯಾಂಡ್ ಹಾಗೂ ನೈಜರ್ ದೇಶಗಳು ಪ್ರಾಯೋಜಿಸಿದ್ದವು. ಭದ್ರತಾ ಮಂಡಳಿಯ 12 ಸದಸ್ಯ ರಾಷ್ಟ್ರಗಳು ನಿರ್ಣಯವನ್ನು ಬೆಂಬಲಿಸಿ ಮತಚಲಾಯಿಸಿದವು. ಭಾರತ ಹಾಗೂ ರಶ್ಯ ವಿರುದ್ಧವಾಗಿ ಮತ ಹಾಕಿದ್ದವು ಹಾಗೂ ಚೀನಾ ಮತದಾನಕ್ಕೆ ಗೈರು ಹಾಜರಾಗಿತ್ತು.
 ವಿಶ್ವಸಂಸ್ಥೆಯ ಭದ್ರತಾ ಮಂಡಳಿ.ಯ ಅಧ್ಯಕ್ಷತೆಯನ್ನು ಹೊಂದಿರುವ ನೈಜರ್ ಡಿಸೆಂಬರ್ ಒಂಬತ್ತರಂದು ಭಯೋತ್ಪಾದನೆ ಹಾಗೂ ಹವಾಮಾನ ಬದಲಾವಣೆಯ ಗ್ರಹಿಕೆಯೊಂದಿಗೆ ಅಂತಾರಾಷ್ಟ್ರೀಯ ಶಾಂತಿ ಹಾಗೂ ಭದ್ರತೆಯ ನಿರ್ವಹಣೆ' ವಿಷಯದ ಬಗ್ಗೆ ವಿಚಾರ ಸಂಕಿರಣವನ್ನು ಏರ್ಪಡಿಸಿತ್ತು.
     ಹವಾಮಾನ ಬದಲಾವಣೆಯ ಕುರಿತ ಚರ್ಚೆಯನ್ನು ಭದ್ರತಾ ಮಂಡಳಿಗೆ ತರಲು ಪ್ರಯತ್ನಿಸುವುದನ್ನು ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ ತೀವ್ರವಾಗಿ ವಿರೋಧಿಸಿದ್ದಾರೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪಾಲ್ಗೊಳ್ಳುವಿಕೆಯಿಲ್ಲದೆ ಅಥವಾ ಸಹಮತವಿಲ್ಲದೆ ನಿರ್ಧಾರಗಳನ್ನು ಕೈಗೊಳ್ಳಬಹುದೆಂಬ ಕಾರಣಕ್ಕಾಗಿ ಕೆಲವು ದೇಶಗಳು ಹವಾಮಾನ ಬದಲಾವಣೆ ಕುರಿತ ವಿಷಯಗಳನ್ನು ಭದ್ರತಾ ಮಂಡಳಿಗೆ ತರಲು ಯತ್ನಿಸುತ್ತಿರುವುದಾಗಿ ಅವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News