ಸಿರಮ್ ಇನ್ಸ್ಟಿಟ್ಯೂಟ್‌ ನಿಂದ 6 ತಿಂಗಳಲ್ಲಿ ಮಕ್ಕಳಿಗೆ ಕೋವಿಡ್ ಲಸಿಕೆ: ಪೂನಾವಾಲ

Update: 2021-12-14 17:52 GMT

ಹೊಸದಿಲ್ಲಿ, ಡಿ. 14: ಮುಂದಿನ 6 ತಿಂಗಳಲ್ಲಿ ಸಿರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ)   ಮಕ್ಕಳಿಗೆ ಕೋವಿಡ್ ಲಸಿಕೆ ಬಿಡುಗಡೆ ಮಾಡಲಿದೆ ಎಂದು ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅದಾರ್ ಪೂನಾವಾಲ ಮಂಗಳವಾರ ಹೇಳಿದ್ದಾರೆ. ‌

ಕೈಗಾರಿಕಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಪೂನಾವಾಲ, ‘‘ಲಸಿಕೆ ಕೊವೋವ್ಯಾಕ್ಸ್ ಪರೀಕ್ಷೆಯ ಹಂತದಲ್ಲಿದೆ. ಈ ಲಸಿಕೆ ಮೂರು ವರ್ಷಗಳ ವರೆಗೆ ಮಕ್ಕಳಿಗೆ ಎಲ್ಲಾ ರೀತಿಯಿಂದಲೂ ರಕ್ಷಣೆ ನೀಡಲಿದೆ. ಪ್ರಸಕ್ತ ಇರುವ ಕೋವಿಶೀಲ್ಡ್ ಹಾಗೂ ಇತರ ಕೋವಿಡ್ ಲಸಿಕೆಗಳು 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಅನುಮೋದಿಸಲಾಗಿದೆ’’ ಎಂದಿದ್ದಾರೆ. ‘‘ನಾವು ಮಕ್ಕಳಲ್ಲಿ ತೀವ್ರವಾದ ಕಾಯಿಲೆಯನ್ನು ನೋಡಿಲ್ಲ. ಅದೃಷ್ಟವಶಾತ್ ಮಕ್ಕಳ ವಿಷಯದಲ್ಲಿ ಯಾವುದೇ ರೀತಿಯ ಆತಂಕ ಇಲ್ಲ. ಆದರೂ 6 ತಿಂಗಳಲ್ಲಿ ಮಕ್ಕಳಿಗೆ ಲಸಿಕೆ ಬಿಡುಗಡೆ ಮಾಡಲಿದ್ದೇವೆ. ಇದು ಮಕ್ಕಳಿಗೆ 3 ವರ್ಷಗಳ ವರೆಗೆ ರಕ್ಷಣೆ ನೀಡುವ ನಿರೀಕ್ಷೆ ಇದೆ’’ ಎಂದು ಪೂನಾವಾಲ ಹೇಳಿದ್ದಾರೆ. 

ಪರವಾನಿಗೆ ಪಡೆದುಕೊಂಡ ಹಾಗೂ ಲಸಿಕೆಗಳು ಶೀಘ್ರದಲ್ಲಿ ಲಭ್ಯವಾಗುವ ಎರಡು ಕಂಪೆನಿಗಳು ಈಗಾಗಲೇ ಭಾರತದಲ್ಲಿ ಇವೆ ಎಂದು ಅವರು ಉಲ್ಲೇಖಿಸಿದರು. ‘‘ಹೌದು, ಅನ್ನಿಸುತ್ತದೆ. ನೀವು ನಿಮ್ಮ ಮಕ್ಕಳನ್ನು ಕರೆದುಕೊಂಡು ಹೋಗಿ ಲಸಿಕೆ ಹಾಕಬೇಕು. ಇದರಿಂದ ಯಾವುದೇ ಅಪಾಯ ಇಲ್ಲ. ಈ ಲಸಿಕೆಗಳು ಸುರಕ್ಷಿತ, ಪರಿಣಾಮಕಾರಿ ಎಂದು ಸಾಬೀತಾಗಿದೆ. ಯಾವುದೇ ರೀತಿಯಿಂದಲೂ ನಿಮ್ಮ ಮಕ್ಕಳಿಗೆ ಲಸಿಕೆ ನೀಡಬೇಕು ಎಂದು ನೀವು ಬಯಸಿದರೆ, ಈ ಬಗ್ಗೆ ಸರಕಾರದ ಘೋಷಣೆಗೆ ಕಾಯಿರಿ. ಅನಂತರ ಮುಂದುವರಿಯಿರಿ’’ ಎಂದು ಅವರು ಹೇಳಿದ್ದಾರೆ. 

‘‘ಮಕ್ಕಳಿಗೆ ನಮ್ಮ ಕೊವೋವ್ಯಾಕ್ಸ್ ಲಸಿಕೆ ಆರು ತಿಂಗಳಲ್ಲಿ ಬಿಡುಗಡೆಯಾಗಲಿದೆ. ಕೊವೋವ್ಯಾಕ್ಸ್ ಪರೀಕ್ಷೆಯ ಹಂತದಲ್ಲಿದೆ. ಲಸಿಕೆ ಕಾರ್ಯ ನಿರ್ವಹಿಸಲಿದೆ ಹಾಗೂ ಸೋಂಕು ರೋಗಗಳ ವಿರುದ್ಧ ಮಕ್ಕಳಿಗೆ ರಕ್ಷಣೆ ನೀಡಲಿದೆ ಎಂಬುದನ್ನು ಸಾಕಷ್ಟು ದತ್ತಾಂಶ ತಿಳಿಸಿದೆ’’ ಎಂದು ಪೂನಾವಾಲ ಅವರು ಹೇಳಿದ್ದಾರೆ. ‘‘ಒಮೈಕ್ರಾನ್ನಿಂದ ಏನಾಗುತ್ತದೆ ಎಂದು ನನಗೆ ತಿಳಿದಿಲ್ಲ. ಆದರೆ, ಇದುವರೆಗೆ ಈ (ಕೋವಿಡ್) ವೈರಸ್ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡಿಲ್ಲ. ಮಕ್ಕಳ ದೇಹ, ಜೀವಕೋಶ ಹಾಗೂ ಅವರ ಶ್ವಾಸಕೋಶ ಉತ್ತಮವಾಗಿ ಚೇತರಿಸಿಕೊಳ್ಳುತ್ತದೆ ಎಂಬುದು ನನ್ನ ಭಾವನೆ’’ ಎಂದು ಪೂನಾವಲ್ಲಾ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News