ತುರ್ತು ವೈದ್ಯಕೀಯ ಸಂದರ್ಭಗಳಿಗಾಗಿ ಪ್ರಮುಖ ಹೆದ್ದಾರಿಗಳುದ್ದಕ್ಕೂ ಹೆಲಿಪ್ಯಾಡ್ ಸ್ಥಾಪನೆ ಪ್ರಸ್ತಾವ
ಹೊಸದಿಲ್ಲಿ,ಡಿ.14: ಅಪಘಾತದ ಗಾಯಾಳುಗಳನ್ನು ಹೆಲಿಕಾಪ್ಟರ್‌ಗಳಲ್ಲಿ ಆಸ್ಪತ್ರೆಗೆ ಸಾಗಿಸಲು ಪ್ರಮುಖ ಹೆದ್ದಾರಿಗಳುದ್ದಕ್ಕೂ ಹೆಲಿಪ್ಯಾಡ್‌ಗಳ ನಿರ್ಮಾಣದ ಪ್ರಸ್ತಾವವನ್ನು ಕೇಂದ್ರವು ಪರಿಶೀಲಿಸುತ್ತಿದೆ.
ದೇಶದ ಹೆಲಿಕಾಪ್ಟರ್ ಕ್ಷೇತ್ರವನ್ನು ಉತ್ತೇಜಿಸುವ ಪ್ರಯತ್ನವಾಗಿ ಹೆಲಿಕಾಪ್ಟರ್ ತುರ್ತು ವೈದ್ಯಕೀಯ ಸೇವೆ (ಎಚ್ಇಎಂಎಸ್) ಯನ್ನು ಆರಂಭಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಸಿಐಐ ಏರ್ಪಡಿಸಿದ್ದ ಶೃಂಗಸಭೆಯಲ್ಲಿ ಮಾತನಾಡುತ್ತಿದ್ದ ಕೇಂದ್ರ ನಾಗರಿಕ ವಾಯುಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ತಿಳಿಸಿದರು.
ಭಾರತದಲ್ಲಿ ಸುಮಾರು 250 ಹೆಲಿಕಾಪ್ಟರ್ ಗಳಿದ್ದು, ಈ ಪೈಕಿ 181ನ್ನು ಅನುಸೂಚಿತವಲ್ಲದ ಆಪರೇಟರ್ಗಳು ನಿರ್ವಹಿಸುತ್ತಿದ್ದಾರೆ. ಪ್ರತಿ ಜಿಲ್ಲೆಗೆ ಒಂದಕ್ಕೂ ಕಡಿಮೆ ಹೆಲಿಪ್ಯಾಡ್‌ಗಳಿವೆ ಎಂದರು.
ನಾಗರಿಕ ವಾಯುಯಾನ ಸಚಿವಾಲಯವು ಇತ್ತೀಚಿಗೆ ನೂತನ ಹೆಲಿಕಾಪ್ಟರ್ ನೀತಿಯನ್ನು ತಂದಿದ್ದು,ಇದು ಪ್ರಕ್ರಿಯೆಗಳನ್ನು ಸರಳಗೊಳಿಸಿದೆ. ಅಲ್ಲದೆ ಹೆಲಿಕಾಪ್ಟರ್ ಕಾರಿಡಾರ್‌ಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದ್ದು,ಮುಂಬೈನಿಂದ ಪುಣೆ, ಬೇಗಮ್ ಪೇಟ್‌ನಿಂದ ಶಮ್ಸಾಬಾದ್ ಮತ್ತು ಅಹ್ಮದಾಬಾದ್ ನಿಂದ ಗಾಂಧಿನಗರ ಹೀಗೆ ಮೂರು ಇಂತಹ ಕಾರಿಡಾರ್‌ಗಳು ಈಗಾಗಲೇ ಅಸ್ತಿತ್ವದಲ್ಲಿವೆ.