ಮತಾಂತರ ನಿಷೇಧ ಕಾಯ್ದೆ: ಅಂಬೇಡ್ಕರ್‌ಗೂ ಅನ್ವಯವಾಗುತ್ತದೆಯೇ?

Update: 2021-12-16 02:42 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಮತಾಂತರ ನಿಜಕ್ಕೂ ಭಾರತದ ಸಮಸ್ಯೆಯೇ? ಅಥವಾ ಪರಿಹಾರವೇ? ಬಿಜೆಪಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುತ್ತಿರುವ ಈ ಸಂದರ್ಭದಲ್ಲಿ ಈ ಎರಡು ಪ್ರಶ್ನೆಗಳು ತೀವ್ರ ಚರ್ಚೆಯಲ್ಲಿವೆ. ಸ್ವಾತಂತ್ರೋತ್ತರ ಭಾರತದ ಅತಿ ಮಹತ್ವದ ಮತಾಂತರವಾಗಿ ಪರಿಗಣಿಸಲ್ಪಟ್ಟಿರುವುದು ಡಾ. ಬಿ.ಆರ್. ಅಂಬೇಡ್ಕರ್ ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಆದ ಮತಾಂತರ. ಅಂಬೇಡ್ಕರ್ ದಲಿತರಾಗಿದ್ದರೂ ಅತಿ ಹೆಚ್ಚು ಸುಶಿಕ್ಷಿತರಾಗಿದ್ದರು. ಈ ದೇಶದ ಸಂವಿಧಾನ ಕರ್ತೃಗಳಲ್ಲಿ ಒಬ್ಬರಾಗಿದ್ದರು. ಅಷ್ಟೇ ಅಲ್ಲ, ಅತ್ಯುನ್ನತ ಸ್ಥಾನಮಾನವನ್ನು ಹೊಂದಿದ್ದರು. ಭಾರತದ ಸಾಮಾಜಿಕ ಪರಿಸ್ಥಿತಿಯಲ್ಲಿ ಒಬ್ಬ ದಲಿತ ಸುಶಿಕ್ಷಿತನಾಗಿ, ಹಣವಂತನಾದರೂ, ಆತನಿಗೆ ಧಾರ್ಮಿಕವಾಗಿ ಸೂಕ್ತ ಸ್ಥಾನಮಾನವನ್ನು ಮೇಲ್‌ಜಾತಿಯ ಜನರು ನೀಡುವುದಿಲ್ಲ ಎಂದು ಅಂಬೇಡ್ಕರ್ ನಂಬಿದ್ದರು. ಆದುದರಿಂದಲೇ ಅವರು ಅನಿವಾರ್ಯವಾಗಿ ಬೌದ್ಧ ಧರ್ಮಕ್ಕೆ ಮತಾಂತರವಾದರು. ಇದು ಅಪಾರ ಚಿಂತನೆ, ವಿಮರ್ಶೆಗಳ ಬಳಿಕ ಅವರು ತೆಗೆದುಕೊಂಡ ನಿರ್ಧಾರವಾಗಿತ್ತು. ಅಂಬೇಡ್ಕರ್ ಪಾಲಿಗೆ ಮತಾಂತರ ಸಮಸ್ಯೆಯಾಗಿರಲಿಲ್ಲ, ಬದಲಿಗೆ ಅವರ ಬದುಕಿನ ಸಮಸ್ಯೆಗೆ ಒಂದು ಪರಿಹಾರವಾಗಿತ್ತು. ತೀರಾ ಇತ್ತೀಚೆಗೆ ಶಿಯಾ ಸಮುದಾಯದ ಮುಖಂಡರೊಬ್ಬರು ಹಿಂದೂ ಧರ್ಮದ ಮೇಲ್‌ಜಾತಿಯೊಂದಕ್ಕೆ ಮತಾಂತರವಾದರು.

ಈ ಮತಾಂತರದಿಂದ ಮುಸ್ಲಿಮರಿಗಾಗಲಿ, ಇನ್ನಿತರರಿಗಾಗಲಿ ಯಾವುದೇ ಸಮಸ್ಯೆ ಸೃಷ್ಟಿಯಾಗಲಿಲ್ಲ. ರಿಝ್ವಿ ಅವರ ಪಾಲಿಗೆ ಈ ಮತಾಂತರ ಅವರ ಸಮಸ್ಯೆಗೆ ಒಂದು ಪರಿಹಾರವಾಗಿತ್ತು. ರಿಝ್ವಿ ಮತಾಂತರವನ್ನು ಸಮರ್ಥಿಸುವ ಮೂಲಕ, ಸ್ವತಃ ಬಿಜೆಪಿ ನಾಯಕರೇ ಮತಾಂತರವನ್ನು ನೇರವಾಗಿ ಬೆಂಬಲಿಸಿದ್ದಾರೆ. ಹೀಗಿರುವಾಗ, ಒಬ್ಬ ಕ್ರಿಶ್ಚಿಯನ್, ಬೌದ್ಧ ಅಥವಾ ಇಸ್ಲಾಂ ಧರ್ಮಕ್ಕೆ ಮತಾಂತರವಾದಾಗ ಅದು ಆಮಿಷದ ಅಥವಾ ಬಲವಂತದ ಮತಾಂತರ ಎಂದು ಕರೆಯಲ್ಪಡುವುದು ಯಾಕೆ? ಬಿಜೆಪಿ ಮತ್ತು ಸಂಘಪರಿವಾರದ ನಾಯಕರು ಮತಾಂತರ ನಿಷೇಧ ಕಾಯ್ದೆಯ ಮೂಲಕ ‘ಬಲವಂತದ ಮತಾಂತರ’ವನ್ನು ತಡೆಯುತ್ತೇವೆ ಎಂದು ಹೇಳುತ್ತಿದ್ದಾರೆ. ಬಲವಂತವಾಗಿ ಮತಾಂತರ ಮಾಡುವುದು ಹೇಗೆ ಸಾಧ್ಯ? ಬೆದರಿಕೆಯಿಂದ ಮತಾಂತರವಾಗಿರುವ ಯಾವುದಾದರೂ ಪ್ರಕರಣಗಳು ನಮ್ಮ ಮುಂದಿದೆಯೆ? ಒಂದು ನಂಬಿಕೆಯನ್ನು ಬಲವಂತವಾಗಿ ಹೇರುವುದು ಎಂದರೆ ಏನು? ಈ ದೇಶದಲ್ಲಿ ತನಗೆ ಬೇಕಾದ ಧಾರ್ಮಿಕ ನಂಬಿಕೆಯನ್ನು ಒಪ್ಪಿಕೊಳ್ಳುವ, ತನಗೆ ಸರಿಕಾಣದ ನಂಬಿಕೆಯನ್ನು ತಿರಸ್ಕರಿಸುವ ಎಲ್ಲ ಹಕ್ಕುಗಳು ಶ್ರೀಸಾಮಾನ್ಯರಿಗಿದೆ.

ಒಂದು ನಂಬಿಕೆಯ ಮೇಲೆ ಭರವಸೆ ಕಳೆದಕೊಂಡು ಇನ್ನೊಂದು ನಂಬಿಕೆಯ ಕಡೆಗೆ ಒಬ್ಬ ಹೊರಳುತ್ತಿರುವಾಗ, ‘ನೀನು ಆ ನಂಬಿಕೆಯನ್ನು ಹೊಂದಕೂಡದು, ನಮ್ಮದೇ ನಂಬಿಕೆಯ ಜೊತೆಗೆ ಬದುಕಬೇಕು’ ಎಂದು ಒತ್ತಾಯಿಸುವುದೂ ‘ಬಲವಂತ’ವೇ ಆಗಿದೆ. ಮತಾಂತರ ನಿಷೇಧ ಕಾಯ್ದೆಯ ಮೂಲಕ, ಒಂದು ಧರ್ಮದ ಬಗ್ಗೆ ನಂಬಿಕೆ ಕಳೆದುಕೊಂಡವರಿಗೆ, ಅದರಿಂದ ಸಂತ್ರಸ್ತರಾದವರಿಗೆ ಬಲವಂತವಾಗಿ ಅದನ್ನು ಹೇರುವ ಪ್ರಯತ್ನವನ್ನು ಸರಕಾರ ನಡೆಸುತ್ತಿದೆ. ಈ ದೇಶದಲ್ಲಿ ಧರ್ಮದೊಳಗಿರುವ ಜಾತಿಗಳು ಒಬ್ಬ ವ್ಯಕ್ತಿಯ ಸ್ಥಾನಮಾನಗಳನ್ನು ನಿರ್ಧರಿಸುವುದರಿಂದ, ಮತಾಂತರ ನಿಷೇಧವೆನ್ನುವುದು ಒಬ್ಬನೇ ಆಲೋಚಿಸುವ, ಚಿಂತಿಸುವ ಹಕ್ಕಿಗೆ ತೊಡಿಸುವ ಕಡಿವಾಣವೆಂದು ವ್ಯಾಖ್ಯಾನಿಸಬಹುದು. ಇಷ್ಟಕ್ಕೂ ಮತಾಂತರವೆಂದಲ್ಲ, ಒಬ್ಬನ ಮೇಲೆ ಬಲವಂತದಿಂದ ಏನನ್ನು ಹೇರಿದರೂ ಅದು ಅಪರಾಧವೇ ಆಗಿದೆ. ಹೇಗೆ ಬಲವಂತದ ಮತಾಂತರ ತಪ್ಪೋ, ಹಾಗೆಯೇ ಒಬ್ಬನ ಮತಾಂತರದ ನಿರ್ಧಾರವನ್ನು ಬಲವಂತದಿಂದ ತಡೆಯುವುದೂ ಸಂವಿಧಾನ ವಿರೋಧಿಯೇ ಆಗಿದೆ.

ನಾಳೆ ಒಬ್ಬ ಹಿಂದೂ ಅಥವಾ ಮುಸ್ಲಿಮನಾದವನು ದೇವರನ್ನೇ ನಂಬದೆ ನಾಸ್ತಿಕನಾದರೆ, ಹಾಗೆ ನಾಸ್ತಿಕನಾಗಲು ಪ್ರೇರೇಪಿಸಿದವನ ಮೇಲೆ ಮೊಕದ್ದಮೆ ದಾಖಲಿಸಬಹುದೇ? ದೇವರ ಅಸ್ತಿತ್ವವನ್ನೇ ನಿರಾಕರಿಸುವ ನೂರಾರು ಪುಸ್ತಕಗಳು ನಮ್ಮ ನಡುವೆ ಇವೆೆ. ಅಂತಹ ಪುಸ್ತಕಗಳನ್ನು ಮಾರುವುದು, ಪ್ರಚಾರ ಮಾಡುವವರನ್ನು ‘ಮತಾಂತರ ನಿಷೇಧ’ ಕಾಯ್ದೆಯಡಿ ಬಂಧಿಸಬಹುದೇ? ಆಮಿಷದಿಂದ ಮತಾಂತರ ಮಾಡುವುದು ಹೇಗೆ ಸಾಧ್ಯ? ಉದಾಹರಣೆಗೆ ತನ್ನ ಧಾರ್ಮಿಕ ನಂಬಿಕೆಗಿಂತ ಒಂದು ಹೊತ್ತಿನ ಊಟ ದೊಡ್ಡದು ಎಂದು ಒಬ್ಬನಿಗೆ ಅನ್ನಿಸಿದರೆ, ಸರಕಾರ ಅದನ್ನು ಆಮಿಷ ಎಂದು ಕರೆಯುವ ಬದಲು, ಆತನಿಗೆ ಊಟದ ವ್ಯವಸ್ಥೆ ಮಾಡಬೇಕು. ಯಾವಾಗ ಸರಕಾರಕ್ಕೆ ಆ ವ್ಯವಸ್ಥೆಯನ್ನು ಮಾಡಲು ಸಾಧ್ಯವಿಲ್ಲವೋ, ಆಗ ತನಗೆ ಊಟ ಕೊಟ್ಟ ವ್ಯಕ್ತಿಯ ಧರ್ಮ, ನಂಬಿಕೆಯ ಬಗ್ಗೆ ಅವನಿಗೆ ಗೌರವ ಹೆಚ್ಚಬಹುದು. ಇಲ್ಲಿ ತಪ್ಪು ಯಾರದು? ಊಟ ಕೊಟ್ಟವನದೋ ಅಥವಾ ಅವನನ್ನು ಹಸಿವಿನಲ್ಲಿಟ್ಟ ಸರಕಾರದ್ದೋ? ಮುಸ್ಲಿಮರು ಈ ದೇಶದಲ್ಲಿ ಬಲವಂತದ ಮತಾಂತರ ಮಾಡುವುದಿದ್ದರೆ, ಮುಸ್ಲಿಮ್ ದೊರೆಗಳ ಕಾಲದಲ್ಲಿ ಮಾಡಬಹುದಾಗಿತ್ತು. ಕ್ರಿಶ್ಚಿಯನ್ನರು ಬ್ರಿಟಿಷರ ಕಾಲದಲ್ಲೇ ಅದನ್ನು ಮಾಡಿ ಬಿಡುತ್ತಿದ್ದರು. ಅಂದು ನಡೆಯದೇ ಇರುವುದು, ಇಂದು ಬಿಜೆಪಿ ಆಡಳಿತದಲ್ಲಿ ನಡೆಯುತ್ತದೆ ಎಂದು ಆತಂಕ ಪಡುವುದು ಸ್ವತಃ ಬಿಜೆಪಿ ಸರಕಾರಕ್ಕೇ ಅವಮಾನಕಾರವಲ್ಲವೆ?

ಸಂಘಪರಿವಾರದ ಸ್ಥಿತಿ ಇಂದು ಅದೆಷ್ಟು ದಯನೀಯವಾಗಿದೆ ಎಂದರೆ, ಯಾರಾದರೂ ಬೈಬಲ್‌ನ್ನು ಮಾರಾಟ ಮಾಡುತ್ತಿದ್ದರೆ ‘ಮತಾಂತರ’ ಎಂದು ಬೊಬ್ಬಿಡುತ್ತಾರೆ. ಎಲ್ಲ ಧರ್ಮಗಳ ತತ್ವ ಸಾರಗಳನ್ನು ಅರಿತ ಕಾರಣಕ್ಕಾಗಿಯೇ ಈ ದೇಶದಲ್ಲಿ ಗಾಂಧೀಜಿ, ಸ್ವಾಮಿ ವಿವೇಕಾನಂದರಂತಹವರು ಮಹಾತ್ಮರಾಗಲು ಸಾಧ್ಯವಾಯಿತು. ಗಾಂಧೀಜಿ, ವಿವೇಕಾನಂದರು ಬೈಬಲ್, ಕುರ್‌ಆನ್ ಎರಡನ್ನೂ ಆಳವಾಗಿ ಓದಿಕೊಂಡಿದ್ದರು. ಮುಸ್ಲಿಮನೊಬ್ಬ ಬೈಬಲ್ ಓದಿದಾಕ್ಷಣ ಕ್ರಿಶ್ಚಿಯನ್ ಆಗುತ್ತಾನೆಂದರೆ ಅದು ಆತನ ಮೂಲ ಧರ್ಮದ ದೌರ್ಬಲ್ಯಗಳನ್ನು ಹೇಳುತ್ತದೆ ಮತ್ತು ಬೈಬಲ್‌ನ ಸಾಮರ್ಥ್ಯವನ್ನು ಹೇಳುತ್ತದೆ. ಹಾಗೆಯೇ ಹಿಂದೂ ಒಬ್ಬನಿಗೆ ಬೈಬಲ್ ಪ್ರತಿ ನೀಡಿದಾಕ್ಷಣ ಅದಕ್ಕೆ ಮತಾಂತರದ ಮೊಹರು ಒತ್ತಿದರೆ, ನಾಳೆ ರಾಮಾಯಣ, ಮಹಾಭಾರತ, ಭಗವದ್ಗೀತೆ ಇವೆಲ್ಲದರ ಪ್ರಸಾರವನ್ನೂ ಮತಾಂತರದ ಪ್ರಯತ್ನ ಎಂದೇ ಆರೋಪಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಎಲ್ಲ ಧರ್ಮಗಳ ಸಾರವನ್ನು ತಿಳಿಯುತ್ತಾ ಬೆಳೆಯಬೇಕು. ಅದು ಆತನನ್ನು ಅತ್ಯುತ್ತಮ ಭಾರತೀಯನನ್ನಾಗಿಸುತ್ತದೆ. ಒಂದು ಧರ್ಮದ ಕುರಿತ ಮಾಹಿತಿಗಳನ್ನು ಮುಚ್ಚಿಟ್ಟಷ್ಟು ಅದರ ಕುರಿತಂತೆ ಆಸಕ್ತಿ ಹೆಚ್ಚಾಗುತ್ತದೆ ಎನ್ನುವುದನ್ನು ಸಂಘಪರಿವಾರ ಮತ್ತು ಆರೆಸ್ಸೆಸ್ ಮರೆಯಬಾರದು. ಬೈಬಲ್ ಓದಿದಾಕ್ಷಣ ಒಬ್ಬ ಮತಾಂತರವಾಗುತ್ತಾನೆ ಎಂದು ಭಾವಿಸುವುದು, ಪರೋಕ್ಷವಾಗಿ ಹಿಂದೂ ಧರ್ಮವನ್ನು, ಹಿಂದೂ ಧರ್ಮಗ್ರಂಥಗಳನ್ನು ಅವಮಾನಿಸಿದಂತೆ.

ಊಟದ, ಹಣದ ಆಮಿಷಕ್ಕೆ ಮತಾಂತರವಾಗುವಷ್ಟು ಹಿಂದೂ ಧರ್ಮ ದುರ್ಬಲವಾಗಿಲ್ಲ. ಅದರ ಬೇರು ಈ ಮಣ್ಣಿನ ಆಳದಲ್ಲಿ ಹರಡಿಕೊಂಡಿದೆ. ಇಂದು ಮತಾಂತರವಾಗುತ್ತಿರುವುದು ಜಾತಿಯ ಅಸಮಾನತೆಯಿಂದ. ನಿಜಕ್ಕೂ ಸರಕಾರ ಜಾರಿಗೊಳಿಸಬೇಕಾಗಿರುವುದು ಮತಾಂತರ ನಿಷೇಧ ಕಾಯ್ದೆಯನ್ನಲ್ಲ, ಜಾತಿ ನಿಷೇಧ ಕಾಯ್ದೆಯನ್ನು. ಆ ಮೂಲಕ ಮಾತ್ರ ಪರಿಣಾಮಕಾರಿಯಾಗಿ ಮತಾಂತರವನ್ನು ತಡೆಯಬಹುದು. ‘ನಾನು ಹಿಂದೂವಾಗಿ ಹುಟ್ಟಿದ್ದೇನೆ, ಆದರೆ ಹಿಂದೂವಾಗಿ ಸಾಯಲಾರೆ’ ಎನ್ನುವ ಮಾತನ್ನು ಅಂಬೇಡ್ಕರ್ ಯಾಕೆ ಹೇಳಿದರು ಎನ್ನುವುದನ್ನು ಅರ್ಥಮಾಡಿಕೊಂಡವರಿಗಷ್ಟೇ ಮತಾಂತರ ನಿಷೇಧ ಕಾಯ್ದೆ ಯಾವ ಕಾರಣಕ್ಕೂ ಮತಾಂತರವನ್ನು ತಡೆಯಲಾರದು ಎನ್ನುವುದು ಅರಿವಾಗಬಹುದು. ಈ ಮತಾಂತರ ನಿಷೇಧ ಕಾಯ್ದೆಯನ್ನು ನಿರ್ದಿಷ್ಟ ಧರ್ಮೀಯರ ಮೇಲೆ ದೌರ್ಜನ್ಯ ಎಸಗುವುದಕ್ಕಾಗಿ ಜಾರಿಗೆ ತರಲಾಗುತ್ತಿದೆ. ಇದೊಂದು ರೀತಿ, ಗೋಹತ್ಯಾ ನಿಷೇಧ ಕಾಯ್ದೆಯಂತೆ. ಈ ಕಾಯ್ದೆಯಿಂದ ಹೈನೋದ್ಯಮ ನಾಶವಾಯಿತು. ರೈತರಿಗೂ ನಷ್ಟವಾಯಿತು. ಲಾಭವಾದದ್ದು, ನಕಲಿ ಗೋರಕ್ಷಕರಿಗಷ್ಟೇ. ಮತಾಂತರ ನಿಷೇಧ ಕಾಯ್ದೆಯೂ ಇದೇ ದಾರಿಯನ್ನು ಹಿಡಿಯಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News