ಆರ್ಯನ್ ಖಾನ್‍ಗೆ ಪ್ರತಿ ವಾರ ಎನ್‍ಸಿಬಿ ಕಚೇರಿಗೆ ಹಾಜರಾಗುವುದರಿಂದ ವಿನಾಯಿತಿ ನೀಡಿದ ಬಾಂಬೆ ಹೈಕೋರ್ಟ್

Update: 2021-12-15 18:41 GMT

ಮುಂಬೈ,ಡಿ.15: ಬಾಂಬೆ ಉಚ್ಚ ನ್ಯಾಯಾಲಯವು ಬುಧವಾರ ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್‍ಗೆ ಪ್ರತಿವಾರ ಮುಂಬೈನಲ್ಲಿನ ಎನ್‍ಸಿಬಿ ಕಚೇರಿಗೆ ಹಾಜರಾಗುವುದರಿಂದ ವಿನಾಯಿತಿ ನೀಡಿದೆ. ಜಾಮೀನು ಷರತ್ತಿನಿಂದ ವಿನಾಯಿತಿಯನ್ನು ಕೋರಿ ಆರ್ಯನ್ ಕಳೆದ ವಾರ ಬಾಂಬೆ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಆರ್ಯನ್‌ಗೆ ಅ.28ರಂದು ಜಾಮೀನು ಮಂಜೂರು ಮಾಡಿದ್ದ ಉಚ್ಚ ನ್ಯಾಯಾಲಯವು ಪ್ರತಿ ಶುಕ್ರವಾರ ಪೂರ್ವಾಹ್ನ 11ರಿಂದ ಅಪರಾಹ್ನ 2 ಗಂಟೆಯ ನಡುವೆ ಎನ್‍ಸಿಬಿ ಕಚೇರಿಗೆ ಹಾಜರಾಗುವಂತೆ ಷರತ್ತು ವಿಧಿಸಿತ್ತು.

ಪ್ರಕರಣದ ತನಿಖೆಯನ್ನು ಎನ್‍ಸಿಬಿ ದಿಲ್ಲಿ ಕಚೇರಿಯ ವಿಶೇಷ ತನಿಖಾ ತಂಡಕ್ಕೆ ವರ್ಗಾಯಿಸಿರುವುದರಿಂದ ಜಾಮೀನು ಷರತ್ತನ್ನು ಸಡಿಲಿಸುವಂತೆ ಆರ್ಯನ್ ಅರ್ಜಿಯಲ್ಲಿ ಕೋರಿದ್ದರು. ಭಾರೀ ಸಂಖ್ಯೆಯಲ್ಲಿ ಮಾಧ್ಯಮ ಪ್ರತಿನಿಧಿಗಳ ಉಪಸ್ಥಿತಿಯಿಂದಾಗಿ ತಾನು ಮುಂಬೈ ಕಚೇರಿಗೆ ಭೇಟಿ ನೀಡುವಾಗಲೆಲ್ಲ ಪೊಲೀಸರು ತನಗೆ ಬೆಂಗಾವಲು ಒದಗಿಸಬೇಕಾಗಿದೆ ಎಂದೂ ಅವರು ಅರ್ಜಿಯಲ್ಲಿ ನಿವೇದಿಸಿಕೊಂಡಿದ್ದರು.

ಜಾಮೀನು ಷರತ್ತಿನ ಸಡಿಲಿಕೆಯನ್ನು ಎನ್ಸಿಬಿ ವಿರೋಧಿಸಲಿಲ್ಲ,ಆದರೆ ವಿಶೇಷ ತನಿಖಾ ತಂಡವು ಕರೆಸಿದಾಗ ಆರ್ಯನ್ ಅದರೆದುರು ಹಾಜರಾಗುವುದಾದರೆ ಮಾತ್ರ ಅವರ ಕೋರಿಕೆಯನ್ನು ಮನ್ನಿಸಬಹುದು ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News