ಊಹಾಪೋಹಕ್ಕೆ ಕಾರಣವಾದ ಹರ್ಭಜನ್ ಸಿಂಗ್ ಅವರೊಂದಿಗಿನ ನವಜೋತ್ ಸಿಂಗ್ ಸಿಧು ಫೋಟೊ

Update: 2021-12-15 17:52 GMT
Photo: twitter

ಚಂಡೀಗಢ: ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರು ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರೊಂದಿಗೆ ಇರುವ ಚಿತ್ರವನ್ನು ಬುಧವಾರ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಈ ಫೋಟೊ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಹಿರಿಯ ಆಫ್ ಸ್ಪಿನ್ನರ್ ಕಾಂಗ್ರೆಸ್ ಪಕ್ಷಕ್ಕೆ ಸೇರುವ ಊಹಾಪೋಹಗಳಿಗೆ ಕಾರಣವಾಗಿದೆ.

ನಂತರ ಸುದ್ದಿಗಾರರು ಸಿಧು ಅವರನ್ನು ಚಿತ್ರದ ಬಗ್ಗೆ ಕೇಳಿದಾಗ "ನನ್ನ ಮಾತು ಕೇಳಿ, ಈ ಫೋಟೋ ಎಲ್ಲವನ್ನೂ ವಿವರಿಸುತ್ತದೆ. ಸಾಧ್ಯತೆಗಳಿಂದ ತುಂಬಿದೆ ಎಂದು ನಾನು ಹೇಳಿದ್ದೇನೆ..  ಹಲವು ಸಾಧ್ಯತೆಗಳಿವೆ ಹಾಗೂ ಅವೆಲ್ಲವೂ ಸಾಧ್ಯ'' ಎಂದು ಹೇಳಿದರು.

 ಮುಂದಿನ ವರ್ಷದ ಆರಂಭದಲ್ಲಿ ಪಂಜಾಬ್ ವಿಧಾನಸಭೆ ಚುನಾವಣೆ ನಡೆಯಲಿದೆ.

ಸಿಧು ಇಂದು ಮಾಡಿರುವ ಟ್ವೀಟ್ ನಲ್ಲಿ "ಸಾಧ್ಯತೆಗಳಿಂದ ತುಂಬಿರುವ ಚಿತ್ರ... ಭಜ್ಜಿ, ಹೊಳೆಯುವ ನಕ್ಷತ್ರ ಎಂದು ಫೋಟೋ ಶೀರ್ಷಿಕೆಯನ್ನು  ಬರೆದಿದ್ದರು.

ಭಾರತದ  ಸ್ಪಿನ್ನಿಂಗ್ ದಂತಕತೆ  ಹರ್ಭಜನ್ ಹಾಗೂ  ಭಾರತ ಕ್ರಿಕೆಟ್‌ನ ಇನ್ನೊಬ್ಬ ತಾರೆ  ಯುವರಾಜ್ ಸಿಂಗ್ ಕಾಂಗ್ರೆಸ್ ಆಡಳಿತವಿರುವ ಪಂಜಾಬ್‌ನಲ್ಲಿ 2022 ರ ಅಸೆಂಬ್ಲಿ ಚುನಾವಣೆಗೆ ಮುಂಚಿತವಾಗಿ ಬಿಜೆಪಿಗೆ ಸೇರಬಹುದು ಎಂಬ ಊಹಾಪೋಹದ ಮಧ್ಯೆ ಸಿಧು ಅವರು ಈ ಪೋಸ್ಟ್ ಮಾಡಿದ್ದಾರೆ.

ಆದಾಗ್ಯೂ, ತಾನು ಬಿಜೆಪಿ ಸೇರುತ್ತೇನೆಂಬ ವದಂತಿಯನ್ನು ತಕ್ಷಣವೇ ತಳ್ಳಿ ಹಾಕಿದ್ದ ಹರ್ಭಜನ್ ಸಿಂಗ್ ಅದನ್ನು "ನಕಲಿ ಸುದ್ದಿ" ಎಂದು ಟ್ವೀಟ್ ಮಾಡಿದ್ದರು .

2019 ರ ಲೋಕಸಭಾ ಚುನಾವಣೆಯ ನಂತರ ಸ್ಪಿನ್ನರ್‌ನ ರಾಜಕೀಯ ಜೀವನದ ಬಗ್ಗೆ ಊಹಾಪೋಹ ಹರಿದಾಡುತ್ತಿದೆ.

"ರಾಜಕೀಯದಲ್ಲಿ ಹಲವಾರು ಅನುಭವಿ ಜನರಿದ್ದಾರೆ. ಹಾಗಾಗಿ, ನನ್ನ ಬಳಿ ಯಾವುದೇ ಯೋಜನೆ ಇಲ್ಲ' ಎಂದು ಈ ಹಿಂದೆ ಹರ್ಭಜನ್  ಹೇಳಿದ್ದರು.

41ರ ಹರೆಯದ ಆಫ್ ಸ್ಪಿನ್ನರ್ ಅವರನ್ನು ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಅಮೃತಸರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಕುರಿತು ಬಿಜೆಪಿಯು ಸಂಪರ್ಕಿಸಿತ್ತು.

ಕಾಂಗ್ರೆಸ್ ಅಥವಾ ಬಿಜೆಪಿ ಪಾಲಿಗೆ  ಹರ್ಭಜನ್ ಅವರನ್ನು ಕಣಕ್ಕಿಳಿಸುವುದು ಚುನಾವಣೆಯ ಮೊದಲು ದೊಡ್ಡ ಉತ್ತೇಜನಕಾರಿ ಅಂಶವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News