ಗುಂಪು ಹತ್ಯೆ ಪ್ರಕರಣಗಳ ಕುರಿತು ಅಂಕಿ ಅಂಶವಿಲ್ಲ, ತಡೆಯುವುದು ರಾಜ್ಯಗಳ ಜವಾಬ್ದಾರಿ: ಸಂಸತ್ತಿಗೆ ತಿಳಿಸಿದ ಕೇಂದ್ರ

Update: 2021-12-16 12:13 GMT

ಹೊಸದಿಲ್ಲಿ: ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ನಡೆದ ಗುಂಪು ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ಬಳಿ ಯಾವುದೇ ಅಂಕಿ ಅಂಶವಿಲ್ಲ, ಇಂತಹ ಘಟನೆಗಳನ್ನು ತಡೆಯುವುದು ರಾಜ್ಯ ಸರಕಾರಗಳ ಜವಾಬ್ದಾರಿ ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವ ನಿತ್ಯಾನಂದ ರಾಯ್ ಲೋಕಸಭೆಗೆ ಬುಧವಾರ  ತಿಳಿಸಿದ್ದಾರೆ. ಈ ವಿಚಾರದಲ್ಲಿ ಕೇಂದ್ರ ಸರಕಾರವು ರಾಜ್ಯಗಳಿಗೆ ಹಲವು ಸೂಚನೆಗಳನ್ನು ನೀಡಿದೆ, ಎಂದು ಅವರು ಹೇಳಿದ್ದಾರೆ.

"ಸಂವಿಧಾನದ ಏಳನೇ ಶೆಡ್ಯೂಲ್ ಪ್ರಕಾರ ಪೊಲೀಸ್ ಮತ್ತು ಸಾರ್ವಜನಿಕ ಸುವ್ಯವಸ್ಥೆ ರಾಜ್ಯಗಳಿಗೆ ಸಂಬಂಧಿಸಿದ ವಿಚಾರ ಮತ್ತು  ರಾಜ್ಯಗಳು ತಮ್ಮ ಕಾನೂನು ಜಾರಿ ಏಜನ್ಸಿಗಳ ಮೂಲಕ ಅಪರಾಧಗಳನ್ನು ಪತ್ತೆಹಚ್ಚುವ, ತಡೆಯುವ, ಪ್ರಕರಣ ದಾಖಲಿಸುವ ಹಾಗೂ ತನಿಖೆ ನಡೆಸುವ ಜವಾಬ್ದಾರಿ ಹೊಂದಿವೆ" ಎಂದು ತೃಣಮೂಲ ಕಾಂಗ್ರೆಸ್ ಸಂಸದ ಜವಾಹರ್ ಸಿರ್ಕಾ ಅವರ ಪ್ರಶ್ನೆಗೆ ಉತ್ತರಿಸುತ್ತಾ ಸಚಿವರು ಹೇಳಿದ್ದಾರೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ದೊರೆತ ಮಾಹಿತಿಯ ಆಧಾರದಲ್ಲಿ ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯುರೋ  ಅಪರಾಧ ಕುರಿತ ಅಂಕಿಅಂಶಗಳನ್ನು ಪ್ರಕಟಿಸುತ್ತದೆ ಆದರೆ ಗುಂಪು ಹತ್ಯೆ ಅಥವಾ ಗುಂಪು ಥಳಿತಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಮಾಹಿತಿ ಸಂಗ್ರಹಿಸಲಾಗುವುದಿಲ್ಲ" ಎಂದು ಅವರು ಹೇಳಿದ್ದಾರೆ.

ದೇಶದಲ್ಲಿ ಕಳೆದ ಕೆಲ ವರ್ಷಗಳಿಂದ ಹಲವಾರು ಗುಂಪು ಥಳಿತ ಮತ್ತು ಗುಂಪು ಹತ್ಯೆ ಪ್ರಕರಣಗಳು ವರದಿಯಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News