ಫಿಲಿಪ್ಪೀನ್ಸ್ ನಲ್ಲಿ ಭೀಕರ ಚಂಡಮಾರುತ: 1 ಲಕ್ಷಕ್ಕೂ ಅಧಿಕ ಮಂದಿಯ ಸ್ಥಳಾಂತರ
ಮನಿಲಾ, ಡಿ.16: ಈ ವರ್ಷದ ವಿಶ್ವದ ಪ್ರಬಲ ಚಂಡಮಾರುತಗಳಲ್ಲಿ ಒಂದಾದ ರಾಯ್ ಚಂಡಮಾರುತ ದ್ವೀಪರಾಷ್ಟ್ರ ಫಿಲಿಪ್ಪೀನ್ಸ್ ನ ಮಧ್ಯಪೂರ್ವ ಭಾಗಗಳಿಗೆ ಅಪ್ಪಳಿಸಿರುವ ಹಿನ್ನೆಲೆಯಲ್ಲಿ ಸಾವಿರಾರು ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ವರ್ಷ ಫಿಲಿಪ್ಪೀನ್ಸ್ ಗೆ ಅಪ್ಪಳಿಸಿರುವ 15ನೇ ಚಂಡಮಾರುತ ಇದಾಗಿದ್ದು ಸುಮಾರು 1 ಲಕ್ಷ ಮಂದಿ ಸುರಕ್ಷಿತ ಸ್ಥಳಕ್ಕೆ ಪಲಾಯನ ಮಾಡಿದ್ದಾರೆ . ಸುಂಟರಗಾಳಿಯ ಸಹಿತ ಚಂಡಮಾರುತ ಮುನ್ನುಗ್ಗುತ್ತಿದ್ದು ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ.
ಚಂಡಮಾರುತದ ಅಬ್ಬರಕ್ಕೆ ಸಿಲುಕಿರುವ ಜನರ ರಕ್ಷಣೆಗೆ ತಟರಕ್ಷಣ ಪಡೆಯ ಯೋಧರು ಕಾರ್ಯಾಚರಣೆ ಮುಂದುವರಿಸಿದ್ದಾರೆ ಎಂದು ವರದಿಯಾಗಿದೆ.
ಗುರುವಾರ ಬೆಳಿಗ್ಗೆ 5:30ಕ್ಕೆ ಗಂಟೆಗೆ 195 ಕಿ.ಮೀ ವೇಗದ ಗಾಳಿಯೊಂದಿಗೆ ಸಿಯಾರ್ಗೊ ದ್ವೀಪಕ್ಕೆ ಮೊದಲು ಚಂಡಮಾರುತ ಅಪ್ಪಳಿಸಿದೆ . ಇದರ ಪರಿಣಾಮ ದೇಶದ ಹಲವೆಡೆ ತೀವ್ರ ಪ್ರಮಾಣದ ಬಿರುಗಾಳಿ ಬೀಸಲಿದ್ದು ಕರಾವಳಿ ತೀರದಲ್ಲಿ ಚಂಡಮಾರುತ ತೀವ್ರವಾಗುವ ನಿರೀಕ್ಷೆಯಿದೆ. ಚಂಡಮಾರುತ ಸಾಗುವ ಹಾದಿಯಲ್ಲಿನ ಪರ್ವತ ಪ್ರದೇಶಗಳಲ್ಲಿ ಭೂಕುಸಿತ ಮತ್ತು ಪ್ರವಾಹ ಪರಿಸ್ಥಿತಿ ಉಂಟಾಗಬಹುದು. ಈಗ ಗಾಳಿ ಎಂದು ಫಿಲಿಪ್ಪೀನ್ಸ್‌ನ ಹವಾಮಾನ ಇಲಾಖೆ ‘ಪಗಾಸ ಮಾಹಿತಿ ನೀಡಿದೆ. ಇದು ಸೂಪರ್ ಚಂಡಮಾರುತದ ವರ್ಗಕ್ಕೆ ಸೇರಿದೆ ಎಂದು ಅಮೆರಿಕ ನೌಕಾಪಡೆಯ ಜಂಟಿ ಚಂಡಮಾರುತ ಎಚ್ಚರಿಕೆ ಕೇಂದ್ರ ಘೋಷಿಸಿದೆ.
ಸ್ಥಳೀಯವಾಗಿ ಒಡೆಟ್ಟೆ ಎಂದು ಹೆಸರಿಸಲಾಗಿರುವ ಈ ಚಂಡಮಾರುತ 2021ರಲ್ಲಿ ವಿಶ್ವದ ಪ್ರಬಲ ಚಂಡಮಾರುತಗಳಲ್ಲಿ ಒಂದಾಗಿದೆ ಮತ್ತು ವಿನಾಶಕಾರಿ ಗಾಳಿ ಮತ್ತು ಹಠಾತ್ ನೆರೆಯಿಂದಾಗಿ ಮಿಲಿಯಾಂತರ ಜನರನ್ನು ಭಯಭೀತಗೊಳಿಸಿದೆ ಎಂದು ಇಂಟರ್‌ನ್ಯಾಷನಲ್ ಫೆಡರೇಷನ್ ಆಫ್ ರೆಡ್‌ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಸೊಸೈಟಿ ಹೇಳಿದೆ. ಕಳೆದ ಕೆಲ ವರ್ಷಗಳಿಂದ ವಿನಾಶಕಾರಿ ಬಿರುಗಾಳಿ, ನೆರೆ ಮತ್ತು ಕೊರೋನ ಸೋಂಕಿನ ಸತತ ಹೊಡೆತಗಳಿಂದ ತತ್ತರಿಸಿಹೋಗಿದ್ದ ದೇಶದ ಜನತೆ ಚೇತರಿಸಿಕೊಳ್ಳುವ ಹಂತದಲ್ಲಿ ಮತ್ತೆ ಎರಗಿರುವ ಈ ಸೂಪರ್ ಚಂಡಮಾರುತ ಮಿಲಿಯಾಂತರ ಜನರಿಗೆ ಮತ್ತೊಂದು ಮಾರಕ ಹೊಡೆತವಾಗಿದೆ ಎಂದು ಫಿಲಿಪ್ಪೀನ್ಸ್ ರೆಡ್‌ಕ್ರಾಸ್‌ನ ಅಧ್ಯಕ್ಷ ರಿಚರ್ಡ್ ಗಾರ್ಡನ್ ಹೇಳಿದ್ದಾರೆ.
ದೇಶದ ಹಲವೆಡೆ ಪ್ರಗತಿಯಲ್ಲಿದ್ದ ಕೋವಿಡ್ ಲಸಿಕಾಕರಣ ಅಭಿಯಾನವನ್ನು ಸ್ಥಗಿತಗೊಳಿಸಲಾಗಿದೆ. ಚಂಡಮಾರುತದ ಅಪಾಯಕ್ಕೆ ಒಳಗಾಗುವ ಪ್ರದೇಶದಲ್ಲಿರುವ ಜನರನ್ನು ಬೇರೆಡೆ ಸ್ಥಳಾಂತರಿಸಿ ತಾತ್ಕಾಲಿಕ ಶಿಬಿರಗಳಲ್ಲಿ ನೆಲೆಗೊಳಿಸಿರುವುದರಿಂದ ಕೊರೋನ ಸೋಂಕು ಮತ್ತೆ ಉಲ್ಬಣಿಸುವ ಭೀತಿ ಎದುರಾಗಿದೆ. ಪೂರ್ವ ಪ್ರಾಂತದ ವಿಸಯಾಸ್‌ನಲ್ಲಿ ಸುಮಾರು 30000 ನಿವಾಸಿಗಳನ್ನು ಸ್ಥಳಾಂತರಿಸಿರುವುದಾಗಿ ಅಲ್ಲಿನ ಗವರ್ನರ್ ಮಾಹಿತಿ ನೀಡಿದ್ದಾರೆ.
ಶಾಲೆ, ಕಚೇರಿ ಬಂದ್
ದೇಶದ ದಕ್ಷಿಣ ಮತ್ತು ಕೇಂದ್ರ ಪ್ರದೇಶದಲ್ಲಿರುವ, 30 ಮಿಲಿಯನ್ಗೂ ಅಧಿಕ ಜನಸಂಖ್ಯೆ ಇರುವ 8 ವಲಯಗಳಲ್ಲಿ ತುರ್ತು ನೆರವಿನ ಸಿದ್ಧತೆಗಳನ್ನು ಗರಿಷ್ಟ ಮಟ್ಟದಲ್ಲಿ ಮುಂದುವರಿಸಲಾಗಿದೆ ಎಂದು ರಾಷ್ಟೀಯ ವಿಪತ್ತು ನಿರ್ವಹಣಾ ಘಟಕ ಎನ್‌ಡಿಆರ್‌ಆರ್‌ಎಂಸಿ ಹೇಳಿದೆ. ಕಚೇರಿಗಳನ್ನು ಮುಚ್ಚಲಾಗಿದ್ದು ವಿದ್ಯಾರ್ಥಿಗಳ ಆನ್‌ಲೈನ್ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ. ಸಮುದ್ರದಲ್ಲಿ ಅತ್ಯಂತ ಅಪಾಯಕಾರಿ ಪರಿಸ್ಥಿತಿ ಇರುವುದರಿಂದ ಸಮುದ್ರಕ್ಕೆ ಇಳಿಯದಂತೆ ನಾವಿಕರಿಗೆ ಸಲಹೆ ನೀಡಲಾಗಿದೆ.