ಸುಳಿಗಾಳಿಗೆ ಸಿಲುಕಿದ ಜೋಕಾಲಿ: ಐವರು ವಿದ್ಯಾರ್ಥಿಗಳು ಮೃತ್ಯು

Update: 2021-12-16 16:12 GMT
ಸಾಂದರ್ಭಿಕ ಚಿತ್ರ

ಸಿಡ್ನಿ, ಡಿ.16: ಆಸ್ಟ್ರೇಲಿಯಾದ ಉತ್ತರ ತಾಸ್ಮಾನಿಯಾ ಪ್ರಾಂತದ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ಜೋಕಾಲಿಯಾಡುತ್ತಿದ್ದ ಗಾಳಿತುಂಬಿದ ಮನೆ ಸುಳಿಗಾಳಿಗೆ ಸಿಲುಕಿ ಸುಮಾರು 33 ಅಡಿ ಎತ್ತರಕ್ಕೆ ಚಿಮ್ಮಿ ಕೆಳಬಿದ್ದ ದುರಂತದಲ್ಲಿ ಕನಿಷ್ಟ 5 ವಿದ್ಯಾರ್ಥಿಗಳು ಸಾವನ್ನಪ್ಪಿದ್ದು ಹಲವರು ಗಂಭೀರ ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ತಾಸ್ಮಾನಿಯಾದ ಹಿಲ್ಕ್ರೆಸ್ಟ್ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಕ್ರಿಸ್ಮಸ್ ರಜೆಯ ಹಿನ್ನೆಲೆಯಲ್ಲಿ ಕೊನೆಯ ತರಗತಿ ಮುಗಿದ ಬಳಿಕ ಆಟದ ಮೈದಾನದಲ್ಲಿ ಇರುವ ಗಾಳಿ ತುಂಬಿದ ಬಲೂನಿನಿಂದ ಮಾಡಿರುವ ನೆಗೆಯುವ(ಚಿಮ್ಮುವ) ಮನೆಯಲ್ಲಿ ಕುಳಿತು ಜೋಕಾಲಿಯಾಡುತ್ತಿದ್ದರು. ಆಗ ಏಕಾಏಕಿ ಬೀಸಿದ ಸುಂಟರಗಾಳಿ ಜೋಕಾಲಿಯನ್ನು ಸುಮಾರು 33 ಅಡಿ ಎತ್ತರಕ್ಕೆ ಹಾರಿಸಿ ಬಿಸಾಡಿದೆ. ಆಗ 6ನೇ ತರಗತಿಯ ಇಬ್ಬರು ಬಾಲಕರು ಹಾಗೂ ಇಬ್ಬರು ಬಾಲಕಿಯರು ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದವರಲ್ಲಿ ಒಬ್ಬ ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ತಾಸ್ಮಾನಿಯಾ ಪೊಲೀಸ್ ಆಯುಕ್ತ ಡ್ಯಾರೆನ್ ಹೈನ್ ಹೇಳಿದ್ದಾರೆ.
 
ದುರಂತದ ಮಾಹಿತಿ ಲಭಿಸಿದ ತಕ್ಷಣ ಹಲವು ರಕ್ಷಣಾ ಹೆಲಿಕಾಪ್ಟರ್‌ಗಳು ಹಾಗೂ ಆ್ಯಂಬುಲೆನ್ಸ್ ಗಳನ್ನು ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದೊಂದು ಆಘಾತಕಾರಿ ಮತ್ತು ಯೋಚಿಸಲಾಗದಷ್ಟು ಹೃದಯವಿದ್ರಾವಕ ಘಟನೆಯಾಗಿದೆ. ಆಟವಾಡುತ್ತಿದ್ದ ಎಳೆಯ ಮಕ್ಕಳು ಈ ರೀತಿಯ ಭಯಾನಕ ದುರಂತ ಎದುರಿಸಿರುವುದರಿಂದ ಎಲ್ಲರ ಹೃದಯ ಚೂರಾಗಿದೆ ಎಂದು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News