ಇರಾಕ್: ಧಾರಾಕಾರ ಮಳೆ, ಪ್ರವಾಹ ಕನಿಷ್ಟ 8 ಮಂದಿ ಮೃತ್ಯು; ಹಲವರಿಗೆ ಗಾಯ‌

Update: 2021-12-17 16:17 GMT
ಸಾಂದರ್ಭಿಕ ಚಿತ್ರ

ಬಗ್ದಾದ್, ಡಿ.17: ಇರಾಕ್‌ನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಉತ್ತರದ ಎರ್ಬಿಲ್ ಪ್ರಾಂತದಲ್ಲಿ ತೀವ್ರ ಪ್ರವಾಹದ ಸ್ಥಿತಿ ಉಂಟಾಗಿದ್ದು ಕನಿಷ್ಟ 8 ಮಂದಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಶುಕ್ರವಾರ ರಾತ್ರಿಯಿಡೀ ಸುರಿದ ಮುಸಲಧಾರೆ ಮಳೆಯಿಂದ ಜನವಸತಿ ಪ್ರದೇಶಗಳಿಗೆ ನೆರೆನೀರು ನುಗ್ಗಿದ್ದು ಮಹಿಳೆಯರು, ಮಕ್ಕಳ ಸಹಿತ ಕನಿಷ್ಟ 8 ಮಂದಿ ಮೃತರಾಗಿದ್ದಾರೆ. ಇದರಲ್ಲಿ 9 ಮಂದಿ ಪ್ರವಾಹದಿಂದ ಮತ್ತು ಓರ್ವ ಸಿಡಿಲಿನಿಂದ ಮೃತಪಟ್ಟಿದ್ದಾನೆ ಎಂದು ಅರೆಸ್ವಾಯತ್ತ ಖುರ್ಡಿಷ್ ವಲಯದ ವ್ಯಾಪ್ತಿಯಲ್ಲಿರುವ ಎರ್ಬಿಲ್ ಪ್ರಾಂತದ ಗವರ್ನರ್ ಒಮಿದ್ ಖೊಶ್ನಾವ್ ಹೇಳಿದ್ದಾರೆ. ರಾತ್ರಿಯಿಡೀ ಸುರಿದ ಧಾರಾಕಾರ ಮಳೆಯಿಂದಾಗಿ ಪ್ರವಾಹದ ಸ್ಥಿತಿ ಉಂಟಾಗಿದ್ದು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ರಸ್ತೆಯಲ್ಲಿ ಕೆಸರು ನೀರು ಹರಿದು ವಾಹನಸಂಚಾರಕ್ಕೆ ಅಡ್ಡಿಯಾಗಿದೆ. ಹಲವು ವಾಹನಗಳು ನೆರೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ ಹಲವರು ಗಾಯಗೊಂಡಿದ್ದು ಮೃತರ/ಗಾಯಾಳುಗಳ ಸಂಖ್ಯೆ ಮತ್ತು ನಷ್ಟದ ಪ್ರಮಾಣದ ಸ್ಪಷ್ಟ ಮಾಹಿತಿ ಇನ್ನೂ ಲಭಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಲವಾರು ಮಂದಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದಾರೆ. ನಾಪತ್ತೆಯಾಗಿರುವವರ ಪತ್ತೆ ಕಾರ್ಯ ಮುಂದುವರಿದಿದೆ. ಮೃತರ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ ಎಂದು ನಾಗರಿಕ ರಕ್ಷಣಾ ಇಲಾಖೆಯ ವಕ್ತಾರ ಸರ್ಕಾವತ್ ಕರಾಚ್ ಹೇಳಿದ್ದಾರೆ. ಇನ್ನಷ್ಟು ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿರುವದರಿಂದ ಪ್ರವಾಹದ ಸ್ಥಿತಿ ಬಿಗಡಾಯಿಸಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News