ಜಪಾನ್: ಕಟ್ಟಡದಲ್ಲಿ ಬೆಂಕಿ ದುರಂತ; ಕನಿಷ್ಟ 24 ಮಂದಿ ಮೃತ್ಯು
ಟೋಕಿಯೊ, ಡಿ.17: ಪಶ್ಚಿಮ ಜಪಾನ್‌ನ ವಾಣಿಜ್ಯ ಮಳಿಗೆಯೊಂದರಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಕನಿಷ್ಟ 24 ಮಂದಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಬೆಂಕಿ ದುರಂತಕ್ಕೂ ಮುನ್ನ ವ್ಯಕ್ತಿಯೊಬ್ಬ ದ್ರವರೂಪದ ವಸ್ತುವನ್ನು ಆಸ್ಪತ್ರೆಯತ್ತ ಸಾಗಿಸಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ. ಒಸಾಕಾ ಜಿಲ್ಲೆಯಲ್ಲಿನ ಕಟ್ಟಡದಲ್ಲಿ ಶುಕ್ರವಾರ ಬೆಳಿಗ್ಗೆ ಬೆಂಕಿ ಅನಾಹುತ ಸಂಭವಿಸಿದೆ. ಕಟ್ಟಡದ 4ನೇ ಮಹಡಿಯಲ್ಲಿದ್ದ ಮಾನಸಿಕ ಅಸ್ವಸ್ಥರ ಚಿಕಿತ್ಸಾಲಯಕ್ಕೆ ಬೆಂಕಿ ಹಬ್ಬಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈ ಮಧ್ಯೆ, ಸುಮಾರು 60 ವರ್ಷದ ವ್ಯಕ್ತಿಯೊಬ್ಬ ಚೀಲವೊಂದನ್ನು ಹಿಡಿದುಕೊಂಡು ಆಸ್ಪತ್ರೆಯ ಸ್ವಾಗತ ವಿಭಾಗದತ್ತ ಧಾವಿಸಿದ್ದ.
ಆ ಚೀಲದಿಂದ ದ್ರವರೂಪದ ವಸ್ತು ನೆಲಕ್ಕೆ ಬೀಳುತ್ತಿತ್ತು. ಕೆಲವೇ ಕ್ಷಣಗಳಲ್ಲಿ ಆಸ್ಪತ್ರೆಯಲ್ಲಿ ಬೆಂಕಿಯ ಕೆನ್ನಾಲಗೆ ಹಬ್ಬಿದೆ ಎಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ಸ್ಥಳೀಯ ಟಿವಿ ವಾಹಿನಿ ವರದಿ ಮಾಡಿದೆ. ಆದ್ದರಿಂದ ಇದು ದುಷ್ಕರ್ಮಿಗಳ ಕೃತ್ಯವಾಗಿದೆ. ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿರುವ ಸಾಧ್ಯತೆಯಿದೆ ಎಂದು ಮಾಧ್ಯಮಗಳು ಹೇಳಿವೆ. ಈ ಕಟ್ಟಡದಲ್ಲಿ ಶಾಲೆ, ಬಟ್ಟೆ ಅಂಗಡಿ, ಬ್ಯೂಟಿಪಾರ್ಲರ್ , ಆಸ್ಪತ್ರೆಗಳಿವೆ. ಬಳಿಕ ಅಗ್ನಿಶಾಮಕ ದಳಗಳು ಬೆಂಕಿಯನ್ನು ಬಹುತೇಕ ಹತೋಟಿಗೆ ತಂದಿವೆ ಎಂದು ವರದಿಯಾಗಿದೆ.
ಬೆಂಕಿ ದುರಂತಕ್ಕೆ ತೀವ್ರ ಆಘಾತ ವ್ಯಕ್ತಪಡಿಸಿರುವ ಜಪಾನ್ ಪ್ರಧಾನಿ ಫ್ಯುಮಿಯೊ ಕಿಶಡ, ದುರಂತದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಈ ಭಯಾನಕ ಘಟನೆಯ ಬಗ್ಗೆ ಅಮೂಲಾಗ್ರ ತನಿಖೆ ನಡೆದು ಇದಕ್ಕೆ ಕಾರಣ ಕಂಡುಕೊಳ್ಳುವ ಜತೆಗೆ, ಮುಂದಕ್ಕೆ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕಿದೆ ಎಂದಿದ್ದಾರೆ.