ಅಪಘಾತ ಪರಿಹಾರಗಳ ಮೇಲಿನ ಬಡ್ಡಿಗೆ ತೆರಿಗೆಯನ್ನು ಪ್ರಶ್ನಿಸಿದ್ದ ಪಿಐಎಲ್ ವಜಾಗೊಳಿಸಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ,ಡಿ.17: ರಸ್ತೆ ಅಪಘಾತದ ಸಂತ್ರಸ್ತ ಸ್ವೀಕರಿಸಿದ ಪರಿಹಾರದ ಮೇಲಿನ ಬಡ್ಡಿಗಳಿಕೆಗೆ ತೆರಿಗೆಯನ್ನು ಕಡ್ಡಾಯಗೊಳಿಸಿರುವ ನಿಬಂಧನೆಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯನ್ನು ವಿಚಾರಣೆಗೆ ಅಂಗೀಕರಿಸಲು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ನಿರಾಕರಿಸಿದೆ.
ವಕೀಲರೋರ್ವರು ಸಲ್ಲಿಸಿದ್ದ ಪಿಐಎಲ್‌ನ್ನು ವಜಾಗೊಳಿಸಿದ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ ಮತ್ತು ಎ.ಎಸ್.ಬೋಪಣ್ಣ ಅವರ ಪೀಠವು,‘ಈ ವಿಷಯದಲ್ಲಿ ಅರ್ಜಿದಾರರು ವೈಯಕ್ತಿಕವಾಗಿ ನೊಂದಿಲ್ಲ. ಇಂತಹ ಅರ್ಜಿಯನ್ನು ನೊಂದಿರುವ ವ್ಯಕ್ತಿಯೇ ಸಲ್ಲಿಸಬೇಕು. ಪಿಐಎಲ್ ಹೆಸರಿನಲ್ಲಿ ಸಲ್ಲಿಸಲಾಗಿರುವ ಈ ಅರ್ಜಿಯನ್ನು ಅಂಗೀಕರಿಸಲು ನಮಗೆ ಯಾವುದೇ ಕಾರಣಗಳಿಲ್ಲ ’ಎಂದು ಹೇಳಿತು.
ಆದಾಗ್ಯೂ,ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿರುವ ಕಾನೂನು ಅಂಶದ ವಿಷಯದಲ್ಲಿ ತಾನು ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸುವುದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಸ್ಪಷ್ಟಪಡಿಸಿತು.
ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಡಿಬಿಟಿ)ಯ 2019,ಜೂ.26ರ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ವಕೀಲ ಅಮಿತ್ ಸಾಹ್ನಿ ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಕೈಗೆತ್ತಿಕೊಂಡಿತ್ತು.
ಮೋಟರ್ ಅಪಘಾತಗಳ ಹಕ್ಕುಕೋರಿಕೆಗಳ ನ್ಯಾಯಮಂಡಳಿಯು ಮಂಜೂರು ಮಾಡುವ ಪರಿಹಾರದ ಮೇಲೆ ಲಭಿಸುವ ಬಡ್ಡಿಯ ಮೇಲೆ ಆದಾಯ ತೆರಿಗೆಯನ್ನು ವಿಧಿಸುವುದು ನ್ಯಾಯಯುತ ಮತ್ತು ಸಮಂಜಸವಾಗಿದೆ ಎಂದು ಸಿಡಿಬಿಟಿ ಸಾಹ್ನಿಯವರ ಅಹವಾಲನ್ನು ವಜಾಗೊಳಿಸಿದ್ದ ತನ್ನ ಆದೇಶದಲ್ಲಿ ಹೇಳಿತ್ತು. ಇಂತಹ ಬಡ್ಡಿಯು ಆದಾಯದ ವರ್ಗಕ್ಕೆ ಸೇರುತ್ತದೆ ಎಂದು ಅದು ಸ್ಪಷ್ಟಪಡಿಸಿತ್ತು.