ಅಮೆಝಾನ್‌ಗೆ 202 ಕೋ.ರೂ.ದಂಡ,ಫ್ಯೂಚರ್ ಗ್ರೂಪ್ ಖರೀದಿ ಒಪ್ಪಂದ ಅಮಾನತು

Update: 2021-12-17 18:01 GMT
photo:PTI

ಹೊಸದಿಲ್ಲಿ,ಡಿ.17: ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ)ವು ಚಿಲ್ಲರೆ ಕ್ಷೇತ್ರದ ಫ್ಯೂಚರ್ ಕೂಪನ್ಸ್ ಪ್ರೈ.ಲಿ.ಅನ್ನು ಖರೀದಿಸುವ ಅಮೆರಿಕದ ಇ-ಕಾಮರ್ಸ್ ದೈತ್ಯ ಅಮೆಝಾನ್‌ನ ಒಪ್ಪಂದಕ್ಕೆ ಎರಡು ವರ್ಷಗಳ ಹಿಂದಿನ ತನ್ನ ಅನುಮೋದನೆಯನ್ನು ಶುಕ್ರವಾರ ಅಮನತುಗೊಳಿಸಿದೆ ಮತ್ತು 2019ರಲ್ಲಿ ಫ್ಯೂಚರ್ ಗ್ರೂಪ್‌ನಲ್ಲಿ ಹೂಡಿಕೆಗಾಗಿ ತನ್ನ ಅನುಮೋದನೆಯನ್ನು ಕೋರುವಾಗ ಒಪ್ಪಂದದ ನಿಜವಾದ ವ್ಯಾಪ್ತಿಯನ್ನು ಬಚ್ಚಿಟ್ಟಿದ್ದಕ್ಕಾಗಿ ಮತ್ತು ಸುಳ್ಳು ಹಾಗೂ ತಪ್ಪು ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಅಮೆಝಾನ್‌ಗೆ 202 ಕೋ.ರೂ.ಗಳ ದಂಡವನ್ನು ವಿಧಿಸಿದೆ. ಅಮೆಝಾನ್-ಫ್ಯೂಚರ್ ಕೂಪನ್ಸ್ ಒಪ್ಪಂದವು ಅಮಾನತಿನಲ್ಲಿರುತ್ತದೆ ಎಂದು ಸಿಸಿಐ ತನ್ನ 57 ಪುಟಗಳ ಆದೇಶದಲ್ಲಿ ಹೇಳಿದೆ.

ಒಪ್ಪಂದವನ್ನು ಹೊಸದಾಗಿ ಪರಿಶೀಲಿಸುವುದು ಅಗತ್ಯವಾಗಿದೆ ಎಂದೂ ಆಯೋಗವು ತಿಳಿಸಿದೆ.

ಮುಖೇಶ್ ಅಂಬಾನಿ ಜೊತೆ ಫ್ಯೂಚರ್ ಗ್ರೂಪ್‌ನ 24,713 ಕೋ.ರೂ.ಗಳ ಉದ್ದೇಶಿತ ಒಪ್ಪಂದದ ಕುರಿತು ಅಮೆಝಾನ್ ಮತ್ತು ಫ್ಯೂಚರ್ ನಡುವಿನ ಕಾನೂನು ಹೋರಾಟದ ನಡುವೆಯೇ ಈ ಬೆಳವಣಿಗೆ ನಡೆದಿದೆ.

2019ರಲ್ಲಿ ಅಮೆಝಾನ್,ಫ್ಯೂಚರ್ ಗ್ರೂಪ್‌ನೊಂದಿಗೆ 2,000 ಕೋ.ರೂ.ಗಳ ಒಪ್ಪಂದವನ್ನು ಮಾಡಿಕೊಂಡಿತ್ತು. ಒಪ್ಪಂದದಂತೆ ಫ್ಯೂಚರ್ ರಿಟೇಲ್‌ನ ಪ್ರವರ್ತಕ ಸಂಸ್ಥೆ ಫ್ಯೂಚರ್ ಕೂಪನ್ಸ್‌ನಲ್ಲಿ ಶೇ.49ರಷ್ಟು ಪಾಲು ಬಂಡವಾಳವನ್ನು ಖರೀದಿಸಿತ್ತು. ಫ್ಯೂಚರ್ ಕೂಪನ್ಸ್ ಕನವರ್ಟಿಬಲ್ ವಾರಂಟ್‌ಗಳ ಮೂಲಕ ಫ್ಯೂಚರ್ ಕೂಪನ್ಸ್‌ನ ಶೇ.7.3 ರಷ್ಟು ಶೇರುಗಳನ್ನೂ ಹೊಂದಿದೆ.

ಒಪ್ಪಂದದಂತೆ ಫ್ಯೂಚರ್ ಕೂಪನ್ಸ್‌ಗೆ ತನ್ನ ಉತ್ಪನ್ನಗಳನ್ನು ಅಮೆಝಾನ್‌ನ ಆನ್‌ಲೈನ್ ಮಾರುಕಟ್ಟೆ ತಾಣದಲ್ಲಿ ಮಾರಾಟ ಮಾಡಲು ಅವಕಾಶ ದೊರೆಯಲಿತ್ತು . ಜೊತೆಗೆ ಮೂರರಿಂದ ಹತ್ತು ವರ್ಷಗಳಲ್ಲಿ ಫ್ಯೂಚರ್ ರಿಟೇಲ್‌ನ್ನು ಖರೀದಿಸುವ ಹಕ್ಕನ್ನೂ ಅಮೆಝಾನ್ ಹೊಂದಿತ್ತು.

2020 ಆಗಸ್ಟ್‌ನಲ್ಲಿ ಫ್ಯೂಚರ್ ಗ್ರೂಪ್‌ನ್ನು ತಾನು 24,713 ಕೋ.ರೂ.ಗಳಿಗೆ ಖರೀದಿಸುತ್ತಿರುವುದಾಗಿ ಮುಖೇಶ್ ಅಂಬಾನಿಯವರ ರಿಲಯನ್ಸ್ ರಿಟೇಲ್ ವೆಂಚರ್ಸ್ ಪ್ರಕಟಿಸಿತ್ತು.

ರಿಲಯನ್ಸ್ ಜೊತೆ ಫ್ಯೂಚರ್‌ನ ಒಪ್ಪಂದಕ್ಕೆ ಆಕ್ಷೇಪವನ್ನು ವ್ಯಕ್ತಪಡಿಸಿದ್ದ ಅಮೆಝಾನ್ ಕಾನೂನು ಸಮರಕ್ಕಿಳಿದಿತ್ತು.

ಅಮೆಝಾನ್ ಒಪ್ಪಂದದ ವಾಸ್ತವಾಂಶಗಳನ್ನು ಬಚ್ಚಿಟ್ಟಿತ್ತು ಎಂದು ಫ್ಯೂಚರ್ ಗ್ರೂಪ್ ಸಿಸಿಐಗೆ ದೂರು ಸಲ್ಲಿಸಿತ್ತು. ಜೂನ್‌ನಲ್ಲಿ ಅಮೆಝಾನ್‌ನಿಂದ ವಿವರಣೆಯನ್ನು ಕೇಳಿದ್ದ ಸಿಸಿಐ,ಅದು ತನ್ನಿಂದ ಅನುಮೋದನೆಯನ್ನು ಕೋರುವಾಗ ಫ್ಯೂಚರ್ ರಿಟೇಲ್‌ನಲ್ಲಿ ತನ್ನ ವ್ಯೂಹಾತ್ಮಕ

ಹಿತಾಸಕ್ತಿಯನ್ನು ಬಹಿರಂಗಗೊಳಿಸದೆ ವಹಿವಾಟಿನ ವಾಸ್ತವಾಂಶಗಳನ್ನು ಬಚ್ಚಿಟ್ಟಿತ್ತು ಎಂದು ಹೇಳಿತ್ತು.

ಈ ವಾರದ ಪೂರ್ವಾರ್ಧದಲ್ಲಿ ಫ್ಯೂಚರ್ ಗ್ರೂಪ್‌ನೊಂದಿಗೆ ತನ್ನ 2019ರ ಒಪ್ಪಂದವನ್ನು ರದ್ದುಗೊಳಿಸುವುದು ವಿದೇಶಿ ಹೂಡಿಕೆದಾರರಿಗೆ ನಕಾರಾತ್ಮಕ ಸಂದೇಶವನ್ನು ರವಾನಿಸುತ್ತದೆ ಮತ್ತು ಪೈಪೋಟಿಯನ್ನು ಇನ್ನಷ್ಟು ನಿರ್ಬಂಧಿಸಲು ರಿಲಯನ್ಸ್‌ಗೆ ಅವಕಾಶ ನೀಡುತ್ತದೆ ಎಂದು ಅಮೆಝಾನ್ ಸಿಸಿಐಗೆ ಎಚ್ಚರಿಕೆ ನೀಡಿತ್ತು.

ಸಿಸಿಐನ ಇಂದಿನ ಆದೇಶವು ಫ್ಯೂಚರ್‌ನ ಆಸ್ತಿಗಳನ್ನು ರಿಲಯನ್ಸ್ ರಿಟೇಲ್‌ಗೆ ಮಾರಾಟಕ್ಕೆ ತಡೆಯೊಡ್ಡುವ ಅಮೆಝಾನ್‌ನ ಪ್ರಯತ್ನಗಳಿಗೆ ತೀವ್ರ ಹಿನ್ನಡೆಯನ್ನುಂಟು ಮಾಡಿದೆ. ಅದು ಫ್ಯೂಚರ್‌ನೊಂದಿಗಿನ ಅಮೆಝಾನ್‌ನ ಕಾನೂನು ಹೋರಾಟದ ಮೇಲೆಯೂ ದೂರಗಾಮಿ ಪರಿಣಾಮಗಳನ್ನು ಬೀರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News