ಇತಿಹಾಸದ ಅಣಕ: ಮತ್ತೆ ಹುಟ್ಟಿ ಬಂದ ಎರಡು ದೇಶ ಸಿದ್ಧಾಂತ

Update: 2021-12-17 19:30 GMT

ಬಾಂಗ್ಲಾದೇಶೀಯರಿಗೆ ಸಹಿಷ್ಣುತೆ ಮತ್ತು ಬಹುತ್ವದ ಮೌಲ್ಯಗಳ ಬಗ್ಗೆ ಪಾಠ ಹೇಳುವ ಅರ್ಹತೆ 1971ರಲ್ಲಿ ಭಾರತೀಯರಿಗೆ ಇತ್ತು. ಆದರೆ ಇಂದಿನ ಭಾರತೀಯರಿಗೆ ಆ ಅರ್ಹತೆ ಇಲ್ಲ. ಯಾಕೆಂದರೆ ನರೇಂದ್ರ ಮೋದಿ 2014ರ ಮೇ ತಿಂಗಳಲ್ಲಿ ಭಾರತದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಂದಿನಿಂದ, ಆಡಳಿತಾರೂಢ ಪಕ್ಷವು ಹಿಂದೂ ಬಹುಸಂಖ್ಯಾತ ಕಾರ್ಯಸೂಚಿಯನ್ನು ಆಕ್ರಮಣಕಾರಿಯಾಗಿ ಉತ್ತೇಜಿಸುತ್ತಿದೆ.



ಈ ತಿಂಗಳು ಪೂರ್ವ ಪಾಕಿಸ್ತಾನದ 50ನೇ ಪುಣ್ಯ ತಿಥಿ. ದೇಶಭ್ರಷ್ಟ ಸ್ವಾತಂತ್ರ್ಯ ಹೋರಾಟಗಾರರು 1971ರ ಎಪ್ರಿಲ್‌ನಲ್ಲೇ ‘ಹಂಗಾಮಿ ಬಾಂಗ್ಲಾದೇಶ ಸರಕಾರ’ದ ರಚನೆಯನ್ನು ಘೋಷಿಸಿದ್ದರೂ, ಭಾರತ ಸರಕಾರ ಮಾತ್ರ ಅದರ ಅಸ್ತಿತ್ವವನ್ನು ಡಿಸೆಂಬರ್ 6ರಂದು ಔಪಚಾರಿಕವಾಗಿ ಮಾನ್ಯ ಮಾಡಿತು. ಡಿಸೆಂಬರ್ 16ರಂದು ಲೆಫ್ಟಿನೆಂಟ್ ಜನರಲ್ ಎ.ಎ.ಕೆ. ನಿಯಾಝಿ ನೇತೃತ್ವದ ಪೂರ್ವ ಪಾಕಿಸ್ತಾನ ಸೇನೆಯು ಭಾರತೀಯ ಸೇನೆಗೆ ಶರಣಾಯಿತು. ಕೆಲವು ವಾರಗಳ ಬಳಿಕ, ಶೇಖ್ ಮುಜೀಬು ರ್ರಹ್ಮಾನ್‌ರನ್ನು ಜೈಲಿನಿಂದ ಬಿಡುಗಡೆಗೊಳಿಸಲಾಯಿತು ಹಾಗೂ ನೂತನ ಬಾಂಗ್ಲಾದೇಶದ ನಾಯಕತ್ವವನ್ನು ವಹಿಸಲು ಅವರು ಢಾಕಕ್ಕೆ ಮರಳಿದರು.

ಬಾಂಗ್ಲಾದೇಶದ ಉದಯವನ್ನು ಭಾರತದಲ್ಲಿ ವ್ಯಾಪಕವಾಗಿ ಸಂಭ್ರಮಿಸಲಾಯಿತು. ಭಾರತದಲ್ಲಿ ಅದನ್ನು ಮೂರು ದೃಷ್ಟಿಕೋನಗಳಿಂದ ಸ್ವಾಗತಿಸಲಾಯಿತು. ಬಾಂಗ್ಲಾದೇಶದ ಉದಯವನ್ನು ಸಂಭ್ರಮಿಸುತ್ತಿದ್ದ ಒಂದು ಗುಂಪು ಪ್ರಧಾನಿ ಇಂದಿರಾ ಗಾಂಧಿಯ ಕಟ್ಟಾ ರಾಜಕೀಯ ಬೆಂಬಲಿಗರದ್ದು (ಆಗಿನ್ನೂ ಈ ಅರ್ಥವನ್ನು ಕೊಡುವ ‘ಭಕ್ತ’ ಎನ್ನುವ ಪದದ ಆವಿಷ್ಕಾರ ಆಗಿರಲಿಲ್ಲ). ಈ ವಿಜಯವು ಇಂದಿರಾ ಗಾಂಧಿಯ ದೂರದೃಷ್ಟಿ, ಧೈರ್ಯ ಮತ್ತು ರಾಜಕೀಯ ಮುತ್ಸದ್ದಿತನವನ್ನು ಸಾಬೀತುಪಡಿಸಿದೆ ಎಂಬುದಾಗಿ ಆ ಗುಂಪು ಪ್ರತಿಪಾದಿಸಿತು. ಎರಡನೇ ಗುಂಪು ರಾಷ್ಟ್ರೀಯವಾದಿಗಳದ್ದು. 1962ರಲ್ಲಿ ನಾವು ಚೀನಾದ ಎದುರು ಅನುಭವಿಸಿದ ಹೃದಯವಿದ್ರಾವಕ ಸೇನಾ ಸೋಲಿನ ಕಹಿ ನೆನಪುಗಳನ್ನು ಪಾಕಿಸ್ತಾನದ ವಿರುದ್ಧ ನಾವು ಗಳಿಸಿದ ವಿಜಯ ಮರೆಯುವಂತೆ ಮಾಡಿದೆ ಎಂಬುದಾಗಿ ಈ ಗುಂಪು ಹೇಳಿತು.

ಈ ಗೆಲುವನ್ನು ಸಂಭ್ರಮಿಸುತ್ತಿದ್ದ ಮೂರನೇ ಗುಂಪೊಂದಿತ್ತು. ಅದು 1971ರ ಈ ವಿಜಯ ವನ್ನು ಕೇವಲ ಸೈನಿಕ ದೃಷ್ಟಿಯಿಂದ ನೋಡದೆ, ಸೈದ್ಧಾಂತಿಕ ಹಾಗೂ ಅದಕ್ಕಿಂತಲೂ ಹೆಚ್ಚಾಗಿ ನೈತಿಕ ದೃಷ್ಟಿಯಿಂದ ನೋಡಿತು. ಬಾಂಗ್ಲಾದೇಶದ ಸ್ಥಾಪನೆಯು ಪಾಕಿಸ್ತಾನದ ಜನಕ ಮುಹಮ್ಮದ್ ಅಲಿ ಜಿನ್ನಾ ಕಲ್ಪಿಸಿದ ಹಾಗೂ ಕಾರ್ಯರೂಪಕ್ಕೆ ತಂದ ಎರಡು-ರಾಷ್ಟ್ರ ಸಿದ್ಧಾಂತದ ಅಂತಿಮ ನಿರಾಕರಣೆಯಾಗಿದೆ ಎಂಬುದಾಗಿ ಈ ಮೂರನೇ ಗುಂಪಿನ ಭಾರತೀಯರು ಭಾವಿಸಿದರು.

1947ರ ಆಗಸ್ಟ್‌ನಲ್ಲಿ ದೇಶ ವಿಭಜನೆ ಅನಿವಾರ್ಯವಾದ ಬಳಿಕ, ಗಡಿಯ ಇನ್ನೊಂದು ಭಾಗದಲ್ಲಿ ಅಲ್ಪಸಂಖ್ಯಾತರಿಗೆ ಏನೇ ಸಂಭವಿಸಿದರೂ, ಭಾರತದಲ್ಲಿರುವ ಧಾರ್ಮಿಕ ಅಲ್ಪಸಂಖ್ಯಾತರಿಗೆ ಸರಕಾರ ಮತ್ತು ಆಡಳಿತಾರೂಢ ಪಕ್ಷವು ಸಂಪೂರ್ಣ ಪೌರತ್ವ ಹಕ್ಕುಗಳನ್ನು ನೀಡುವ ನಿಟ್ಟಿನಲ್ಲಿ ಗಾಂಧಿ ಮತ್ತು ನೆಹರೂ ಇಬ್ಬರೂ ತಮ್ಮ ರಾಜಕೀಯ ಮತ್ತು ವೈಯಕ್ತಿಕ ವರ್ಚಸ್ಸುಗಳನ್ನು ಪಣವಾಗಿಟ್ಟು ಕೆಲಸ ಮಾಡಿದರು. ಭಾರತದ ನಾಯಕರಿಗೆ ಕಾಲವನ್ನು ಹಿಂದಕ್ಕೆ ಸರಿಸಲು, ಅಂದರೆ ಭಾರತದ ವಿಭಜನೆಯನ್ನು ತಪ್ಪಿಸಲು ಸಾಧ್ಯವಾಗಲಿಲ್ಲ ಎನ್ನುವುದು ಸರಿ, ಆದರೆ ಒಂದೇ ದೇಶದ ಭೌಗೋಳಿಕ ಗಡಿಯೊಳಗೆ ಹಿಂದೂಗಳು ಮತ್ತು ಮುಸ್ಲಿಮರು ಜೊತೆಯಾಗಿ ಜೀವಿಸಲು ಸಾಧ್ಯವಿಲ್ಲ ಎಂಬ ಜಿನ್ನಾರ ಅಭಿಪ್ರಾಯ ಖಡಾಖಂಡಿತ ನಿರಾಕರಣೆಯಾಗಿ ಭಾರತೀಯ ರಿಪಬ್ಲಿಕ್‌ನ್ನು ನಿರ್ಮಿಸಲು ಅವರಿಗೆ ಸಾಧ್ಯವಾಯಿತು.

1971ರ ವಿಜಯವನ್ನು ಸಂಭ್ರಮಿಸಿದ ಈ ಗುಂಪನ್ನು ನಾವು ಸಾಂವಿಧಾನಿಕ ದೇಶಭಕ್ತರು ಎಂಬುದಾಗಿ ಕರೆಯೋಣ. ಗಾಂಧಿ ಮತ್ತು ನೆಹರೂ ಅವರ ಪರಂಪರೆಯಂತೆ ಕೆಲಸ ಮಾಡುವ ಈ ಭಾರತೀಯರಿಗೆ ಪಾಕಿಸ್ತಾನ ಸೋತದ್ದು ಮುಖ್ಯವಾಗಿರಲಿಲ್ಲ, ಬದಲಿಗೆ ಬಹುತ್ವ ಮತ್ತು ಜಾತ್ಯತೀತತೆ ಗೆದ್ದಿರುವುದು ಮುಖ್ಯವಾಗಿತ್ತು. ಜಿನ್ನಾ ಮತ್ತು ಅವರ ಮುಸ್ಲಿಮ್ ಲೀಗ್ ಏನು ಆಶಿಸಿತ್ತೋ, ಅದಕ್ಕೆ ವಿರುದ್ಧವಾಗಿ ಪಾಕಿಸ್ತಾನದ ಪೂರ್ವ ಮತ್ತು ಪಶ್ಚಿಮದ ಭಾಗಗಳನ್ನು ಜೊತೆಯಾಗಿ ಹಿಡಿದಿಟ್ಟುಕೊಳ್ಳಲು ಇಸ್ಲಾಮ್ ಧರ್ಮ ವಿಫಲವಾಯಿತು.

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಬಾಂಗ್ಲಾದೇಶದ ಸ್ಥಾಪಕರ ಚಾಲಕಶಕ್ತಿಯಾಗಿದ್ದ ಬಂಗಾಳಿ ಅಸ್ಮಿತೆ (ಗುರುತು)ಯು ಧರ್ಮದ ಆಧಾರದಲ್ಲಿ ಜನರನ್ನು ತಾರತಮ್ಯ ಮಾಡುವಂಥದ್ದಾಗಿರಲಿಲ್ಲ.

ಒಂದು ವಿಷಯವನ್ನು ಸ್ಪಷ್ಟಪಡಿಸಲೇಬೇಕು. 1947ರ ನಂತರದ ವರ್ಷಗಳಲ್ಲಿ ಪೂರ್ವ ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದ ಹಿಂದೂ ಅಲ್ಪಸಂಖ್ಯಾತರು ಕಿರುಕುಳವನ್ನು ಎದುರಿಸಿದ್ದರು. ಹಾಗಾಗಿ ಹಲವು ಅಲ್ಪಸಂಖ್ಯಾತರು ಭಾರತಕ್ಕೆ ಪಲಾಯನಗೈದಿದ್ದರು. ಈ ಹಿನ್ನೆಲೆಯಲ್ಲಿ ಪೂರ್ವ ಪಾಕಿಸ್ತಾನದಲ್ಲಿ ಅವರ ಸಂಖ್ಯೆಯು ಕಡಿಮೆಯಾಗಿತ್ತು.

ಆದರೆ, 1971ರಲ್ಲಿ ಪೂರ್ವ ಪಾಕಿಸ್ತಾನದಲ್ಲಿ ಹಿಂದೂಗಳ ಸಂಖ್ಯೆಯು ಅಲ್ಲಿನ ಜನಸಂಖ್ಯೆಯ 10 ಶೇಕಡಕ್ಕಿಂತಲೂ ಅಧಿಕವಾಗಿತ್ತು (ಅದೇ ಸಂದರ್ಭದಲ್ಲಿ ಪಶ್ಚಿಮ ಪಾಕಿಸ್ತಾನದಲ್ಲಿ ಹಿಂದೂಗಳ ಸಂಖ್ಯೆಯು ಅಲ್ಲಿನ ಜನಸಂಖ್ಯೆಯ 2 ಶೇಕಡಕ್ಕಿಂತಲೂ ಕಡಿಮೆಯಾಗಿತ್ತು). ಪಶ್ಚಿಮ ಪಾಕಿಸ್ತಾನಕ್ಕೆ ವ್ಯತಿರಿಕ್ತವಾಗಿ, ಪೂರ್ವ ಪಾಕಿಸ್ತಾನದಲ್ಲಿ ಹಿಂದೂಗಳು ಸಾರ್ವಜನಿಕ ಜೀವನದಲ್ಲಿ ಪ್ರಭಾವಿಯಾಗಿಯೇ ಮುಂದುವರಿದಿದ್ದರು. ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಹಲವು ಹಿಂದೂಗಳು ಪ್ರಮುಖ ಪಾತ್ರಗಳನ್ನು ವಹಿಸಿದ್ದರು. ಅವರ ಪೈಕಿ ಸೇನಾ ಕಮಾಂಡರ್‌ಗಳಾದ ಜೀವನ್ ಕನಾಯಿ ದಾಸ್ ಮತ್ತು ಚಿತ್ತರಂಜನ್ ದತ್ತ ಹಾಗೂ ಖ್ಯಾತ ಕಮ್ಯುನಿಸ್ಟ್ ಕಾರ್ಯಕರ್ತ ಮೋನಿ ಸಿಂಗ್.

ದಾರ್ಶನಿಕ ವಕೀಲ ಕಮಲ್ ಹುಸೈನ್ ನೇತೃತ್ವದಲ್ಲಿ 1972ರಲ್ಲಿ ರಚನೆ ಯಾದ ಬಾಂಗ್ಲಾದೇಶದ ಮೊದಲ ಸಂವಿಧಾನವು, ಜಾತ್ಯತೀತತೆಯು ನೂತನ ಗಣರಾಜ್ಯದ ಮಾರ್ಗದರ್ಶಕ ಮೌಲ್ಯವಾಗಿರುತ್ತದೆ ಹಾಗೂ ಎಲ್ಲ ಧರ್ಮಗಳು ಸಮಾನ ಹಕ್ಕುಗಳನ್ನು ಪಡೆಯುತ್ತವೆ ಎಂಬುದಾಗಿ ಘೋಷಿಸಿತು. ಇಸ್ಲಾಮ್‌ಗೆ ಆದ್ಯತೆಯ ಸ್ಥಾನಮಾನ ಇರುವುದಿಲ್ಲ. ಅಂದು ಕಾನೂನು ಪಂಡಿತ ಎಸ್.ಸಿ. ಸೇನ್ ಹೀಗೆ ಬರೆದಿದ್ದಾರೆ: ಯಾವುದೇ ಮತವನ್ನು ಸರಕಾರಿ ಮತವನ್ನಾಗಿಸುವುದನ್ನು ಸಂವಿಧಾನವು ನಿಷೇಧಿಸಿದೆ; ರಾಜಕೀಯ ಉದ್ದೇಶಗಳಿಗಾಗಿ ಮತವನ್ನು ಬಳಸುವುದನ್ನು ನಿಷೇಧಿಸಿದೆ; ಹಾಗೂ ಮತದ ಆಧಾರದಲ್ಲಿ ಯಾವುದೇ ವ್ಯಕ್ತಿಯ ವಿರುದ್ಧ ತಾರತಮ್ಯ ಮಾಡುವುದನ್ನು ನಿಷೇಧಿಸಲು ಅವಕಾಶ ಕಲ್ಪಿಸಿದೆ.

ದುರದೃಷ್ಟವಶಾತ್, 1975ರಲ್ಲಿ ಅಧ್ಯಕ್ಷ ಮುಜೀಬುರ್ರಹ್ಮಾನ್ ಹತ್ಯೆಯ ಬಳಿಕ ಬಾಂಗ್ಲಾದೇಶದಲ್ಲಿ ಇಸ್ಲಾಮಿಕ್ ದುರಭಿಮಾನ ತಲೆಯೆತ್ತಿತು. ಈ ಭಾವನೆಗಳಿಗೆ ಜನರಲ್ ಇರ್ಶಾದ್ ನೇತೃತ್ವದ ಸೇನಾಡಳಿತವು ನೀರೆರೆದು ಪೋಷಿಸಿತು. 1986ರಲ್ಲಿ ದೇಶದ ಸಂವಿಧಾನಕ್ಕೆ ತಿದ್ದುಪಡಿ ತಂದು ಇಸ್ಲಾಮನ್ನು ಅಧಿಕೃತ ಸರಕಾರಿ ಧರ್ಮವನ್ನಾಗಿ ಮಾಡಲಾಯಿತು. ಅವಾಮಿ ಲೀಗ್ ಪಕ್ಷವು ಅಧಿಕಾರಕ್ಕೆ ಮರಳಿದ ಬಳಿಕ, ಮೂಲ ಸಂವಿಧಾನಕ್ಕೆ ಮರಳುವ ಬಗ್ಗೆ ಅದರ ನಾಯಕರು ಹಲವು ಸಂದರ್ಭಗಳಲ್ಲಿ ಮಾತನಾಡಿದ್ದರು. ಆದರೆ ಹಾಗೆ ಮಾಡುವಲ್ಲಿ ಅವರು ಆಸಕ್ತಿ ವಹಿಸಲಿಲ್ಲ ಅಥವಾ ಅಸಮರ್ಥರಾಗಿದ್ದರು.

ಸ್ಥಾಪನೆಯಾದಂದಿನಿಂದ 50 ವರ್ಷಗಳ ಬಳಿಕ, ಬಾಂಗ್ಲಾದೇಶವು ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಮಹತ್ವದ ಪ್ರಗತಿ ಸಾಧಿಸಿದೆ. ಮಾನವ ಆರೋಗ್ಯ, ಕೆಲಸ ಮಾಡುವ ಜನಸಂಖ್ಯೆಯಲ್ಲಿ ಮಹಿಳೆಯರ ಪ್ರಮಾಣ ಮತ್ತು ಒಟ್ಟು ದೇಶಿ ಉತ್ಪನ್ನ (ಜಿಡಿಪಿ)ದಲ್ಲಿ ಉತ್ಪಾದಕತೆಯ ಪ್ರಮಾಣ- ಇವೇ ಮುಂತಾದ ಪ್ರಮುಖ ಸೂಚ್ಯಂಕಗಳಲ್ಲಿ ಬಾಂಗ್ಲಾದೇಶದ ನಿರ್ವಹಣೆಯು ಭಾರತಕ್ಕಿಂತ ತುಂಬಾ ಉತ್ತಮವಾಗಿದೆ.

ಕಳೆದ ವರ್ಷ ಅದರ ತಲಾವಾರು ಆದಾಯ ಕೂಡ ಭಾರತಕ್ಕಿಂತ ಹೆಚ್ಚಾಗಿತ್ತು. ಆದರೆ ರಾಜಕೀಯ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿನ ಅದರ ನಿರ್ವಹಣೆಯು ದೇಶದ ಸ್ಥಾಪಕರ ಆಶಯಗಳಿಗೆ ಅನುಗುಣವಾಗಿಲ್ಲ. ಅಲ್ಪಸಂಖ್ಯಾತರು ನಿರಂತರವಾಗಿ ಅಭದ್ರತೆಯ ಭಾವನೆಯಿಂದ ಬಳಲುತ್ತಿದ್ದಾರೆ ಹಾಗೂ ಲೇಖಕರು ಮತ್ತು ಚಿಂತಕರ ಮೇಲೆ ಸರಣಿ ದಾಳಿಗಳು ನಡೆಯುತ್ತಿವೆ.

ಬಾಂಗ್ಲಾದೇಶೀಯರಿಗೆ ಸಹಿಷ್ಣುತೆ ಮತ್ತು ಬಹುತ್ವದ ಮೌಲ್ಯಗಳ ಬಗ್ಗೆ ಪಾಠ ಹೇಳುವ ಅರ್ಹತೆ 1971ರಲ್ಲಿ ಭಾರತೀಯರಿಗೆ ಇತ್ತು. ಆದರೆ ಇಂದಿನ ಭಾರತೀಯರಿಗೆ ಆ ಅರ್ಹತೆ ಇಲ್ಲ. ಯಾಕೆಂದರೆ ನರೇಂದ್ರ ಮೋದಿ 2014ರ ಮೇ ತಿಂಗಳಲ್ಲಿ ಭಾರತದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಂದಿನಿಂದ, ಆಡಳಿತಾರೂಢ ಪಕ್ಷವು ಹಿಂದೂ ಬಹುಸಂಖ್ಯಾತ ಕಾರ್ಯಸೂಚಿಯನ್ನು ಆಕ್ರಮಣಕಾರಿಯಾಗಿ ಉತ್ತೇಜಿಸುತ್ತಿದೆ. 2015ರ ಸೆಪ್ಟಂಬರ್‌ನಲ್ಲಿ ಅಖ್ಲಾಕ್‌ರನ್ನು ಹೊಡೆದು ಸಾಯಿಸಿದ ಘಟನೆಯಿಂದ ಆರಂಭಿಸಿ 2021ರಡಿಸೆಂಬರ್‌ನಲ್ಲಿ ಕರ್ನಾಟಕದಲ್ಲಿ ಕ್ರೈಸ್ತರ ವಿರುದ್ಧ ನಡೆದ ಹಿಂಸಾಚಾರದವರೆಗೆ, ಮೋದಿ ಆಡಳಿತದಲ್ಲಿ ಭಾರತದ ವಿವಿಧ ಭಾಗಗಳಲ್ಲಿ ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ದಾಳಿಗಳು ನಡೆದಿವೆ.

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆದ ದಾಳಿಗಳನ್ನು ಅಲ್ಲಿನ ಪ್ರಧಾನಿ ಶೇಖ್ ಹಸೀನಾ ಸಾರ್ವಜನಿಕವಾಗಿ ಖಂಡಿಸಿದ್ದಾರೆ. ಆದರೆ, ತನ್ನ ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ನಮ್ಮ ಪ್ರಧಾನಿ ದೃಢ ನಿರ್ಧಾರ ತೆಗೆದುಕೊಂಡವರಂತೆ ಮೌನವಾಗಿದ್ದಾರೆ.

2019ರ ಮೇ ತಿಂಗಳಲ್ಲಿ ಅಮಿತ್ ಶಾ ದೇಶದ ಗೃಹ ಸಚಿವರಾದ ಬಳಿಕ, ಮುಸ್ಲಿಮರ ಮೇಲೆ ಕಳಂಕ ಹೊರಿಸುವುದು ಮತ್ತು ಅವರನ್ನು ಅವಮಾನಪಡಿಸುವುದು ಕೇಂದ್ರ ಸರಕಾರದ ನೀತಿಗಳ ಒಂದು ಅಂಶವೆಂಬಂತೆ ಆಗಿ ಬಿಟ್ಟಿದೆ. ದೇಶದ ಏಕೈಕ ಮುಸ್ಲಿಮ್ ಬಾಹುಳ್ಯದ ರಾಜ್ಯವಾದ ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಸಿರುವುದು, ರಾಷ್ಟ್ರೀಯ ಪೌರತ್ವ ನೋಂದಣಿಯ ಪ್ರಸ್ತಾಪವನ್ನು ಮುನ್ನೆಲೆಗೆ ತಂದಿರುವುದು ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ಇದಕ್ಕೆ ಉದಾಹರಣೆ. ಪೌರತ್ವ ತಿದ್ದುಪಡಿ ಕಾಯ್ದೆಯು ಪೌರತ್ವ ನೀಡಬಹುದಾದ ಸಂಭಾವ್ಯ ನಿರಾಶ್ರಿತರ ಪಟ್ಟಿಯಿಂದ ಮುಸ್ಲಿಮರನ್ನು ಹೊರಗಿಟ್ಟಿರುವುದು ಯೋಜಿತ ಲೆಕ್ಕಾಚಾರದ ಹಾಗೂ ದ್ವೇಷಪೂರಿತ ಕ್ರಮವಾಗಿದೆ.

ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಆಕ್ರಮಣಕಾರಿಯಾಗಿ ಸಮರ್ಥಿಸಿರುವ ಭಾರತದ ಗೃಹ ಸಚಿವರು, ಬಾಂಗ್ಲಾದೇಶವು ಗೆದ್ದಲುಗಳ ದೇಶ ಎಂಬುದಾಗಿ ಜರಿದರು. ಇದನ್ನು ಸಹಜವಾಗಿಯೇ ಬಾಂಗ್ಲಾದೇಶದ ಚಿಂತಕರು ಖಂಡಿಸಿದರು. ‘‘ಭಾರತದಲ್ಲಿರುವ ಮುಸ್ಲಿಮರನ್ನು ಅಮಿತ್ ಶಾ ಯಾವುದೇ ಎಗ್ಗಿಲ್ಲದೆ ಹಾಗೂ ಪದೇ ಪದೇ ಹೀಯಾಳಿಸುವುದು ಬಾಂಗ್ಲಾದೇಶದ ಅಲ್ಪಸಂಖ್ಯಾತರ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಉಂಟು ಮಾಡುತ್ತದೆ’ ಎಂಬುದಾಗಿ ಡಾಕಾ ವಿಶ್ವವಿದ್ಯಾನಿಲಯದ ಇತಿಹಾಸದ ಪ್ರೊಫೆಸರ್ ಮಿಸ್ಬಾ ಕಮಲ್ 2019 ಅಕ್ಟೋಬರ್‌ನಲ್ಲಿ ಹೇಳಿದ್ದರು. ಬಾಂಗ್ಲಾದೇಶದ ಕೆಲವು ಮೌಲಾನಾಗಳು ತಮ್ಮ ಉಪನ್ಯಾಸಗಳಲ್ಲಿ ಕಾಶ್ಮೀರ ಮತ್ತು ಎನ್‌ಆರ್‌ಸಿ ಬಗ್ಗೆ ಪದೇ ಪದೇ ಮಾತನಾಡುತ್ತಿದ್ದಾರೆ ಎಂದು ಇತಿಹಾಸದ ಪ್ರೊಫೆಸರ್ ನುಡಿದಿದ್ದರು. ‘‘ಭಾರತದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆದರೆ, ಬಾಂಗ್ಲಾದೇಶದಲ್ಲಿರುವ ಹಿಂದೂಗಳನ್ನು ನಾವು ಬಿಡುವುದಿಲ್ಲ ಎಂಬುದಾಗಿ ಅವರು ಬಹಿರಂಗವಾಗಿ ಹೇಳಿದ್ದಾರೆ’’ ಎಂದು ಅವರು ಹೇಳಿದ್ದರು.

ವಿವಿಧ ಮತಗಳ ಮೂಲಭೂತವಾದಿಗಳು ಯಾವಾಗಲೂ ಪರಸ್ಪರರನ್ನು ಅವಲಂಬಿಸಿಕೊಂಡು ಬದುಕುತ್ತಾರೆ. ಆದರೆ, ಓರ್ವ ಗೃಹ ಸಚಿವರು ಈ ಆಟವನ್ನು ಆಡುವುದು ಅತ್ಯಂತ ಅಪಾಯಕಾರಿ ಪ್ರವೃತ್ತಿಯಾಗಿದೆ. 2021 ಎಪ್ರಿಲ್‌ನಲ್ಲಿ, ಪಶ್ಚಿಮ ಬಂಗಾಳದ ಚುನಾವಣೆಗೆ ಮುನ್ನ, ಬಾಂಗ್ಲಾದೇಶಕ್ಕೆ ತನ್ನ ಜನರಿಗೆ ಆಹಾರ ಪೂರೈಸಲು ಸಾಧ್ಯವಾಗುತ್ತಿಲ್ಲ ಎಂಬುದಾಗಿ ಅಮಿತ್ ಶಾ ಹೇಳಿದ್ದರು. ಈ ಹೇಳಿಕೆಯನ್ನು ಬಾಂಗ್ಲಾದೇಶದ ವಿದೇಶ ಸಚಿವರು ಖಂಡಿಸಿದರು.

ಪಶ್ಚಿಮ ಬಂಗಾಳದಲ್ಲಿ ಚುನಾವಣೆಯನ್ನು ಹಿಂದೂ-ಮುಸ್ಲಿಮ್ ವಿಷಯವನ್ನಾಗಿಸುವ ಬಿಜೆಪಿಯ ಪ್ರಯತ್ನ ವಿಫಲವಾಯಿತು. ತೃಣಮೂಲ ಕಾಂಗ್ರೆಸ್ ಅಧಿಕಾರಕ್ಕೆ ಮರಳಿತು. ಆದರೂ, ಇದರಿಂದ ಬಿಜೆಪಿ ನಾಯಕರು ಧೃತಿಗೆಟ್ಟಿಲ್ಲ. ಇತ್ತೀಚೆಗೆ ಉತ್ತರಪ್ರದೇಶದಲ್ಲಿ ಭಾಷಣ ಮಾಡಿದ ಅಮಿತ್ ಶಾ, ಹಿಂದೂಗಳಲ್ಲಿ ಭಯ ಮತ್ತು ಅಭದ್ರತೆಯ ಭಾವನೆಯನ್ನು ಹುಟ್ಟಿಸಲು ಪ್ರಯತ್ನಿಸಿದರು. ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷದ ಆದಿ ಭಾಗದಲ್ಲಿ ಚುನಾವಣೆ ನಡೆಯಲಿದೆ.

ಅದೇ ರೀತಿ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ, ತನ್ನ ಚುನಾವಣಾ ಪ್ರಚಾರದಲ್ಲಿ ಕೋಮು ವಿಭಜನೆಯನ್ನು ಪ್ರಧಾನ ಅಂಶವನ್ನಾಗಿ ಮಾಡಿಕೊಂಡಿದ್ದಾರೆ. ಇತ್ತೀಚೆಗೆ, ಪ್ರಧಾನಿಯ ನೇತೃತ್ವದಲ್ಲಿ ವಾರಾಣಸಿಯಲ್ಲಿ ‘ಹಿಂದೂ ಪುನರುತ್ಥಾನ’ದ ಭವ್ಯ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಅಂದು 1940ರ ದಶಕದಲ್ಲಿ, ಜಿನ್ನಾ ಮತ್ತು ಅವರ ಮುಸ್ಲಿಮ್ ಲೀಗ್, ಭಾರತೀಯ ಮುಸ್ಲಿಮರು ಸುರಕ್ಷಿತವಾಗಿ ಮತ್ತು ಗೌರವದಿಂದ ಜೀವಿಸಲು ಅವರಿಗೆ ತಮ್ಮದೇ ಆದ ಪ್ರತ್ಯೇಕ ದೇಶವೊಂದರ ಅಗತ್ಯವಿದೆ ಎಂಬುದಾಗಿ ಪ್ರತಿಪಾದಿಸಿದ್ದರು. ಈಗ, 2020ರ ದಶಕದಲ್ಲಿ, ಭಾರತದ ಹಿಂದೂಗಳು ನಿರಂತರವಾಗಿ ಮುಸ್ಲಿಮರ ಮೇಲೆ ಆರ್ಥಿಕ, ರಾಜಕೀಯ ಮತ್ತು ಸೈದ್ಧಾಂತಿಕ ಪ್ರಾಬಲ್ಯವನ್ನು ಸಾಧಿಸಬೇಕು ಎಂಬುದಾಗಿ ಮೋದಿ ಮತ್ತು ಶಾ ಅವರ ಬಿಜೆಪಿ ಭಾವಿಸುತ್ತದೆ. ಇದು ಗಾಂಧಿ ಮತ್ತು ನೆಹರೂ ಪರಂಪರೆಗೆ ವಿರುದ್ಧವಾದ ಕಲ್ಪನೆಯಾಗಿದೆ. ಹಿಂದೂಗಳು ಮತ್ತು ಮುಸ್ಲಿಮರು ಜೊತೆ ಜೊತೆಯಾಗಿ ಸ್ನೇಹ ಮತ್ತು ಒಗ್ಗಟ್ಟಿನಿಂದ ಜೀವಿಸಲು ಸಾಧ್ಯವಾಗುವ ದೇಶವೊಂದನ್ನು ನಿರ್ಮಿಸಲು ಗಾಂಧಿ ಮತ್ತು ನೆಹರೂ ಬಯಸಿದ್ದರು.

1971ರ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶದ ನಿರ್ಮಾಣವು ಎರಡು-ದೇಶ ಸಿದ್ಧಾಂತಕ್ಕೆ ಕೊನೆ ಹಾಡಬೇಕಾಗಿತ್ತು. ಆದರೆ, 50 ವರ್ಷಗಳ ಬಳಿಕ ಆ ಸಿದ್ಧಾಂತದ ಒಂದು ಮಾದರಿ ಜೀವಂತವಾಗಿದೆ ಹಾಗೂ ವಿಜೃಂಭಿಸುತ್ತಿದೆ. ಅದೂ ಕೂಡ ಈ ಸಿದ್ಧಾಂತವನ್ನು ವಿರೋಧಿಸಿದ ಭಾರತ ದೇಶದಲ್ಲೇ. ಇದು ಇತಿಹಾಸದ ಕ್ರೂರ ಅಣಕವಾಗಿದೆ.

Writer - ರಾಮಚಂದ್ರ ಗುಹಾ

contributor

Editor - ರಾಮಚಂದ್ರ ಗುಹಾ

contributor

Similar News