ದೇಶದಲ್ಲಿ ಹಣದುಬ್ಬರ, ನೋವು, ದುಃಖಕ್ಕೆ ಹಿಂದುತ್ವವಾದಿಗಳು ಕಾರಣ: ರಾಹುಲ್ ಗಾಂಧಿ

Update: 2021-12-18 17:15 GMT

ಅಮೇಥಿ, ಡಿ. 18: ಹಿಂದುತ್ವದ ವಿರುದ್ಧ ತನ್ನ ಟೀಕೆಯನ್ನು ಮುಂದುವರಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೇಶದಲ್ಲಿ ಹಣದುಬ್ಬರ, ನೋವು ಹಾಗೂ ದುಃಖ ಹೆಚ್ಚಾಗಲು ‘ಹಿಂದುತ್ವವಾದಿ’ಗಳು ನೇರ ಹೊಣೆಗಾರರು ಎಂದು ಶನಿವಾರ ಹೇಳಿದ್ದಾರೆ. 

ತನ್ನ ಹಿಂದಿನ ಭದ್ರಕೋಟೆ ಉತ್ತರಪ್ರದೇಶದ ಅಮೇಠಿಯಲ್ಲಿ ಸಾರ್ವಜನಿಕ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಇಂದು ನಮ್ಮ ದೇಶದಲ್ಲಿ ಹಣದುಬ್ಬರ, ನೋವು, ದುಃಖ ಇದೆ ಎಂದಾದರೆ, ಅದಕ್ಕೆ ಹಿಂದುತ್ವವಾದಿಗಳು ಕಾರಣ ಎಂದರು. ಇಂದು ಹಿಂದೂಗಳು ಹಾಗೂ ಹಿಂದುತ್ವವಾದಿಗಳ ನಡುವೆ ಹೋರಾಟ ನಡೆಯುತ್ತಿದೆ. ಹಿಂದೂಗಳು ಸತ್ಯಾಗ್ರಹವನ್ನು ನಂಬಿದರೆ, ಹಿಂದುತ್ವವಾದಿಗಳು ರಾಜಕೀಯ ದುರಾಸೆಯನ್ನು ನಂಬುತ್ತಾರೆ ಎಂದು ಅವರು ಹೇಳಿದರು. 

ರಾಹುಲ್ ಗಾಂಧಿ ಅವರು ತನ್ನ ಸಹೋದರಿ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಅಮೇಠಿಯಿಂದ 6 ಕಿ.ಮೀ. ಪಾದ ಯಾತ್ರೆ ನಡೆಸಿದರು. 2019ರ ಲೋಕಸಭಾ ಚುನಾವಣೆಯಲ್ಲಿ ಅಮೇಠಿಯಲ್ಲಿ ಸೋತ ಎರಡೂವರೆ ವರ್ಷಗಳ ಬಳಿಕ ರಾಹುಲ್ ಗಾಂಧಿ ಅವರ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡ ಅವರು, ಗಂಗೆಯಲ್ಲಿ ಮುಳುಗಿ ಏಳುವ ಪ್ರಧಾನಿ ಅವರು ನಿರುದ್ಯೋಗದಂತಹ ಸಮಸ್ಯೆಗಳ ಬಗ್ಗೆ ಮೌನವಾಗಿದ್ದಾರೆ ಎಂದರು. 

‘‘ದೇಶದಲ್ಲಿ ಇಂದು ಜನರಿಗೆ ಉದ್ಯೋಗ ಸಿಗುತ್ತಿಲ್ಲ ಯಾಕೆ? ಹಣದುಬ್ಬರ ತ್ವರಿತವಾಗಿ ಏರಿಕೆಯಾಗಿದೆ ಯಾಕೆ?’’ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಪ್ರಮುಖ ಸಮಸ್ಯೆಗಳಿಂದ ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯಲು ಕೇಂದ್ರ ಸರಕಾರ ಮಾರ್ಕೆಟಿಂಗ್‌ನಲ್ಲಿ ಬ್ಯುಸಿಯಾಗಿದೆ ಎಂದು ರಾಹುಲ್ ಗಾಂಧಿ ಅವರು ಹೇಳಿದರು. ಇಂದು ಲಡಾಕ್‌ನಲ್ಲಿ ಭಾರತದ ಭೂಮಿಯನ್ನು ಚೀನಾ ವಶಪಡಿಸಿಕೊಂಡು ತನ್ನ ಸ್ವಂತದ್ದಾಗಿ ಮಾಡಿಕೊಂಡಿದೆ. ಆದರೆ, ಪ್ರಧಾನಿ ಅವರು ಏನನ್ನೂ ಹೇಳುತ್ತಿಲ್ಲ. ಯಾರೊಬ್ಬರೂ ಭೂಮಿಯನ್ನು ವಶಪಡಿಸಿಕೊಂಡಿಲ್ಲ ಎಂದು ಅವರು ಹೇಳುತ್ತಿದ್ದಾರೆ. ಆದರೆ, ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ ಎಂದು ರಕ್ಷಣಾ ಸಚಿವಾಲಯ ಹೇಳುತ್ತಿದೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News