×
Ad

ಉಳಿದಿರುವ ನಾಲ್ಕು ರಫೇಲ್ ವಿಮಾನಗಳ ಪೈಕಿ ಮೂರು ಫೆಬ್ರವರಿಯಲ್ಲಿ ಆಗಮಿಸಲಿವೆ:‌ ವಾಯುಪಡೆ ಮುಖ್ಯಸ್ಥ

Update: 2021-12-18 23:23 IST
photo:PTI

ದುಂಡಿಗಲ್ (ತೆಲಂಗಾಣ),ಡಿ.18: ಭಾರತವು ಫ್ರಾನ್ಸ್‌ನೊಂದಿಗೆ ಖರೀದಿ ಒಪ್ಪಂದ ಮಾಡಿಕೊಂಡಿದ್ದ 36 ರಫೇಲ್ ಯುದ್ಧವಿಮಾನಗಳ ಪೈಕಿ 32 ಈಗಾಗಲೇ ಪೂರೈಕೆಯಾಗಿದ್ದು,ಉಳಿದ ನಾಲ್ಕರ ಪೈಕಿ ಮೂರು ವಿಮಾನಗಳು ನಿಗದಿಯಂತೆ ಮುಂದಿನ ವರ್ಷದ ಫೆಬ್ರವರಿಯಲ್ಲಿ ಆಗಮಿಸಲಿವೆ ಎಂದು ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಅವರು ಶನಿವಾರ ತಿಳಿಸಿದರು. ಹೈದರಾಬಾದ್ ಸಮೀಪದ ದುಂಡಿಗಲ್‌ನಲ್ಲಿ ಏರ್‌ಫೋರ್ಸ್ ಅಕಾಡೆಮಿಯಲ್ಲಿ ಕಂಬೈನ್ಡ್ ಗ್ರಾಜ್ಯುಯೇಶನ್ ಪರೇಡ್ ವೀಕ್ಷಣೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ವಿಷಯವನ್ನು ತಿಳಿಸಿ,ಸಕಾಲದಲ್ಲಿ ಯುದ್ಧವಿಮಾನಗಳನ್ನು ಪೂರೈಸಿದ್ದಕ್ಕಾಗಿ ಫ್ರಾನ್ಸ್‌ಗೆ  ನಾವು ಆಭಾರಿಯಾಗಿದ್ದೇವೆ ಎಂದರು.

ಕೊನೆಯ ರಫೇಲ್ ಯುದ್ಧವಿಮಾನವು ಭಾರತ ನಿರ್ದಿಷ್ಟ ಹೆಚ್ಚಿನ ವೈಶಿಷ್ಟಗಳನ್ನು ಹೊಂದಿರಲಿದ್ದು,ಅದರ ಎಲ್ಲ  ಟ್ರಯಲ್‌ಗಳು ಮುಗಿದ ಬಳಿಕ ಪೂರೈಕೆಯಾಗಲಿದೆ ಎಂದು ತಿಳಿಸಿದ ಅವರು ಫ್ರಾನ್ಸ್ ನಿಯೋಗದೊಂದಿಗಿನ ಚರ್ಚೆಯ ಕುರಿತಂತೆ,‘ರಫೇಲ್‌ನ ಭವಿಷ್ಯದ ನಿರ್ವಹಣೆ ವಿಷಯಗಳು ಮತ್ತು ಭಾರತದಲ್ಲಿ ಡಿ-ಲೆವೆಲ್ ನಿರ್ವಹಣೆ ವ್ಯವಸ್ಥೆಯ ಸ್ಥಾಪನೆಯ ಕುರಿತು ನಾವು ಫ್ರೆಂಚ್ ರಕ್ಷಣಾ ಸಚಿವರೊಂದಿಗೆ ಚರ್ಚಿಸಿದ್ದೇವೆ ’ಎಂದರು.

ಶುಕ್ರವಾರ ಭಾರತ ಮತ್ತ ಫ್ರಾನ್ಸ್ ನಡುವಿನ ನಿಕಟ ವ್ಯೆಹಾತ್ಮಕ ಸಂಬಂಧಗಳನ್ನು ಉಲ್ಲೇಖಿಸಿದ್ದ ಫ್ರೆಂಚ್ ರಕ್ಷಣಾ ಸಚಿವೆ ಫ್ಲೋರೆನ್ಸ್ ಪಾರ್ಲಿ ಅವರು,ಭಾರತವು ಬಯಸಿದರೆ ಇನ್ನಷ್ಟು ರಫೇಲ್ ಯುದ್ಧವಿಮಾನಗಳನ್ನು ಅದಕ್ಕೆ ಒದಗಿಸಲು ತನ್ನ ದೇಶವು ಸಿದ್ಧವಿದೆ ಎಂದು ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News