×
Ad

ಹಕ್ಕುಗಳನ್ನು ಮರು ಸ್ಥಾಪಿಸಲು ಶಾಂತಿಯುತವಾಗಿ ಹೋರಾಡಿ: ಯುವಕರಿಗೆ ಪಿಡಿಪಿ ವರಿಷ್ಠೆ ಮಹೆಬೂಬಾ ಮುಫ್ತಿ ಕರೆ

Update: 2021-12-18 23:32 IST

ಜಮ್ಮು, ಡಿ. 18: ಕೇಂದ್ರ ಸರಕಾರ ನಮ್ಮಿಂದ ಕಸಿದುಕೊಂಡ ಹಕ್ಕನ್ನು ಮರು ಸ್ಥಾಪಿಸಲು ಶಾಂತಿಯುತ ಹೋರಾಟಕ್ಕೆ ಕೈಜೋಡಿಸುವಂತೆ ಪಿಡಿಪಿ ವರಿಷ್ಠೆ ಮೆಹಬೂಬಾ ಮುಫ್ತಿ ಅವರು ಶನಿವಾರ ಯುವಕರಿಗೆ ಕರೆ ನೀಡಿದ್ದಾರೆ. ಕಲ್ಲು ಅಥವಾ ಗನ್ ಗಳ ಮೂಲಕ ಹೋರಾಟ ನಡೆಸದೆ ಅಹಿಂಸಾತ್ಮಕವಾಗಿ ಹೋರಾಟ ನಡೆಸಬೇಕು ಎಂದು ಅವರು ಹೇಳಿದ್ದಾರೆ. ಭಯೋತ್ಪಾದಕರು ನಾಗರಿಕರ ಹತ್ಯೆ ನಡೆಸುತ್ತಿರುವ ಬಗ್ಗೆ ಬಿಜೆಪಿ ನೇತೃತ್ವದ ಸರಕಾರಕ್ಕೆ ಬೇಹುಗಾರಿಕೆ ಮಾಹಿತಿ ಇದೆ. ಆದರೆ, ಅದು ಉದ್ದೇಶಪೂರ್ವಕವಾಗಿ ಕಾರ್ಯಾಚರಣೆ ನಡೆಸಿಲ್ಲ ಎಂದು ಅವರು ಹೇಳಿದರು.

‘‘ನೀವು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಹಾಗೂ ನಮ್ಮ ಧ್ವನಿಯಾಗಬೇಕು. ಇಂದು ನೀವು ಧೈರ್ಯ ತೋರಿಸದೇ ಇದ್ದರೆ, ಮುಂದಿನ ತಲೆಮಾರು ಭೂಮಿ, ಉದ್ಯೋಗದ ಬಗ್ಗೆ ಪ್ರಶ್ನಿಸಬಹುದು. ಆದುದರಿಂದ ನಾವು ಎದ್ದುನಿಲ್ಲುವುದು ಹಾಗೂ ನಮ್ಮ ಹಕ್ಕುಗಳಿಗಾಗಿ ಹೋರಾಡುವುದು ಅಗತ್ಯವಾಗಿದೆ ’’ ಎಂದು ರಾಜೌರಿಯ ಗಡಿ ಜಿಲ್ಲೆಯಲ್ಲಿ ನಡೆದ ಯುವಕರ ಸಮಾವೇಶದಲ್ಲಿ ಅವರು ಹೇಳಿದರು. ಕಲ್ಲು ಅಥವಾ ಗನ್‌ಗಳನ್ನು ಕೈಗೆತ್ತಿಕೊಳ್ಳಿ ಎಂದು ನಾನು ಎಂದಿಗೂ ಹೇಳುವುದಿಲ್ಲ. ಈ ದಾರಿ ತುಳಿಯುವವರ ವಿರುದ್ಧ ಗುಂಡುಗಳು ಸಿದ್ಧವಾಗಿವೆ ಎಂದು ನನಗೆ ತಿಳಿದಿದೆ. ನೀವು ಧ್ವನಿ ಎತ್ತಿ ಹಾಗೂ ನಮ್ಮ ಕಸಿದುಕೊಂಡ ಹಕ್ಕನ್ನು ಮರು ಪಡೆಯಲು ಪ್ರಜಾಪ್ರಭುತ್ವ ರೀತಿಯಲ್ಲಿ ಹೋರಾಡಲು ನಮ್ಮಿಂದಿಗೆ ಕೈಜೋಡಿಸಿ ಎಂದು ಅವರು ಹೇಳಿದರು.

ಕಣಿವೆಯಲ್ಲಿ ಭಯೋತ್ಪಾದಕರು ಇತ್ತೀಚೆಗೆ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ನಾಗರಿಕರು ಸೇರಿದಂತೆ ನಾಗರಿಕರ ಹತ್ಯೆಗೈದಿರುವುದನ್ನು ಉಲ್ಲೇಖಿಸಿದ ಅವರು, ದಾಳಿ ನಡೆಯುವ ಬಗ್ಗೆ ಸರಕಾರಕ್ಕೆ ಮುಂಚಿತವಾಗಿ ಮಾಹಿತಿ ಇತ್ತು. ಆದರೆ, ಅದು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News