ಆಲಪ್ಪುಝ: ಎಸ್ಡಿಪಿಐ ಮುಖಂಡ, ಬಿಜೆಪಿ ಪದಾಧಿಕಾರಿ ಹತ್ಯೆ, ನಿಷೇಧಾಜ್ಞೆ ಜಾರಿ

Update: 2021-12-19 19:01 GMT
ಕೆ.ಎಸ್‌.ಶಾನ್ - ರೆಂಜಿತ್ ಶ್ರೀನಿವಾಸನ್

ತಿರುವನಂತಪುರ, ಡಿ. 19: ಆಲಪ್ಪುಳ ಜಿಲ್ಲೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜಕೀಯ ಘಟಕ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ)ದ ರಾಜ್ಯ ಮಟ್ಟದ ನಾಯಕನ ಹತ್ಯೆ ನಡೆದ ಕೆಲವು ಗಂಟೆಗಳ ಬಳಿಕ ರವಿವಾರ ಬೆಳಗ್ಗೆ ಅದೇ ಜಿಲ್ಲೆಯಲ್ಲಿ ಬಿಜೆಪಿಯ ರಾಜ್ಯ ಮಟ್ಟದ ನಾಯಕನನ್ನು ಕಡಿದು ಹತ್ಯೆಗೈಯಲಾಗಿದೆ.

ಬಿಜೆಪಿಯ ಒಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿ, ನ್ಯಾಯವಾದಿ ರಂಜಿತ್ ಶ್ರೀನಿವಾಸ್ ಅವರನ್ನು ಆಲಪ್ಪುಳದಲ್ಲಿರುವ ಅವರ ಮನೆಯಲ್ಲಿ ರವಿವಾರ ಬೆಳಗ್ಗೆ ಹತ್ಯೆಗೈಯಲಾಗಿದೆ. ಬೆಳಗ್ಗಿನ ವಾಕಿಂಗ್ಗೆ ಸಿದ್ಧರಾಗುತ್ತಿದ್ದ ರಂಜಿತ್ ಶ್ರೀನಿವಾಸ್ ಅವರನ್ನು ಮನೆಗೆ ನುಗ್ಗಿದ ದುಷ್ಕರ್ಮಿಗಳ ಗುಂಪು ಹಲವು ಬಾರಿ ಕಡಿದು ಕೊಲೆಗೈದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಎಸ್ಡಿಪಿಐಯ ರಾಜ್ಯ ಕಾರ್ಯದರ್ಶಿ ಕೆ.ಎಸ್. ಶಾನ್ ಅವರ ಮೇಲೆ ದುಷ್ಕರ್ಮಿಗಳ ಗುಂಪೊಂದು ಶನಿವಾರ ರಾತ್ರಿ ದಾಳಿ ನಡೆಸಿದೆ. ಶಾನ್ ಅವರು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಕಾರೊಂದು ಢಿಕ್ಕಿ ಹೊಡೆದಿದೆ. ಅವರು ಕೆಳಗೆ ಬಿದ್ದಾಗ ಕಾರಿನಲ್ಲಿದ್ದ ದುರ್ಷರ್ಮಿಗಳು ಶಾನ್ ಅವರಿಗೆ ಹಲವು ಬಾರಿ ಕಡಿದಿದ್ದಾರೆ. ಗಂಭೀರ ಗಾಯಗೊಂಡ ಅವರನ್ನು ಕೂಡಲೇ ಆಲಪ್ಪುಳದ ಆಸ್ಪತ್ರೆಗೆ ಹಾಗೂ ಅನಂತರ ಕೊಚ್ಚಿಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಅವರು ಮಧ್ಯರಾತ್ರಿ ಮೃತಪಟ್ಟರು.

ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೆಲವು ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಶನಿವಾರ ರಾತ್ರಿ ಎಸ್ಡಿಪಿಐ ನಾಯಕನ ಹತ್ಯೆ ಬಳಿಕ ಪರಿಸ್ಥಿತಿಯ ನಿಗಾ ವಹಿಸುವಲ್ಲಿ ಪೊಲೀಸರು ವಿಫಲವಾಗಿಲ್ಲ. ನಿನ್ನೆ ನಡೆದ ಹತ್ಯೆಯ ಬಳಿಕ ನಾವು ಹಲವು ಕಡೆಗಳಲ್ಲಿ ಪೊಲೀಸರನ್ನು ನಿಯೋಜಿಸಿದ್ದೇವೆ. ಆದರೆ, ರವಿವಾರ ನಡೆದ ಹತ್ಯೆಯನ್ನು ತಡೆಯಲು ಸಾಧ್ಯವಾಗಲಿಲ್ಲ ಎಂದು ಆಲಪ್ಪುಳ ಜಿಲ್ಲೆಯ ಪೊಲೀಸ್ ಅಧೀಕ್ಷಕ ಜಿ. ಜೈದೇವ್ ಅವರು ಹೇಳಿದ್ದಾರೆ.

ಆಲಪ್ಪುಳ ಜಿಲ್ಲೆಯಲ್ಲಿ ಎರಡು ದಿನಗಳ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಅಲ್ಲದೆ, ಕಟ್ಟು ನಿಟ್ಟಿನ ಪರಿಶೀಲನೆ ನಡೆಸಲಾಗುವುದು. ಅನಗತ್ಯ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

‘‘ದಾಳಿಕೋರರು ಹಾಗೂ ಹತ್ಯೆಯ ಹಿಂದಿರುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳಲಿದ್ದಾರೆ. ಇಂತಹ ಬರ್ಬರ ಹಾಗೂ ಅಮಾನವೀಯ ಹಿಂಸಾಚಾರದ ಕಾರ್ಯಗಳು ರಾಜ್ಯಕ್ಕೆ ಅಪಾಯಕಾರಿ. ಕೊಲೆಗಾರರ ಗುಂಪು ಹಾಗೂ ಅವರ ದ್ವೇಷಪೂರಿತ ಮನೋಭಾವವನ್ನು ಗುರುತಿಸಲು ಹಾಗೂ ಪ್ರತ್ಯೇಕಿಸಲು ಎಲ್ಲ ಜನರು ಸಿದ್ಧರಾಗಿದ್ದಾರೆ’’ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

‘‘ಕಳೆದ 60 ವರ್ಷಗಳಲ್ಲಿ ಬಿಜೆಪಿ ಕಾರ್ಯಕರ್ತನ ಮೂರನೇ ಬರ್ಬರ ಹತ್ಯೆ ಇದಾಗಿದೆ. ಪಿಎಫ್ಐಯ ಗೂಂಡಾಗಳು ರಾಜ್ಯವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ’’ ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಹೇಳಿದ್ದಾರೆ.

ರಾಜ್ಯದಲ್ಲಿ ಕೋಮು ಹಿಂಸಾಚಾರ ಸೃಷ್ಟಿಸುವ ಹಾಗೂ ಕೋಮು ಸಾಮರಸ್ಯವನ್ನು ಭಗ್ನಗೊಳಿಸುವ ಸಂಘ ಪರಿವಾರದ ಕಾರ್ಯಸೂಚಿಯ ಒಂದು ಭಾಗ ಇದಾಗಿದೆ. ಆರ್ಎಸ್ಎಸ್ ಭಯೋತ್ಪಾದನೆಯನ್ನು ಖಂಡಿಸಿ ಎಂದು ಎಸ್ಡಿಪಿಐಯ ವರಿಷ್ಠ ಎಂ.ಕೆ. ಫೈಝಿ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News