ಸರಕಾರ ಅಂಗೀಕರಿಸದ ದೇಶಗಳ ಸಮಾವೇಶದಲ್ಲಿ ಶಿಕ್ಷಣ ತಜ್ಞರು ಭಾಗವಹಿಸುವಂತಿಲ್ಲ: ಎಐಸಿಟಿಇ
ಹೊಸದಿಲ್ಲಿ, ಡಿ. 19: ಭಾರತ ಸರಕಾರ ಅಂಗೀಕರಿಸದ ದೇಶಗಳು ಆಯೋಜಿಸುವ ಸಮಾವೇಶದಲ್ಲಿ ತಮ್ಮ ಬೋಧಕ ಸಿಬ್ಬಂದಿ ಭಾಗವಹಿಸ ಕೂಡದು ಎಂದು ತಾಂತ್ರಿಕ ಶಿಕ್ಷಣಕ್ಕಿರುವ ಅಖಿಲ ಭಾರತ ಮಂಡಳಿ (ಎಐಸಿಟಿಇ) ಎಲ್ಲ ಎಂಜಿನಿಯರಿಂಗ್ ಹಾಗೂ ತಾಂತ್ರಿಕ ಕಾಲೇಜುಗಳಿಗೆ ನಿರ್ದೇಶಿಸಿದೆ.
ರಿಪಬ್ಲಿಕನ್ ಆಫ್ ಸೈಪ್ರಸ್ ನ ಆಕ್ರಮಿತ ಭಾಗದಲ್ಲಿ ಆಯೋಜಿಸಲಾದ ಸಮಾವೇಶದಲ್ಲಿ ಭಾರತದ ಕೆಲವು ಶಿಕ್ಷಣ ತಜ್ಞರು ಭಾಗವಹಿಸಿದ ಬಳಿಕ ಸೈಪ್ರಸ್ ಸರಕಾರ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಆಕ್ಷೇಪ ಎತ್ತಿರುವ ಹಿನ್ನೆಲೆಯಲ್ಲಿ ಎಐಸಿಟಿಇ ಈ ಕಠಿಣ ನಿರ್ದೇಶನ ನೀಡಿದೆ.
ನೈಸರ್ಗಿಕ ಸಂಪನ್ಮೂಲಗಳು ಹಾಗೂ ಸುಸ್ಥಿರ ಪರಿಸರ ನಿರ್ವಹಣೆ ಕುರಿತು ನಡೆದ 5ನೇ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾರತದ ಹಲವು ಶಿಕ್ಷಣ ತಜ್ಞರು ಪಾಲ್ಗೊಂಡ ಬಳಿಕ ಇತ್ತೀಚೆಗೆ ತನ್ನ ಕಳವಳ ವ್ಯಕ್ತಪಡಿಸಿ ರಿಪಬ್ಲಿಕ್ ಆಫ್ ಸೈಪ್ರಸ್ ನ ಹೈಕಮಿಷನ್ನಿಂದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪತ್ರ ಸ್ವೀಕರಿಸಿತ್ತು ಎಂದು ಎಐಸಿಟಿಇಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ರಿಪಬ್ಲಿಕ್ ಆಫ್ ಸೈಪ್ರಸ್ ನ ಆಕ್ರಮಿತ ಭಾಗದಲ್ಲಿರುವ ಕಾನೂನುಬಾಹಿರ ಈಶಾನ್ಯ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಸಿವಿಲ್ ಆ್ಯಂಡ್ ಎನ್ವಿರಾನ್ಮೆಂಟಲ್ ಎಂಜಿನಿಯರಿಂಗ್ ಈ ಆನ್ಲೈನ್ ಸಮಾವೇಶ ಆಯೋಜಿಸಿತ್ತು.