ಮಹಾರಾಷ್ಟ್ರ: ಕರ್ನಾಟಕ ಮುಖ್ಯಮಂತ್ರಿ ವಿರುದ್ಧ ಎನ್ ಸಿಪಿಯಿಂದ ಪ್ರತಿಭಟನೆ
ಥಾಣೆ, ಡಿ. 19: ಎನ್ಸಿಪಿ ಕಾರ್ಯಕರ್ತರು ರವಿವಾರ ಮಹಾರಾಷ್ಟ್ರದ ಥಾಣೆ ನಗರದಲ್ಲಿ ಹಾಗೂ ಅಂಬರನಾಥ್ ಟೌನ್ ಶಿಫ್ ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಕ್ಷೀರಾಭಿಷೇಕ ಮಾಡಿದರು. ಅಲ್ಲದೆ, ಬೆಂಗಳೂರಿನಲ್ಲಿ ಛತ್ರಪತಿ ಶಿವಾಜಿ ಪ್ರತಿಮೆಗೆ ಮಸಿ ಬಳಿದಿರುವುದನ್ನು ಖಂಡಿಸಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಪ್ರತಿಭಟನೆ ಕೂಡ ನಡೆಸಿದರು.
ಎನ್ ಸಿಪಿ ಕಾರ್ಯಕರ್ತರು ಅಂಬರನಾಥದಲ್ಲಿರುವ ಛತ್ರಪತಿ ಶಿವಾಜಿ ಪ್ರತಿಮೆ ಎದುರು ಸೇರಿ ಕ್ಷೀರಾಭೀಷೇಕ ನಡೆಸಿದರು. ಅಲ್ಲದೆ ಮರಾಠ ದೊರೆಯ ಕುರಿತಂತೆ ಘೋಷಣೆಗಳನ್ನು ಕೂಗಿದರು. ಇದೇ ರೀತಿ ಮುಂಬೈ ಸಮೀಪದ ಥಾಣೆ ನಗರದ ಮಸುಂದಾ ಲೇಕ್ನಲ್ಲಿರುವ ಛತ್ರಪತಿ ಶಿವಾಜಿ ಪ್ರತಿಮೆಗೆ ಕೂಡ ಕ್ಷೀರಾಭಿಷೇಕ ಮಾಡಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಹಾಗೂ ಶಿವಸೇನೆಯ ನಾಯಕ ಏಕಾಂತ್ ಶಿಂದೆ, ಶಿವಾಜಿ ಮಹಾರಾಜರಿಗೆ ಅವಮಾನ ಆಗುತ್ತಿರುವುದು ಇದು ಮೊದಲನೇ ಸಲವಲ್ಲ ಎಂದರು. ಬೆಂಗಳೂರಿನಲ್ಲಿ ಛತ್ರಪತಿ ಶಿವಾಜಿ ಪ್ರತಿಮೆಗೆ ಮಸಿ ಬಳಿದ ದುಷ್ಕರ್ಮಿಗಳ ವಿರುದ್ಧ ಕರ್ನಾಟಕ ಸರಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಇಲ್ಲದೇ ಇದ್ದರೆ, ಏನು ಮಾಡಬೇಕು ಎಂಬುದು ನಮಗೆ ತಿಳಿದಿದೆ. ಈ ಘಟನೆಗೆ ಸ್ಥಳೀಯ ಸರಕಾರ (ಕರ್ನಾಟಕ)ಜವಾಬ್ದಾರಿ ಎಂದು ಅವರು ಹೇಳಿದರು.