ಪ್ರಧಾನಿ ಕಚೇರಿ ಜೊತೆ ಸಭೆಗೆ ಸಿಇಸಿಯನ್ನು ಆಹ್ವಾನಿಸಿರಲಿಲ್ಲ

Update: 2021-12-19 18:43 GMT

ಹೊಸದಿಲ್ಲಿ,ಡಿ.19: ಪ್ರಧಾನಿ ಕಚೇರಿಯೊಂದಿಗಿನ ನ.16ರ ಸಭೆಗೆ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಸುಶೀಲ್ ಚಂದ್ರ ಅವರನ್ನು ಆಹ್ವಾನಿಸಿರಲಿಲ್ಲ ಮತ್ತು ಚುನಾವಣಾ ಸುಧಾರಣೆಗಳ ಕುರಿತು ಚರ್ಚೆಗಳಲ್ಲಿ ಕಾರ್ಯದರ್ಶಿ ಅಥವಾ ಅಧಿಕೃತ ಪ್ರತಿನಿಧಿ ಪಾಲ್ಗೊಳ್ಳುವಂತೆ ತನ್ನ ಶಾಸಕಾಂಗ ಇಲಾಖೆಯು ಸೂಚಿಸಿತ್ತು ಎಂದು ಕೇಂದ್ರ ಕಾನೂನು ಸಚಿವಾಲಯವು ಸ್ಪಷ್ಟಪಡಿಸಿದೆ.

ಆದಾಗ್ಯೂ ತನ್ನ ಶನಿವಾರದ ಹೇಳಿಕೆಯಲ್ಲಿ ಸಚಿವಾಲಯವು,ಅಂದು ಚಂದ್ರ ಅವರು ಚುನಾವಣಾ ಆಯುಕ್ತರಾದ ರಾಜೀವ್ ಕುಮಾರ ಮತ್ತು ಅನೂಪ್ ಚಂದ್ರ ಅವರೊಂದಿಗೆ ‘ಅನೌಪಚಾರಿಕ ಸಂವಾದ’ದಲ್ಲಿ ಭಾಗವಹಿಸಿದ್ದರು ಎಂದು ಒಪ್ಪಿಕೊಂಡಿದೆ.

ಕಳೆದ ತಿಂಗಳು ಪ್ರಧಾನಿ ಕಚೇರಿ ಜೊತೆಗೆ ಸಭೆಗೆ ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದರೂ ಚಂದ್ರ ಮತ್ತು ಇತರ ಇಬ್ಬರು ಚುನಾವಣಾ ಆಯುಕ್ತರು ಅದರಲ್ಲಿ ಭಾಗವಹಿಸಿದ್ದರು ಎಂದು ಶುಕ್ರವಾರ ಮಾಧ್ಯಮಗಳು ಬಹಿರಂಗಗೊಳಿಸಿದ್ದವು.

ಚುನಾವಣಾ ಆಯೋಗವು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ಸಾಂವಿಧಾನಿಕ ಸಂಸ್ಥೆಯಾಗಿರುವುದರಿಂದ ಮತ್ತು ಮೂವರು ಆಯುಕ್ತರು ಸರಕಾರದಿಂದ ಅಂತರವನ್ನು ಕಾಯ್ದುಕೊಳ್ಳುವುದರಿಂದ ಪ್ರಧಾನಿ ಕಚೇರಿ ಜೊತೆಗಿನ ಸಭೆಯು ವಿವಾದವನ್ನು ಹುಟ್ಟುಹಾಕಿತ್ತು. ಯಾವುದೇ ಬಾಹ್ಯ ಒತ್ತಡವನ್ನು ನಿವಾರಿಸಲು ಚುನಾವಣಾ ಆಯೋಗವು ಕಾರ್ಯಾಂಗದಿಂದ ಸಾಕಷ್ಟು ಅಂತರವನ್ನು ಕಾಯ್ದುಕೊಳ್ಳುತ್ತದೆ.

ಚುನಾವಣೆಗಳಿಗೆ ಸಂಬಂಧಿಸಿದಂತೆ ಸರಕಾರದೊಂದಿಗೆ ಆಯೋಗದ ಚರ್ಚೆಗಳು ಸಾಮಾನ್ಯವಾಗಿ ಕಾನೂನು ಸಚಿವಾಲಯ ಮತ್ತು ಮತದಾನದ ದಿನಗಳಲ್ಲಿ ಭದ್ರತೆಗೆ ಸಂಬಂಧಿಸಿದಂತೆ ಗೃಹ ಸಚಿವಾಲಯದೊಂದಿಗೆ ಮಾತ್ರ ಸೀಮಿತವಾಗಿವೆ. ಶಿಷ್ಟಾಚಾರದನ್ವಯ ಅಗತ್ಯವಾದರೆ ಸರಕಾರದ ಅಧಿಕಾರಿಗಳು ಮೂವರು ಚುನಾವಣಾ ಆಯುಕ್ತರೊಂದಿಗೆ ಸಭೆಗಳನ್ನು ಏರ್ಪಡಿಸುತ್ತಾರಾದರೂ ಚುನಾವಣಾ ಆಯುಕ್ತರು ಆಡಳಿತದ ಅಧಿಕಾರಿಗಳೊಂದಿಗೆ ಸಭೆಗಳಲ್ಲಿ ಅಥವಾ ಚರ್ಚೆಗಳಲ್ಲಿ ಪಾಲ್ಗೊಳ್ಳುವುದಿಲ್ಲ.

ಸಭೆಯ ಕುರಿತು ಚಂದ್ರ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು ಎಂದೂ ಕಾನೂನು ಸಚಿವಾಲಯವು ತನ್ನ ಹೇಳಿಕೆಯಲ್ಲಿ ಒಪ್ಪಿಕೊಂಡಿದೆ.
ಆಯೋಗದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು,ಆದರೆ ಮತದಾರರ ಪಟ್ಟಿಯ ಪರಿಷ್ಕರಣೆಗೆ ಅರ್ಹತಾ ದಿನಾಂಕಗಳು ಮತ್ತು ಆಧಾರ್ ಜೋಡಣೆ ಸೇರಿದಂತೆ ಕೆಲವು ವಿಷಯಗಳಲ್ಲಿ ಇನ್ನಷ್ಟು ವಿಶದೀಕರಣ ಅಗತ್ಯವಾಗಿತ್ತು. ಹೀಗಾಗಿ ಅಧಿಕೃತ ಸಭೆಯ ಬಳಿಕ ಮುಖ್ಯ ಚುನಾವನಾ ಆಯುಕ್ತರು ಮತ್ತು ಇಬ್ಬರು ಚುನಾವಣಾ ಆಯುಕ್ತರೊಂದಿಗೆ ಒಟ್ಟಾಗಿ ವರ್ಚುವಲ್ ರೂಪದಲ್ಲಿ ಪ್ರತ್ಯೇಕ ಅನೌಪಚಾರಿಕ ಸಂವಾದವನ್ನು ನಡೆಸಲಾಗಿತ್ತು ಎಂದು ಸಚಿವಾಲಯವು ಹೇಳಿಕೆಯಲ್ಲಿ ವಿವರಿಸಿದೆ.

ಮುಖ್ಯ ಚುನಾವಣಾ ಆಯುಕ್ತರು ಮತ್ತು ಇಬ್ಬರು ಆಯುಕ್ತರು ಪ್ರಧಾನಿ ಕಚೇರಿ ಜೊತೆಗಿನ ಸಭೆಯಲ್ಲಿ ಭಾಗವಹಿಸಿದ್ದರು ಎನ್ನುವುದು ಬಹಿರಂಗಗೊಂಡ ಬಳಿಕ ಶುಕ್ರವಾರ ಪ್ರತಿಪಕ್ಷ ನಾಯಕರು ಚುನಾವಣಾ ಆಯೋಗದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದರು. ಕಾಂಗ್ರೆಸ್ ಸಂಸದ ಮನೀಷ ತಿವಾರಿಯವರು ಲೋಕಸಭೆಯಲ್ಲಿ ಈ ವಿಷಯದಲ್ಲಿ ನಿಲುವಳಿ ಸೂಚನೆಯನ್ನು ಮಂಡಿಸಿದ್ದರು. ಇದು ಸ್ವೀಕಾರಾರ್ಹ ನಡೆಯಲ್ಲ ಎಂದು ಕನಿಷ್ಠ ಐವರು ಮಾಜಿ ಮುಖ್ಯ ಚುನಾವಣಾ ಆಯುಕ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News