ಈ ರಾಜ್ಯದಲ್ಲಿ ನಾಲ್ಕು ವರ್ಷದಲ್ಲಿ ಅರ್ಧಕ್ಕಿಂತ ಹೆಚ್ಚು ಶಾಸಕರು ಪಕ್ಷಾಂತರ !

Update: 2021-12-20 02:59 GMT
ಫೈಲ್ ಫೋಟೊ

ಗೋವಾ: ಪಕ್ಷೇತರ ಶಾಸಕ ರೋಹನ್ ಖೌಂಟೆ ಶುಕ್ರವಾರ ತಮ್ಮ ಶಾಸಕತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ. ಇದರೊಂದಿಗೆ 2017ರ ಬಳಿಕ ರಾಜ್ಯದಲ್ಲಿ ದಾಖಲೆಯ 21 ಮಂದಿ ಶಾಸಕರು ಪಕ್ಷ ಬದಲಿಸಿದಂತಾಗಿದೆ. 40 ಸದಸ್ಯಬಲದ ವಿಧಾನಸಭೆಯಲ್ಲಿ 2017ರ ವಿಧಾನಸಭಾ ಚುನಾವಣೆಯ ಬಳಿಕ ಅರ್ಧಕ್ಕಿಂತಲೂ ಹೆಚ್ಚು ಶಾಸಕರು ಪಕ್ಷಾಂತರ ಮಾಡಿರುವುದು ವಿಶೇಷ.

ಈ ಪಕ್ಷಾಂತರದ ಅತಿದೊಡ್ಡ ಫಲಾನುಭವಿ ಬಿಜೆಪಿ. 1999ರ ಬಳಿಕ ವಿಧಾನಸಭೆಯಲ್ಲಿ ಕನಿಷ್ಠ ಶಾಸಕರನ್ನು ಹೊಂದಿದ್ದ ಬಿಜೆಪಿಯ ಸದಸ್ಯಬಲಕ್ಕೆ 13 ಸದಸ್ಯರು ಸೇರ್ಪಡೆಯಾಗಿದ್ದು, ಪಕ್ಷದ ಒಟ್ಟು ಶಾಸಕರ ಸಂಖ್ಯೆ 27ಕ್ಕೇರಿದೆ. ಕಾಂಗ್ರೆಸ್ ಪಕ್ಷದ 10 ಶಾಸಕರನ್ನು ಹಾಗೂ ಎಂಜಿಪಿಯ ಇಬ್ಬರು ಶಾಸಕರನ್ನು ಮನವೊಲಿಸಿ ಪಕ್ಷಕ್ಕೆ ಸೇರಿಸಿಕೊಂಡಿತ್ತು.

ಇತ್ತೀಚಿನ ತಿಂಗಳುಗಳಲ್ಲಿ ಕಾಂಗ್ರೆಸ್ ಹಾಗೂ ಗೋವಾ ಫಾರ್ವರ್ಡ್‌ನ ತಲಾ ಒಬ್ಬರು ಶಾಸಕರು ಮತ್ತು ಪಕ್ಷೇತರ ಶಾಸಕರೊಬ್ಬರು ತಮ್ಮ ಶಾಸಕತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿ ಈ ಶಾಸಕರು ಬಿಜೆಪಿ ಸೇರಿದ್ದಾರೆ. ಆದಾಗ್ಯೂ ಬಿಜೆಪಿಯ ಕಾರ್ಟಲಿಮ್ ಶಾಸಕಿ ಅಲೀನಾ ಸಲ್ಡಾನಾ ಪಕ್ಷಕ್ಕೆ ರಾಜೀನಾಮೆ ನೀಡಿ ಆಮ್ ಆದ್ಮಿ ಪಾರ್ಟಿ ಸೇರಿದ್ದಾರೆ.

ಪಕ್ಷಾಂತರದಿಂದ ದೊಡ್ಡ ನಷ್ಟ ಅನುಭವಿಸಿದ ಪಕ್ಷವೆಂದರೆ ಕಾಂಗ್ರೆಸ್. ಈ ಪಕ್ಷ ಇದೀಗ ವಿಧಾನಸಭೆಯಲ್ಲಿ ಕೇವಲ ಮೂವರು ಶಾಸಕರನ್ನು ಹೊಂದಿದ್ದು, ಮುಂದಿನ ಚುನಾವಣೆಗೆ ಗೋವಾ ಫಾರ್ವರ್ಡ್ ಪಾರ್ಟಿ ಜತೆಗೆ ಮೈತ್ರಿ ಮಾಡಿಕೊಂಡಿದೆ. ಪಕ್ಷೇತರ ಶಾಸಕ ಪ್ರಸಾದ್ ಗಾಂವ್ಕರ್ ಅವರನ್ನು ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ತೃಣಮೂಲ ಕಾಂಗ್ರೆಸ್ ಪಕ್ಷ 2017ರಲ್ಲಿ ಆಯ್ಕೆಯಾದ ಇಬ್ಬರು ಶಾಸಕರನ್ನು ಸೆಳೆಯುವಲ್ಲಿ ಸಫಲವಾಗಿದೆ.

"ಇದು ಗೋವಾದಲ್ಲಿ ಸಾಮಾನ್ಯ ಚಿತ್ರಣ. ನನ್ನಂಥ ಕೆಲವೇ ಮಂದಿ ಪಕ್ಷಾಂತರ ಮಾಡದೇ ನಾವು ಎಲ್ಲಿದ್ದೇವೆಯೋ ಅಲ್ಲೇ ಉಳಿದಿದ್ದೇವೆ. ತಮ್ಮ ಶಾಸಕರು ಅಧಿಕಾರಾರೂಢ ಪಕ್ಷದಲ್ಲಿರಬೇಕು ಎಂಬ ಜನಸಾಮಾನ್ಯರ ನಿರೀಕ್ಷೆಯೇ ಇದಕ್ಕೆ ಕಾರಣ. ಆದ್ದರಿಂದ ಅಧಿಕಾರ ಇರುವ ಕಡೆಗೆ ಪ್ರತಿ ಶಾಸಕರು ದೌಡಾಯಿಸುತ್ತಿದ್ದಾರೆ" ಎಂದು ಮಾಜಿ ಶಾಸಕ ಹಾಗೂ ಯುನೈಟೆಡ್ ಗೋವನ್ ಡೆಮಾಕ್ರಟಿಕ್ ಪಕ್ಷದ ರಧರಾವೊ ಗ್ರೇಸಿಸಸ್ ಹೇಳುತ್ತಾರೆ.

ರಾಜ್ಯ ರಾಜಕೀಯದ ಬಗ್ಗೆ ಸಿನಿಕತನದ ಹೇಳಿಕೆಗೆ ಹೆಸರಾಗಿರುವ ಗ್ರೇಸಿಯಸ್ ಹೇಳುವಂತೆ 1990ರಿಂದ 2002ರ ಅವಧಿಯಲ್ಲಿ ರಾಜ್ಯ 13 ಮಂದಿ ಮುಖ್ಯಮಂತ್ರಿಗಳನ್ನು ಕಂಡಿದೆ. ಈ ಪೈಕಿ ಅತ್ಯಲ್ಪ ಅವಧಿಗೆ ಸಿಎಂ ಆಗಿದ್ದವರು ಎಂದರೆ ಚರ್ಚಿಲ್ ಅಲ್ಮೆಡೊ. ಕೇವಲ 18 ದಿನಗಳ ಅವಧಿಗೆ ಅವರು ರಾಜ್ಯದ ಚುಕ್ಕಾಣಿ ಹಿಡಿದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News