ಸ್ವರ್ಣ ಮಂದಿರ ಪಾವಿತ್ರ್ಯಕ್ಕೆ ಧಕ್ಕೆ ಪ್ರಕರಣ: ಥಳಿಸಿ ಸಾಯಿಸಲ್ಪಟ್ಟ ಯುವಕನ ವಿರುದ್ಧವೇ ಪ್ರಕರಣ ದಾಖಲು

Update: 2021-12-20 07:52 GMT

ಹೊಸದಿಲ್ಲಿ: ಅಮೃತಸರದ ಸ್ವರ್ಣ ಮಂದಿರದಲ್ಲಿ ಕಳೆದ ಶನಿವಾರ ಥಳಿಸಿ ಸಾಯಿಸಲ್ಪಟ್ಟ ಯುವಕನ ವಿರುದ್ಧ ಪೊಲೀಸರು ಸ್ಥಳದ ಪಾವಿತ್ರ್ಯತೆಗೆ ಧಕ್ಕೆ ತಂದ ಆರೋಪ ಹಾಗೂ ಕೊಲೆಯತ್ನ ಆರೋಪ ಹೊರಿಸಿ ಪ್ರಕರಣ ದಾಖಲಿಸಿದ್ದಾರೆ.

ಇಪ್ಪತ್ತು ವರ್ಷದ ಯುವಕ ಸ್ವರ್ಣಮಂದಿರದ ಪಾವಿತ್ರ್ಯಕ್ಕೆ ಧಕ್ಕೆ ತರಲು ಯತ್ನಿಸಿದ್ದಾನೆಂಬ ಆರೋಪದ ಮೇಲೆ ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿಯ ಸಿಬ್ಬಂದಿ ಹಾಗೂ ದರ್ಬಾರ್ ಸಾಹಿಬ್‍ನ ಭಕ್ತರು ಆತನನ್ನು  ಸೆರೆಹಿಡಿದಿದ್ದರು. ನಂತರ ಆತನ ಮೃತದೇಹವನ್ನು ಸಮಿತಿಯ ಮುಖ್ಯ ಕಾರ್ಯಾಲಯದ ಮುಖ್ಯ ಗೇಟಿನ ಹೊರಗೆ ಇರಿಸಲಾಗಿತ್ತು.

ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿಯ ಉದ್ಯೋಗಿ ಸುಚಾ ಸಿಂಗ್ ಎಂಬವರ  ಹೇಳಿಕೆಯ ಆಧಾರದಲ್ಲಿ ಮೃತ ಯುವಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆ ಯುವಕ ಗುರು ಗ್ರಂಥ್ ಸಾಹಿಬ್ ಎದುರು ಇರಿಸಲಾಗಿದ್ದ ಖಡ್ಗವನ್ನು ಕೈಗೆತ್ತಿಕೊಂಡಿದ್ದ ಹಾಗೂ  ರುಮಾಲಾಸ್ (ಗುರು ಗ್ರಂಥ್ ಸಾಹಿಬ್ ಮುಚ್ಚಲು ಬಳಸುವ ಪವಿತ್ರ ಬಟ್ಟೆ)ಅನ್ನು ತನ್ನ ಕಾಲಿನಿಂದ ಮುಟ್ಟಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಘಟನೆ ಸಿಸಿಟಿವಿ ಕ್ಯಾಮರಾಗಳಲ್ಲೂ ಸೆರೆಯಾಗಿದೆ. ಮೃತ ಯುವಕನ ವಿರುದ್ಧ ಐಪಿಸಿ ಸೆಕ್ಷನ್ 295ಎ ಹಾಗೂ 307 ಅನ್ವಯ ಪ್ರಕರಣ ದಾಖಲಿಸಲಾಗಿದೆ.

ಯುವಕನ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಅಮೃತಸರಕ್ಕೆ ಭೇಟಿ ನೀಡಿರುವ ಉಪಮುಖ್ಯಮಂತ್ರಿ ಸುಖಜಿಂದರ್ ಸಿಂಗ್ ರಂಧಾವ ಹೇಳಿದ್ದಾರೆ. "ಆತ ಅಲ್ಲಿನ ಪಾವಿತ್ರ್ಯಕ್ಕೆ ಧಕ್ಕೆ ತರಲು ಹಾಗೂ ಖಡ್ಗವನ್ನು ಕೈಗೆತ್ತಿಕೊಳ್ಳಲೆಂದೇ ಬಂದಿದ್ದಾನೆಂದು ತೋರುತ್ತದೆ. ಈ ಕೃತ್ಯವೆಸಗುವ ಮುನ್ನ ಆತ  ಅಕಾಲ್ ತಖ್ತ್ ಸಾಹಿಬ್ ಹೊರಗೆ ಮಲಗಿದ್ದ. ರಾಜ್ಯ ಸರಕಾರ ಮತ್ತು ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ ತನಿಖೆ ನಡೆಸಲಿದೆ  ಸಮಿತಿಯ  ಅನುಮತಿಯಿಲ್ಲದೆ ಪಂಜಾಬ್ ಪೊಲೀಸರು ಶ್ರೀ ದರ್ಬಾರ್ ಸಾಹಿಬ್ ಅನ್ನು ಪ್ರವೇಶಿಸುವಂತಿಲ್ಲ" ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News